ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್ ಅಂದ್ರೆ ಇಷ್ಟೇನೆ

Last Updated 5 ಅಕ್ಟೋಬರ್ 2017, 20:47 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್ ಯುಗದಲ್ಲಿ ವಾಟ್ಸ್‌ಆ್ಯಪ್, ಫೇಸ್‌ಬುಕ್‌ಗಳು ಈಗ ಜನರ ಬದುಕಿನ ಭಾಗವೇ ಆಗಿವೆ. ಕೇವಲ ಅಕ್ಷರ ಸಂದೇಶ ರವಾನೆಗೆ ಸೀಮಿತವಾಗಿದ್ದ ಈ ತಂತ್ರಾಂಶಗಳು ಪ್ರತಿನಿತ್ಯವೂ ಅಪ್‌ಡೇಟ್ ಆಗುತ್ತಾ, ಬಳಕೆದಾರರನ್ನು ಬಹುವಾಗಿ ಆಕರ್ಷಿಸುತ್ತಿವೆ.

ಸಾಮಾಜಿಕ ಜಾಲತಾಣಗಳ ಮಟ್ಟಿಗೆ ಫೇಸ್‌ಬುಕ್‌ ಅಧಿಪತ್ಯ ಸಾಧಿಸಿದ್ದ ವೇಳೆ ಬಳಕೆಗೆ ಬಂದು ಅದರ ಖ್ಯಾತಿಯೊಡನೆ ಜಿದ್ದಿಗೆ ಬಿದ್ದು ಗೆದ್ದಿದ್ದು ವಾಟ್ಸ್‌ಆ್ಯಪ್. ಇದರ ಪ್ರತಿದಿನದ ಸರಾಸರಿ ಬಳಕೆದಾರರ ಸಂಖ್ಯೆ 100 ಕೋಟಿ ದಾಟಿದೆ. ಅಂದಾಜು 5,500 ಕೋಟಿ ಸಾಮಾನ್ಯ ಸಂದೇಶಗಳು, 450 ಕೋಟಿ ಚಿತ್ರ ಸಂದೇಶಗಳು,100 ಕೋಟಿ ವಿಡಿಯೋಗಳು ಇಲ್ಲಿ ಗಿರಕಿ ಹೊಡೆಯುತ್ತಿವೆ. ವಾಟ್ಸ್‌ಆ್ಯಪ್‌ಗೆ ಸಂಬಂಧಿಸಿದ ಒಂದಿಷ್ಟು ಮಾಹಿತಿ ಇಲ್ಲಿದೆ.

ಸ್ಕ್ರೀನ್ ಮೇಲೆಯೇ ಇವೆ ಇಷ್ಟೆಲ್ಲಾ
ತಕ್ಷಣದ ಚಿತ್ರ ತೆಗೆಯಲು ಕ್ಯಾಮೆರಾ ಇದೆ. ಪಕ್ಕದಲ್ಲಿ ನಿಮ್ಮೊಡನೆ ಸಂದೇಶ ಬದಲಿಸಿಕೊಂಡವರದೊಂದು ಪಟ್ಟಿ, ನಂತರ ಸ್ಟೇಟಸ್, ಕೊನೆಯಲ್ಲಿ ಕಾಲ್ ಮಾಡಿದವರ ಲಿಸ್ಟ್ ಇದೆ. ಸಂಪರ್ಕಗಳನ್ನು ಹುಡುಕಲು ಮೇಲೋಂದು 'ಹುಡುಕು ಚಿಹ್ನೆ' ಇದೆ. ಅದರ ಪಕ್ಕದಲ್ಲಿರುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ಕಿಸಿದರೆ, ಹೊಸ ಗುಂಪು ತೆರೆಯಲು, ಬ್ರಾಡ್‌ಕಾಸ್ಟ್‌ ಸಂದೇಶ ಆರಂಭಿಸಲು, ಖಾತೆಯನ್ನು ಕಂಪ್ಯೂಟರ್‌ನೊಡನೆ ಜೋಡಿಸುವ ಅವಕಾಶಗಳು ತೆರೆದುಕೊಳ್ಳುತ್ತವೆ. ನೀವು ಈಗಾಗಲೇ 'ಸ್ಟಾರ್' ಮಾಡಿಕೊಂಡಿರುವ ಸಂದೇಶಗಳನ್ನು ನೋಡುವ ಆಯ್ಕೆಯೂ ಅಲ್ಲೇ ಇದೆ. ನಂತರದ ಸಾಲಿನಲ್ಲಿ ಸೆಟ್ಟಿಂಗ್ಸ್‌ ಇದೆ.

ಸೆಟ್ಟಿಂಗ್ಸ್‌ನಲ್ಲಿ ಏನೇನಿದೆ?
‘ಡಿಸ್‌ಪ್ಲೇ ಪಿಕ್ಚರ್’ ಹಾಕಲು, ಖಾತೆ ಸಂಖ್ಯೆ ಬದಲಿಸಲು, ರಿಂಗ್ ಟೋನ್ ಬದಲಿಸಲು, ಸ್ನೇಹಿತರನ್ನು ವಾಟ್ಸ್‌ಆ್ಯಪ್‌ಗೆ ಆಹ್ವಾನಿಸಲು ಹಾಗೂ ವಾಲ್‌ಪೇಪರ್‌ ಬದಲಿಸುವ ಅವಕಾಶಗಳಿವೆ. ಒಂದು ವೇಳೆ ಆ್ಯಪ್‌ ಬಳಸಲು ಗೊಂದಲವಾದರೆ ಇಲ್ಲಿ ಸಹಾಯ ಪಡೆಯಬಹುದು.

ಏನೇನ್ ಮಾಡ್ಬೋದು?
ಚಿತ್ರ-ವಿಡಿಯೊ-ಆಡಿಯೊಗಳು, ವರ್ಡ್‌ ಅಥವಾ ಪಿಡಿಎಫ್‌ ಫೈಲ್‌ಗಳು, ನೀವಿರುವ ಸ್ಥಳದ ಲೊಕೇಷನ್‌ ಕಳುಹಿಸಬಹುದು. ಇದಕ್ಕಾಗಿ ಸಂದೇಶ ಕಳಿಸುವ ವೇಳೆ ಸ್ಕ್ರೀನ್ ಮೇಲೆ ಕಾಣುವ ಅಟ್ಯಾಚ್‌ ಚಿನ್ಹೆ ಮೇಲೆ ಕ್ಲಿಕ್ಕಿಸಿದರೆ ಆಯ್ಕೆಗಳು ತೆರೆದುಕೊಳ್ಳುತ್ತವೆ. ಅದರ ಪಕ್ಕದಲ್ಲೇ ಕಾಣುವ ಕ್ಯಾಮೆರಾ ಹಾಗೂ ಧ್ವನಿ ವರ್ಧಕದ ಮೇಲೆ ಒತ್ತಿದರೆ ತತ್‌ಕ್ಷಣದ ಚಿತ್ರ, ವಿಡಿ/ಆಡಿಯೊ ಕಳಿಸಬಹುದು. ಸಾಮಾನ್ಯ ಕರೆ ಮಾಡಲು ಮೇಲೊಂದು ಕಾಲಿಂಗ್‌ ಬಟನ್‌ ಇದೆ. ಪಕ್ಕದಲ್ಲಿರುವ ಮತ್ತೊಂದು ಚಿಹ್ನೆ ವಿಡಿಯೊ ಕರೆಗೆ ಮೀಸಲು.

ಸ್ಟೇಟಸ್‌ ಬದಲಿಸಿ ಸ್ವಾಮಿ
ಸ್ಟೇಟಸ್‌ ಪಟ್ಟಿಗೆ ಬಂದರೆ ಸ್ಟೇಟಸ್‌ ಬರೆದುಕೊಳ್ಳಲು ಪೆನ್‌ ಟೂಲ್‌ ಇದೆ. ಅದರ ಕೆಳಗಿರುವ ಕ್ಯಾಮೆರಾ ಮೇಲೆ ಒತ್ತಿದರೆ ಚಿತ್ರಗಳು, 30 ಸೆಕೆಂಡ್ ಮೀರದ ಎಷ್ಟು ವಿಡಿಯೋಗಳನ್ನು ಬೇಕಾದರೂ ಹಾಕಬಹುದು. ಆದರೆ, 24 ಗಂಟೆ ಬಳಿಕ ತಂತಾನೆ ಅಗೋಚರವಾಗುತ್ತವೆ.

ಟೆಕ್ಸ್ಟ್‌ಅನ್ನು ಹೀಗೂ ಬರೆಯಿರಿ
ಅಕ್ಷರ ಸಂದೇಶ ಕಳುಹಿಸುವ ವೇಳೆ ಯಾವುದೇ ಪದ ಅಥವಾ ಸಾಲನ್ನು ಮುಖ್ಯವೆಂದು ಹೇಳಲು ಆ ಪದದ ಆರಂಭಕ್ಕೂ ಮುನ್ನ ಮತ್ತು ಕೊನೆಗೆ ಸ್ಟಾರ್(*) ಚಿನ್ಹೆ ಹಾಕಿದರೆ ಬೋಲ್ಡ್ ಆಗಿ ಬದಲಾಗುತ್ತವೆ. ಅದೇ ರೀತಿ ಇಟಾಲಿಕ್ ಮಾಡಲು ಅಂಡರ್ಸ್ಕೋರ್ (_) , ಅಂಡರ್ಲೈನ್/ ಸ್ಟ್ರೈಕ್‌ಥ್ರೋಗಾಗಿ ಟಿಲ್ಡ್ (~) ಚಿಹ್ನೆ ಬಳಸಬಹುದು.

ಸಂದೇಶ ನೋಡಿದವರೆಷ್ಟು?
ಗುಂಪಿನಲ್ಲಿ ನೀವು ಹಾಕಿದ ಸಂದೇಶ ಎಷ್ಟು ಮಂದಿಗೆ ತಲುಪಿದೆ, ಯಾರೆಲ್ಲಾ ಯಾವಾಗ ನೋಡಿದ್ದಾರೆ ಎಂದು ತಿಳಿಯಲು ನಿಮ್ಮ ಸಂದೇಶವನ್ನು ಆಯ್ಕೆಮಾಡಿ ಮೇಲೆ ಕಾಣುವ ವೃತ್ತಾಕಾರದ ಚಿಹ್ನೆಯನ್ನು ಸ್ಪರ್ಶಿಸಿ.

ಶಾರ್ಟ್‌ಕಟ್‌ ಸೌಲಭ್ಯ ಉಂಟು
ಸ್ಕ್ರೀನ್‌ ಮೇಲೆ ಕಾಣುವ ಮೂರು ಚುಕ್ಕಿಗಳ ಮೇಲೆ ಒತ್ತಿ. ಕೆಳಗೆ ಕಾಣುವ ‘ಮೋರ್‌’ ಸ್ಪರ್ಶಿಸಿದರೆ ಅಲ್ಲಿ ಶಾರ್ಟ್‌ಕಟ್‌ ಆಯ್ಕೆ ಇದೆ. ನೀವು ಪದೇಪದೆ ಬಳಸುವ, ಅಗತ್ಯವೆನಿಸುವ ಗುಂಪು ಅಥವಾ ಸಂಖ್ಯೆಯನ್ನು ಶಾರ್ಟ್‌ಕಟ್‌ ಮಾಡಿದರೆ ಅದು ಮೊಬೈಲ್‌ನ ಮೇನ್ ಸ್ಕ್ರೀನ್‌ನಲ್ಲಿ ಸಿಗುತ್ತೆ.

ಪಿನ್ ಮಾಡಿ ಮೇಲೆ ತನ್ನಿ
ಅಗತ್ಯವೆನಿಸುವ ಯಾವುದೇ ಸಂಪರ್ಕವನ್ನು ಆಯ್ಕೆಮಾಡಿ ಮೇಲೆ ಕಾಣುವ ಪಿನ್‌ ಚಿಹ್ನೆ ಮುಟ್ಟಿದರೆ, ಅದು ನಿಮ್ಮ ಸಂಭಾಷಣೆ ಪಟ್ಟಿಯಲ್ಲಿ ಸದಾ ಮೇಲೆಯೇ ಉಳಿಯುತ್ತದೆ.

ಡೇಟಾ ಕಡಿಮೆ ಇದ್ಯಾ?
ನಿಮ್ಮ ಮೊಬೈಲ್‌ ಡೇಟಾ ಕಡಿಮೆ ಇದ್ದಾಗ ಹಾಗೂ ಆ್ಯಪ್‌ ಬಳಸಿದ ವೇಳೆ ಬರುವ ಅಕ್ಷರ ಸಂದೇಶವಲ್ಲದ ಯಾವುದೇ ಸಂದೇಶಗಳು ಡೌನ್‌ಲೋಡ್ ಆಗುವುದನ್ನು ತಡೆಯಿರಿ. ಸೆಟ್ಟಿಂಗ್ಸ್‌ನಲ್ಲಿರುವ ಡೇಟಾ ಯುಸೇಜ್‌ ಆಯ್ಕೆಗೆ ಹೋಗಿ ಚಿತ್ರ, ವಿಡಿಯೊ, ಆಡಿಯೊ ಡೌನ್‌ಲೋಡ್ ನಿರ್ವಹಣೆಯ ಆಯ್ಕೆಗಳನ್ನು ಬದಲಿಸಿಕೊಳ್ಳಿ.

ಬ್ರಾಡ್‌ಕಾಸ್ಟ್‌ ಮೆಸೇಜ್ ಬಗ್ಗೆ ಗೊತ್ತಾ
ಒಂದು ಸಂದೇಶವನ್ನು ಒಂದೇ ಬಾರಿ ಹಲವರಿಗೆ ಪ್ರತ್ಯೇಕವಾಗಿ ಕಳುಹಿಸಲು ಇದನ್ನು ಬಳಸಲಾಗುತ್ತದೆ. ಸೆಟಿಂಗ್ಸ್‌ನಲ್ಲಿ ಈ ಆಯ್ಕೆ ಇದೆ. ಶುಭಾಶಯಗಳಂಥ ಸಾರ್ವತ್ರಿಕ ಸಂದೇಶ ಕಳಿಸಲು ಸಹಕಾರಿ. ಎಷ್ಟು ಜನರಿಗೆ ಸಂದೇಶ ರವಾನೆಯಾಗಿದೆ ಎಂಬುದು ನಿಮ್ಮನ್ನು ಬಿಟ್ಟು ಬೇರಾರಿಗೂ ಗೊತ್ತಾಗದು.

ಸಂದೇಶ ಉಳಿಸಿಕೊಳ್ಳಲು 3ದಾರಿ
1.ಮುಖ್ಯವೆನಿಸುವ ಸಂದೇಶಗಳನ್ನು ಆಯ್ಕೆ ಮಾಡಿಕೊಂಡು ಮೇಲೆ ಕಾಣುವ ಸ್ಟಾರ್‌ ಚಿನ್ಹೆ ಒತ್ತಿದರೆ ಸಾಕು. ಎಲ್ಲಾ ಸಂದೇಶಗಳನ್ನು ಒಟ್ಟಿಗೆ ಅಳಿಸಿದರೂ ‘ಸ್ಟಾರ್‌’ ಮಾಡಿದವು ಉಳಿಯುತ್ತವೆ. ಆದರೆ ಸಂದೇಶ ಪಟ್ಟಿಯಿಂದ ಸಂಪರ್ಕ ಅಳಿಸಬಾರದು ಅಷ್ಟೇ.

2. ನಕಲು ಮಾಡಿಕೊಂಡು ವರ್ಡ್‌/ನೋಟ್‌ಪ್ಯಾಡ್‌ಗೆ ಹಾಕಿಟ್ಟುಕೊಳ್ಳಿ.

3. ಸಂಭಾಷಣೆಗಳನ್ನು ಉಳಿಸಿಕೊಳ್ಳಲು 'ಮೋರ್‌'ನಲ್ಲೇ ಇರುವ ಇ-ಮೇಲ್‌ ಚಾಟ್‌ ಅನ್ನು ಒತ್ತಿ. ಸಂದೇಶಗಳ ನಕಲು ಪ್ರತಿಯೊಂದು ಸಂದೇಶವೂ ಇ-ಮೇಲ್‌ಗೆ ವರ್ಗಾವಣೆ ಆಗುತ್ತದೆ. ಬಳಿಕ ಮೇಲ್‌ನಲ್ಲಿ ಸೇವ್ ಮಾಡಿ ಫೋಲ್ಡರ್ ಮಾಡಿಕೊಂಡು ಉಳಿಸಿಕೊಳ್ಳಬಹುದು.

ಕಿರಿಕಿರಿಯಾದರೆ ಬ್ಲಾಕ್‌ ಮಾಡಿ
'ಮೋರ್‌'ನಲ್ಲಿ ಇ-ಮೇಲ್‌ ಚಾಟ್‌ ಮತ್ತು ಶಾರ್ಟ್‌ಕಟ್‌ ಜತೆಯಲ್ಲೇ ಈ ಆಯ್ಕೆ ಇದೆ. ಬೇಕಿಲ್ಲವೆನಿಸುವ ಸಂಪರ್ಕಕ್ಕೆ ತೆರಳಿ ಬ್ಲಾಕ್‌ ಮೇಲೆ ಒತ್ತಿದರೆ ಆ ಸಂಪರ್ಕದಿಂದ ಮತ್ತೆ ಸಂದೇಶ ಬರಲಾರದು.

ಬ್ಯಾಕಪ್‌ ಇದೆ ಡೋಂಟ್ ವರಿ
ನಿಮ್ಮ ಖಾತೆಯನ್ನು ರೀಸ್ಟೋರ್ ಮಾಡಬೇಕಿನಿಸಿದರೆ ಚಿಂತೆ ಬೇಡ. ಸೆಟ್ಟಿಂಗ್ಸ್‌ಗೆ ತೆರಳಿ. ಅದರಲ್ಲಿನ ಚಾಟ್ಸ್‌ ಮೇಲೆ ಸ್ಪರ್ಶಿಸಿ, ಬ್ಯಾಕಪ್‌ ಆಯ್ಕೆ ಕಾಣುತ್ತದೆ. ಅದನ್ನು ಒತ್ತಿದರೆ ನಿಮ್ಮಲ್ಲಿರುವ ಎಲ್ಲಾ ಬಗೆಯ ಸಂದೇಶಗಳು ಗೂಗಲ್‌ ಡ್ರೈವ್‌ನಲ್ಲಿ ಉಳಿಯುತ್ತವೆ. ಮತ್ತೆ ಖಾತೆ ತೆರೆದಾಗ ಅಲ್ಲಿಂದ ಮರಳಿ ಸಿಂಕ್ ಆಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT