ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪಾಲಕೃಷ್ಣ ಅಡಿಗರ ಕಾವ್ಯ – ಧಾರ್ಮಿಕತೆಯ ಪ್ರಶ್ನೆ

Last Updated 30 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

‘ಇವಳೆದೆಗೆ ಬೇರಿಳಿದ ಕಾಲು ನನ್ನದು ಬರಿದೆ ನಕ್ಷತ್ರ ಲೋಕಕ್ಕು ರೈಲು ಬಿಟ್ಟೆ’ – ಭೂಮಿಗೀತ

ಅಡಿಗರ ಕಾವ್ಯದ ಪ್ರಶ್ನಾರ್ಥಕ ಸಾಲುಗಳು ಬಹಳ ಮುಖ್ಯವಾದುದು. ಕನ್ನಡ ಕಾವ್ಯ ಪರಂಪರೆಯಲ್ಲಿ ಅಲ್ಲಮನ ನಂತರ ಅಡಿಗರು ಬದುಕಿನ ಅತ್ಯಂತ ಗಹನವಾದ ಮತ್ತು ಅಸಲಿಯಾದ ಪ್ರಶ್ನೆಗಳನ್ನು ಎತ್ತಿದರು. ಈ ಹಿನ್ನೆಲೆಯಲ್ಲಿ ಅಡಿಗರ ಕಾವ್ಯ ನಮಗೆ ಮುಖ್ಯವಾಗಿದೆ’ ಎಂದು ಕಾವ್ಯಗುರು ಕಿರಂ ಅವರು ಒಮ್ಮೆ ಹೇಳಿದ್ದರು. ಒಬ್ಬ ಕವಿ ತನ್ನ ಕಾವ್ಯಯಾನದ ವಿವಿಧ ಕಾಲಘಟ್ಟಗಳಲ್ಲಿ ವಿವಿಧ ಬಗೆಯ ಪ್ರಶ್ನೆಗಳಿಗೆ ಎದುರಾಗುತ್ತಾನೆ. ಅಡಿಗರ ಕಾವ್ಯದ ಜಿಜ್ಞಾಸೆ ಒಂದು ಕೇಂದ್ರವನ್ನು ಅಥವಾ ಒಂದು ಸೈದ್ಧಾಂತಿಕ ಪ್ರಸ್ಥಾನವನ್ನು ಆಶ್ರಯಿಸಿದ ಜಿಜ್ಞಾಸೆಯಲ್ಲ. ಅಡಿಗರು ತಮ್ಮ ಭಾವತರಂಗ, ಕಟ್ಟುವೆವು ನಾವು, ನಡೆದು ಬಂದ ದಾರಿ, ಚಂಡೆಮದ್ದಳೆ.. ಹೀಗೆ ಒಂದೊಂದು ಕೃತಿಯಲ್ಲೂ ಒಂದೊಂದು ಬಗೆಯ ಪ್ರಶ್ನೆಗಳನ್ನು ಎತ್ತುತ್ತಾರೆ. ಇವು ಅವರ ಸಂವೇದನೆಯ ವಿಕಾಸ ಮಾರ್ಗವನ್ನು ಸೂಚಿಸುವ ಪ್ರಶ್ನೆಗಳಾಗಿವೆ. ಬೇಂದ್ರೆಯ ‘ಪಾತರಗಿತ್ತಿ’ ಪದ್ಯದ ನೆರವಿನಿಂದ ಕವಿಯೊಬ್ಬನ ಸಂವೇದನೆಯ ವಿಕಾಸವನ್ನು ಅಥವಾ ವೈವಿಧ್ಯವನ್ನು ಮನಗಾಣಬಹುದು:

ನೂರು ಆರು ಪಾರು/ ಯಾರು ಮಾಡಿದ್ದಾರು|
-----
ಹುಲ್ಲುಗಾವುಲದಾಗ‌‌/ ಹಳ್ಳಿ ಹುಡುಗೀ ಹಾಂಗ –
ಹುಡದೀ ಹುಡದೀ ಭಾಳ/ ಆಟಕಿಲ್ಲ ತಾಳ.
------
ಹೇಸಿಗೆ ಹೂ ಬಳಿಗೆ/ ಹೋಗಿ ಬಂದ ಗಳಿಗೆ.

ಇವು ಕೇವಲ ಚಿಟ್ಟೆಯ ಸಂಚಾರವನ್ನು ನಿರೂಪಿಸುವ ಸಾಲುಗಳಲ್ಲ, ಪಾತರಗಿತ್ತಿಯ ದಿಕ್ಕುದೆಸೆಯಿರದ ಅಲೆದಾಟದ ಮೂಲಕ ಬೇಂದ್ರೆ ಕವಿಮನಸ್ಸಿನ - ಸ್ವಭಾವವನ್ನಲ್ಲ - ವ್ಯಭಿಚಾರೀ ಭಾವಸ್ಥಿತಿಯನ್ನು ಅಥವಾ ಸ್ಥಿತ್ಯಂತರಗಳನ್ನು ಪರಿಚಯಿಸುತ್ತಿದ್ದಾರೆ. ತನ್ನ ಕಾವ್ಯದಲ್ಲಿ ನಾನಾ ವಸ್ತುಗಳನ್ನು ನಿರ್ವಹಿಸುವ ಕವಿಯೂ ಪಾತರಗಿತ್ತಿಯಂತಹ ವಿವಿಧ ಲೀಲೆಗಳಲ್ಲಿ ತೊಡಗಿರುತ್ತಾನೆ. ತನ್ನ ಭಾವವಿಕಾಸಕ್ಕೆ ಈ ಲೀಲೆಗಳು ಮತ್ತು ವಿಕಲ್ಪಗಳು ಅತ್ಯಗತ್ಯ ಎಂದು ಕವಿಯಾದವನು ಭಾವಿಸಿರುತ್ತಾನೆ.

‘ನೆಹರೂ ನಿವೃತ್ತರಾಗು ವುದಿಲ್ಲ’ ಎಂಬ ಪದ್ಯದಲ್ಲಿ ನೆಹರೂ ಕೊನೆತನಕ ಯುವಕನಾಗೇ ಉಳಿದುಬಿಟ್ಟರು ಎಂಬಂತೆ ನಿರೂಪಿಸಲಾಗಿದೆ. ‘ತೆರೆ ಬಿದ್ದರೂ ರಂಗ ಬಿಡದ ಚಿರಯುವಕ’ ಎಂದು ಅಡಿಗರು ನೆಹರೂರನ್ನು ಬಣ್ಣಿಸುತ್ತಾರೆ. (ಇದೇನು ಹೊಗಳಿಕೆಯೋ ಅಥವಾ ಟೀಕೆಯೋ ಎಂಬುದನ್ನು ಓದುಗರೇ ತೀರ್ಮಾನಿಸಿಕೊಳ್ಳಬೇಕು) ಯಾವುದೇ ವಿಕಲ್ಪ, ಅದು ಯೌವನವೇ ಆಗಿರಲಿ, ಚಿರಕಾಲ ಹಾಗೆಯೇ ಉಳಿದುಬಿಟ್ಟರೆ ಅದು ಬೆಳವಣಿಗೆಗೆ ತೊಡಕಾಗುವ ಅಪಾಯವಿದೆ.

ಅಡಿಗರ ಸಮಗ್ರ ಕಾವ್ಯವನ್ನು ಅವಲೋಕಿಸಿದಾಗ ‘ಧಾರ್ಮಿಕತೆ’ಯೇ ಅಡಿಗರ ಒಟ್ಟು ಕಾವ್ಯದ ಪ್ರಬಂಧ ಧ್ವನಿಯಾಗಿದೆ ಎನಿಸುತ್ತದೆ. ಧಾರ್ಮಿಕತೆಯ ಪ್ರಶ್ನೆ ಅಡಿಗರ ಕಾವ್ಯಯಾತ್ರೆಯ ಒಂದು ತಾತ್ಕಾಲಿಕ ಘಟ್ಟವಲ್ಲ, ಅಥವಾ ಒಮ್ಮೆ ಬಂದು ಮತ್ತೊಮ್ಮೆ ಹೊರಟು ಹೋಗುವ ಒಂದು ಭಾವವಿಕಲ್ಪವೂ ಆಗಿರಲಿಲ್ಲ.

ಇಲ್ಲಿ ಧಾರ್ಮಿಕತೆ ಎಂದರೆ ಸಾಂಪ್ರದಾಯಿಕವಾದ ಧರ್ಮ, ನಂಬಿಕೆ, ಆಚರಣೆ ಮುಂತಾದವುಗಳಲ್ಲ ಅಥವಾ ಕುವೆಂಪು, ಬೇಂದ್ರೆ, ಪುತಿನ, ಶಿವಪ್ರಕಾಶ್ ಮುಂತಾದ ಕವಿಗಳಲ್ಲಿ ವ್ಯಕ್ತವಾಗುವ ತರಹದ ಧಾರ್ಮಿಕತೆಯೂ ಅಲ್ಲ. ಮೇಲೆ ಉಲ್ಲೇಖಿಸಿರುವ ಕವಿಗಳಲ್ಲಿಯೂ ಹುಡುಕಾಟ ಇದೆಯಾದರೂ ಅವರಿಗೆ ತಾವು ಯಾವ ಗುರಿ ತಲುಪಬೇಕು ಎಂಬುದರ ಸ್ಪಷ್ಟತೆ ಇದೆ. ತಾವು ತಲುಪಬೇಕಾಗಿರುವ ಶ್ರೀಅರವಿಂದರ ದಿವ್ಯಜೀವನದ ಕುರಿತಾಗಲಿ, ಪ್ರಪತ್ತಿಯ ಕುರಿತಾಗಲಿ ಶ್ರೀರಮಣರ ಆತ್ಮಬೋಧೆಯ ಕುರಿತಾಗಲಿ ಅಥವಾ ಪ್ರತ್ಯಭಿಜ್ಞಾದರ್ಶನದ ಚಿತ್ ತತ್ವದ ಕುರಿತಾಗಲಿ ಅವರಿಗೆ ಸಂಶಯಗಳಿಲ್ಲ. ಈ ಬಗೆಯ ಪ್ರಶ್ನಾತೀತ ನಂಬಿಕೆಗಳ ಕುರಿತು ಅಡಿಗರು ‘ಅಂತರಂಗದ ಸುರುಳಿ ಬಿಚ್ಚಿ ಸರ್ಚ್‍ಲೈಟಲ್ಲಿ ಹೆದ್ದಾರಿ ಹಾಸಿದ್ದ ರಾಮಚರಿತ’ ಎಂದು ಲೇವಡಿ ಮಾಡುತ್ತಾರೆ. ಅವರ ಅಡಿಗರ ಹುಡುಕಾಟಕ್ಕೆ ಈ ಬಗೆಯ ಸಿದ್ಧವಾದ ಗುರಿಯಿಲ್ಲ, ಸಿದ್ಧಾಂತದ ಆಸರೆಯಿಲ್ಲ. ಸರ್ಚ್‍ಲೈಟ್ ಆಗಲಿ ಅಥವಾ ಹೆದ್ದಾರಿಯಾಗಲಿ ಇದ್ದಂತಿಲ್ಲ. ಆದರೆ ಭರವಸೆಯಂತೂ ಇದೆ ‘ಕುರುಡನ ಹೆಗಲ ಮೇಲೆ ಹೆಳವ ಕೂತಿದ್ದಾನೆ | ದಾರಿ ಸಾಗುವುದೆಂತೋ ನೋಡಬೇಕು’ ಎಂಬ ಭರವಸೆಯಂತೂ ಇದೆ. ಸಿದ್ಧತತ್ವಗಳಲ್ಲ, ಬದಲಾಗಿ ಈ ಭರವಸೆಯೇ ಅವರ ಧಾರ್ಮಿಕ ಹುಡುಕಾಟದ ಜೀವಾಳವಾಗಿದೆ.

ತನ್ನ ಹುಡುಕಾಟದ ಮಾರ್ಗವನ್ನು ವರ್ಣಿಸುತ್ತ ಅಡಿಗರು

‘‌‌.... ಕಾಡಿನೊಳಹೊಕ್ಕು ಪೊದೆ ಪೊದರು ಗಿಡಗಂಟೆ/ ಮುಳ್ಳುಗಳ ನಡುವೆ ಹೊಚ್ಚ ಹೊಸ ಹಾದಿ ಕಡಿವವರು, ಪದ್ಧತಿ ಬಿಟ್ಟು/ ಮುದ್ದಾಮು ದಾರಿ ಹುಡುಕುತ್ತ ಅಲೆವವರು, ಬೆಟ್ಟದ ನೆತ್ತಿ/ ಹತ್ತಿ ಹತ್ತೂ ಕಡೆಗೆ ಕಣ್ಣು ಕಣ್ಣು ಬಿಡುವಂಥವರು, ಇಂಥವರು/ ಅರ್ಥವಾಗುವುದಾದರೂ ಹೇಗೆ?.....’

ಎಂದು ಪ್ರಶ್ನಿಸುತ್ತಾರೆ. ಈ ಅರ್ಥದಲ್ಲಿ ಅವರದ್ದು ಕುವೆಂಪು, ಪುತಿನ, ಶಿವಪ್ರಕಾಶ್ ಮುಂತಾದವರ ಕಾವ್ಯಗಳಲ್ಲಿ ಕಾಣಸಿಗುವ ಹುಡುಕಾಟಕ್ಕಿಂತಲೂ ಅಸಲಿಯಾದ ಹುಡುಕಾಟವಾಗಿದೆ. ಕುವೆಂಪು, ಬೇಂದ್ರೆ, ಪುತಿನ, ಎಕ್ಕುಂಡಿ, ಶಿವಪ್ರಕಾಶ್ ಮುಂತಾದ ಕವಿಗಳ ಧಾರ್ಮಿಕ ಹುಡುಕಾಟ ಎಷ್ಟೇ ಅಸಲಿ ಹುಡುಕಾಟದಂತೆ ಕಂಡರೂ ಅವರ ಹುಡುಕಾಟ ಅಂತಿಮವಾಗಿ ಶ್ರೀ ಅರವಿಂದರಿಗೋ, ಶ್ರೀರಾಮನಿಗೋ, ಶ್ರೀಕೃಷ್ಣನಿಗೋ, ಉಪನಿಷತ್ ಋಷಿಗಳಿಗೋ ಅಥವಾ ಅಲ್ಲಮಪ್ರಭುವಿಗೋ ಶರಣಾಗಿಬಿಡುತ್ತದೆ, ಅಂತಹ ವಿಭೂತಿ ಪುರುಷರಲ್ಲಿ ಪೂರ್ಣತೆಯನ್ನು ಕಂಡುಕೊಳ್ಳುತ್ತದೆ. ಆದ್ದರಿಂದಲೇ ಅವರ ಸಾಲುಗಳಲ್ಲಿ ಪುರಾತನರ ವಚನಗಳ ಛಾಯೆಯನ್ನು (ಪುನರುಕ್ತಿಯ ರೂಪದಲ್ಲೋ, ಅನುಕರಣೆ ಅಥವಾ ಅನುವಾದದಂತೆಯೋ) ಗುರುತಿಸಬಹುದು. ಉದಾಹರಣೆಗೆ ಬೇಂದ್ರೆಯ ಹಂಸದ ಹಾಡು ಪದ್ಯದಲ್ಲಿ ಬರುವ

‘ಮಲಗಲಿ ಏಳಲಿ ಹಂ ಸೋ ಹಂ ಸಃ / ಕೂಡಲಿ ಮಾಡಲಿ ಹಂ ಸೋ ಹಂ ಸಃ / ಹಗಲೂ ಇರುಳೂ ಹಂ ಸೋ ಹಂ ಸಃ

..

ಹಂ ಎನೆ ನಾನು ಸಃ ಎನೆ ತಾನು/ ಇದನೆ ಎನ್ನುವೆವು ನಾನೂ ನೀನೂ’ (ಗಂಗಾವತರಣ)

ಎಂಬ ಸಾಲುಗಳು ಪುರಾತನ ಯೌಗಿಕ ನುಡಿಗಳನ್ನು ಅನಾಮತ್ತಾಗಿ ತನ್ನದಾಗಿಸಿಕೊಂಡು ಆ ವಿವೇಕವನ್ನೇ ಪುನರುಚ್ಚರಿಸುತ್ತವೆ. ಅದೇ ರೀತಿ ಕುವೆಂಪು ಅವರ ‘ಆನಂದಮಯವೀ ಜಗಹೃದಯ ಏತಕೆ ಭಯ ಕಾಣೋ’, ಮುಂತಾದ ಕವಿತೆಗಳಲ್ಲಿ ಉಪನಿಷತ್ತಿನ ನುಡಿಗಳನ್ನು, ಶಿವಪ್ರಕಾಶರ ಕಾವ್ಯದಲ್ಲಿ ಶಿವಶರಣರ, ಮಧ್ಯಯುಗದ ಭಕ್ತಕವಿಗಳ ವಿವೇಕದ ಛಾಯೆಯನ್ನು ಗುರುತಿಸಬಹುದು.

ಸಂಪ್ರದಾಯದ ಸೂತಕದಿಂದ ಬಿಡುಗಡೆಗೊಂಡು ಧಾರ್ಮಿಕ ಹುಡುಕಾಟ ನಡೆಸುವುದು ಅಡಿಗರ ಕಾವ್ಯದ ಮೂಲ ಆಶಯವಾಗಿತ್ತು. ಈ ಹುಡುಕಾಟ ಅವರ ಕಾವ್ಯಯಾತ್ರೆಯುದ್ದಕ್ಕೂ ಒಂದು ಪ್ರೇರಕಶಕ್ತಿಯಂತೆ, ಅಂತರ್ವಾಹಿನಿಯಂತೆ ಸಾಗಿ ಬಂದಿರುವ ಅತ್ಯಂತ ಮೂಲಭೂತ ಕಾಳಜಿಯಾಗಿತ್ತು. ಅವರ ಭಾವತರಂಗದ ಮೊದಲ ಪದ್ಯದಲ್ಲೇ ಆ ಕಾಳಜಿ ನಮಗೆ ಕಾಣಸಿಗುತ್ತದೆ:

‘ಚಂದ್ರ ಸೂರ್ಯರ ನೆರವಿನಿಂದ ಬೆಳಗುವಳೀ ವ-/ಸುಂಧರೆಗದೆಂದು ಬಹುದೋ ಸ್ವಯಂದೀಪಕತೆ!/ ಅವರಿವರ ನುಡಿಗಳನು ಕದ್ದು ಮರುನುಡಿಗೊಡುವ/ ದೆಸೆಗಳೇ, ನಿಮಗೆಂದು ಬಹದು, ಮೀಸಲು ನಿನದ?’

 ಸಾನೆಟ್‍ನಲ್ಲಿ ಕವಿ ತನ್ನ ಅಸಲಿತನವನ್ನು, ನಿಜಸ್ವಭಾವವನ್ನು ಕಂಡುಕೊಳ್ಳಬೇಕು ಎಂಬ ತುಡಿತ ವ್ಯಕ್ತಪಡಿಸುತ್ತಾನೆ. ಹಾಗೆ ಕಂಡುಕೊಳ್ಳದಿದ್ದರೆ ತನ್ನ ಬಾಳು ನರಕ ಎಂದು ವಿಹ್ವಲಗೊಳ್ಳುತ್ತಾನೆ. ಈ ವಿಹ್ವಲತೆಯಿಂದ ಅಡಿಗರ ಪ್ರತಿಭೆಯ ವಿಕಾಸ ಪ್ರಾರಂಭವಾಗುತ್ತದೆ. ಬಹಿರಂಗದ ಬಾಳ್ವೆಗೆ ಮೊದಲಿಲ್ಲ ಆದರೆ ಕೊನೆಯುಂಟು. ಆದರೆ ಅಂತರಂಗದ ಬಾಳ್ವೆಗೆ ಕೊನೆಯಿಲ್ಲ ಆದರೆ ಮೊದಲುಂಟು ಎಂಬುದು ಅಡಿಗರ ನಂಬಿಕೆಯಾಗಿದೆ.

‘ಗಹ್ವರದ ಮುಖ ಅಲ್ಲಿ ಆಚೆ ಬಯಲ ಬರಾವು/ ಹಣ್ಣು ಹಂಪಲು ಹಸುರ ಬಲ್ಲೆ ಬಲ್ಲೆ/ ಜೀವನ ನಿಧಾನ ಶ್ರುತಿ ಶುದ್ಧ ಮೊರೆವ ಕರಾವು/ ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ’

ರಾಮಾಯಣದಲ್ಲಿ ಸಮುದ್ರೋಲ್ಲಂಘನ ಮಾಡುವ ಸಲುವಾಗಿ ಹನುಮಂತ ಅಗಾಧ ದೈತ್ಯರೂಪ ಪಡೆದುಕೊಳ್ಳುತ್ತಾನೆ. ಇಲ್ಲಿ ‘ಹನುಮಂತ’ನನ್ನು ಪೌರಾಣಿಕ ಪಾತ್ರವನ್ನಾಗಿ ಅಷ್ಟೇ ಕಾಣದೆ ಅದಕ್ಕೆ ಜೀವ ವಿಕಾಸದ, ಅಧ್ಯಾತ್ಮದ ನೆಲೆಗಳಲ್ಲೂ ಅರ್ಥೈಸಬಹುದು. ಹನುಮಂತನನ್ನು ಪ್ರಾಣದೇವರು ಎನ್ನುತ್ತಾರೆ. ಯೋಗಶಾಸ್ತ್ರಗಳ ಪ್ರಕಾರ ಪ್ರಾಣಶಕ್ತಿ ಮನುಷ್ಯನ ಒಳಜಗತ್ತು ಹಾಗೂ ಹೊರಜಗತ್ತುಗಳ ನಡುವೆ ಸಂಪರ್ಕ ಏರ್ಪಡಿಸುವ ಒಂದು ಸೇತುವೆಯಾಗಿದೆ. ಪ್ರಾಣದ ಗತಿಯನ್ನು ನಿಯಮಿಸುವ ಮೂಲಕ ಯೋಗಿಯಾದವನು ದಿವ್ಯತ್ವದ ಒಳನೋಟಗಳನ್ನು ಕಾಣಬಲ್ಲ. ‘ಹನುಮದ್ವಿಕಾಸ’ ಈ ಪ್ರಾಣಶಕ್ತಿಯನ್ನು ಸಂಕೇತಿಸುತ್ತದೆ. ಇನ್ನು ಡಾರ್ವಿನ್ ವಿಕಾಸವಾದ ವಾನರನ ವಿಕಾಸದ ಹಿನ್ನೆಲೆಯಲ್ಲಿ ಮನುಷ್ಯನ ವಿಕಾಸದ ಮೂಲವನ್ನು ಪ್ರತಿಪಾದಿಸುತ್ತದೆ. ಈ ಪ್ರಾಣಶಕ್ತಿಗೆ ಮತ್ತು ಈ ವಿಕಾಸಕ್ಕೆ ಎಲ್ಲೆಕಟ್ಟುಗಳಿಲ್ಲ ಎಂಬ ಒಳನೋಟ ‘ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ’ ಎಂಬ ಸಾಲುಗಳಲ್ಲಿ ಕಂಡುಬರುತ್ತದೆ.

ಸಾಂಪ್ರದಾಯಿಕ ಧಾರ್ಮಿಕತೆಯ ಹಿನ್ನೆಲೆಯಲ್ಲಿ ಅಡಿಗರ ಕಾವ್ಯವನ್ನು ನೋಡಲಾಗದಿದ್ದರೂ ಸಾಂಪ್ರದಾಯಿಕತೆಯ ಕೆಲವು ನಂಬಿಕೆಗಳು ಹಾಗೂ ಪೂರ್ವಗ್ರಹಗಳು ಅಡಿಗರ ಕಾವ್ಯದಲ್ಲೂ ಉಂಟು. ಉದಾಹರಣೆಗೆ, ಎಲ್ಲ ಸಾಂಪ್ರದಾಯಿಕ ಧರ್ಮಗಳೂ ಹೆಣ್ಣನ್ನು ಕೀಳಾಗಿ ಕಾಣುತ್ತವೆ, ಪುರುಷನ ಪಾಲಿಗೆ ಒಬ್ಬ ಶತ್ರುವೆಂದು ಭಾವಿಸುತ್ತವೆ, ಹೆಣ್ಣನ್ನು, ‘ಮೂಳೆ, ಮಾಂಸಗಳ ಚೀಲ’ ಎಂದೆಲ್ಲ ವರ್ಣಿಸುತ್ತವೆ. ಅಡಿಗರ ಕಾವ್ಯವೂ ಈ ಬಗೆಯ ಪೂರ್ವಗ್ರಹಗಳಿಂದ ಹೊರತಾಗಿಲ್ಲ.

ಹೆಣ್ಣನ್ನು ಒಂದು ಭೋಗದ ವಸ್ತುವಿನಂತಲ್ಲದೆ ತಾಯಿಯಂತೆ ಕಂಡಾಗಲೂ ಅವಳನ್ನು ಮಲತಾಯಿಯಂತೆ, ಒಬ್ಬ ಕ್ರೂರಿಯಂತೆ, ಪುರುಷನ ಗೆಲುವಿಗೆ, ಶ್ರೇಯಸ್ಸಿಗೆ ಒಂದು ತೊಡಕೆಂಬಂತೆಯೇ ಅವರ ಕಾವ್ಯ ಭಾವಿಸುತ್ತದೆ:

‘ತಾಯಿಗೂ ಮಿಗಿಲಾಗಿ ಎದೆಗವಚಿಕೊಂಡಳೋ;/ ತಿರುತಿರುಗಿ ತನ್ನ ಬಸಿರಲ್ಲಿಟ್ಟು ನವೆದಳೋ;/ ಹಕ್ಕಿ ಕೊರಳನು ಹಿಚುಕಿ ಲಾಲಿ ಹಾಡಿದಳು;/ ಸಸಿಕೊರಳ ಕೊಯ್ದು ತಿಂಡಿಯನು ತಿನಿಸಿದಳು./ ......ಮೆಣಸಿನಕಾಯಿ ಹೊಗೆ ಹಾಕಿ ತುರಿಯುವಳು ಎದೆಯ ಗರಟೆ/ಬಿದಿರು ಮೇಣೆಯ ಮೇಲೆ ಕುಳಿತು ಸಾಗುವ ವೇಳೆ - ಹೊರಬರಳು;/ ಅವಳಿಗಿನ್ನೊಂದು ಹೆರಿಗೆ (ಭೂಮಿಗೀತ)

‘ಇವಳ ಹೊಟ್ಟೆ ಚರಂಡಿಗಾರು ಕುಕ್ಕಿದರಯ್ಯ ಕಳ್ಳ ಬಸುರಿನ ಯಾವ ಜಾಣರಂಭೆ’ ಎಂದು ಕವಿ ವಿಹ್ವಲ ಪಡುತ್ತಾರೆ. ಹಾಗೆ ನೋಡಿದರೆ ಗೌತಮ ಬುದ್ಧನೂ ಹೆಣ್ಣಿನ ಬಗ್ಗೆ (ಇಷ್ಟು ತೀಕ್ಷ್ಣವಾಗಿ ಅಲ್ಲದಿದ್ದರೂ) ಇದೇ ತರಹದ ನಿಲುವು ಹೊಂದಿದ್ದ. ಬುದ್ಧನ ಭಿಕ್ಖುಸಂಘ ಪುರುಷ ಧ್ಯಾನಸಾಧಕರಿಗೆಂದೇ ರೂಪಿಸಲಾಗಿದ್ದ ಸಂಘವಾಗಿದ್ದ ಕಾರಣ ಸಾಧಕರ ಶ್ರೇಯಸ್ಸಿನ ದೃಷ್ಟಿಯಿಂದ ಹೆಣ್ಣನ್ನು ಸಂಘದಿಂದ ದೂರವಿರಿಸಬೇಕಾದುದು ಬುದ್ಧನ ಮಟ್ಟಿಗೆ ಅತ್ಯಗತ್ಯವಾಗಿತ್ತು.

ಧಾರ್ಮಿಕತೆಯ ಹಿನ್ನೆಲೆಯಲ್ಲಿ ನೋಡುವುದಾದರೆ ಅಡಿಗರು ಸಹ ಒಬ್ಬ ಸಾಧಕ ಕವಿ, ಈ ಹಿಂದೆ ವಿವೇಚಿಸಿದಂತೆ ಅವರು ಕುವೆಂಪು, ಬೇಂದ್ರೆ ತರಹ ಅವರು ಒಬ್ಬ ಸಿದ್ಧ ಕವಿಯಲ್ಲ, ಮಂತ್ರ ದ್ರಷ್ಟಾರನಂತೆ ಕಾವ್ಯರಚನೆ ಮಾಡುವ ಕವಿಯಲ್ಲ. ಆಳದಲ್ಲಿ ತಾನು ಒಬ್ಬ ಧಾರ್ಮಿಕ ಸಾಧಕನೆಂಬ ಅರಿವು ಇದ್ದುದರಿಂದಲೋ ಏನೋ ಪ್ರಾಯಶಃ ಅವರು ಹೆಣ್ಣಿನ ಬಗ್ಗೆ ಈ ಬಗೆಯ ನಿಲುವು ತಳೆದಿದ್ದರೆನಿಸುತ್ತದೆ. ಮನುಷ್ಯನ ಸಮಸ್ತ ದೌರ್ಬಲ್ಯಗಳನ್ನೂ ತಮ್ಮ ಕೃತಿಗಳಲ್ಲಿ ಮೂಡಿಸುತ್ತಿದ್ದ ಬಹುತೇಕ ಎಲ್ಲ ನವ್ಯ ಸಾಹಿತಿಗಳೂ ಹೆಣ್ಣಿನ ಹಿರಿಮೆಯನ್ನು, ಅವಳ ವ್ಯಕ್ತಿತ್ವದ ವಿವಿಧ ಮುಖಗಳನ್ನು ಕಾಣುವಲ್ಲಿ, ಕಾಣಿಸುವಲ್ಲಿ ವಿಫಲರಾಗಿದ್ದಾರೆ. ಆದರೆ ಅಡಿಗರು ಹೆಣ್ಣನ್ನು ಹೀನಾಯವಾಗಿ ಚಿತ್ರಿಸಲು ಬೇರೆಯದೇ ಕಾರಣವಿತ್ತು. ಅನ್ಯ ನವ್ಯ ಸಾಹಿತಿಗಳಂತೆ ದೌರ್ಬಲ್ಯ, ವ್ಯಸನ, ಲೋಲುಪತೆಯ ಅತಿರಂಜಿತ ನಿರೂಪಣೆಯ ತುಡಿತಕ್ಕೆ ಒಳಗಾಗಿ ಅಲ್ಲ, ತನ್ನೊಳಗಿನ ಸಾಧಕ ಪ್ರಜ್ಞೆಯ ಪ್ರೇರಣೆಗೊಳಗಾಗಿ ಅವರು ಹೆಣ್ಣನ್ನು ದೂರವಿರಿಸಿದರು ಎಂಬುದನ್ನು ನಾವು ಮರೆಯಬಾರದು.

ಎರಡನೆಯದಾಗಿ, ಅಡಿಗರು ಪರಂಪರೆಯೊಂದಿಗೆ ಹೊಂದಿದ್ದ ಸಂಬಂಧವನ್ನೂ ನಾವು ಗಮನಿಸಬೇಕಾಗುತ್ತದೆ. ಅವರು ಪರಂಪರೆಯ ಬಗ್ಗೆ ಅಪಾರವಾದ ಗೌರವ ಮತ್ತು ಭರವಸೆಗಳನ್ನು ಇಟ್ಟುಕೊಂಡಿದ್ದ ಕವಿಯಾಗಿದ್ದರು. ಒಬ್ಬ ಸಾಧಕ ಅಥವಾ ಬದುಕಿನ ಸತ್ಯವನ್ನು ಹುಡುಕುವವನು ಎಂದೂ ಪರಂಪರೆಯ ಬಗ್ಗೆ ವಿಧೇಯನಾಗಿರುತ್ತಾನೆ, ಪರಂಪರೆಯನ್ನು ಧಿಕ್ಕರಿಸುವ ಮಟ್ಟಕ್ಕೆ ಹೋಗುವುದಿಲ್ಲ. ಒಂದು ವೇಳೆ ಪರಂಪರೆಯಿಂದ ತನ್ನ ಅಡಚಣೆ ಆಗುತ್ತಿದೆ ಎಂದು ಅವನಿಗೆ ಅನ್ನಿಸಿದಾಗಲೂ ಅವನು ಪರಂಪರೆಯನ್ನು ದೂಷಿಸುವುದಿಲ್ಲ. ಬದಲಾಗಿ ಪರಂಪರೆಯೊಂದಿಗೆ ತಾನು ಬೆಳೆಸಿಕೊಂಡಿರುವ ವ್ಯಾಮೋಹವನ್ನೇ ದೂಷಿಸುತ್ತಾನೆ. ‘ಅನ್ಯರೊರೆದುದನೆ ಬರೆದು ದನೆ ಬರೆಬರೆದು ಬಿನ್ನಗಾಗಿದೆ ಮನವು’ ಎನ್ನುತ್ತಾನೆ. ಅಥವಾ ಈ ಹಿಂದೆ ‘ನನ್ನ ಅವತಾರ’ ಪದ್ಯದಲ್ಲಿ ಗಮನಿಸಿದಂತೆ ನಮ್ಮ ಪರಂಪರೆಯೊಂದಿಗೆ ವಿಲೀನವಾಗಿರುವ ರಾಮ, ಕೃಷ್ಣ, ಬುದ್ಧ, ಗಾಂಧಿ ಮುಂತಾದ ಪುಣ್ಯ ಪುರುಷರ ಸಹವಾಸದಲ್ಲಿದ್ದೂ ತಾನು ಮಾತ್ರ ಬೆಳೆಯಲಿಲ್ಲ ಎಂದು ತನ್ನ ಬಗ್ಗೆಅಸಮಾಧಾನ ವ್ಯಕ್ತಪಡಿಸು ವನೇ ವಿನಃ ಅವರುಗಳ ಅವತಾರದಿಂದ ಲೋಕಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತೀರ್ಮಾನಿಸುವುದಿಲ್ಲ.

ಕೊನೆಯದಾಗಿ ಅಡಿಗರ ‘ಕೂಪಮಂಡೂಕ’ ಪದ್ಯವು ಅವರ ಒಟ್ಟು ಧಾರ್ಮಿಕ ನಿಲುವನ್ನು ಸಮಗ್ರವಾಗಿ ಹಿಡಿದಿಟ್ಟುಕೊಂಡಿರುವ ಕಾವ್ಯವಾಗಿದೆ. ಕೂಪಮಂಡೂಕ ಎಂದರೆ ಬಾವಿಯ ಕಪ್ಪೆ ಎಂದರ್ಥ. ಈ ಪದ್ಯ ಬಾಷೋನ ಹಾಯ್ಕುವೊಂದನ್ನು ನೆನಪಿಸುತ್ತದೆ:

An ancient pond/ A frog jumps in/ Plop!

(ಹಳೆಯದೊಂದು ಕೊಳ/ ಕಪ್ಪೆ ಜಿಗಿವುದು/ ಗುಳುಕ್ ಶಬ್ದ | ನಿಶ್ಯಬ್ದ|)

ಕಪ್ಪೆ ಕೊಳದೊಳಗೆ ಜಿಗಿವ ಮುನ್ನವೂ ಜಿಗಿದ ನಂತರವೂ ಅಲ್ಲಿ ನಿಶ್ಯಬ್ದ ಇದ್ದೇ ಇತ್ತು. ಈ ಹಾಯ್ಕು ‘ಗುಳುಕ್’ ಶಬ್ದದಿಂದ ನಿಶ್ಯಬ್ದಕ್ಕೆ ಹಾನಿಯಾಯಿತೇ ಅಥವಾ ನಿಶ್ಯಬ್ದ ಇನ್ನೂ ಗಹನವಾಯಿತೇ ಎಂಬ ಪ್ರಶ್ನೆ ಹುಟ್ಟಿಸುತ್ತದೆ. ಉಪನಿಷದ್ವಾಣಿಯು ‘ಪೂರ್ಣತ್ವಕ್ಕೆ ಹಾನಿ ಮಾಡಲೂ ಬರುವುದಿಲ್ಲ, ಹಾಗೆಯೇ ಅದಕ್ಕೆ ಹೊಸದನ್ನು ಸೇರಿಸಲೂ ಬರುವುದಿಲ್ಲ’ (ಪೂರ್ಣಮದಃ, ಪೂರ್ಣಮಿದಂ...ಪೂರ್ಣಮೇವಾವಶಿಷ್ಯತೇ) ಎನ್ನುತ್ತದೆ. ಅಂದ ಮೇಲೆ ಈ ಹಾಯ್ಕುವಿನ ಪ್ರಾಮುಖ್ಯವೇನು? ನಿಶ್ಯಬ್ದ ಅವಿಕಲ್ಪವಾದುದಾದರೂ ಹೊರಗಿನಿಂದ ನೋಡುವವನಿಗೆ ಕಪ್ಪೆ ಜಿಗಿದ ನಂತರ ಸೃಷ್ಟಿಯಾಗುವ ನಿಶ್ಯಬ್ದ ಮುನ್ನಿನ ನಿಶ್ಯಬ್ದಕ್ಕಿಂತಲೂ ಇನ್ನೂ ಗಹನವಾದಂತೆ ಭಾಸವಾಗುತ್ತದೆ. ಅಡಿಗರ ‘ಕೂಪಮಂಡೂಕ’ ಆ ಮಿಗಿಲಿನ ಗಹನತೆಯ ಧ್ಯಾನವಾಗಿದೆ.

‘ಕೂಪಮಂಡೂಕ’ ಪದ್ಯವು ‘ನೀನೆಲ್ಲಿ ಈಗ’ ಎಂಬ ಸಾಲಿನಿಂದ ಪ್ರಾರಂಭವಾಗುತ್ತದೆ. ಇಲ್ಲಿ ‘ಈಗ’ ಎಂಬುದೂ ಸಹ ಒಂದು ಜೆನ್‌ ಪರಿಭಾಷೆಯೇ ಆಗಿದೆ. ಆತ್ಮಜ್ಞಾನವೆಂಬುದು ಭೂತಕಾಲದ್ದೂ ಅಲ್ಲ ಭವಿಷ್ಯದ್ದೂ ಅಲ್ಲ, ಅದು ಈಗಿನದ್ದು, ಈ ಕ್ಷಣದ್ದು (here and now) ಎಂಬುದು ಜೆನ್‌ ವಿವೇಕವಾಗಿದೆ. ‘ನೀನೆಲ್ಲಿ ಈಗ’ ಎಂಬ ಪ್ರಶ್ನೆಯಲ್ಲಿ ‘ಈ ಸ್ಥಳ ಮತ್ತು ಈ ಗಳಿಗೆ (here and now) ಇದ್ದೇ ಇದೆ, ಆದರೆ ನೀನು (ಆತ್ಮಜ್ಞಾನ) ಎಲ್ಲಿದ್ದೀಯೆ?’ ಎಂಬ ಜಿಜ್ಞಾಸೆ ಇದೆ. ಪ್ರತಿ ನಾಲ್ಕು ಸಾಲುಗಳ ನಂತರ ‘ನೀನೆಲ್ಲಿ ಈಗ’ ಎಂಬ ಸಾಲನ್ನು ಪಲ್ಲವಿಯ ರೂಪದಲ್ಲಿ ಪುನರುಚ್ಚರಿಸಿದಾಗ ಪ್ರತಿ ಪದ್ಯಭಾಗವೂ ಹೊಸ ಹೊಸ ಅರ್ಥಗಳನ್ನು ಹೊಳೆಯಿಸುತ್ತದೆ ಎಂದು ಕಾವ್ಯಗುರು ಕಿರಂ ನಾಗರಾಜ ಅವರು ಆಗಾಗ ಹೇಳುತ್ತಿದ್ದರು.

ಭಾವತರಂಗದ ‘ಮೋಹನ ಮುರಳಿ’ಯಲ್ಲಿ ಅಡಿಗರು ದೂರದ ಅಜ್ಞಾತ ಕರೆಯೊಂದನ್ನು ಕುರಿತು ವರ್ಣಿಸಿದ್ದರು. ‘ಯಾವ ಮೋಹನ ಮುರಳಿ, ಯಾವ ಬೃಂದಾವನ ನಿನ್ನ ಮಣ್ಣಿನ ಕಣ್ಣನ್ನು ಸೆಳೆಯುತ್ತಿದೆ?’ ಎಂದು ವಿಸ್ಮಯದಿಂದ ಕೇಳಿದ್ದರು. ಮುಂದೆ ಆ ಕರೆಯನ್ನು ಮತ್ತು ಆ ಸೆಳೆತವನ್ನು ಹಿಂಬಾಲಿಸಿಕೊಂಡು ಹೊರಡುವ ಕವಿಗೆ ತನ್ನ ಗುರಿ ತಲುಪಿದ ಮೇಲೆ ನಿರಾಸೆಯಾಗುತ್ತದೆ. ‘ಕೂಪ ಮಂಡೂಕ’ ಪದ್ಯದಲ್ಲಿ ಹಾಗೆ ಕರೆದಿದ್ದ ಧ್ವನಿ ಕೇಳಿಸದಾಗಿದೆ, ಹಾಗೆ ಕರೆದಿದ್ದ ಗೆಳೆಯ ಕಣ್ಮರೆಯಾಗಿದ್ದಾನೆ ಎಂಬ ಭ್ರಮನಿರಸನವಿದೆ. ಈ ತೀವ್ರ ಭ್ರಮನಿರಸನದ ಸ್ಥಿತಿಯಲ್ಲಿ ಕವಿ ತನ್ನ ಧಾರ್ಮಿಕ ಹುಡುಕಾಟವನ್ನು ಪುನಃ ಮೊದಲ ಹೆಜ್ಜೆಯಿಂದ ಪ್ರಾರಂಭಿಸುತ್ತಾರೆ. ಈ ಭ್ರಮನಿರಸನ ಕವಿಯ ಸಂಕಲ್ಪವನ್ನು ದುರ್ಬಲಗೊಳಿಸದೆ ಇನ್ನೂ ಸಬಲಗೊಳಿಸುತ್ತದೆ, ಹೊಸ ಸಂಕಲ್ಪಕ್ಕೆ ಪ್ರೇರೇಪಿಸುತ್ತದೆ:

‘ನಿನ್ನ ನಗೆಯನ್ನೆ ಮೊಳಗುತ್ತಿರುವ ಮಲ್ಲಿಗೆ,

ನಿನ್ನ ನಲ್ಮೆಯ ನೆಳಲನೀವ ಮಾವು;

ನಿನ್ನೊಲವನಪ್ಪಿ ತೋರುವ ಕೊಳದ ತಳಕೆಸರು-

ಇಲ್ಲಾಡುವುದು ಇದೇ ಹೊಸ ಠರಾವು’

ಇದುವೆ ಕವಿಯ ಹೊಸ ಸಂಕಲ್ಪವಾಗುತ್ತದೆ. ಕವಿಯ ಧಾರ್ಮಿಕ ಹುಡುಕಾಟದ ಮತ್ತೊಂದು ಯಾತ್ರೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT