ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾದಲ್ಲಿ ಮ್ಯಾರಥಾನ್‌, ಯೋಗ ಮೆರುಗು

40 ವೃತ್ತಗಳಲ್ಲಿ ದೀಪಾಲಂಕಾರದ ವೈಭವ l ಹಾಫ್‌ ಮ್ಯಾರಥಾನ್‌ನಲ್ಲಿ 10 ಕಿ.ಮೀ ಓಡಿದ ಜಿಲ್ಲಾಧಿಕಾರಿ ಡಿ.ರಂದೀಪ್‌
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಹರಿದುಬರುತ್ತಿರುವ ಜನಸಮೂಹ ದಸರಾ ವೈಭವವನ್ನು ಮತ್ತಷ್ಟು ಹೆಚ್ಚಿಸಿದೆ. ನಾಡಹಬ್ಬದ ನಾಲ್ಕನೇ ದಿನ ಅರಮನೆಗಳ ನಗರಿಯು ಪ್ರವಾಸಿಗರಿಂದ ಗಿಜಿಗುಡುತಿತ್ತು. ಚಾಮುಂಡಿಬೆಟ್ಟದ ವೈಭವ ಸವಿದು ಟಾಂಗಾ ಗಾಡಿ ಏರಿ ನಗರ ಪ್ರದಕ್ಷಿಣೆ ಮಾಡುತ್ತಿದ್ದ ದೃಶ್ಯ ಕಂಡುಬಂತು.

ದಸರಾ ಮಹೋತ್ಸವದ ವೈವಿಧ್ಯಮಯ ಕಾರ್ಯಕ್ರಮಗಳ ರಂಗು ಮುಂದುವರಿದಿದ್ದು ಭಾನುವಾರ ನಡೆದ ಕವಿಗೋಷ್ಠಿಯಲ್ಲಿ ಸಾಹಿತ್ಯ ಜಲಧಾರೆ ಹರಿಯಿತು.

ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ ಕವಿಗೋಷ್ಠಿಗೆ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದರು. ವಿಕಾಸ ಕವಿಗೋಷ್ಠಿಯಲ್ಲಿ 24 ಕವಿಗಳು ಕವನ ವಾಚಿಸಿದರು. ಪ್ರತಿ ಬಾರಿ ಖಾಲಿ ಕುರ್ಚಿಗಳಿಂದ ಕೂಡಿರುತ್ತಿದ್ದ ಗೋಷ್ಠಿ ಈ ಬಾರಿ ಕಿಕ್ಕಿರಿದು ತುಂಬಿದ್ದು ವಿಶೇಷವಾಗಿತ್ತು

ದೀಪಾಲಂಕಾರದ ವೈಭವ: 40 ವೃತ್ತಗಳು ಸೇರಿದಂತೆ ಪ್ರಮುಖ ರಸ್ತೆ ಹಾಗೂ ಪಾರಂಪರಿಕ ಕಟ್ಟಡಗಳ ಮೇಲೆ ಎಲ್ಇಡಿ ಬಲ್ಬುಗಳಿಂದ ವಿದ್ಯುತ್ ದೀಪಾಲಂಕಾರ ಮಾಡಿರುವುದು ನಗರವನ್ನು ‘ದೀಪಗಳ ನಗರಿ’ಯಾಗಿ ಪರಿವರ್ತಿಸಿದೆ. ಈ ವೈಭವಕ್ಕೆ ವಿದೇಶಿ ಪ್ರವಾಸಿಗರು ಮನಸೋತಿದ್ದಾರೆ. ಪ್ರತಿ ದಿನ ರಾತ್ರಿ 7 ಗಂಟೆಗೆ ಮೂಡುವ ಬೆಳಕಿನ ಚಿತ್ತಾರದಲ್ಲಿ ಮಿಂದೇಳುತ್ತಿದ್ದಾರೆ.

ಸುವರ್ಣ ರಥ: ದಸರಾ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ಆಯೋಜಿಸಿರುವ ಐಷಾರಾಮಿ ‘ಸುವರ್ಣ ರಥ’ದಲ್ಲಿ ಪ್ರವಾಸಿಗರು ಬೆಳಿಗ್ಗೆ ಬೆಂಗಳೂರಿನಿಂದ ಮೈಸೂರಿಗೆ ಬಂದಿಳಿದರು. ಜಿಲ್ಲಾಧಿಕಾರಿ ಡಿ.ರಂದೀಪ್ ಹೂ ನೀಡಿ ಅಶೋಕಪುರಂ ರೈಲು ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ಕೋರಿದರು.

‘28 ಪ್ರವಾಸಿಗರು ಬಂದಿದ್ದಾರೆ. ಎರಡು ದಿನ ಮೈಸೂರಿನಲ್ಲಿಯೇ ತಂಗಲಿದ್ದಾರೆ. ಇಲಾಖೆಯ ಬಸ್‌ನಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಪ್ರೇಕ್ಷಣೀಯ ಸ್ಥಳ ವೀಕ್ಷಿಸಲಿದ್ದಾರೆ. ಅವರಿಗೆ ಗೋಲ್ಡ್‌ ಕಾರ್ಡ್‌ ನೀಡಲಾಗಿದೆ’ ಎಂದು ರಂದೀಪ್‌ ತಿಳಿಸಿದರು.

ಯೋಗಾಯೋಗ: ಅರಮನೆ ಮುಂಭಾಗದಲ್ಲಿ ಏರ್ಪಡಿ ಸಿದ್ದ ಯೋಗೋತ್ಸವದಲ್ಲಿ ಯೋಗಾಸಕ್ತರು ಪಾಲ್ಗೊಂಡರು. ವಿದೇಶಿಗರೂ ಯೋಗಾಸನ ಮಾಡಿ ಗಮನ ಸೆಳೆದರು. ವಿವಿಧ ಆಸನಗಳ ಬಳಿಕ ಏಕಕಾಲಕ್ಕೆ ಹೊರಹೊಮ್ಮಿದ ‘ಓಂಕಾರ’ ಅರಮನೆಯಾಚೆಗೂ ಕೇಳಿಸುತಿತ್ತು. ಬಾಲಕ, ಬಾಲಕಿಯರಿಗೆ ಯೋಗಾಸನ ಸ್ಪರ್ಧೆ ಏರ್ಪಡಿಸಲಾಗಿತ್ತು.

ಸಿನಿಮಾ ವೀಕ್ಷಣೆ: ಗಜಪಡೆಯೊಂದಿಗೆ ಕಾಡಿನಿಂದ ಸಾಂಸ್ಕೃತಿಕ ನಗರಿಗೆ ಬಂದಿರುವ ಮಾವುತರು, ಕಾವಾಡಿಗರ ಮೊಗದಲ್ಲಿ ವಿಶೇಷ ಸಂಭ್ರಮ ನೆಲೆಸಿತ್ತು. ಡಿಆರ್‌ಸಿ ಚಿತ್ರಮಂದಿರದಲ್ಲಿ ಏರ್ಪಡಿಸಿರುವ ಚಲನಚಿತ್ರೋತ್ಸವದಲ್ಲಿ ಅವರೆಲ್ಲಾ ಪುನೀತ್‌ ರಾಜ್‌ಕುಮಾರ್ ಅಭಿನಯದ ‘ರಾಜಕುಮಾರ’ ಸಿನಿಮಾ ವೀಕ್ಷಿಸಿದರು.

ಹಾಫ್‌ ಮ್ಯಾರಥಾನ್‌ ರಂಗು: ಅರಮನೆಗಳ ನಗರಿಯ ರಸ್ತೆಗಳಲ್ಲಿ ಬೆಳ್ಳಂಬೆಳಿಗ್ಗೆ ಓಟದ ಮೆರವಣಿಗೆ. ಚುಮುಚುಮು ಚಳಿಯಲ್ಲಿ ನಡೆದ ಹಾಫ್‌ ಮ್ಯಾರಥಾನ್‌ನಲ್ಲಿ (21.1 ಕಿ.ಮೀ) 3,000 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಚಿಣ್ಣರು, ಯುವಕ ಯುವತಿಯರ ಜೊತೆ ಜಿಲ್ಲಾಧಿಕಾರಿ ಡಿ.ರಂದೀಪ್‌ 10 ಕಿ.ಮೀ ಓಡಿದರು.

ಬೈಕ್‌ ಸದ್ದು: ಸಾಂಸ್ಕೃತಿಕ ನಗರಿಯಲ್ಲಿ ತಯಾರಾಗಿ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಜಾವಾ ಬೈಕ್‌ಗಳು ಅರಮನೆ ಮುಂಭಾಗ ಸದ್ದು ಮಾಡಿದವು. 50 ಜಾವಾ ಬೈಕ್‌ಗಳಲ್ಲಿ ತೆರಳಿದ ಸವಾರರು ಪಾರಂಪರಿಕ ಕಟ್ಟಡ ವೀಕ್ಷಿಸಿದರು.

ಶ್ರೀರಂಗಪಟ್ಟಣದಲ್ಲಿ ಭಾನುವಾರ ನಾಡಹಬ್ಬಕ್ಕೆ ಚಾಲನೆ ದೊರೆಯಿತು. ಕಿರಂಗೂರಿನಲ್ಲಿರುವ ಬನ್ನಿ ಮಂಟಪದ ಹತ್ತಿರ ದಸರಾ ಮೆರವಣಿಗೆಯನ್ನು ಹಿರಿಯ ಸಾಹಿತಿ ಕೆ.ಮರುಳಸಿದ್ದಪ್ಪ ಉದ್ಘಾಟಿಸಿದರು. ಚಾಮುಂಡೇಶ್ವರಿದೇವಿ ವಿಗ್ರಹವನ್ನು ರಥದಲ್ಲಿ ಮೆರವಣಿಗೆ ಮಾಡಲಾಯಿತು.

***

ದೇವಿಗೆ ವಿಶೇಷ ಪೂಜೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ಭಾನುವಾರ ಬೆಳಿಗ್ಗೆ 6.30ಕ್ಕೆ ಬಂದ ಅವರು ಸುಮಾರು ಒಂದು ಗಂಟೆ ದೇಗುಲದಲ್ಲಿ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದರು. ನಾಡದೇವತೆಗೆ ಅವರು ನಾಲ್ಕು ದಿನಗಳಿಂದ ಪೂಜೆ ಸಲ್ಲಿಸುತ್ತಿದ್ದಾರೆ.

***

ಕಾರ್ಯಕ್ರಮಗಳಿಗೆ ಮಳೆ ಅಡ್ಡಿ
ಮೈಸೂರು: ಸಂಜೆ ಬಿದ್ದ ಮಳೆ ದಸರಾ ಮಹೋತ್ಸವದ ವೈಭವಕ್ಕೆ ತುಸು ಅಡ್ಡಿಯಾಗಿ ಪರಿಣಮಿಸಿತು. ಅಲ್ಲದೆ, ಟ್ರಾಫಿಕ್‌ ಕಿರಿಕಿರಿಯನ್ನು ಮತ್ತಷ್ಟು ಹೆಚ್ಚಿಸಿತು.

ಅಂಬಾವಿಲಾಸ ಅರಮನೆ ಮುಂಭಾಗದಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮ, ಮಹಾರಾಜ ಕಾಲೇಜಿನ ಮೈದಾನದಲ್ಲಿನ ಯುವ ದಸರಾ ಹಾಗೂ ಫಲಪುಷ್ಪ ಪ್ರದರ್ಶನದ ಕಾರ್ಯಕ್ರಮಗಳಿಗೆ ಅಡ್ಡಿಯಾಯಿತು.‌ ಬೆಳಿಗ್ಗೆಯಿಂದ ಲವಲವಿಕೆಯಿಂದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಪ್ರವಾಸಿಗರು ಸಂಜೆ ಬೇಗನೇ ಮನೆ ಸೇರಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT