ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಟ್ಟಾದ ಮಹಿಳೆಯರು ಗ್ರಾಮದಿಂದ ಹೊರಕ್ಕೆ

Last Updated 8 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಆನಂದಪುರ ಹೋಬಳಿಯ ಹಲವು ಗ್ರಾಮಗಳಲ್ಲಿ ಭೂಮಿ ಹುಣ್ಣಿಮೆ ಹಾಗೂ ದೀಪಾವಳಿಯ ಅಮವಾಸ್ಯೆ ನಡುವೆ ಋತುಮತಿ (ಮುಟ್ಟು)ಯಾದ ಮಹಿಳೆಯರನ್ನು ಗ್ರಾಮದಿಂದಲೇ ಹೊರಕ್ಕೆ ಕಳುಹಿಸುವ ಸಂಪ್ರದಾಯವನ್ನು ಇಂದಿಗೂ ನಡೆಸಿಕೊಂಡು ಬರಲಾಗುತ್ತಿದೆ. ಹೊಸದಾಗಿ ಋತುಮತಿಯಾದ ಯುವತಿಯರಿಗೂ ಈ ಕಟ್ಟುಪಾಡು ಅನ್ವಯಿಸುತ್ತಿದೆ.

ಇಲ್ಲಿನ ತ್ಯಾಗರ್ತಿ, ಲ್ಯಾವಿಗೆರೆ, ಮಳ್ಳ, ಕುಡಿಗೆರೆ, ತೆಪ್ಪಗೋಡು, ಜಂಬಾನೆ, ಕುಂದೂರು, ಜಂಬೂರುಮನೆ, ಚೆನ್ನಶೆಟ್ಟಿಕೊಪ್ಪ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಇಂತಹ ಮೌಢ್ಯಾಚರಣೆ ನಡೆಯುತ್ತಿದೆ. ಆವಿನಹಳ್ಳಿ, ತಾಳಗುಪ್ಪ ಹೋಬಳಿಯ ಕೆಲವು ಗ್ರಾಮಗಳಲ್ಲೂ ಈ ಆಚರಣೆ ಕಾಣಬಹುದಾಗಿದೆ.

ಗಾಮನ ಹಬ್ಬದ ಆಚರಣೆ ಹೇಗೆ?: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಸಂಪ್ರದಾಯ ಆಚರಿಸುವ ಗ್ರಾಮಗಳಲ್ಲಿ ‘ಗಾಮನ ಹಬ್ಬ’ ಆಚರಿಸಲಾಗುತ್ತದೆ. ಇದು ಗ್ರಾಮವನ್ನು ಕಾಯುವ ಶಕ್ತಿ ದೇವತೆಯ ಹಬ್ಬ. ಯಾವ ಗ್ರಾಮದಲ್ಲಿ ಮಾರಿಜಾತ್ರೆ ನಡೆಯುವುದಿಲ್ಲವೋ ಅಲ್ಲಿ ಮಾತ್ರ ಇದು ನಡೆಯುತ್ತದೆ.

ಈ ಹಬ್ಬದ ದಿನ ಕಳೆದ ವರ್ಷ ಹಬ್ಬದ ಸಂದರ್ಭದಲ್ಲಿ ಮಣ್ಣಿನಲ್ಲಿ ಹೂತಿಟ್ಟ ಪಂಚಲೋಹದ ಕುದುರೆ ಆಕಾರದ ವಿಗ್ರಹವನ್ನು ಹೊರತೆಗೆಯಲಾಗುತ್ತದೆ. ನಂತರ ಅದನ್ನು ಶುಚಿಗೊಳಿಸಿ, ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ನಂತರ ಗ್ರಾಮದ ಪ್ರಮುಖರು ರಹಸ್ಯ ಸ್ಥಳದಲ್ಲಿ ಈ ವಿಗ್ರಹವನ್ನು ಮತ್ತೆ ಹೂತಿಡುತ್ತಾರೆ.

ಹಬ್ಬಕ್ಕೆ ಮೈಲಿಗೆ ಆಗಬಾರದು ಎಂಬ ಕಾರಣಕ್ಕೆ ‘ಮುಟ್ಟು’ ಆಗಿರುವ ಮಹಿಳೆಯರಿಗೆ ಆ ಸಂದರ್ಭದಲ್ಲಿ ಊರಿನಲ್ಲಿ ಇರಲು ಅವಕಾಶ ಇರುವುದಿಲ್ಲ. ಅವರನ್ನು ಬೇರೆ ಊರಿಗೆ ಕಳುಹಿಸಲಾಗುತ್ತದೆ. ಹಬ್ಬ ಮುಗಿದ ನಂತರ ಅವರು ತಮ್ಮ ಗ್ರಾಮಕ್ಕೆ ಮರಳಬೇಕು.

ಈ ಹಿಂದೆ ಮುಟ್ಟಾದ ಮಹಿಳೆಯರನ್ನು ಊರ ಹೊರಗಿನ ಹೊಲದಲ್ಲಿ ನಿರ್ಮಿಸಿದ ಗುಡಿಸಿಲಿನಲ್ಲಿ ಇರಿಸಲಾಗುತ್ತಿತ್ತು. ಆಚರಣೆ ಮುಗಿಯುವ ಹೊತ್ತಿಗೆ ಇವರು ಗ್ರಾಮದ ಗಡಿಗೆ ಬಂದು ಕಾಯುತ್ತಿದ್ದರು. ಆಚರಣೆ ಮುಗಿದ ತಕ್ಷಣ ಪಟಾಕಿ ಹೊಡೆದು ಮಹಿಳೆಯರು ಊರಿನ ಒಳಗೆ ಬರಬಹುದು ಎಂದು ಸೂಚನೆ ನೀಡಲಾಗುತ್ತಿತ್ತು.

ಇತ್ತೀಚಿನ ದಿನಗಳಲ್ಲಿ ಊರ ಹೊರಗಿನ ಹೊಲದಲ್ಲಿ ಮಹಿಳೆಯರು ತಂಗುತ್ತಿಲ್ಲ. ಬದಲಾಗಿ ಅವರನ್ನು ಬೇರೆ ಊರಿನ ನೆಂಟರ ಮನೆಗೆ ಕಳುಹಿಸುವ ಪದ್ಧತಿ ಜಾರಿಗೆ ಬಂದಿದೆ. ಗಾಮನ ಹಬ್ಬ ನಡೆಯುವ ಗ್ರಾಮಗಳಲ್ಲಿ ಯಾವುದಾದರೂ ಮಹಿಳೆ ಮಗುವಿಗೆ ಜನ್ಮ ನೀಡಿದರೆ ಹಬ್ಬದ ಆಚರಣೆ ಮುಗಿಯುವವರೆಗೂ ಶಿಶುವಿಗೆ ಎದೆ ಹಾಲನ್ನು ಕುಡಿಸುವಂತಿಲ್ಲ. ಕರುವಿಗೆ ಹಸು ಜನ್ಮ ನೀಡಿದರೆ ಆ ಕರುವಿಗೂ ಹಾಲು ಕುಡಿಯಲು ಬಿಡುವುದಿಲ್ಲ.

ಈ ಅವಧಿಯಲ್ಲಿ ಯಾವುದಾದರೂ ಮನೆಯ ಮಹಿಳೆ ಮುಟ್ಟಾದರೆ ಆ ಮನೆಗೆ ಪರ ಊರಿನ ಅತಿಥಿಗಳು ಹೋಗುವಂತಿಲ್ಲ ಎಂಬ ನಿಯಮವನ್ನೂ ಕಟ್ಟುನಿಟ್ಟಾಗಿ ಆಚರಿಸಲಾಗುತ್ತಿದೆ. ಹಿಂದುಳಿದ ಹಾಗೂ ದಲಿತ ಸಮುದಾಯದವರ ಮನೆಗಳಲ್ಲಿ ಮಾತ್ರ ಇಂತಹ ಆಚರಣೆ ಇಂದಿಗೂ ನಡೆಯುತ್ತಿದೆ.

‘ಇದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಇದನ್ನು ವಿರೋಧಿಸಿ ಏನಾದರೂ ತೊಂದರೆಯಾದರೆ ಎಂಬ ಭಯ ಗ್ರಾಮದಲ್ಲಿ ಇರುವುದರಿಂದ ಇನ್ನೂ ಆಚರಿಸಲಾಗುತ್ತಿದೆ. ಕೆಲವರು ಇದರ ವಿರುದ್ಧ ಜಾಗೃತಿ ಮೂಡಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ’ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಪ್ರಕಾಶ್‌ ಲ್ಯಾವಿಗೆರೆ ತಿಳಿಸಿದರು.

‘ಈ ಕಾಲದಲ್ಲೂ ಗ್ರಾಮೀಣ ಹೆಣ್ಣುಮಕ್ಕಳಿಗೆ ಇಂಥ ಸಂಪ್ರದಾಯಗಳನ್ನು ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ನೋವಿನ ಸಂಗತಿ. ಒಂದು ಗ್ರಾಮದ ಆಚರಣೆಯಿಂದ ಸಂಪೂರ್ಣವಾಗಿ ಮಹಿಳೆಯರನ್ನು ಹೊರಗಿಡುವ ‘ರಾಜಕಾರಣ’ ಈ ವಿದ್ಯಮಾನದ ಹಿಂದೆ ಇದೆ ಎಂಬುದನ್ನು ನಾವು ಗುರುತಿಸಬೇಕು’ ಎಂದು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸಂಚಾಲಕಿ ಡಾ.ಎಚ್‌.ಎಸ್‌.ಅನುಪಮಾ ಪ್ರತಿಕ್ರಿಯಿಸಿದರು.

ಮಹಿಳೆಯರು ಮುಟ್ಟಾಗುವುದು ಒಂದು ನೈಸರ್ಗಿಕ ಕ್ರಿಯೆ. ತಪ್ಪು ಕಲ್ಪನೆ ಮೌಢ್ಯಾಚರಣೆಗೆ ದಾರಿ ಮಾಡಿಕೊಟ್ಟಿದೆ ಎಂಬ ಬಗ್ಗೆ ಜನಜಾಗೃತಿ ಮೂಡಿಸಲು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟವು ಅ.9 ಮತ್ತು 16ರಂದು ತ್ಯಾಗರ್ತಿ, ಅ.11 ಹಾಗೂ 18ರಂದು ಆನಂದಪುರದಲ್ಲಿ ನಡೆಯುವ ಸಂತೆ ಸಂದರ್ಭದಲ್ಲಿ ಅಭಿಯಾನ ಹಮ್ಮಿಕೊಂಡಿದೆ.

–ಎಂ.ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT