ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಅಥ್ಲೆಟಿಕ್ಸ್‌: ಪ್ರಜ್ಞಾ, ನವಮಿ, ಮನೀಷ್‌ ವೈಯಕ್ತಿಕ ಚಾಂಪಿಯನ್ಸ್‌

ಮಿಂಚಿದ ನವಮಿ, ಶಹಜಹಾನಿ
Last Updated 24 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಲಯದ ನವಮಿ ಮತ್ತು ಶಹಜಹಾನಿ ಅವರು ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಕೊನೆಯ ದಿನ ಚಿನ್ನದ ನಗು ಬೀರಿದರೆ, ಮನೀಷ್‌ 200 ಮೀ. ಓಟದಲ್ಲಿ ಅಗ್ರಸ್ಥಾನ ಪಡೆದು ಸ್ವರ್ಣ ‘ಡಬಲ್‌’ ಸಾಧನೆ ಮಾಡಿದರು.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದ ನವಮಿ ಮಹಿಳೆಯರ 200 ಮೀ. ಓಟದಲ್ಲಿ ಅಗ್ರಸ್ಥಾನ ಪಡೆದರು. ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಅವರು 24.10 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಎ.ಟಿ.ದಾನೇಶ್ವರಿ (25.0 ಸೆ.) ಮತ್ತು ಸಿ.ಎಚ್‌.ವಿಶ್ವ (25.30 ಸೆ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

ಪುರುಷರ 100 ಮೀ. ಓಟದಲ್ಲಿ ಚಿನ್ನ ಜಯಿಸಿ ‘ವೇಗದ ಓಟಗಾರ’ ಎನಿಸಿದ್ದ ಮೈಸೂರು ವಲಯದ ಮನೀಷ್‌ 200 ಮೀ. ಓಟದಲ್ಲೂ ಅದೇ ಲಯ ಕಾಯ್ದುಕೊಂಡು 21.70 ಸೆಕೆಂಡುಗಳಲ್ಲಿ ಗುರಿತಲುಪಿದರು. ಎಲ್‌.ಭರತ್‌ (22.0 ಸೆ.) ಮತ್ತು ಮಹಮ್ಮದ್‌ ಪೈಗಂಬರ್‌ (22.30 ಸೆ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಶಹಜಹಾನಿ ಕೂಟ ದಾಖಲೆ: ಮೈಸೂರು ವಲಯದ ಶಹಜಹಾನಿ ಮಹಿಳೆಯರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಮೈಸೂರಿನಲ್ಲಿ ಎಲ್‌ಐಸಿ ಉದ್ಯೋಗಿಯಾಗಿರುವ ಅವರು 46.25 ಮೀ. ದೂರ ಎಸೆದು ಈ ಸಾಧನೆ ಮಾಡಿದರು.

ತಮ್ಮದೇ ಹೆಸರಿನಲ್ಲಿರುವ ದಾಖಲೆ ಮುರಿಯುವುದನ್ನು ಹವ್ಯಾಸವನ್ನಾಗಿಸಿಕೊಂಡಿರುವ ಶೆಹಜಹಾನಿ ದಸರಾ ಕೂಟದಲ್ಲಿ ಮೂರನೇ ಬಾರಿ ಹೊಸ ದಾಖಲೆ ನಿರ್ಮಿಸಿದ್ದಾರೆ. 2014 ರಲ್ಲಿ ಮೊದಲ ಬಾರಿ ದಾಖಲೆ ಮಾಡಿದ್ದ ಅವರು 2016 ರಲ್ಲಿ 45.77 ಮೀ. ದೂರ ಎಸೆದು ದಾಖಲೆ ಮಾಡಿದ್ದರು. ಇದೀಗ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡರು.

ಬೆಳಗಾವಿ ವಲಯವನ್ನು ಪ್ರತಿನಿಧಿಸಿದ ಕುಮಟಾದ ವೈಷ್ಣವಿ ಭಂಡಾರಿ (32.0 ಮೀ.) ಮತ್ತು ವಿಜಯಲಕ್ಷ್ಮಿ (28.89 ಮೀ.) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಸಂದೇಶ್‌, ತುಂಗಾಶ್ರೀಗೆ ಚಿನ್ನ: ಮೈಸೂರು ವಲಯದ ಸಂದೇಶ್‌ ಶೆಟ್ಟಿ ಮತ್ತು ಎನ್‌.ತುಂಗಾಶ್ರೀ ಅವರು ಟ್ರಿಪಲ್‌ಜಂಪ್‌ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆದ್ದರು.

ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನ ವಿದ್ಯಾರ್ಥಿ ಸಂದೇಶ್‌ 14.86 ಮೀ. ದೂರ ಜಿಗಿದರು. ತಮ್ಮ ಮೊದಲ ಪ್ರಯತ್ನದಲ್ಲಿ ಅವರು ಈ ದೂರ ಕಂಡುಕೊಂಡರು. ತುಂಗಾಶ್ರೀ 11.80 ಮೀ. ದೂರ ಜಿಗಿದು ಅಗ್ರಸ್ಥಾನ ತಮ್ಮದಾಗಿಸಿಕೊಂಡರು.

ಪ್ರಜ್ಞಾ, ನವಮಿ, ಮನೀಷ್‌ಗೆ ಗೌರವ: ಬೆಂಗಳೂರು ನಗರ ವಲಯದ ಪ್ರಜ್ಞಾ ಎಸ್‌.ಪ್ರಕಾಶ್‌ ಮತ್ತು ಮೈಸೂರು ವಲಯದ ನವಮಿ ಅವರು ಮಹಿಳೆಯರ ವಿಭಾಗದ ವೈಯಕ್ತಿಯ ಚಾಂಪಿಯನ್ ಗೌರವ ಹಂಚಿಕೊಂಡರು. ಪುರುಷರ ವಿಭಾಗದಲ್ಲಿ ಮನೀಷ್‌ ವೈಯಕ್ತಿಕ ಚಾಂಪಿಯನ್‌ ಆದರು. ಈ ಮೂವರು ತಲಾ ಎರಡು ಚಿನ್ನ ಜಯಿಸಿದ ಸಾಧನೆ ಮಾಡಿದ್ದಾರೆ.

ಫಲಿತಾಂಶ: ಪುರುಷರ ವಿಭಾಗ: 200 ಮೀ. ಓಟ: ಮನೀಷ್‌ (ಮೈಸೂರು ವಲಯ)–1, ಎಲ್‌.ಭರತ್‌ (ಬೆಂಗಳೂರು ನಗರ ವಲಯ)–2, ಮಹಮ್ಮದ್‌ ಪೈಗಂಬರ್‌ (ಮೈಸೂರು ವಲಯ)–3. ಕಾಲ: 21.70 ಸೆ.

5000 ಮೀ. ಓಟ: ಲಕ್ಷ್ಮಣ್‌ (ಬೆಂಗಳೂರು ನಗರ)–1, ಪ್ರಶಾಂತ್‌ ಕುಮಾರ್‌ (ಮೈಸೂರು)–2, ರಾಜು ಕೆ.ನಾಯಕ್‌ (ಬೆಳಗಾವಿ ವಲಯ)–3. ಕಾಲ: 16:00.10 ಸೆ.

ಟ್ರಿಪಲ್‌ಜಂಪ್‌: ಸಂದೇಶ್‌ ಶೆಟ್ಟಿ (ಮೈಸೂರು)–1, ಬಿ.ನವೀನ್‌ (ಬೆಂಗಳೂರು ನಗರ)–2, ವಿನೋದ್‌ ನಾಯಕ್‌ (ಬೆಂಗಳೂರು ನಗರ)–3. ದೂರ: 14.86 ಮೀ.

ಜಾವೆಲಿನ್‌ ಥ್ರೋ: ಎಚ್‌.ಟಿ.ಶಾರುಖ್‌ (ಬೆಳಗಾವಿ)–1, ಅಮಿತ್‌ ಕುಮಾರ್‌ (ಮೈಸೂರು)–2, ಶರ್ಫಾನ್‌ ಅಹ್ಮದ್‌ (ಬೆಂಗಳೂರು ಗ್ರಾಮಾಂತರ)–3. ದೂರ: 59.06 ಮೀ

ಷಾಟ್‌ಪಟ್‌: ಅತೀಶ್‌ ಗಗನ್‌ರಾಜ್‌ (ಮೈಸೂರು ವಲಯ)–1, ಮೋಹನ್‌ಕುಮಾರ್‌ (ಮೈಸೂರು)–2, ಶಾಂತರಾಮ್‌ ತೆಂಡೂಲ್ಕರ್‌ (ಬೆಂಗಳೂರು ನಗರ)–3. ದೂರ: 15.36 ಮೀ.

ಡಿಸ್ಕಸ್‌ ಥ್ರೋ: ವಿವೇಕ್‌ ಎಸ್‌.ಅಡಿಗ (ಮೈಸೂರು)–1, ಸಂಜೀವ್‌ (ಬೆಂಗಳೂರು ನಗರ)–2, ಮೋಹನ್‌ ಪ್ರಭು (ಮೈಸೂರು)–3. ದೂರ: 42.77 ಮೀ.

ಮಹಿಳೆಯರ ವಿಭಾಗ: 200 ಮೀ ಓಟ: ನವಮಿ (ಮೈಸೂರು)–1, ಎ.ಟಿ.ದಾನೇಶ್ವರಿ (ಬೆಂಗಳೂರು ನಗರ)–2, ಸಿ.ಎಚ್‌.ವಿಶ್ವ (ಮೈಸೂರು)–3. ಕಾಲ: 24.10 ಸೆ.

3000 ಮೀ. ಓಟ: ಚೈತ್ರಾ ದೇವಾಡಿಗ (ಮೈಸೂರು)–1, ತಿಪ್ಪವ್ವ ಸಣ್ಣಕ್ಕಿ (ಮೈಸೂರು)–2, ಮಲ್ಲೇಶ್ವರಿ ರಾಥೋಡ್‌ (ಬೆಂಗಳೂರು ನಗರ)–3. ಕಾಲ: 11:16.80 ಸೆ.

ಟ್ರಿಪಲ್‌ ಜಂಪ್‌: ತುಂಗಾಶ್ರೀ (ಮೈಸೂರು)–1, ಸೌಮ್ಯಾ ಕೆ.ಆರ್‌. (ಬೆಂಗಳೂರು ನಗರ)–2, ಎಂ.ಆರ್‌.ಧನುಷ್‌ (ಮೈಸೂರು)–3. ದೂರ: 11.27 ಮೀ.

ಜಾವೆಲಿನ್‌ ಥ್ರೋ: ಶೆಹಜಹಾನಿ (ಮೈಸೂರು)–1, ವೈಷ್ಣವಿ ಭಂಡಾರಿ (ಬೆಳಗಾವಿ)–2, ವಿಜಯಲಕ್ಷ್ಮಿ (ಕಲಬುರ್ಗಿ)–3. ದೂರು: 46.25 ಮೀ.

ಮೈಸೂರು ವಲಯಕ್ಕೆ ಸಮಗ್ರ ಪ್ರಶಸ್ತಿ

ಮೈಸೂರು ವಲಯ ತಂಡ ಒಟ್ಟು 120 ಪಾಯಿಂಟ್‌ ಕಲೆಹಾಕಿ ದಸರಾ ಅಥ್ಲೆಟಿಕ್ಸ್‌ನ ಚಾಂಪಿಯನ್‌ಪಟ್ಟ ತನ್ನದಾಗಿಸಿಕೊಂಡಿತು. 114 ಪಾಯಿಂಟ್‌ ಸಂಗ್ರಹಿಸಿದ ಬೆಂಗಳೂರು ನಗರ ವಲಯ ಎರಡನೇ ಸ್ಥಾನ ಪಡೆಯಿತು.

ದಸರಾ ಕ್ರೀಡಾಕೂಟದ (ಅಥ್ಲೆಟಿಕ್ಸ್‌ ಮತ್ತು ಇತರ ಕ್ರೀಡೆಗಳು) ಸಮಗ್ರ ಚಾಂಪಿಯನ್‌ಷಿಪ್‌ಪಟ್ಟ ಕೂಡಾ ಮೈಸೂರು ವಲಯದ (225 ಪಾಯಿಂಟ್‌) ಪಾಲಾಯಿತು. ಬೆಂಗಳೂರು ನಗರ (202 ಪಾಯಿಂಟ್‌) ‘ರನ್ನರ್‌ ಅಪ್‌’ ಸ್ಥಾನ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT