ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ನಿರ್ವಹಣೆ, ನೀರು ಪೂರೈಕೆಯದ್ದೇ ಸಮಸ್ಯೆ

Last Updated 18 ಸೆಪ್ಟೆಂಬರ್ 2017, 9:21 IST
ಅಕ್ಷರ ಗಾತ್ರ

ಬೀರೂರು: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ನೀರು ಸಂಗ್ರಹಕ್ಕೆ ಹೆಚ್ಚುವರಿ ಟ್ಯಾಂಕ್‌ ಇಲ್ಲದ್ದು ಮತ್ತು ಘನ ಹಾಗೂ ಹಸಿ ಕಸ ವಿಲೇವಾರಿ ವ್ಯವಸ್ಥೆ ಇಲ್ಲದೆ, ಕಸ ಸಂಗ್ರಹಣೆಗೆ ಜಾಗವೂ ಇಲ್ಲದೆ ನೀರು ಪೂರೈಕೆ ಹಾಗೂ ಕಸ ನಿರ್ವಹಣೆ ಪುರಸಭೆಗೆ ತಲೆನೋವಾಗಿ ಎಂಬುದು ನಾಗರಿಕರ ದೂರು.

ಬೀರೂರು ಪಟ್ಟಣಕ್ಕೆ ಮೂರು ವರ್ಷಗಳಿಂದ ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯದಿಂದ ನೀರು ಪೂರೈಕೆ ಆಗುತ್ತಿದೆ. ಆಗಾಗ್ಗೆ ಕಂಡು ಬರುವ ವಿದ್ಯುತ್‌ ಸಂಪರ್ಕದಲ್ಲಿನ ವ್ಯತ್ಯಯ, ದುರಸ್ತಿ, ಪೈಪ್‌ಲೈನ್‌ ಹಾಳಾದರೆ ಆಗಬಹುದಾದ ತೊಂದರೆ, ಸಾಮಗ್ರಿ( ಗ್ರೀಸ್‌, ಆಯಿಲ್‌ ಇತ್ಯಾದಿ) ಪೂರೈಸುವಲ್ಲಿ ವಿಳಂಬವಾದರೆ ಫಿಲ್ಟರೇಷನ್‌ನಲ್ಲಿ ಉಂಟಾಗುವ ಸಮಸ್ಯೆ, ಬಿಲ್‌ ಪಾವತಿಸದೆ ಉಂಟಾಗಬಹುದಾದ ತಗಾದೆಗಳನ್ನು ಹೊರತುಪಡಿಸಿ ಪಟ್ಟಣಕ್ಕೆ ನೀರು ಪೂರೈಸಲಾಗುತ್ತಿದೆ.

ವಿಶ್ವ ಆರೋಗ್ಯಸಂಸ್ಥೆಯ ಮಾನದಂಡದ ಪ್ರಕಾರ ಒಬ್ಬ ವ್ಯಕ್ತಿಗೆ ದಿನವೊಂದಕ್ಕೆ ಕನಿಷ್ಟ 135ಲೀಟರ್‌ ನೀರು ಪೂರೈಸುವುದು ಸ್ಥಳೀಯಾಡಳಿತದ ಜವಾಬ್ದಾರಿ. ಇದರ ಅನುಸಾರ ಬೀರೂರು ಪಟ್ಟಣಕ್ಕೆ ದಿನಕ್ಕೆ ಕನಿಷ್ಟ 9ಲಕ್ಷ ಗ್ಯಾಲನ್‌ ( 34ಲಕ್ಷ ಲೀ.) ನೀರು ಬೇಕಾಗುತ್ತದೆ.

ಆದರೆ ಈಗಿನ ಸ್ಥಿತಿಯಲ್ಲಿ ವಾರಕ್ಕೆ ಒಮ್ಮೆ ಭದ್ರಾ ನೀರು ಪೂರೈಕೆ ಆಗುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ 50ಸಾವಿರ ಗ್ಯಾಲನ್‌ನ 2, 2ಲಕ್ಷ ಗ್ಯಾಲನ್‌ನ 1 ಮತ್ತು 20ಸಾವಿರ ಗ್ಯಾಲನ್‌ನ ಒಂದು ನೀರಿನ ಟ್ಯಾಂಕ್‌ ಇದ್ದು, ನೀರಿನ ಅಗತ್ಯಕ್ಕೆ ಹೋಲಿಸಿದರೆ ಮೂರನೇ ಒಂದು ಭಾಗ ಸಂಗ್ರಹಣಾ ಸಾಮರ್ಥ್ಯವಿದೆ. ಉಳಿದ ನೀರು ಸಂಗ್ರಹಿಸಲು ಪುರಸಭೆ ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಶೀಘ್ರವೇ ಮುಂದಾಗಬೇಕಿದೆ. ಇಲ್ಲದಿದ್ದಲ್ಲಿ ಇಡೀ ಊರಿಗೆ ನೀರು ಪೂರೈಸುವುದು ಅಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.

ಇನ್ನು ಕಸ ವಿಲೇವಾರಿ ಘಟಕ ಸ್ಥಾಪಿಸಲು ಪುರಸಭೆ ಮಾಡಿದ ಪ್ರಯತ್ನಗಳು ಅಕ್ಕಪಕ್ಕದ ಗ್ರಾಮಗಳ ಕಾನೂನು ಹೋರಾಟದಿಂದ ವಿಫಲವಾಗಿವೆ. ಕಾರ್ಮಿಕರ ಕೊರತೆಯೂ ಇದ್ದು, ಗಂಟೆಗಾಡಿಗಳ ಮೂಲಕ ಸಂಗ್ರಹಿಸಿದ ಕಸ ವಿಲೇವಾರಿಗೆ ಘಟಕವೂ ಇಲ್ಲದ ಕಾರಣ ಪುರಸಭೆಯ ಶ್ರಮ ಒಂದು ರೀತಿ ನೀರಿನಲ್ಲಿ ಹೋಮ ಮಾಡಿದಂತಿದೆ. ಇದರಿಂದ ಒಂದೆಡೆ ಕಸ ಸಂಗ್ರಹಣೆ ಆದರೂ ಅದರ ವಿಲೇವಾರಿ ಹೇಗೆ? ಎನ್ನುವ ಚಿಂತೆ ಪುರಸಭೆಯನ್ನು ಕಾಡುತ್ತಿದೆ. ಸಾಲದ್ದಕ್ಕೆ ಎಲ್ಲೆಂದರಲ್ಲಿ ಕಸ ಹಾಕುವ ಜನರಲ್ಲಿ ಜಾಗೃತಿ ಮೂಡದಿರುವುದೂ ಕಸ ವಿಲೇವಾರಿಗೆ ಅಡಚಣೆಯಾಗಿದೆ.

ಬೀರೂರು ಪುರಸಭೆಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ₹2.50ಕೋಟಿ ನಿಧಿ ಇರಿಸಲಾಗಿದೆ, ಜಿಲ್ಲಾಧಿಕಾರಿಗಳು ಎಮ್ಮೆದೊಡ್ಡಿ ಸರ್ವೇ ನಂ.71ರಲ್ಲಿ 10 ಎಕರೆ ಭೂಮಿಯನ್ನೂ ಮಂಜೂರು ಮಾಡಿದ್ದಾರೆ. ಆದರೆ 1942ರಲ್ಲಿ ಈ ಪ್ರದೇಶವೂ ಸೇರಿ ಒಟ್ಟು 20 ಸಾವಿರ ಎಕರೆ ಭೂಮಿಯನ್ನು ಹುಲಿಯೋಜನೆ ಕಾರಿಡಾರ್‌( ಹುಲಿ ಸಂರಕ್ಷಣಾ ಯೋಜನೆ)ಗೆ ಮೀಸಲಿರಿಸಿದ್ದು, ಅರಣ್ಯ ಭೂಮಿಯನ್ನು ಇತರೇ ಉದ್ದೇಶಗಳಿಗೆ ಕೊಡುವ ಪ್ರಶ್ನೆಯೇ ಇಲ್ಲ ಎನ್ನುವುದು ಅರಣ್ಯ ಇಲಾಖೆಯ ವಾದ.

ಜಿಲ್ಲಾಧಿಕಾರಿಗಳು ಮಂಜೂರು ಮಾಡಿರುವ ಭೂಮಿಯಲ್ಲಿ ಸರ್ವೇ ನಂಬರ್ 48 ಕೂಡಾ ಇದ್ದು ಅರಣ್ಯ ಇಲಾಖೆ ಪರಿಶೀಲನೆ ನಡೆಸಿ ಭೂಮಿ ಹಸ್ತಾಂತರಿಸಿದರೆ ತಕ್ಷಣವೇ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಪುರಸಭೆ ಮುಂದಾಗುತ್ತದೆ ಎನ್ನುತ್ತಾರೆ ಮುಖ್ಯಾಧಿಕಾರಿ ಶೇಷಪ್ಪ.

ನೀರು ಪೂರೈಕೆ ವಿಷಯವಾಗಿ ಅಧ್ಯಕ್ಷೆ ಸವಿತಾ ರಮೇಶ್‌, ‘ ಪೈಪ್‌ಲೈನ್‌ ಹಾಳಾದ ಸಂದರ್ಭದಲ್ಲಿ ಪಟ್ಟಣದಲ್ಲಿರುವ 69 ಕಿರುನೀರು ಘಟಕಗಳು, 36 ಕೊಳವೆ ಬಾವಿಗಳ ಮೂಲಕ ಮತ್ತು ಟ್ಯಾಂಕರ್‌ಗಳ ಮೂಲಕವೂ ನೀರು ಪೂರೈಸಲಾಗುತ್ತಿದೆ. ಸೋಮವಾರ ಬೆಂಗಳೂರಿನಿಂದ ಅಧಿಕಾರಿಗಳ ತಂಡ ಬರುವ ನಿರೀಕ್ಷೆ ಇದ್ದು, ಪಟ್ಟಣದಲ್ಲಿ ಇನ್ನೂ ಎರಡು ಟ್ಯಾಂಕ್‌ಗಳನ್ನು ನಿರ್ಮಿಸುವ ಸಲುವಾಗಿ ಸ್ಥಳ ಪರಿಶೀಲನೆ ನಡೆಯಲಿದೆ. ಶಾಸಕರು, ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ, ಜಿಲ್ಲಾಧಿಕಾರಿ ಎಲ್ಲರ ಸಹಕಾರದಿಂದ ಕುಡಿಯುವ ನೀರು ಮತ್ತು ಕಸ ವಿಲೇವಾರಿ ಸಮಸ್ಯೆಗೆ ಶೀಘ್ರದಲ್ಲಿಯೇ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎನ್ನುತ್ತಾರೆ.

ಬೀರೂರು ಪಟ್ಟಣದ ಕೊಳವೆ ಬಾವಿಗಳ ನೀರು ಅತಿ ಫ್ಲೋರೈಡ್‌ಯುಕ್ತವಾಗಿದೆ ಎನ್ನುವುದು ವಾಸ್ತವ, ಪುರಸಭೆ ಕೊಳವೆಬಾವಿ ನೀರು ಪೂರೈಸುವುದು ಸರಿ, ಆದರೆ ಅದು ಜನರ ಆರೋಗ್ಯದ ಮೇಲೆ ಬೀರ ಬಹುದಾದ ಪರಿಣಾಮ ಅಗಾಧ, ಇನ್ನು ಕಸ ವಿಲೇವಾರಿಯಲ್ಲಿ ಮುಂಜಾಗ್ರತೆ ವಹಿಸದಿದ್ದರೆ ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾದಂತಹ ರೋಗಗಳು ನಾಗರಿಕರನ್ನು ಬೆಂಬಿಡದೆ ಪೀಡಿಸುವುದು ಮಾತ್ರ ಸತ್ಯ. ಪುರಸಭೆ ಜನರ ಟೀಕೆ–ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿ ಎನ್ನುವುದು ನಾಗರಿಕರ ಆಶಯವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT