ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ದುರಸ್ತಿಗೆ ಹಣ ಕೊಡಿ

Last Updated 11 ಅಕ್ಟೋಬರ್ 2017, 19:55 IST
ಅಕ್ಷರ ಗಾತ್ರ

ಬೆಂಗಳೂರು: ‘ಸೆಂಟ್ರಲ್‌ ಕಾಲೇಜಿನ ಪ್ರಾಂಗಣದಲ್ಲಿರುವ ಹಳೆಯ ಕಟ್ಟಡಗಳ ದುರಸ್ತಿಗೆ ಉನ್ನತ ಶಿಕ್ಷಣ ಇಲಾಖೆ ತುರ್ತಾಗಿ ₹ 25 ಕೋಟಿ ಮಂಜೂರು ಮಾಡಬೇಕು. ಇಲ್ಲದಿದ್ದರೆ 2017–18ನೇ ಸಾಲಿನಲ್ಲಿ ತರಗತಿಗಳನ್ನು ನಡೆಸುವುದು ಕಷ್ಟವಾಗುತ್ತದೆ’ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌. ಜಾಫೆಟ್‌ ಅಸಹಾಯಕತೆ ವ್ಯಕ್ತಪಡಿಸಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ವರ್ಷದ ಜುಲೈನಲ್ಲಿ ಈ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದೆ. ಆದರೆ, ಇಲಾಖೆಯಿಂದ ಈವರೆಗೆ ಅನುದಾನ ಬಿಡುಗಡೆಯಾಗದ ಕಾರಣ ಚಟುವಟಿಕೆಗಳನ್ನು ನಡೆಸಲು ಕಷ್ಟವಾಗುತ್ತಿದೆ. ಸೆಂಟ್ರಲ್‌ ಕಾಲೇಜಿನ ಆವರಣದಲ್ಲಿರುವ ಕಟ್ಟಡಗಳು ತುಂಬಾ ಹಳೆಯವು. ಮಳೆಗೆ ಸೋರುತ್ತಿವೆ. ಕೆಲವು ಕಟ್ಟಡಗಳು ಬಿರುಕು ಬಿಟ್ಟಿವೆ. ತುರ್ತಾಗಿ ಇವುಗಳ ದುರಸ್ತಿ ಅನಿವಾರ್ಯ’ ಎಂದರು.

‘ನಮ್ಮ ವಿ.ವಿಗೆ ₹10 ಕೋಟಿ ಕೊಡುವಂತೆ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಉನ್ನತ ಶಿಕ್ಷಣ ಇಲಾಖೆ ಸೂಚಿಸಿತ್ತು. ವಿ.ವಿ ₹ 3 ಕೋಟಿಯಷ್ಟೇ ಕೊಟ್ಟಿದೆ. ಬೆಂಗಳೂರು ವಿಶ್ವವಿದ್ಯಾಲಯ ಕಳೆದ ವರ್ಷ ಸಂಗ್ರಹಿಸಿದ್ದ ಕಾಲೇಜುಗಳ ಮಾನ್ಯತೆ ನವೀಕರಣ ಶುಲ್ಕ ₹ 3 ಕೋಟಿ ಬರಬೇಕಿದೆ. ಉನ್ನತ ಶಿಕ್ಷಣ ಇಲಾಖೆ ₹ 5 ಕೋಟಿ ಅನುದಾನ ನೀಡುವುದಾಗಿ ಪ್ರಕಟಿಸಿತ್ತು. ಈ ಮೊತ್ತಗಳು ಇನ್ನೂ ಕೈಸೇರಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ವಿ.ವಿ.ಯಲ್ಲಿ ಮೂಲಸೌಕರ್ಯ ಕಲ್ಪಿಸಲು ಕನಿಷ್ಠ ₹ 500 ಕೋಟಿ ಬೇಕು. ಬೋಧಕ– ಬೋಧಕೇತರ ಸಿಬ್ಬಂದಿಯ ನೇಮಕಕ್ಕೆ ₹ 300 ಕೋಟಿ ಅಗತ್ಯ. ಈ ಸಂಬಂಧ ಕ್ರಿಯಾಯೋಜನೆ ಸಿದ್ಧಪಡಿಸಿ ₹ 873 ಕೋಟಿಯ ಪ್ರಸ್ತಾವವನ್ನು ಇಲಾಖೆಗೆ ಸಲ್ಲಿಸಿದ್ದೆ. ಅದನ್ನು ಅಧಿಕಾರಿಗಳು ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ’ ಎಂದು ಅವರು ಹೇಳಿದರು.

‘ಮುಖ್ಯಮಂತ್ರಿ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ₹ 300 ಕೋಟಿ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಮೊತ್ತದಿಂದ ತುರ್ತು ಮೂಲಸೌಕರ್ಯ ಹಾಗೂ 300 ಉಪನ್ಯಾಸಕರ ನೇಮಕ ಮಾಡಿಕೊಳ್ಳಬಹುದು. ಉಳಿದ ಮೊತ್ತಕ್ಕೆ ದಾನಿಗಳ ನೆರವು ಯಾಚಿಸುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ಎರಡೂ ವಿ.ವಿ.ಗೂ ಉಪನ್ಯಾಸಕರ ಸೇವೆ: ‘ಸೆಂಟ್ರಲ್‌ ಕಾಲೇಜಿನಲ್ಲಿ ಸದ್ಯ 8 ವಿಭಾಗಗಳಿದ್ದು, 1,500 ವಿದ್ಯಾರ್ಥಿಗಳಿದ್ದಾರೆ. ಈ ವಿಭಾಗಗಳಿಗೆ 86 ಉಪನ್ಯಾಸಕರ ಹುದ್ದೆಗಳನ್ನು ಮಂಜೂರು ಮಾಡಲಾಗಿತ್ತು. ತ್ರಿಭಜನೆಯ ಸಂದರ್ಭದಲ್ಲಿ ಇದರಲ್ಲಿ 49 ಮಂದಿಯನ್ನು ಬೆಂಗಳೂರು ವಿ.ವಿ.ಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ, ನಮ್ಮ ವಿ.ವಿ.ಗೆ ಉಪನ್ಯಾಸಕರ ಕೊರತೆ ಉಂಟಾಗಿದೆ. ಕೆಲವು ಉಪನ್ಯಾಸಕರು ಎರಡೂ ವಿ.ವಿ.ಗಳಲ್ಲೂ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಯುಜಿಸಿ ನಿಯಮಾವಳಿ ಪ್ರಕಾರ ಪ್ರತಿ ವಿಭಾಗಕ್ಕೆ ಒಬ್ಬ ಪ್ರಾಧ್ಯಾಪಕ, ಇಬ್ಬರು ಸಹ ಪ್ರಾಧ್ಯಾಪಕರು, 4 ಸಹಾಯಕ ಪ್ರಾಧ್ಯಾಪಕರು ಇರಬೇಕು’ ಎಂದು ಅವರು ತಿಳಿಸಿದರು.

ಕಚೇರಿಗಳ ಸ್ಥಳಾಂತರಿಸಿ: ‘ಸೆಂಟ್ರಲ್‌ ಕಾಲೇಜು ಕ್ಯಾಂಪಸ್‌ 65 ಎಕರೆ ಇದೆ. ಆದರೆ, ವಿ.ವಿ.ಯ ಅಧೀನದಲ್ಲಿ 43 ಎಕರೆಯಷ್ಟೇ ಉಳಿದಿದೆ. ಉಳಿದ ಜಾಗದಲ್ಲಿ ಚುನಾವಣಾ ಆಯೋಗದ ಕಚೇರಿ, ಕೃಷಿ ಇಲಾಖೆಯ ಕಟ್ಟಡಗಳು ನಿರ್ಮಾಣವಾಗಿವೆ. ಈ ಕಚೇರಿಗಳನ್ನು ಸ್ಥಳಾಂತರಿಸಿ ಈ ಜಾಗವನ್ನು ವಿ.ವಿ.ಗೆ ಬಿಟ್ಟುಕೊಡಬೇಕು’ ಎಂದು ಅವರು ಮನವಿ ಮಾಡಿದರು.

‘ಇದಲ್ಲದೆ ಹೊಸ ವಿಭಾಗಗಳನ್ನು ಆರಂಭಿಸಲು ಹೆಚ್ಚುವರಿ 50 ಎಕರೆ ಬೇಕು. ಈ ಸಂಬಂಧ ನಗರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ. ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೂ ಒಂದೆರಡು ದಿನಗಳಲ್ಲಿ ಮನವಿ ಸಲ್ಲಿಸುತ್ತೇನೆ’ ಎಂದರು.

ಯುವಿಸಿಇ ಸ್ಥಳಾಂತರ ಪ್ರಸ್ತಾವಕ್ಕೆ ವಿರೋಧ
ರಾಜ್ಯದ ಹಳೆಯ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಒಂದೆನಿಸಿದ ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜನ್ನು (ಯುವಿಸಿಇ) ಜ್ಞಾನಭಾರತಿ ಕ್ಯಾಂಪಸ್‌ಗೆ ಸ್ಥಳಾಂತರಿಸುವ ಪ್ರಸ್ತಾವಕ್ಕೆ ಎಸ್‌.ಜಾಫೆಟ್‌ ವಿರೋಧ ವ್ಯಕ್ತಪಡಿಸಿದರು.

‘ಈ ಕಾಲೇಜು ನಮ್ಮ ವಿ.ವಿ.ಗೆ ಸೇರಿದ್ದು ಎಂದು ವಿಭಜನೆಯ ಆದೇಶದಲ್ಲೇ ತಿಳಿಸಲಾಗಿದೆ. ಸ್ಥಳಾಂತರ ಮಾಡಬೇಕಾದರೆ ಕಾನೂನು ತಿದ್ದುಪಡಿ ಮಾಡಬೇಕು’ ಎಂದು ಅವರು ಪ್ರತಿಪಾದಿಸಿದರು.

ವಿ.ವಿ.ಯಲ್ಲಿ ನಗರಾಧ್ಯಯನ ವಿಭಾಗ
‘ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಕೇಂದ್ರಿತವಾದ ನಗರಾಧ್ಯಯನ ಹಾಗೂ ಸಿನಿಮಾ ಅಧ್ಯಯನ ವಿಭಾಗ ಆರಂಭಿಸಲು ಉದ್ದೇಶಿಸಲಾಗಿದೆ’ ಎಂದು ಜಾಫೆಟ್‌ ತಿಳಿಸಿದರು.

ವಿರೋಧ: ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜನ್ನು (ಯುವಿಸಿಇ) ಜ್ಞಾನಭಾರತಿ ಕ್ಯಾಂಪಸ್‌ಗೆ ಸ್ಥಳಾಂತರಿಸುವ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ ಅವರು ಸ್ಥಳಾಂತರ ಮಾಡಬೇಕಾದರೆ ಕಾನೂನು ತಿದ್ದುಪಡಿ ಮಾಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT