ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕೊರಿಯಾ ಬೆದರಿಕೆ: ವಿಸ್ತೃತ ಚರ್ಚೆ

ಜಪಾನ್‌, ದಕ್ಷಿಣ ಕೊರಿಯಾ ಜತೆ ಡೊನಾಲ್ಡ್‌ ಟ್ರಂಪ್‌ ಮಾತುಕತೆ
Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಇಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಗುರುವಾರವೂ ಉತ್ತರ ಕೊರಿಯಾದ ಅಣ್ವಸ್ತ್ರ ಬೆದರಿಕೆಯೇ ಚರ್ಚೆಯ ಕೇಂದ್ರಬಿಂದುವಾಗಿತ್ತು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಪಾನ್ ಹಾಗೂ ದಕ್ಷಿಣ ಕೊರಿಯಾ ನಾಯಕರ ಜೊತೆ ಮಾತುಕತೆ ನಡೆಸಿದರು. ಉತ್ತರ ಕೊರಿಯಾವನ್ನು ಸಂಪೂರ್ಣ ನಾಶಪಡಿಸುವುದಾಗಿ ವಿಶ್ವಸಂಸ್ಥೆಯಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲಿ ಎಚ್ಚರಿಕೆ ನೀಡಿದ್ದ ಟ್ರಂಪ್, ಇಂದಿನ ಸಭೆಯಲ್ಲಿ ಮುಂದಿನ ನಡೆ ಬಗ್ಗೆ ಚರ್ಚಿಸಿದರು.

ಆದರೆ ಉತ್ತರ ಕೊರಿಯಾದ ಅಣ್ವಸ್ತ್ರ ಬೆದರಿಕೆಯನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ವಿಶ್ವ ನಾಯಕರಲ್ಲಿ ಭಿನ್ನ ನಿಲುವು ವ್ಯಕ್ತವಾಯಿತು.

ರಷ್ಯಾ ವಿದೇಶಾಂಗ ಸಚಿವ ಸೆರ್ಜೈ ಲಾವ್ರೊವ್ ಹಾಗೂ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಉತ್ತರ ಕೊರಿಯಾ ಮೇಲೆ ಸೇನಾ ದಾಳಿ ನಡೆಸಿ ದುರಂತಕ್ಕೆ ಕಾರಣವಾಗುವ ಬದಲು, ರಾಜತಾಂತ್ರಿಕ ಮಾತುಕತೆ ಉತ್ತಮ ಎಂದು ಸಲಹೆ ನೀಡಿದರು.

ಆದರೆ ರಾಜತಾಂತ್ರಿಕ ಮಾತುಕತೆಯನ್ನು ತಳ್ಳಿಹಾಕಿರುವ ಜಪಾನ್, ಟ್ರಂಪ್ ಅವರ ನಿಲುವನ್ನು ಬೆಂಬಲಿಸಿತು.

ಟ್ರಂಪ್ ಅವರ ಸೇನಾ ಬೆದರಿಕೆಯು ಯುದ್ಧತಂತ್ರದ ದೃಷ್ಟಿಯಿಂದ ಉತ್ತರ ಕೊರಿಯಾದ ನಡೆಯನ್ನು ಬದಲಿಸಲು ದಾರಿ ಮಾಡಿಕೊಡಬಲ್ಲದು ಎಂದು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮಾಕ್ರನ್ ಅಭಿಪ್ರಾಯಪಟ್ಟಿದ್ದಾರೆ.

‘ಕಿಮ್ ಹಾಗೂ ಅವರ ತಂದೆಯನ್ನು ಕುರಿತು ಹೇಳುವುದಾದರೆ, ಇಂತಹ ಬೆದರಿಕೆಗಳನ್ನು ಒಡ್ಡಿದ ಬಳಿಕವೇ ಅವರು ಮಾತುಕತೆಗೆ ಮುಂದಾಗಿದ್ದರು’ ಎಂದು ಮ್ಯಾಕ್ರನ್ ಹೇಳಿದ್ದಾರೆ.

’ಬೊಗಳುವ ನಾಯಿಯಿಂದ ಏನೂ ಆಗದು’

ಉತ್ತರ ಕೊರಿಯಾ ನಾಶ ಮಾಡುವ ಟ್ರಂಪ್ ಅವರ ಬೆದರಿಕೆಗೆ ಅಲ್ಲಿನ ವಿದೇಶಾಂಗ ಸಚಿವ ರಿ ಯೊಂಗ್–ಹೊ ತಿರುಗೇಟು ನೀಡಿದ್ದಾರೆ. ‘ನಾಯಿ ಬೊಗಳಿದರೆ ಜಗತ್ತಿನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದಿದ್ದಾರೆ.

‘ನಾಯಿ ಬೊಗಳುವ ಶಬ್ದದಿಂದ ನಮ್ಮನ್ನು ಹೆದರಿಸಲು ಯತ್ನಿಸಿದರೆ ಅದು ನಾಯಿಯ ಕನಸಾಗುತ್ತದೆಯಷ್ಟೇ’ ಎಂದು ಅವರು ತಿರಗೇಟು ನೀಡಿದ್ದಾರೆ. ಟ್ರಂಪ್ ಹೇಳಿಕೆಗೆ ಉತ್ತರ ಕೊರಿಯಾ ನೀಡಿದ ಮೊದಲ ಪ್ರತಿಕ್ರಿಯೆ ಇದು.

ರಿ ಅವರು ವಿಶ್ವಸಂಸ್ಥೆಯಲ್ಲಿ ಶುಕ್ರವಾರ ಮಾತನಾಡಲಿದ್ದಾರೆ. ಶನಿವಾರ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.

ಶೀಘ್ರ ಸುಧಾರಣೆಗೆ ಭಾರತ ಒತ್ತಾಯ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಶೀಘ್ರವೇ ಸುಧಾರಣೆ ತರುವಂತೆ ಭಾರತವೂ ಒಳಗೊಂಡ ಜಿ–4 ರಾಷ್ಟ್ರಗಳ ಸಮಿತಿ ಒತ್ತಾಯಿಸಿದೆ.

ಬ್ರೆಜಿಲ್, ಜರ್ಮನಿ, ಜಪಾನ್ ಹಾಗೂ ಭಾರತದ ವಿದೇಶಾಂಗ ಸಚಿವರು ಗುರುವಾರ ನಡೆಸಿದ ಮಾತುಕತೆಯಲ್ಲಿ ಈ ಆಗ್ರಹ ವ್ಯಕ್ತವಾಗಿದೆ.

21ನೇ ಶತಮಾನದ ವಾಸ್ತವ ಸವಾಲುಗಳಿಗೆ ಭದ್ರತಾ ಮಂಡಳಿಯನ್ನು ಪರಿಣಮಕಾರಿಯಾಗಿ ಸಜ್ಜುಗೊಳಿಸಲು ಇದು ಅಗತ್ಯ ಎಂದು ಜಿ–4 ರಾಷ್ಟ್ರಗಳು ಹೇಳಿವೆ.

‘ಮಾತುಕತೆಗೆ ಅರ್ಥವಿಲ್ಲ’

ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು, ಉತ್ತರ ಕೊರಿಯಾವನ್ನು ಮಾತುಕತೆಗೆ ಮನವೊಲಿಸುವ ಯತ್ನವನ್ನು ವಿರೋಧಿಸಿದರು.

’ಉತ್ತರ ಕೊರಿಯಾ ಜತೆ ಸಂಧಾನ ಮಾತುಕತೆಗೆ ವಿಶ್ವ ಸಮುದಾಯ ಯತ್ನಿಸುತ್ತಾ ಬಂದಿದೆ. ಮಾತುಕತೆ ಮೂಲಕವೇ ಬಿಕ್ಕಟ್ಟು ಬಗೆಹರಿಸಲು ಮತ್ತೆ ಮತ್ತೆ ನಡೆದ ಯತ್ನಗಳು ನಿಷ್ಪ್ರಯೋಜಕ ಎನಿಸಿವೆ. ಇನ್ಯಾವ ಆಶಾಭಾವದೊಂದಿಗೆ ಮತ್ತೊಮ್ಮೆ ಮಾತುಕತೆಗೆ ಯತ್ನಿಸುವುದು. ಇದರಲ್ಲಿ ಅರ್ಥವಿದೆಯೇ? ಅಗತ್ಯವಿರುವುದು ಮಾತುಕತೆ ಅಲ್ಲ, ಒತ್ತಡ ಮಾತ್ರ’ ಎಂದು ಅಬೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT