ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ಗಿರಿಜನ ಕಾಲೊನಿ

Last Updated 20 ಸೆಪ್ಟೆಂಬರ್ 2017, 6:23 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಪ್ರಮುಖ ಹಾಡಿಗಳಲ್ಲಿ ಒಂದಾದ ದೇಶಿಪುರ ಕಾಲೊನಿ ಚಿಕ್ಕದಾಗಿದ್ದರೂ ಇಲ್ಲಿನ ಸಮಸ್ಯೆಗಳು ಮಾತ್ರ ದೊಡ್ಡದಿದೆ. ಗಿರಿಜನರಿಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ, ಕೆಲವರು ಇನ್ನೂ ಗುಡಿಸಲಿನಲ್ಲಿಯೇ ವಾಸವಾಗಿದ್ದಾರೆ. ನಿರ್ಮಾಣವಾಗಿರುವ ಕೆಲ ಮನೆಗಳಿಗೆ ವಿದ್ಯುತ್ ಸೌಲಭ್ಯವಿಲ್ಲ. ಕಾಲೊನಿಯಲ್ಲಿ ಬೀದಿ ದೀಪವಂತೂ ಮರೀಚಿಕೆಯಾಗಿದೆ.

ಅಲತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ದೇಶಿಪುರ ಕಾಲೊನಿಯಲ್ಲಿ 25ರಿಂದ 30 ಮನೆಗಳಿದ್ದು, ಎಲ್ಲರೂ ಕೂಲಿ ಕೆಲಸವನ್ನೇ ಆಶ್ರಯಿಸಿದ್ದಾರೆ. ಕೆಲವರು ಮಾತ್ರ ಕುರಿ ಸಾಕಾಣಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಸರ್ಕಾರದ ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂಬುದಕ್ಕೆ ಇಲ್ಲಿನ ದೇಶಿಪುರ ಕಾಲೊನಿಯ ಗಿರಿಜನರು ಉದಾಹರಣೆ.

‘ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಆದರೆ, ಶೌಚಾಲಯ ನಿರ್ಮಿಸಿಲ್ಲ. ಇದರಿಂದ ನಾವು ಶೌಚಕ್ಕೆ ಬಯಲಿಗೆ ಹೋಗುವುದು ಅನಿವಾರ್ಯ. ಕಾಡಂಚಿನಲ್ಲಿ ಇರುವುದರಿಂದ ಪ್ರಾಣಿಗಳ ಹಾವಳಿ ಹೆಚ್ಚು. ರಾತ್ರಿ ಸಮಯದಲ್ಲಿ ಓಡಾಡಲು ಭಯವಾಗುತ್ತದೆ. ಬೀದಿ ದೀಪ ಸರಿಪಡಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಪ್ರಯೋಜವಾಗಿಲ್ಲ’ ಎಂದು ಕಾಲೊನಿಯ ನಿವಾಸಿ ಚಿಕ್ಕಬೊಮ್ಮ ಸಮಸ್ಯೆ ಬಿಚ್ಚಿಟ್ಟರು.

ಕುಡಿಯುವ ನೀರಿನ ಸಮಸ್ಯೆ: ಕಾಲೊನಿಯಲ್ಲಿ ಕೊಳವೆ ಬಾವಿಯ ಮೂಲಕ ತೊಂಬೆಗೆ ನೀರು ತುಂಬಿಸಲಾಗುತ್ತದೆ. ಐದಾರು ದಿನಗಳಿಗೊಮ್ಮೆ ನೀರು ಬಿಡಲಾಗುತ್ತದೆ. ಹೀಗಾಗಿ ದೂರದಲ್ಲಿರುವ ಕೆರೆ ಮತ್ತು ಖಾಸಗಿ ಜಮೀನುಗಳಿಂದ ನೀರನ್ನು ಹೊತ್ತು ತರಬೇಕಿದೆ.

ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಾಲೊನಿಗೆ ಜನಪ್ರತಿನಿಧಿ ಭೇಟಿ ನೀಡುತ್ತಾರೆ. ಉಳಿದಂತೆ ಅಧಿಕಾರಿಗಳಾಗಲೀ, ಜನಪ್ರತಿನಿಧಿ ಗಳಾಗಲೀ ಇತ್ತ ಸುಳಿಯುವುದಿಲ್ಲ ಎಂದು ದೂರುತ್ತಾರೆ ಇಲ್ಲಿನ ಗಿರಿಜನ ಮಹಿಳೆಯರು.

ವಾಸಕ್ಕೆ ಯೋಗ್ಯವಲ್ಲದ ಮನೆ: ‘ಕಾಟಾಚಾರಕ್ಕೆ ಮನೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅವರು ನಿರ್ಮಿಸಿದ ಬಾಗಿಲು ಭದ್ರವಾಗಿಲ್ಲ ಎಂದು ಈ ಹಿಂದೆ ವಾಸ ಮಾಡುತ್ತಿದ್ದ ಹಳೆಯ ಮನೆಯ ಬಾಗಿಲನ್ನೇ ಬಳಸಿಕೊಂಡಿದ್ದೇವೆ. ಕಾಮಗಾರಿ ಕಳಪೆಯಾಗಿದೆ. ಮನೆಯ ನೆಲ ಮೃದುವಾಗಿಲ್ಲ. ಕುಳಿತರೆ ಚುಚ್ಚುತ್ತದೆ’ ಎಂದು ಮನೆ ಮಾಲೀಕರೊಬ್ಬರು ಆರೋಪಿಸಿದರು. ಸ್ನಾನದ ಮನೆಗಳಿಲ್ಲ. ಶೌಚಾಲಯಗಳಿಗೆ ಟೈಲ್ಸ್‌ ಮತ್ತು ತೊಟ್ಟಿಗಳನ್ನು ಅಳವಡಿಸಿಲ್ಲ. ಇದನ್ನು ಬಳಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT