ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಪೂರ್ತಿ ‘ಆಹಾರ ಮೇಳ’ ಅಗತ್ಯ

Last Updated 22 ಸೆಪ್ಟೆಂಬರ್ 2017, 7:33 IST
ಅಕ್ಷರ ಗಾತ್ರ

ಮೈಸೂರು: ದಸರಾ ಆಹಾರಮೇಳ ವರ್ಷದಿಂದ ವರ್ಷಕ್ಕೆ ಹೆಚ್ಚು ಮಹತ್ವ ಪಡೆಯುತ್ತಿದೆ. ಇದನ್ನು ಗಮನಿಸಿದರೆ ಇಲ್ಲಿ ವರ್ಷವಿಡೀ ಇಂಥ ಮೇಳ ನಡೆಸುವ ಅಗತ್ಯವಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಇದರತ್ತ ಗಮನ ಕೊಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಸಲಹೆ ನೀಡಿದರು. ನಗರದ ಸ್ಕೌಟ್‌ ಮತ್ತು ಗೈಡ್ ಮೈದಾನದಲ್ಲಿ ಗುರುವಾರ ನಡೆದ ಆಹಾರಮೇಳದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾರತದಷ್ಟು ವೈವಿಧ್ಯಮಯ ಆಹಾರ ಪದ್ಧತಿ ಇನ್ನೆಲ್ಲೂ ಇಲ್ಲ. ಪ್ರತಿ ನೂರು ಕಿಲೊಮೀಟರ್‌ಗೆ ನಮ್ಮ ಆಹಾರ ಕ್ರಮ, ಪದ್ಧತಿ, ಮಾದರಿ ಬದಲಾಗುತ್ತದೆ. ಆಹಾರಮೇಳ ಏರ್ಪಡಿಸುವುದರಿಂದ ಎಲ್ಲ ಪದ್ಧತಿಯ ಆಹಾರಗಳನ್ನೂ ಒಂದೇ ಕಡೆ ಸವಿಯುವ ಅವಕಾಶ ಸಿಗುತ್ತದೆ ಎಂದರು.

ಗಿರಿಜನರ ಬಂಬೂ ಬಿರಿಯಾನಿಯಿಂದ ಹಿಡಿದ ಫಾಸ್ಟ್‌ಫುಡ್‌ ಹಾಗೂ ಸ್ಟಾರ್‌ ಹೋಟೆಲ್ಲುಗಳವರೆಗೂ ಎಲ್ಲ ಬಗೆಯ ಖಾದ್ಯಗಳು ಇಲ್ಲಿ ಸಿಗುತ್ತವೆ. ಪ್ರಪಂಚ ಎಷ್ಟೇ ಬದಲಾದರೂ ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿ ಬೇಡಿಕೆ ಉಳಿಸಿಕೊಂಡಿದೆ. ರಾಜ್ಯದ ವಿವಿಧ ಬಗೆಯ ಆಹಾರಗಳನ್ನು ಮೈಸೂರಿನಲ್ಲಿ ಏಕಕಾಲಕ್ಕೇ ಸವಿಯುವಂಥ ವೇದಿಕೆ ಕಲ್ಪಿಸಲು ಶಾಶ್ವತವಾಗಿ ಇಂಥ ಮೇಳ ಆಯೋಜಿಸಬಹುದು. ಪ್ರವಾಸಕ್ಕೆ ಬರುವ ವಿಶ್ವದ ಜನರೆಲ್ಲ ಇಲ್ಲಿನ ರುಚಿಕರ ತಿನಿಸುಗಳನ್ನು ಬಾಯಿ ಚಪ್ಪರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್‌, ದಸರೆ ಪ್ರವಾಸಿಗರು ಹಸಿವಾದ ಮೇಲೆಯೇ ಇಲ್ಲಿಗೆ ಬರುತ್ತಾರೆ. ವ್ಯಾಪಾರಿಗಳು ಹಾಗೂ ಸಂಘಟಕರು ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಲಾಭದ ಮುಖವನ್ನೇ ನೋಡದೆ ಹಸಿವು ನೀಗಿಸುವ ಮನಸ್ಸು ಮಾಡಬೇಕು ಎಂದರು.

ಜವಳಿ ಹಾಗೂ ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್‌, ಉಪಮೇಯರ್‌ ರತ್ನಾ ಲಕ್ಷ್ಮಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆಂಪಮ್ಮ, ಆಹಾರಮೇಳ ಉಪವಿಶೇಷಾಧಿಕಾರಿ ಪಿ.ಶಿವಶಂಕರ್‌, ಕಾರ್ಯಾಧ್ಯಕ್ಷ ಕಾ.ರಾಮೇಶ್ವರಪ್ಪ, ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಬಾಬು ವೇದಿಕೆ ಮೇಲಿದ್ದರು. ಉದ್ಘಾಟನಾ ಸಮಾರಂಭದ ನಂತರ ಅಂಧ ಮತ್ತು ಕಿವುಡ ಮಕ್ಕಳಿಗಾಗಿ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಸಚಿವರು ಮಕ್ಕಳಿಗೆ ಊಟ ಬಡಿಸಿದರು.

ಶಾರ್ಟ್‌ ಸರ್ಕೀಟ್‌: ಬೆಂಕಿ ಆಹಾರ ಮೇಳದ ಮಳಿಗೆಯೊಂದರಲ್ಲಿ ಉಂಟಾದ ಶಾರ್ಟ್‌ ಸರ್ಕೀಟ್‌ನಿಂದ ಗುರುವಾರ ಅಗ್ನಿ ಅವಘಡ ಸಂಭವಿಸಿದೆ. ಮಧ್ಯಾಹ್ನ ಮಳಿಗೆಯೊಂದರಲ್ಲಿ ಸಿದ್ಧತೆ ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಉಂಟಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿದರು. ಇದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT