ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ಪ್ರಕರಣ: ನಿವೃತ್ತ ನ್ಯಾಯಮೂರ್ತಿ ಕುದ್ದುಸಿ ಬಂಧನ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಲಖನೌನ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ನಡೆಸಿದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಒಡಿಶಾ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಇಷರತ್‌ ಮಸರೂರ್‌ ಕುದ್ದುಸಿ ಮತ್ತು ಇತರ ಐವರನ್ನು ಸಿಬಿಐ ಗುರುವಾರ ಬಂಧಿಸಿದೆ.

ಲಖನೌದಲ್ಲಿ ಪ್ರಸಾದ್‌ ವೈದ್ಯಕೀಯ ವಿಜ್ಞಾನ ಸಂಸ್ಥೆ ನಡೆಸುವ ಪ್ರಸಾದ್‌ ಎಜ್ಯುಕೇಷನಲ್‌ ಟ್ರಸ್ಟ್‌ನ ಬಿ.ಪಿ. ಯಾದವ್‌, ಪಾಲಾಶ್‌ ಯಾದವ್‌ ಹಾಗೂ ಮಧ್ಯವರ್ತಿಗಳಾದ ಭಾವನಾ ಪಾಂಡೆ, ಬಿಶ್ವನಾಥ್‌ ಅಗರ್‌ವಾಲ್‌ ಮತ್ತು ಹವಾಲಾ ದಂಧೆಯಲ್ಲಿ ತೊಡಗಿರುವ ರಾಮದೇವ್‌ ಸರಸ್ವತ್‌ ಬಂಧಿತ ಇತರ ಆರೋಪಿಗಳು.

ದಕ್ಷಿಣ ದೆಹಲಿಯ ಗ್ರೇಟರ್‌ ಕೈಲಾಶ್‌ನಲ್ಲಿ ಕುದ್ದುಸಿ ಅವರ ನಿವಾಸ ಹಾಗೂ ಭುವನೇಶ್ವರ, ಚಂದ್ರಶೇಖರಪುರ ಮತ್ತು ಲಖನೌ ಸೇರಿದಂತೆ ಒಂಬತ್ತು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ ಬಳಿಕ ಎಲ್ಲರನ್ನೂ ಬಂಧಿಸಲಾಯಿತು. ಈ ಸಂದರ್ಭದಲ್ಲಿ ಸುಮಾರು ₹90.91 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ಕಳಪೆ ಗುಣಮಟ್ಟ ಮತ್ತು ಅಗತ್ಯ ಮಾನದಂಡಗಳನ್ನು ಪೂರೈಸದ ಕಾರಣ ಎರಡು ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ಪ್ರವೇಶ ನೀಡದಂತೆ ಪ್ರಸಾದ್‌ ವೈದ್ಯಕೀಯ ವಿಜ್ಞಾನ ಸಂಸ್ಥೆ ಸೇರಿದಂತೆ 46 ವೈದ್ಯಕೀಯ ಕಾಲೇಜಿಗಳಿಗೆ ಸರ್ಕಾರ ನಿರ್ಬಂಧ ವಿಧಿಸಿತ್ತು. ಜತೆಗೆ ಈ ವೈದ್ಯಕೀಯ ಕಾಲೇಜಿನ ಬ್ಯಾಂಕ್‌ ಖಾತರಿ ಮೊತ್ತ ₹2 ಕೋಟಿಯನ್ನು ವಶಪಡಿಸಿಕೊಳ್ಳುವಂತೆ ಭಾರತೀಯ ವೈದ್ಯಕೀಯ ಮಂಡಳಿಗೆ ಸೂಚಿಸಿತ್ತು. ಈ ಬಗ್ಗೆ ಕಳೆದು ತಿಂಗಳು ಆದೇಶ ಹೊರಡಿಸಲಾಗಿತ್ತು.

ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಪ್ರಸಾದ್‌ ಎಜ್ಯುಕೇಷನಲ್‌ ಟ್ರಸ್ಟ್‌ ಅರ್ಜಿ ಸಲ್ಲಿಸಿತ್ತು. ತಮ್ಮ ಸಂಪರ್ಕಗಳನ್ನು ಬಳಸಿಕೊಂಡು ಈ ಪ್ರಕರಣವನ್ನು ಇತ್ಯರ್ಥಗೊಳಿಸಲು ನೆರವಾಗುತ್ತೇವೆ ಎಂದು ಖುದ್ದುಸಿ ಮತ್ತು ಪಾಂಡೆ ಟ್ರಸ್ಟ್‌ಗೆ ಭರವಸೆ ನೀಡಿದ್ದರು.‌ ಈ ಕಾರ್ಯಕ್ಕಾಗಿ ಬಿಶ್ವನಾಥ್‌ ಅಗ್ರವಾಲ್‌ ಅವರನ್ನು ನಿಯೋಜಿಸಿದ್ದರು. ಈ ಕಾರ್ಯಕ್ಕೆ ಅಧಿಕಾರಿಗಳಿಗೆ ಅಪಾರ ಹಣ ನೀಡಬೇಕಾಗುತ್ತದೆ ಎಂದು ಅಗ್ರವಾಲ್‌ ತಿಳಿಸಿದ್ದ. ಹಣ ನೀಡಲು ಕುದ್ದುಸಿ, ಪಾಂಡೆ ಅವರು  ಶೀಘ್ರದಲ್ಲೇ ದೆಹಲಿಯಲ್ಲಿ ಅಗ್ರವಾಲ್‌ ಅವರನ್ನು ಭೇಟಿಯಾಗುವವರಿದ್ದರು ಎಂದು ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಕುದ್ದುಸಿ ಸಲಹೆ ಮೇರೆಗೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಆಗಸ್ಟ್‌ 25ರಂದು ವಾಪಸ್‌ ಪಡೆಯಲಾಗಿತ್ತು. ಬಳಿಕ ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಯಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಆಗಸ್ಟ್ 31ರವರೆಗೂ ಕಾಲೇಜಿನ ಹೆಸರನ್ನು ವಿದ್ಯಾರ್ಥಿಗಳ ಕೌನ್ಸೆಲಿಂಗ್‌ ನಡೆಸುವ ಪಟ್ಟಿಯಿಂದ ಕೈಬಿಡಬಾರದು ಮತ್ತು ಬ್ಯಾಂಕ್‌ ಖಾತರಿ ಮೊತ್ತ ₹2ಕೋಟಿಯನ್ನು ವಶಪಡಿಸಿಕೊಳ್ಳಬಾರದು ಎಂದು ಆದೇಶ ನೀಡಿತು.

ಬಳಿಕ ಭಾರತೀಯ ವೈದ್ಯಕೀಯ ಮಂಡಳಿ, ಅಲಹಾಬಾದ್‌ ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಇದಕ್ಕೆ ಪ್ರತಿಕ್ರಿಯಿಸಿದ್ದ ಟ್ರಸ್ಟ್‌ ಹೈಕೋರ್ಟ್‌ ಆದೇಶದಿಂದ ಕಾಲೇಜಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ ಎಂದು ತಿಳಿಸಿತ್ತು. ಹೀಗಾಗಿ ಮೇಲ್ಮನವಿಯನ್ನು ಆಗಸ್ಟ್‌ 29ರಂದು ವಿಲೇವಾರಿ ಮಾಡಲಾಯಿತು.

ನಂತರ, ಟ್ರಸ್ಟ್‌ ಸುಪ್ರೀಂಕೋರ್ಟ್‌ನಲ್ಲಿ ಕಾಲೇಜಿಗೆ ಅನುಮತಿ ಪಡೆಯಲು ಮತ್ತೆ ಅರ್ಜಿ ಸಲ್ಲಿಸಿತು. ಆಗ ಕುದ್ದುಸಿ ಮತ್ತು ಪಾಂಡೆ ಅವರು ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯವನ್ನುಇತ್ಯರ್ಥಗೊಳಿಸಿಕೊಡುವುದಾಗಿ ಟ್ರಸ್ಟ್‌ ಪ್ರತಿನಿಧಿಗಳಿಗೆ ಭರವಸೆ ನೀಡಿದ್ದರು ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT