ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್...ಇದು ಶ್ರವಣಾತೀತ!

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಡಿಜಿಟಲೀಕರಣದ ಫಲವಾಗಿ ಸ್ಮಾರ್ಟ್‌ಫೋನ್ ಹಣ ಪಾವತಿಸುವ ಮತ್ತು ಸ್ವೀಕರಿಸುವ ಪ್ರಮುಖ ಸಾಧನವಾಗಿ ಬಳಕೆಯಾಗುತ್ತಿದೆ. ಭೀಮ್, ಪೇಟಿಎಂ ರೀತಿಯ ಹತ್ತು ಹಲವು ಆ್ಯಪ್‌ಗಳು ಡಿಜಿಟಲ್ ಪಾವತಿ ವ್ಯವಸ್ಥೆಯ ಕೊಂಡಿಗಳಂತಾಗಿವೆ. ಸರಳ ಹಾಗೂ ಸುಲಭವಾಗಿ ಹಣ ಪಾವತಿ ಸಾಧ್ಯವಾಗಿಸುವ ನಿಟ್ಟಿನಲ್ಲಿ ಸಾಕಷ್ಟು ಸಂಶೋಧನೆ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಬಳಕೆಗೆ ಬಂದಿರುವ ಸ್ಪೀಕರ್ ಮತ್ತು ಮೈಕ್ ಮೂಲಕ ಶಬ್ದ ರವಾನಿಸಿ ಹಣ ವರ್ಗಾಯಿಸುವ ತಂತ್ರಜ್ಞಾನ ಗಮನ ಸೆಳೆಯುತ್ತಿದೆ.

ಗುಟ್ಟಾಗಿ ಆಡುವ ಪಿಸುಮಾತು, ಚೀರಾಟದ ಏರು ಧ್ವನಿ, ಮಾರುಕಟ್ಟೆಯ ಗಿಜಿಗಿಜಿ, ವಾಹನಗಳ ಸದ್ದು-ಗದ್ದಲ ಎಲ್ಲವನ್ನೂ ಕೇಳುವ ನಮ್ಮ ಕಿವಿಗಳು ಸಮೀಪದಲ್ಲಿಯೇ ಹರಿದಾಡುವ ಬಹಳಷ್ಟು ಶಬ್ದಗಳನ್ನು ಗ್ರಹಿಸುವುದೇ ಇಲ್ಲ. ಮನುಷ್ಯರಿಗೆ ಶ್ರವಣಾತೀತವಾದ ಎಷ್ಟೋ ಶಬ್ದಗಳನ್ನು ಶ್ವಾನಗಳು ಆಲಿಸುವ ಸಾಮರ್ಥ್ಯ ಹೊಂದಿವೆ. ಬಾವಲಿ ಹಾಗೂ ಡಾಲ್ಫಿನ್‌ಗಳು 1,00,000 ಹರ್ಟ್ಸ್‌ಗೂ ಹೆಚ್ಚು ಕಂಪನಾಂಕದಲ್ಲಿ ಹೊಮ್ಮುವ ಸದ್ದನ್ನು ಕೇಳಬಲ್ಲವು. ಸಾಮಾನ್ಯ ಮನುಷ್ಯ 20-20,000 ಹರ್ಟ್ಸ್‌ ಒಳಗಿನ ಶಬ್ದಗಳನ್ನು ಮಾತ್ರ ಆಲಿಸುತ್ತಾನೆ. ನಮ್ಮ ಕಿವಿಗಳು ಗ್ರಹಿಸಲಾಗದ ಸದ್ದು ಶ್ರವಣಾತೀತ(ultrasonic sound) ಎನಿಸುತ್ತದೆ.

‘ಶ್ರವಣಾತೀತ ಶಬ್ದ ವ್ಯವಸ್ಥೆ’ಯನ್ನು ಬಳಸಿ ಖಾತೆಯಿಂದ ಖಾತೆಗೆ ಸುರಕ್ಷಿತ ಹಣ ವರ್ಗಾವಣೆ ಮಾಡುವ ವಿನೂತನ ತಂತ್ರಜ್ಞಾನ ‘ಆಡಿಯೊ ಕ್ಯುಆರ್(Audio QR)’ ಜಾಗತಿಕ ಮಟ್ಟದಲ್ಲಿ ಕುತೂಹಲ ಕೆರಳಿಸಿದೆ. ಬ್ಲೂಟೂತ್, ವೈಫೈನಿಂದ ಮೊಬೈಲ್ ಫೋನ್‌ಗಳನ್ನು ಸಂಪರ್ಕಿಸಿ ಮಾಹಿತಿ ರವಾನಿಸುವುದು ಕೆಲ ವರ್ಷಗಳಿಂದ ಬಳಕೆಯಲ್ಲಿದೆ. ಎರಡು ಮೊಬೈಲ್ ಫೋನ್‌ಗಳು ಪರಸ್ಪರ ಹಗುರ ಸ್ಪರ್ಶ ಮಾತ್ರದಿಂದಲೇ ಫೋಟೊ, ವಿಡಿಯೊದಂತಹ ಮಾಹಿತಿ ಹಂಚಿಕೊಳ್ಳುವುದು ಸಮೀಪ ವಲಯ ಸಂವಹನ (NFC: Near Field Communication)ದಿಂದ ಸಾಧ್ಯ ವಾಗಿದೆ. 'ಆಡಿಯೊ ಕ್ಯುಆರ್' ತಂತ್ರಜ್ಞಾನ ಈ ಎಲ್ಲದಕ್ಕೂ ಭಿನ್ನ.

ಸಮೀಪದಲ್ಲಿರುವ ಎರಡು ಸ್ಮಾರ್ಟ್‌ಫೋನ್‌ಗಳ ನಡುವೆ ಶ್ರವಣಾತೀತ ಶಬ್ದದ ಮೂಲಕ ಸಂಪರ್ಕ ಏರ್ಪಟ್ಟು, ಮೊಬೈಲ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯಂತಹ ಖಾಸಗಿ ವಿವರ ನೀಡದೆಯೇ ಮಾಹಿತಿ ರವಾನಿಸುವುದನ್ನು(ಹಣ ವರ್ಗಾವಣೆ) ಆಡಿಯೊ ಕ್ಯುಆರ್ ಸಾಧ್ಯವಾಗಿಸಿದೆ.

ಎಲೆಕ್ಟ್ರಾನಿಕ್ ಉಪಕರಣಗಳು 20,000 ಹರ್ಟ್ಸ್‌ಗಿಂತ ಅಧಿಕ ಕಂಪನಾಂಕದಲ್ಲಿ ಸಂವಹನ ನಡೆಸುತ್ತವೆ. ಬರಿಯ ಕಿವಿಗಳಿಗೆ ಕೇಳದ ಶಬ್ದ ಕಂಪನಾಂಕದಿಂದ ಆಗುವ ಈ ಸಂವಹನ ನಡೆಯುವುದು ಸ್ಪೀಕರ್‌ನಿಂದ. ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ ಸ್ಪೀಕರ್ ಖಂಡಿತ ಇರುತ್ತದೆ. ಅದೇ ಸ್ಪೀಕರ್ ಮೂಲಕ ಹೊಮ್ಮುವ ಶ್ರವಣಾತೀತ ಶಬ್ದ ಕಂಪನಗಳನ್ನು ಸಮೀಪದ ಮತ್ತೊಂದು ಫೋನ್‌ನ ಮೈಕ್ ಗ್ರಹಿಸಿ ಕಂಪನಗಳನ್ನು ಮಾಹಿತಿಯಾಗಿ ವರ್ಗಾಯಿಸಿಕೊಳ್ಳುತ್ತದೆ. ಎನ್ಎಫ್‌ಸಿ ಹಾಗೂ ಕ್ಯುಆರ್ ಕೋಡ್‌ಗಿಂತಲೂ ಚುರುಕುತನದ ಈ ತಂತ್ರಜ್ಞಾನವನ್ನು ಮೊಬೈಲ್ ಆ್ಯಪ್ ಸಂಸ್ಥೆಗಳು ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಅಳವಡಿಸಿ, ಡಿಜಿಟಲ್ ಆರ್ಥಿಕತೆಗೆ ಸಹಕಾರಿಯಾಗುವ ಹೊಸ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುತ್ತಿವೆ.

ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಯಾಗಿರುವ ಗೂಗಲ್‌ನ ಪೇಮೆಂಟ್ ಆ್ಯಪ್ ‘ತೇಜ್’ನಲ್ಲಿ ಬಳಕೆಯಾಗಿರುವುದು ಇದೇ ತಂತ್ರಜ್ಞಾನ. ಶ್ರವಣಾತೀತ ಕಂಪನಾಂಕದಲ್ಲಿ ರವಾನಿಸಬಹುದಾದ ಮಾಹಿತಿ ಪ್ರಮಾಣ ಅತಿ ಕಡಿಮೆಯಾದರೂ ಸುರಕ್ಷಿತ ಎನ್ನಬಹುದು. ಈ ಹಿಂದೆ ಬೇರೆ ಉಪಕರಣಗಳ ಸಂಪರ್ಕ ವ್ಯವಸ್ಥೆಯಲ್ಲಿ ಶ್ರವಣಾತೀತ ಕಂಪನಾಂಕ ಬಳಕೆಯಾಗಿದ್ದರೂ, ಹಣ ಪಾವತಿಗಾಗಿ ಮೊಬೈಲ್ ಆ್ಯಪ್ ಮೂಲಕ ಬಳಕೆಗೆ ಬಂದಿರುವುದು ಇದೇ ಮೊದಲು. ಮೊಬೈಲ್ ಸ್ಪೀಕರ್ ಹಾಗೂ ಮೈಕ್‌ ನಡುವೆ ಮಾಹಿತಿ ರವಾನೆಗೆ ಶ್ರವಣಾತೀತ ಕಂಪನಾಂಕ ಸೂಕ್ತ ಹೊಂದಾಣಿಕೆಯಾಗಿದೆ.

ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿ?: ಗೂಗಲ್ ತೇಜ್‌ನ ಕ್ಯಾಶ್ ಮೋಡ್ ಆಯ್ಕೆಯಿಂದ ಅತ್ಯಂತ ಸರಳ ಮಾರ್ಗದಲ್ಲಿ ಹಣ ವರ್ಗಾವಣೆ ಸಾಧ್ಯವಾಗಿದೆ. ಕ್ಯಾಶ್ ಮೋಡ್ ಒತ್ತಿ; ಹಣ ಪಡೆಯುವುದು ಅಥವಾ ಪಾವತಿಸುವ ಆಯ್ಕೆಗೆ ಹೋದರೆ ಸಾಕು, ಸ್ಪೀಕರ್‌ನಿಂದ ಶಬ್ದ ಕಂಪನ ರವಾನಿಸಿ ಸಮೀಪದ ಮೊಬೈಲ್‌ನೊಂದಿಗೆ ಸಂಪರ್ಕ ಸಾಧಿಸಿ ಪಾವತಿ ಪ್ರಕ್ರಿಯೆ ಕೆಲವೇ ಕ್ಷಣಗಳಲ್ಲಿ ಅತ್ಯಂತ ಸುರಕ್ಷಿತವಾಗಿ ಪೂರ್ಣಗೊಳಿಸುತ್ತದೆ. ಕನಿಷ್ಠ ಮೊಬೈಲ್ ಸಂಖ್ಯೆಯನ್ನೂ ನೀಡದೆ ಖಾತೆಯಿಂದ ಖಾತೆಗೆ ಹಣ ವರ್ಗಾಯಿಸುವ ವ್ಯವಸ್ಥೆ ಕ್ರಾಂತಿಕಾರಕ ಬೆಳವಣಿಗೆಗೆ ನಾಂದಿಯಾಗಿದೆ. ಯಶಸ್ವಿಯಾಗಿರುವ ‘ಆಡಿಯೊ ಕ್ಯುಆರ್’ ತಂತ್ರಜ್ಞಾನ ಬಳಸಿ ವಿನೂತನ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ.

ಮುಂದಿನ ದಿನಗಳಲ್ಲಿ ಖಾಸಗಿ ಗುರುತು ಪತ್ತೆ, ಸಾಮಾಜಿಕ ಸಂಪರ್ಕ ಸಾಧ್ಯತೆಗೂ ಇದು ಬಳಕೆಯಾಗಬಹುದು.

ಎನ್ಎಫ್‌ಸಿ, ಕ್ಯುಆರ್ ಕೋಡ್ ಹಿಂದಿಟ್ಟು...: ಮೆಟ್ರೊ ರೈಲು ಪ್ರವೇಶದಲ್ಲಿ ಸ್ಮಾರ್ಟ್‌ ಕಾರ್ಡ್‌ ಹಾಗೂ ಟೋಕನ್ ಅನ್ನು ಅಲ್ಲಿ ಅಳವಡಿಸಿರುವ ಉಪಕರಣದ ಸಮೀಪ ತಂದರೆ, ಹಣದ ಮಾಹಿತಿ ಪ್ರದರ್ಶಿಸಿ ಪ್ರವೇಶಕ್ಕೆ ದಾರಿ ಕೊಡುತ್ತದೆ. ಅಲ್ಲಿ ಬಳಕೆಯಾಗುತ್ತಿರುವುದು ಸಮೀಪ ವಲಯ ಸಂವಹನ(ಎನ್ಎಫ್‌ಸಿ) ತಂತ್ರಜ್ಞಾನ. ಕಾರ್ಡ್‌ ಅಥವಾ ಟೋಕನ್‌ ಅನ್ನು ವಿದ್ಯುತ್ ಚಾಲಿತ ಉಪಕರಣದ ಸಮೀಪಕ್ಕೆ ತಂದಾಗ ಇದು ಸಾಧ್ಯವಾಗುತ್ತದೆ. ಮೊಬೈಲ್ ಪಾವತಿಯಲ್ಲಿಯೂ ಈ ತಂತ್ರಜ್ಞಾನದ ಬಳಕೆ ಇದೆ. ಆದರೆ, ಎನ್ಎಫ್‌ಸಿ ಕಾರ್ಯಾಚರಿಸಲು ಅಗತ್ಯವಾದ ಚಿಪ್ ಮೊಬೈಲ್‌ಗಳಲ್ಲಿ ಅಳವಡಿಸಿರಬೇಕಾಗುತ್ತದೆ. ಎಲ್ಲ ಮೊಬೈಲ್‌ಗಳಲ್ಲಿಯೂ ಈ ತಂತ್ರಜ್ಞಾನ ಸಾಧ್ಯವಾಗದಿರಬಹುದು.

ಇನ್ನೂ ಚಿತ್ರದ ರೀತಿಯಲ್ಲಿ ಕಾಣುವ ಕ್ಷಿಪ್ರ ಪ್ರತಿಕ್ರಿಯೆ ಮೂಲಕ ಮಾಹಿತಿ ಒದಗಿಸುವ ಕ್ಯುಆರ್(Quick Response) ಕೋಡ್ ಬಳಕೆ ಹೆಚ್ಚುತ್ತಿದೆ. ಆದರೆ, ಇದರಿಂದ ಮಾಹಿತಿ ಪಡೆಯಲು ಬಿತ್ತರಗೊಂಡ ಕೋಡ್ ಅನ್ನು ಮೊಬೈಲ್ ಕ್ಯಾಮೆರಾ ಮೂಲಕ ಸ್ಕ್ಯಾನ್ ಮಾಡಬೇಕಾಗುತ್ತದೆ. ಪೇಟಿಎಂ ಆ್ಯಪ್ ಬಳಕೆದಾರರು ಈ ತಂತ್ರಜ್ಞಾನವನ್ನು ಹೆಚ್ಚು ಬಳಸುತ್ತಿದ್ದಾರೆ.

ಆ್ಯಂಡ್ರಾಯ್ಡ್‌, ಐಒಎಸ್, ವಿಂಡೋಸ್ ಹಾಗೂ ಬ್ಲಾಕ್‌ಬೆರಿ, ಹೀಗೆ ಭಿನ್ನ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಕಾರ್ಯನಿರ್ವಹಿಸುವ ಮೊಬೈಲ್‌ಗಳ ನಡುವೆ ಸಂಪರ್ಕ ಹಾಗೂ ಮಾಹಿತಿ ರವಾನೆಗೆ ವಿವಿಧ ಆ್ಯಪ್ ಬಳಸಬೇಕಾಗಿ ಬರಬಹುದು. ಶಬ್ದ ಹೊರಡಿಸುವ ಸ್ಪೀಕರ್ ಮತ್ತು ಮೈಕ್ ಆಧಾರದ ಮೇಲೆ ಅಭಿವೃದ್ಧಿಯಾಗಿರುವ ಆಡಿಯೊ ಕ್ಯುಆರ್‌ನಿಂದ ಯಾವುದೇ ಮೊಬೈಲ್‌ಗಳ ನಡುವೆ ಸಂಪರ್ಕ ಸಾಧಿಸಬಹುದಾಗಿದೆ. ಇದೇ ಕಾರಣದಿಂದ ಈ ತಂತ್ರಜ್ಞಾನ ಬಳಕೆ ಸಂಚಲನ ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT