ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಪಾಲಿ’ ಇನ್ನು ನೆನಪು ಮಾತ್ರ...

Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಚಿತ್ರರಸಿಕರ ಗೌಜುಗದ್ದಲ, ಅಷ್ಟೆತ್ತರದ ಕಟೌಟ್‌ಗಳು, ಹಾರ ತುರಾಯಿ, ಸಾಲುದ್ದದ ‍ಪಟಾಕಿ, ನೆಚ್ಚಿನ ನಟನ ಕಟೌಟ್‌ಗಳಿಗೆ ಕ್ಷೀರಾಭಿಷೇಕ, ಪುಷ್ಪಾಭಿಷೇಕಗಳಿಂದ ಸಿನಿಮಾ ಜಾತ್ರೆ ಮಾಡುತ್ತಿದ್ದ ‘ಕಪಾಲಿ’ ಚಿತ್ರಮಂದಿರ ತನ್ನ ಕೊನೆಯ ಆಟ ಮುಗಿಸಿದೆ. ಕಪಾಲಿ ಇನ್ನು ನೆನಪು ಮಾತ್ರ. ಒಂದು ಕಾಲದಲ್ಲಿ ಏಷ್ಯಾದ ಅತಿದೊಡ್ಡ ಏಕಪರದೆ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ನಗರದ ಸುಬೇದಾರ್‌ ಛತ್ರಂ ರಸ್ತೆಯಲ್ಲಿನ ‘ಕಪಾಲಿ’ ಚಿತ್ರಮಂದಿರಕ್ಕೆ ಅ.13ರಂದು ಬೀಗ ಜಡಿಯಲಾಯಿತು. 'ಹುಲಿರಾಯ’ ಕಪಾಲಿಯಲ್ಲಿ ಪ್ರದರ್ಶನಗೊಂಡ ಕೊನೆಯ ಸಿನಿಮಾ.

1968ರಲ್ಲಿ ಕಾರ್ಯಾರಂಭ ಮಾಡಿದ್ದ ಈ ಚಿತ್ರಮಂದಿರವನ್ನು ಅಂದಿನ ಕೇಂದ್ರ ಹಣಕಾಸು ಸಚಿವರಾಗಿದ್ದ ಮೊರಾರ್ಜಿ ದೇಸಾಯಿ ಉದ್ಘಾಟಿಸಿದ್ದರು. ಜಗತ್ತಿನ ಮೂರನೇ ಅತಿದೊಡ್ಡ ಚಿತ್ರಮಂದಿರ ಎಂಬ ಖ್ಯಾತಿಗೂ ಪಾತ್ರವಾಗಿದ್ದ ‘ಕಪಾಲಿ’ಯಲ್ಲಿ 1,465 ಆಸನಗಳಿದ್ದವು. ನಂತರ ಅದನ್ನು 1,112ಕ್ಕೆ ಇಳಿಸಲಾಯಿತು.

ಹಂಚಿಕೆದಾರ ಜಯಣ್ಣ ಈ ಚಿತ್ರಮಂದಿರವನ್ನು ಐದು ವರ್ಷಗಳ ಮಟ್ಟಿಗೆ ಗುತ್ತಿಗೆ ಪಡೆದುಕೊಂಡಿದ್ದರು. ಈಗ ಆ ಗುತ್ತಿಗೆಯ ಅವಧಿ ಮುಗಿದಿದ್ದು, ಸದ್ಯವೇ ಕಟ್ಟಡ ನೆಲಸಮಗೊಳಿಸುವ ಕೆಲಸ ಶುರುವಾಗಲಿದೆ. 44,184 ಚದರ ಅಡಿ ಜಾಗದಲ್ಲಿ ವ್ಯಾಪಿಸಿದ್ದ ಈ ಚಿತ್ರಮಂದಿರದ ಜಾಗವನ್ನು ಮಾಲೀಕರಾದ ದಾಸಪ್ಪ ಸಹೋದರರು, ಬೆಳಗಾವಿಯ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದರು.

ಹಲವು ದಾಖಲೆಗಳಿಗೆ ಸಾಕ್ಷಿ

ಕಪಾ ಲಿ ಚಿತ್ರಮಂದಿರ ಕನ್ನಡ ಚಿತ್ರರಂಗದ ಹಲವು ದಾಖಲೆಗಳಿಗೆ ಸಾಕ್ಷಿಯಾಗಿದೆ. ಇಲ್ಲಿ ಬಿಡುಗಡೆಯಾದ ಮೊದಲ ಸಿನಿಮಾ ‘ಮಮತೆಯ ಬಂಧ’ (ಅಭಿನಯ: ಉದಯಕುಮಾರ್, ಕಲ್ಪನಾ) 1968ರಲ್ಲಿ ಬಿಡುಗಡೆಯಾದ ಡಾ.ರಾಜಕುಮಾರ್‌ ಅಭಿನಯದ ‘ಮಣ್ಣಿನ ಮಗ' ಈ ಚಿತ್ರಮಂದಿರದಲ್ಲಿ ತೆರೆಕಂಡು ಶತದಿನೋತ್ಸವ ಕಂಡಿತ್ತು. ಚಿತ್ರಮಂದಿರಗಳ ಮುಂದೆ ನಟರ ಬೃಹತ್‌ ಕೌಟೌಟ್‌ ನಿಲ್ಲಿಸುವ ಪದ್ಧತಿ ಮೊದಲು ಶುರುವಾಗಿದ್ದು ‘ಕಪಾಲಿ’ ಚಿತ್ರಮಂದಿರದಲ್ಲಿಯೇ. ನಟ ಶಿವರಾಜ್‌ಕುಮಾರ್‌ ನಾಯಕನಾಗಿ ನಟಿಸಿದ್ದ ‘ಓಂ’ ಸಿನಿಮಾ, ಈ ಚಿತ್ರಮಂದಿರದಲ್ಲಿ 30 ಬಾರಿ ಬಿಡುಗಡೆಗೊಂಡು ದಾಖಲೆ ನಿರ್ಮಿಸಿದೆ.

**

60ರ ದಶಕದಿಂದ ಕಪಾಲಿಯನ್ನು ನೋಡುತ್ತಾ ಬೆಳೆದವನು ನಾನು. ಕಪಾಲಿ ಜತೆಗೆ ನನಗೆ ಅವಿನಾಭಾವ ಸಂಬಂಧ. ಬೆಂಗಳೂರಿನಲ್ಲಿ ಪ್ರಥಮ ಸಿನಿಮೋತ್ಸವ ನಡೆದದ್ದು ಕಪಾಲಿ ಥಿಯೇಟರ್‌ನಲ್ಲಿಯೇ. ಒಂದೇ ಬಾರಿ ಮೂರು ಪ್ರಾಜೆಕ್ಟರ್‌ ಆನ್ ಆಗುತ್ತಿದ್ದವು. ಪ್ರೇಕ್ಷಕರು 70 ಅಡಿ ದೂರದಿಂದ ಸಿನಿಮಾ ವೀಕ್ಷಿಸುತ್ತಿದ್ದರು. 180 ಡಿಗ್ರಿ ಕೋನದಲ್ಲಿ ಸಿನಿಮಾ ನೋಡುವ ಅವಕಾಶ ಅಲ್ಲಿತ್ತು. ಸಿನಿಮಾ ಸ್ಕೋಪ್‌ ಬಂದಾಗಲೂ ತಂತ್ರಜ್ಞಾನಕ್ಕೆ ಕಪಾಲಿ ಶೀಘ್ರ ಹೊಂದಿಕೊಂಡಿತು.

–ಬಿ.ಎಸ್.ಬಸವರಾಜ, ಕನ್ನಡ ಸಿನಿಮಾ ರಂಗದ ಹಿರಿಯ ಸಿನಿಮಾಟೊಗ್ರಾಫರ್

**

ನನಗಿನ್ನೂ ಚೆನ್ನಾಗಿ ನೆನಪಿದೆ. 1974ರಲ್ಲಿ ಮೂರು ಪ್ರೊಜೆಕ್ಟರ್‌ಗಳನ್ನು ಬಳಸಿ ಪ್ರದರ್ಶಿಸಿದ್ದ ಸಿನಿಮಾ ನೋಡಿದ್ದೆ. ಅಲ್ಲಿ ಸಿನಿಮಾ ನೋಡುವುದೇ ಹೆಗ್ಗಳಿಕೆ ಎನಿಸಿತ್ತು. ಗಂಗಾರಾಮ್ ಕಟ್ಟಡ ಬಿದ್ದಾಗ ಥಿಯೇಟರ್‌ಗೆ ಸ್ವಲ್ಪ ಧಕ್ಕೆಯಾಗಿತ್ತು. ಕಪಾಲಿಯಲ್ಲಿ ಸಿನಿಮಾ ಪ್ರದರ್ಶಿಸಲು ತುಂಬಾ ಧೈರ್ಯ ಬೇಕಿತ್ತು. ಅಲ್ಲಿ ಗೆಲ್ಲುವ ಸಿನಿಮಾಗಳಿದ್ದರೆ ಮಾತ್ರ ಪ್ರದರ್ಶಿಸಲಾಗುತ್ತಿತ್ತು. ನಾನು ಮತ್ತು ನನ್ನ ಗೆಳೆಯರೆಲ್ಲಾ ಸೇರಿ ನಿರ್ಮಿಸಿದ್ದ ‘ಉಲ್ಟಾಪಲ್ಟಾ’ ಸಿನಿಮಾ ಕಪಾಲಿಯಲ್ಲಿ 200 ದಿನ ಓಡಿತ್ತು.

ಕಪಾಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾರ್ಮೆಂಟ್‌ ನೌಕರರು, ಆಟೋರಿಕ್ಷಾದವರು, ಕೂಲಿಕಾರ್ಮಿಕರೇ ಹೆಚ್ಚಾಗಿದ್ದಾರೆ. ಸಿನಿಮಾಕ್ಕೆ ಅನ್ನದಾತರೇ ಇವರು. ಇವರು ಮಾಲ್‌ಗಳಲ್ಲಿ ಹೋಗಿ ದುಬಾರಿ ಬೆಲೆ ತೆತ್ತು ಸಿನಿಮಾ ನೋಡಲಾಗುವುದಿಲ್ಲ. ಒಂಟಿ ಸಿನಿಮಾ ಮಂದಿರಗಳನ್ನು ನೆಲಸಮ ಮಾಡುತ್ತಾ ಹೋದರೆ ಇವರೆಲ್ಲಾ ಎಲ್ಲಿಗೆ ಹೋಗಿ ಸಿನಿಮಾ ನೋಡಬೇಕು? ಮುಂದೊಂದು ದಿನ ಮಧ್ಯಮ ವರ್ಗದ ಪ್ರೇಕ್ಷಕರು ಮನೆಯಲ್ಲಿ ಕುಳಿತು ಟಿವಿಯಲ್ಲಿಯೇ ಮನೋರಂಜನೆ ಕಂಡುಕೊಳ್ಳಬಹುದು.

–ವಿ.ಮನೋಹರ್,ಸಂಗೀತ ನಿರ್ದೇಶಕ

**

ಒಂದು ಸ್ಕ್ರೀನ್‌ನಲ್ಲಿ ಮೂರು ಪ್ರಾಜೆಕ್ಟ್‌ಗಳನ್ನು ಹೊಂದಿದ್ದ ಚಿತ್ರಮಂದಿರ ಎನ್ನುವ ಹೆಗ್ಗಳಿಕೆ ಕಪಾಲಿಯದ್ದು. ಅಲ್ಲಿ ಹೋಗಿ ಸಿನಿಮಾ ನೋಡುವುದೇ ದೊಡ್ಡ ಸಂಗತಿಯಾಗಿತ್ತು. ಕಪಾಲಿಯನ್ನು ಗೋದಾಮು ಅಂತಲೂ ಕರೆಯುತ್ತಿದ್ದರು. ಎಲ್ಲಾ ಭಾಷೆಯ ಚಿತ್ರಗಳೂ ಇಲ್ಲಿ ಪ್ರದರ್ಶನವಾಗುತ್ತಿದ್ದವು. ಆರಂಭದಲ್ಲಿ ಕನ್ನಡ ಸಿನಿಮಾಗಳನ್ನಷ್ಟೇ ಪ್ರದರ್ಶಿಸಲಾಗುತ್ತಿತ್ತು. ನಂತರದ ದಿನಗಳಲ್ಲಿ ಬೆಳಗಿನ ಆಟ ಬೇರೆ ಭಾಷೆಯ ಸಿನಿಮಾಗಳಿಗೆ ಮೀಸಲಿಟ್ಟು, ಉಳಿದ ಆಟಗಳನ್ನು ಕನ್ನಡ ಸಿನಿಮಾಗಳಿಗೆ ಮೀಸಲಿಡುತ್ತಿದ್ದರು.

–ವಿಜಯಕುಮಾರ್, ಕನ್ನಡ ಸಿನಿಮಾಗಳ ಪತ್ರಿಕಾ ಪ್ರಚಾರಕ

**

ನಾನು ಮೂರನೇ ಕ್ಲಾಸ್ ಇದ್ದಾಗ ‘ದೊಂಬರ ಕೃಷ್ಣ ’ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದ್ದೆ. ಆಗ ‘ಕಪಾಲಿ’ ಮುಂದೆ ಸುಂದರ ಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ ಅವರ ಜತೆಗೆ ನನ್ನನ್ನೂ ಆನೆ ಮೇಲೆ ಕೂಡಿಸಿ ಮೆರವಣಿಗೆ ಮಾಡಿದ್ದರು. ಅದು ನನ್ನ ಮನದಲ್ಲಿ ಇನ್ನೂ ಹಚ್ಚಹಸಿರಾಗಿದೆ. ಕಾರ್ಮಿಕ ನಾಯಕ ರಾಜ್‌ಗೋಪಾಲ್ ಮತ್ತು ನನ್ನ ತಂದೆ ಮಹದೇವ ಬಣಕಾರ್ ಈ ಚಿತ್ರಮಂದಿರದ ಮಾಲೀಕತ್ವದಲ್ಲಿ ಪಾಲುದಾರರಾಗಿದ್ದರು. ನಮ್ಮ ತಂದೆ ‘ಪಾಪಪುಣ್ಯ’ ಸಿನಿಮಾದ ಕಥೆ ಬರೆದದ್ದು ಕಪಾಲಿ ಥಿಯೇಟರ್‌ನಲ್ಲೇ. ಬಹುಕಾಲ ಅಲ್ಲಿಯೇ ನಮ್ಮ ತಂದೆ ಕಾಲ ಕಳೆಯುತ್ತಿದ್ದರು.

‘ಪ್ರೇಮಲೋಕ’, ‘ಹುಲಿಯ ಹಾಲಿನ ಮೇವು’, ‘ದೂರದ ಬೆಟ್ಟ’ದಂಥ ಸಿನಿಮಾಗಳನ್ನು ಪ್ರದರ್ಶಿಸಿದ ಕೀರ್ತಿ ಈ ಚಿತ್ರಮಂದಿರದ್ದು. ಬೇರೆ ಸಿನಿಮಾ ಮಂದಿರಗಳಲ್ಲಿ 50 ದಿನಗಳಲ್ಲಿ ಬರುತ್ತಿದ್ದ ಕಲೆಕ್ಷನ್, ಈ ಚಿತ್ರಮಂದಿರದಲ್ಲಿ ಕೇವಲ 25 ದಿನಗಳಲ್ಲಿ ಸಿಗುತ್ತಿತ್ತು. ಆಗ ಗಾಂಧಿನಗರದಲ್ಲಿ ಸಾಕಷ್ಟು ಚಿತ್ರಮಂದಿರಗಳಿದ್ದವು, ಆದರೂ ಕಪಾಲಿಯ ಕಲೆಕ್ಷನ್ನೇ ಜಾಸ್ತಿ ಇರುತ್ತಿತ್ತು. ದೊಡ್ಡ ನಟರ ಸಿನಿಮಾಗಳನ್ನು ಇಲ್ಲಿಯೇ ಬಿಡುಗಡೆ ಮಾಡಬೇಕೆಂದು ನಿರ್ಮಾಪಕ, ನಿರ್ದೇಶಕರ ಆಸೆಯಾಗಿರುತ್ತಿತ್ತು.

ಅದೊಂದು ಪ್ರತಿಷ್ಠೆಯ ಸಂಗತಿ ಮಾತ್ರವಲ್ಲ, ವರಮಾನದ ದೃಷ್ಟಿಯಿಂದಲೂ ‘ಕಪಾಲಿ’ ಅದೃಷ್ಟದಾಯಕವಾಗಿತ್ತು. ಈಗ ಅದು ನೆಲಸಮ ಆಗುತ್ತದೆ ಅನ್ನುವ ಬೇಸರವಿದ್ದರೂ, ಅಲ್ಲಿ ನಿರ್ಮಾಣವಾಗುವ ಹೊಸ ಮಾಲ್‌ನಲ್ಲಿ ಮತ್ತಷ್ಟು ಸಿನಿ ಪರದೆಗಳು ಬರಬಹುದು ಎನ್ನುವ ಆಶಾಭಾವನೆಯೂ ಇದೆ.

–ಉಮೇಶ್‌ ಬಣಕಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT