ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಭಾಷೆಗಳಿಗೆ ‘ಕ–ನಾದ’ ಕೀಲಿಮಣೆ

Last Updated 25 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ವಹಾರಿಕ ಭಾಷೆಯಾಗಿ ಇಂಗ್ಲಿಷ್‌ ಜಗತ್ತನ್ನೇ ಆಳುತ್ತಿದೆ. ಭಾರತದಲ್ಲಂತೂ ಇಂಗ್ಲಿಷ್‌ ಬಗೆಗಿನ ವ್ಯಾಮೋಹ ತುಸು ಅತಿಯೇ ಎನ್ನಬಹುದು. ವ್ಯಾವಹಾರಿಕವಾಗಿ ಅಷ್ಟೇ ಅಲ್ಲದೆ ತೀರಾ ಖಾಸಗಿ ಮಾತುಕತೆಯನ್ನೂ ಇಂಗ್ಲಿಷ್‌ನಲ್ಲಿ ನಡೆಸುವ ಅದೆಷ್ಟೋ ಜನರು ನಮ್ಮ ಸುತ್ತಲಿದ್ದಾರೆ. ಪರಸ್ಪರ ಒಂದೇ ಭಾಷೆ ಮಾತನಾಡುವವರು ಜತೆಯಾದಾಗಲೂ ಅವರ ಮಾತೃಭಾಷೆ ಬಳಸದೇ ಇಂಗ್ಲಿಷ್‌ನಲ್ಲಿ ಸಂಭಾಷಿಸುತ್ತಿದ್ದಾರೆ. ಇಂತಹ ಬೆಳವಣಿಗೆ ಮಾತೃಭಾಷೆ ಅವಸಾನಕ್ಕೆ ಕಾರಣವಾಗುತ್ತಿದೆ ಎನ್ನುವ ಆತಂಕದ ಮಾತುಗಳೂ ಕೇಳಿಬರುತ್ತಿವೆ.

ಮಾತೃಭಾಷೆ ಬಳಕೆಯನ್ನು ಕಡ್ಡಾಯಗೊಳಿಸುವಂತಹ ಅನಿವಾರ್ಯ ಪರಿಸ್ಥಿತಿ ಈಗ ನಿರ್ಮಾಣವಾಗಿದೆ. ಇದಕ್ಕೆ ಇಂಗ್ಲಿಷ್‌ ಭಾಷೆಯ ಮೇಲಿನ ಅತಿಯಾದ ವ್ಯಾಮೋಹ ಅಥವಾ ಅದು ಸೃಷ್ಟಿಸಿರುವ ಅನಿವಾರ್ಯತೆಯೇ ಕಾರಣವೇನೊ.

ಈ ಡಿಜಿಟಲ್ ಯುಗದಲ್ಲಿ ಭಾಷೆ ಬಳಕೆ ಮತ್ತು ಅದನ್ನು ಬೆಳೆಸಿಕೊಂಡು ಹೋಗುವುದೇ ದೊಡ್ಡ ಸವಾಲು. ಹಾಗೆಂದು ಭಾಷೆಯ ರಕ್ಷಣೆಗೆ ಯಾವುದೇ ಕೆಲಸ ನಡೆದಿಲ್ಲ ಎಂದೇನಿಲ್ಲ. ಭಾಷೆಯ ಬಗೆಗಿನ ಪ್ರೀತಿ ಇರುವವರು ಅದನ್ನು ಡಿಜಿಟಲ್ ರೂಪಕ್ಕೆ ಹೊಂದಿಸಲು ಹಲವು ಸಾಹಸಗಳನ್ನು ಮಾಡುತ್ತಲೇ ಬಂದಿದ್ದಾರೆ.

ಪುಸ್ತಕಗಳನ್ನು ಪಿಡಿಎಫ್‌ ಆಗಿ ಪರಿವರ್ತಿಸುವುದು, ಬರಹ, ನುಡಿ ರೂಪದಲ್ಲಿ ಇರುವ ಅಕ್ಷರಗಳನ್ನು ಯೂನಿಕೋಡ್‌ಗೆ ಬದಲಾಯಿಸುವುದು, ಮೊಬೈಲ್‌ಗೆ ಕನ್ನಡ ತಂತ್ರಾಂಶ ಅಭಿವೃದ್ಧಿ...  ಹೀಗೆ ಹಲವು ರೀತಿಯಲ್ಲಿ ಕೆಲಸಗಳು ಭಾಷೆಯ ಉಳಿವಿಗೆ ಸಂಬಂಧಿಸಿದಂತೆ ನಡೆದಿವೆ, ನಡೆಯುತ್ತಲೇ ಇವೆ. ಈ ನಿಟ್ಟಿನಲ್ಲಿಯೇ ಇದೀಗ ‘ಕ–ನಾದ’ ಎಂಬ ಕೀಬೋರ್ಡ್‌ (ಕೀಲಿಮಣೆ) ಅಭಿವೃದ್ಧಿಗೊಂಡಿದೆ.

‘ಕ–ನಾದ’ ಕೀಲಿಮಣೆ
‘ಇದು ಧ್ವನಿ ಆಧರಿತ (phonetic basis) ಕೀಲಿಮಣೆ. ಭಾರತದ ಭಾಷೆಗಳ ಕಲಿಕೆಗೆ ಇದು ಹೆಚ್ಚು ಉಪಯುಕ್ತ. ಇಂಗ್ಲಿಷ್‌ ಭಾಷೆಯ QWERTY ಕೀಲಿಮಣೆಯ ವಿನ್ಯಾಸಕ್ಕಿಂತ ಭಿನ್ನ. ಭಾರತೀಯ ಎಲ್ಲಾ ಬ್ರಾಹ್ಮೀ ಭಾಷೆಗಳ ಪ್ರಾಥಮಿಕ ಸ್ವರ ವಿನ್ಯಾಸ ಘಟಕಗಳ ಪ್ರಸ್ತಾರಗಳಿಗೆ ನೇರವಾಗಿ ಸಂಪರ್ಕಿಸಲು ಅನುಕೂಲವಾಗುವಂತೆ ಈ ಕೀಲಿಮಣೆಯನ್ನು ಸಿದ್ಧಪಡಿಸಲಾಗಿದೆ’ ಎನ್ನುತ್ತಾರೆ ಕೀಲಿಮಣೆ ಅಭಿವೃದ್ಧಿಕಾರ ಗುರುಪ್ರಸಾದ್‌.

‘ಪ್ರತಿಯೊಂದು ಭಾಷೆಯವರೂ ತಮ್ಮದೇ ಆದ ವಿನ್ಯಾಸ ಸಿದ್ಧಪಡಿಸಿ ಅದನ್ನು ಇಂಗ್ಲಿಷ್‌ ಕೀಲಿಮಣೆಗೆ ಅಳವಡಿಸಿದ್ದಾರೆ. ಆದರೆ ನಾದ ಕೀಲಿಮಣೆಯಲ್ಲಿ ಭಾರತದ ಯಾವುದೇ ಭಾಷೆಯನ್ನು ಬೇಕಿದ್ದರೂ ಟೈಪ್ ಮಾಡಬಹುದು’ ಎಂದು ಹೆಮ್ಮೆಯಿಂದ ಹೇಳುತ್ತಾರೆ.

‘ಭಾರತೀಯ ಭಾಷೆಗಳನ್ನು ಟೈಪ್ ಮಾಡಲು QWERTY ಕೀಬೋರ್ಡ್‌ ಬಳಸುತ್ತಿದ್ದೇವೆ. ಇಂಗ್ಲಿಷ್ ಭಾಷೆಯ ಕೀಲೊತ್ತುಗಳ ಮೇಲೆ ಕನ್ನಡ ಅಕ್ಷರಗಳನ್ನು ಸಂಯೋಜಿಸಿರುವುದರಿಂದ ಕಂಪ್ಯೂಟರಿನ ದೃಶ್ಯ ಪರದೆಯ ಮೇಲೆ ಕನ್ನಡ ಅಕ್ಷರಗಳು ಮೂಡುತ್ತವೆ. ಉಚ್ಚಾರಣಾ ಪ್ರಧಾನವಾದ (Voice Primary) ಭಾರತೀಯ ಭಾಷೆಗಳ ಟಂಕನ ಕ್ರಮವನ್ನು ಇಂಗ್ಲಿಷ್‌ ಭಾಷಿಕ ಉಚ್ಚಾರಣಾ ಮಾದರಿಯ (Spelling character sequence keying in English) ಕ್ರಮದಲ್ಲಿ ಕೀಲಿಮಣೆಯಲ್ಲಿ ಟೈಪ್‌ ಮಾಡಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಅಂದರೆ ಕನ್ನಡದ ‘ಕ’ ಪದ ಮೂಡಿಸಲು ಇಂಗ್ಲಿಷ್‌ನ 'k' ಅಕ್ಷರ ಒತ್ತಬೇಕು. ಹೀಗೆ ಕನ್ನಡ ಅಥವಾ ಇನ್ಯಾವುದೇ ಭಾಷೆ ಬಳಕೆ ಮಾಡಬೇಕಿದ್ದರೂ ಮೊದಲಿಗೆ ಇಂಗ್ಲಿಷ್‌ ಅಕ್ಷರಗಳ ಜ್ಞಾನ ಅತ್ಯಗತ್ಯ ಎನ್ನುವಂತಾಗಿದೆ.

ಹಾಗಾದರೆ ಆಂಗ್ಲಭಾಷೆಯ ಆಧಾರದ ಮೇಲೆ ಮಾತೃಭಾಷೆ ಕಲಿಕೆ ಕ್ರಮ ಮಾತೃಭಾಷೆಯ ಉಳಿವು ಮತ್ತು ಬೆಳವಣಿಗೆಗೆ ದಾರಿಮಾಡಿಕೊಡಬಲ್ಲದೇ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈ ಪ್ರಶ್ನೆಯನ್ನೇ ಗಂಭೀರವಾಗಿ ಪರಿಗಣಿಸಿ, ಕಂಪ್ಯೂಟರಿನಲ್ಲಿ ಕನ್ನಡ ಅಕ್ಷರಗಳ ಮೂಲಕವೇ ಕನ್ನಡ ಭಾಷೆ ಕಲಿಕೆಯನ್ನು ಸಾಧ್ಯವಾಗಿಸುವ ಪ್ರಯತ್ನ ನಡೆಸಲಾಯಿತು. ಅದರಲ್ಲಿ ಯಶಸ್ಸನ್ನೂ ಸಾಧಿಸಲಾಗಿದೆ’ ಎನ್ನುತ್ತಾರೆ ಅವರು.

‘ಕೀಲಿಮಣೆಯಲ್ಲಿ ಅಕ್ಷರ ವಿನ್ಯಾಸ ಕನ್ನಡ ಭಾಷಾ ಶೈಲಿಗೆ ಅನುಗುಣವಾಗಿ ಇದ್ದಾಗ ಮಾತ್ರವೇ ಕಂಪ್ಯೂಟರಿನಲ್ಲಿ ಕನ್ನಡ ಭಾಷೆ ಕಲಿಕೆ ಸರಳವಾಗುತ್ತದೆ. ಆದರೆ ಈಗ ಬಳಸುತ್ತಿರುವ ಕೀಲಿಮಣೆಯಲ್ಲಿ ಕನ್ನಡದ ಅಕ್ಷರಗಳನ್ನು ಮೂಡಿಸಲು ಇಂಗ್ಲಿಷ್ ಅಕ್ಷರಗಳನ್ನೇ ಬಳಸಬೇಕು. ಈಗಾಗಲೇ ಈ ವಿನ್ಯಾಸಕ್ಕೆ ಹೊಂದಿಕೊಂಡಿರುವ ಕಾರಣ ಬಳಕೆ ಕಷ್ಟವೇನಲ್ಲ. ಆದರೆ ಭಾರತದ ಯಾವುದೇ ಮಾತೃಭಾಷೆ ಕಲಿಯಲು ಇಂಗ್ಲಿಷ್ ಅಕ್ಷರಗಳ ಮೇಲೇಯೇ ಅವಲಂಬನೆ ಆಗಬೇಕು ಎನ್ನುವುದು ಸರಿಯಲ್ಲ.

ಒಂದು ಅಕ್ಷರ ಟೈಪ್ ಮಾಡುವ ಮೊದಲು ಅದನ್ನು ನಾವು ಮನಸ್ಸಿನಲ್ಲಿ ಹೇಳುತ್ತೇವೆ. ಆದರೆ ಕನ್ನಡದ ‘ಅ’ ಅಕ್ಷರಕ್ಕೂ ಇಂಗ್ಲಿಷ್‌ನ ‘A' ಗೂ ಹೊಂದಾಣಿಕೆ ಆಗುವುದೇ ಇಲ್ಲ. ಇದು ಕಲಿಕೆಯಲ್ಲಿ ಗೊಂದಲ ಮೂಡಿಸುತ್ತದೆ. ಅಂತಿಮವಾಗಿ ಕನ್ನಡ ಬಳಕೆಗೆ ಇಂಗ್ಲಿಷ್‌ ಅಕ್ಷರಗಳ ತಿಳಿವಳಿಕೆ ಅತ್ಯವಶ್ಯಕ ಎನ್ನುವ ಭಾವನೆ ಮನಸ್ಸಿನಲ್ಲಿ ಅಚ್ಚೊತ್ತಿಬಿಡುತ್ತದೆ’ ಎಂದು ವಿಶ್ಲೇಷಿಸುತ್ತಾರೆ.

ನಾದ ಕೀಲಿಮಣೆಯಲ್ಲಿ ಕನ್ನಡ ಟೈಪ್‌ ಮಾಡಲು ಬಳಕೆದಾರನ ಮನಸ್ಸು ಮತ್ತು ಬೆರಳುಗಳು ಕನ್ನಡ ವರ್ಣಮಾಲೆಯ ಕ್ರಮದಂತೆ ಕೀಲಿಮಣೆಗಳಲ್ಲಿ ಅಕ್ಷರ ಜೋಡಣೆ ಮಾಡಲಾಗಿದೆ. ಇಂಗ್ಲಿಷ್‌ ಅಕ್ಷರಗಳ ಅಗತ್ಯ ಬೀಳುವುದಿಲ್ಲ. ಭಾಷಾ ಶುದ್ಧತೆ ಮೂಡುತ್ತದೆ.

ಕಲಿಕೆ ಸುಲಭ
* ಈ ಕೀಲಿಮಣೆಯ ಬಳಕೆ–ತರಬೇತಿಗೆ ನಾಲ್ಕು ಗಂಟೆ ಸಾಕು.
* ಕನ್ನಡ ವರ್ಣಮಾಲೆಯ ಸಾಧಾರಣ ಪರಿಚಯ ಇರುವ ಯಾರೇ ಆಗಲಿ ಒಂದು ಗಂಟೆ ಒಳಗೆ ಸಾಧಾರಣ ಬಳಕೆ ಹಾಗೂ ನಾಲ್ಕು ಗಂಟೆಯೊಳಗೆ ಸಂಪೂರ್ಣ ಬಳಕೆಗೆ ಸಿದ್ಧವಾಗುತ್ತಾರೆ.
* ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಭಾಷಾ ಶುದ್ಧತೆಗೋಸ್ಕರ ನಾದ ಅತ್ಯಂತ ಉಪಯುಕ್ತ ಸಾಧನ.

ರಾಜ್ಯೋತ್ಸವಕ್ಕೆ ಬಿಡುಗಡೆ: ಮುಂದಿನ 50 ವರ್ಷಗಳಲ್ಲಿ ಭಾರತದಲ್ಲಿ ಏಳು ಭಾಷೆಗಳು ಕಣ್ಮರೆಯಾಗುವ ಅಪಾಯದಲ್ಲಿವೆ. ಅದರಲ್ಲಿ ಕನ್ನಡ ಮೊದಲ ಸ್ಥಾನದಲ್ಲಿದೆ. ಹಾಗಾದರೆ ಭಾಷೆಯ ರಕ್ಷಣೆ ಹೇಗೆ ಎಂದರೆ ಶಾಲಾ ಮಕ್ಕಳಿಂದಲೇ ಭಾಷೆಯ ಕಲಿಕೆ ಆರಂಭವಾಗಬೇಕು. ಹಾಗಾಗಿ ಮೊದಲಿಗೆ ಅಲ್ಲೇ ಈ ಕೀಬೋರ್ಡ್ ಬಳಕೆಗೆ ತರಲು ನಿರ್ಧರಿಸಿದ್ದೇವೆ. ರಾಜ್ಯೋತ್ಸವಕ್ಕೆ ಹಳ್ಳಿ ಶಾಲೆಗಳಿಗೆ ಕೀಬೋರ್ಡ್‌ ತಲುಪಿಸಬೇಕೆನ್ನುವ ಮಹದಾಸೆ ಅವರಿಗಿದೆ.

ಕನ್ನಡ, ತಮಿಳು, ಮಲಯಾಳಂ, ತುಳು, ಹಿಂದಿ, ಸಂಸ್ಕೃತ, ಕಾಶ್ಮೀರ (ಶಾರದಾ ಸ್ಕ್ರಿಪ್ಟ್‌), ಗುರುಮುಖಿ ಹೀಗೆ ಹಲವು ಭಾರತೀಯ ಭಾಷೆಗಳ ಬಳಕೆಗೆ ಒಂದೇ ಕೀಲಿಮಣೆ ಸಾಕು. ಸದ್ಯ ನಾವು ಬಳಸುತ್ತಿರುವ ಕೀಲಿಮಣೆಯಲ್ಲಿ J shift+A ಬಳಸಿದರೆ ಜಾ ಅಕ್ಷರ ಮೂಡುತ್ತದೆ. ಆದರೆ ನಮ್ಮ ಕೀಬೋರ್ಡ್‌ನಲ್ಲಿ ಜ+ಆ=ಜಾ ಎಂದಾಗುತ್ತದೆ.

ವಿನ್ಯಾಸದಲ್ಲಿ ಬದಲಾವಣೆ ಕಷ್ಟ
ಕೀಲಿಮಣೆಯ ಮೊದಲ ಮಾದರಿ ಚೌಕಾಕಾರದಲ್ಲಿ ಸಿದ್ಧಪಡಿಸಲಾಗಿತ್ತು. ಆದರೆ ಜನರು QWERTY ವಿನ್ಯಾಸಕ್ಕೆ ಹೊಂದಿಕೊಂಡಿರುವುದರಿಂದ ಅದನ್ನು  ಒಪ್ಪಲಿಲ್ಲ. ಹಾಗಾಗಿ ವಿನ್ಯಾಸದಲ್ಲಿ ಹೆಚ್ಚು ಬದಲಾವಣೆ ಮಾಡದಿರಲು ನಿರ್ಧರಿಸಿದೆವು. ಪ್ರತಿಯೊಂದು ಬಿಡಿಭಾಗಗಳೂ ಭಾರತದಲ್ಲಿಯೇ ತಯಾರಾಗಿವೆ. ಬಹುಭಾಷೆ ತರುವುದು ಕಷ್ಟವಾಯಿತು. ಲಿಪಿ ಅದರ ಬಳಕೆ ಹೇಗೆ, ಅಕ್ಷರ ಜೋಡಣೆ ಎಂತು, ಸಂಸ್ಕೃತದಲ್ಲಿ ಇರುವ ಕೆಲವು ವಿಶೇಷ ಅಕ್ಷರಗಳು ಯಾವುವು –ಇದನ್ನೆಲ್ಲ ತಿಳಿದುಕೊಂಡು ಅಳವಡಿಸಬೇಕಾಯಿತು ಎಂದು ತಯಾರಿಕೆಯಲ್ಲಿ ಎದುರಾದ ಸವಾಲುಗಳ ಕುರಿತು ವಿವರಿಸುತ್ತಾರೆ.

ಇಂಗ್ಲಿಷ್‌ನಲ್ಲಿ ಗರಿಷ್ಠ ಐದು ಸಾಲುಗಳು (ಫಂಕ್ಷನ್‌ ಕೀ ಸಾಲು ಬಿಟ್ಟು), ಈ ಕೀಲಿಮಣಿಯಲ್ಲಿ ಒಂಬತ್ತು ಸಾಲುಗಳು. ಈ ವಿನ್ಯಾಸಕ್ಕೆ ಅಗತ್ಯವಾದ ಚಿಪ್‌ಗಾಗಿ ಗುರುಪ್ರಸಾದ್‌ ಅವರ ತಂಡ ಸಾಕಷ್ಟು ಹುಡುಕಾಟ ನಡೆಸಿದೆ. ಅವರಿಗೆ ಬೇಕಿರುವಷ್ಟು ಸಂಖ್ಯೆಯಲ್ಲಿ ಚಿಪ್ ಸಿಗದೇ ಇದ್ದಾಗ ಬೇರೆ ಕಂಪನಿಯ ಚಿಪ್ ಬಳಸಬೇಕಾಗಿ ಬರುತ್ತದೆ. ಆಗ ಒಂದೇ ರೀತಿಯ ಸರ್ಕಿಟ್‌ ಬೋರ್ಡ್‌ ಬಳಕೆ ಸಾಧ್ಯವಿಲ್ಲ. ಹಾಗಾಗಿ ಬೇರೆ ಕಂಪನಿಗಳ ಚಿಪ್‌ಗೆ ಹೊಂದುವಂತಹ ಸರ್ಕಿಟ್ ಬೋರ್ಡ್‌ ಸಹ ಸಿದ್ಧಪಡಿಸಿದೆ ಈ ತಂಡ.

ಶಿಫ್ಟ್‌, ಕ್ಯಾಪ್ಸ್ ಲಾಕ್ ಆನ್ ಆಫ್ ಅಗತ್ಯವಿಲ್ಲದೇ ಅಕ್ಷರಗಳನ್ನು ಟೈಪ್‌ ಮಾಡಬಹುದು. ಅಂದರೆ ‘ಖ’ ಅಕ್ಷರ ಟೈಪಿಸಲು ಈಗಿರುವ ಕೀಲಿಮಣೆಯಲ್ಲಿ Shift+k ಬಳಸಬೇಕು. ಟೈಪ್‌ ಮಾಡುವಾಗ ಹೆಚ್ಚುವರಿ ಕೀ ಬಳಸುವ ಅಗತ್ಯವಿಲ್ಲ.

‘ಕ–ನಾದ’ ಇಂಗ್ಲಿಷ್‌ ಕೀ ಬೋರ್ಡ್‌ಗೆ ಪರ್ಯಾಯ ಅಲ್ಲ. ಹಾಗಾಗಿ ಅಲ್ಲಿರುವ ಕೀಲಿಗಳ ಜೋಡಣೆ ವಿನ್ಯಾಸವನ್ನು ಅನುಸರಿಸಿಲ್ಲ. ಆದಷ್ಟೂ ಸರಳವಾಗಿ ಭಾಷೆ ಕಲಿಕೆಗೆ ಅನುಕೂಲ ಆಗಬೇಕು ಎನ್ನುವುದನ್ನು ಗಮನದಲ್ಲಿ ಇಟ್ಟುಕೊಂಡಿದ್ದೇವೆ. ಸದ್ಯದ ಮಟ್ಟಿಗೆ ಎಸ್ಕೇಪ್ ಕೀ, ಫಂಕ್ಷನ್‌ ಕೀ ನೀಡಿಲ್ಲ. ಫಂಕ್ಷನ್‌ ಕೀಗೆ ಹೆಚ್ಚುವರಿ ಚಿಪ್ ಮತ್ತು ಪಿನ್ (42 ಪಿನ್ ಇರುವ ಚಿಪ್ ಬೇಕು). ಅದನ್ನು ಅಳವಡಿಸುವುದು ಕಷ್ಟವೇನಲ್ಲ. ಮುಂದಿನ ದಿನಗಳಲ್ಲಿ ಅದನ್ನೂ ಅಳವಡಿಸಲಾಗುವುದು ಎಂದು ಗುರುಪ್ರಸಾದ್‌ ಹೇಳುತ್ತಾರೆ.

ಚಿಪ್‌, ಕೇಸ್‌, ಬಿಡಿಭಾಗಗಳು, ವಿನ್ಯಾಸ...
ಹೀಗೆ ಒಟ್ಟು 7 ರಿಂದ 8 ಲಕ್ಷ ಖರ್ಚಾಗಿದೆ. ಕೀಲಿಮಣೆ ಬೆಲೆಯನ್ನು ನಿಗದಿ ಪಡಿಸಿಲ್ಲ.

ಕೀಲಿಮಣೆ ವಿನ್ಯಾಸಕ್ಕೆ ಸಂಬಂಧಿಸಿದಂತೆ ಕೆ.ಪಿ.ರಾವ್ ಅವರ ಸಾಧನೆ ಮರೆಯಲಾಗದು. ನುಡಿ, ಶ್ರೀಲಿಪಿ ತಂತ್ರಾಂಶಗಳು ಇರುವುದರಿಂದಲೇ ‘ಕ–ನಾದ’ ಕೀಲಿಮಣೆ ಅಭಿವೃದ್ಧಿಪಡಿಸುವುದು ಸುಲಭವಾಯಿತು ಎಂದು ಅವರು ನೆನೆಯುತ್ತಾರೆ.

ಪ್ರಶ್ನೆಗಳು ಹಲವು: ಈಗಿರುವ ಕೀಬೋರ್ಡ್‌ನಲ್ಲಿಯೇ ಕನ್ನಡ ಅಥವಾ ಇನ್ನಾವುದೇ ಭಾಷೆ ಟೈಪ್ ಮಾಡಲು ಸಾಧ್ಯ. ಹೀಗಿರುವಾಗ ನಿಮ್ಮ ಕೀ ಬೋರ್ಡ್‌ ಅಗತ್ಯ ಏನು ಎಂಬ ಪ್ರಶ್ನೆಯನ್ನು ಹಲವರು ಕೇಳಿದ್ದಾರೆ. ಆದರೆ ಅವರಿಗೆ ಎರಡೂ ಕೀಲಿಮಣೆ ಬಳಕೆಯಲ್ಲಿ ಇರುವ ವ್ಯತ್ಯಾಸಗಳ ಬಗ್ಗೆ ತಿಳಿಸಿ ಹೇಳಿದಾಗ ಒಪ್ಪಿಕೊಂಡಿದ್ದಾರೆ.

ಕನ್ನಡ ಅಥವಾ ಪ್ರಾದೇಶಿಕ ಭಾಷೆ ಟೈಪ್ ಮಾಡುವ ಮೊದಲು ಇಂಗ್ಲಿಷ್‌ ಗೊತ್ತಿರಬೇಕು. ಅಂದರೆ ಮೊದಲಿಗೆ ಇಂಗ್ಲಿಷ್‌ ಗೊತ್ತಿರಬೇಕು. ಆಮೇಲೆ ಮಾತೃಭಾಷೆ. ಭಾಷೆಗೆ ಪ್ರಾಮುಖ್ಯ ಇಲ್ಲ ಎನ್ನುವ ಕಾರಣಕ್ಕೆ ಅದರ ಬಗೆಗಿನ ಒಲವು ಕಡಿಮೆ ಆಗುತ್ತಿದೆ. ಹಾಗಾಗಿ ಭಾಷೆ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸುವುದಷ್ಟೇ ಅಲ್ಲ ಅದರಿಂದ ಭವಿಷ್ಯ ರೂಪಿಸಿಕೊಳ್ಳುವಂತಹ ಯೋಜನೆಗಳ

ಅಗತ್ಯವೂ ಇದೆ ಎನ್ನುವುದು ಅವರ ವಾದ. ಈ ಕೀಲಿಮಣೆ ಬಳಕೆಯಿಂದ ಆಗುವ ಅನುಕೂಲಗಳ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಗಮನಕ್ಕೂ ತರಲಾಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಗುರುಪ್ರಸಾದ್. 

‘ಕ–ನಾದ’ (Ka-Naada): ಕಂಪ್ಯೂಟರಿನಲ್ಲಿ ಇಂಡಿಕ್ ಭಾಷೆಯನ್ನು ಕಲಿಸಲು ಸಿದ್ಧಪಡಿಸಿರುವ ಕೀಲಿಮಣೆ ವಿನ್ಯಾಸವೇ ‘ಕ–ನಾದ’. ಭಾರತ, ನೇಪಾಳ, ಶ್ರೀಲಂಕಾ, ಮ್ಯಾನ್ಮಾರ್‌ ಮತ್ತು ಥಾಯ್ಲೆಂಡ್‌ನಲ್ಲಿ ಬಳಸಬಹದು. ಅಮೆರಿಕದಿಂದ ಪೇಟೆಂಟ್‌ ಸಿಕ್ಕಿದೆ. ಭಾರತದಲ್ಲಿ ಪೇಟೆಂಟ್‌ಗಾಗಿ 2014ರಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಏನಿದು ‘ಕ–ನಾದ’?: ಕ–ನಾದ ಎರಡು ಪದಗಳಿಂದ ರೂಪಿಸಲಾಗಿದೆ. ಬ್ರಾಹ್ಮಿ ಲಿಪಿಯ ಸ್ವರ ವಿನ್ಯಾಸದ ಆಧಾರದ ಮೇಲೆ ಇರುವ ಭಾರತೀಯ ಭಾಷೆಗಳ ಮೊದಲ ವ್ಯಂಜನ  ‘ಕ’ ಮತ್ತು ನಾದ ಎಂಬ ಪದಗಳಿಂದ ‘ಕ–ನಾದ’ ಆಗಿದೆ.

ಭಾಷೆಯ ವಿನ್ಯಾಸಕ್ಕೆ ಸಂಬಂಧಿಸಿದಂತೆ ಇರುವ ತಂತ್ರಾಂಶವನ್ನು ಇನ್‌ಸ್ಟಾಲ್‌ ಮಾಡಿಕೊಂಡು ಬಳಕೆ ಆರಂಭಿಸಬಹುದು. ಎಲ್ಲಾ ಭಾಷೆಯ ವಿನ್ಯಾಸ ಇನ್‌ಸ್ಟಾಲ್‌ ಮಾಡಲೇಬೇಕು ಎಂದಿಲ್ಲ. ನಮಗೆ ಬೇಕಿರುವ ಒಂದು ನಿರ್ದಿಷ್ಟ ಭಾಷೆಯನ್ನು ಮಾತ್ರವೇ ಇನ್‌ಸ್ಟಾಲ್ ಮಾಡಿಕೊಳ್ಳಬಹುದು.ಯುನಿಕೋಡ್‌ ಬೆಂಬಲಿಸುವ ಎಲ್ಲಾ ಅಪ್ಲಿಕೇಷನ್‌ಗಳಲ್ಲಿಯೂ ನಾದ ಬಳಸಬಹುದು.

ವಿಂಡೋಸ್‌ ಎಕ್ಸ್‌ಪಿ ಯಂತಹ ಹಳೆಯ ಕಾರ್ಯಾಚರಣೆ ವ್ಯವಸ್ಥೆ (ಒಎಸ್) ಇರುವ ಸಾಧನಗಳಲ್ಲಿ ಇದು ಕೆಲಸ ಮಾಡುವುದಿಲ್ಲ.

*
ಜನವರಿಯಿಂದ ಲಭ್ಯ
ಶಾಲಾ ಮಕ್ಕಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಫೆದರ್ ಟಚ್ ಕೀಲಿಮಣೆ ಅಭಿವೃದ್ಧಿಪಡಿಸಲಾಗಿದೆ. ರಾಜ್ಯೋತ್ಸವಕ್ಕೆ ಫೌಂಡೇಶನ್‌ಗಳ ಮೂಲಕ ಶಾಲೆಗಳಲ್ಲಿ ಪರಿಚಯಿಸಲಾಗುವುದು.

www.ka-naada.com ನಲ್ಲಿ ಮುಂಚಿತವಾಗಿ ಬೇಡಿಕೆ ಸಲ್ಲಿಸಿದರೆ ಜನವರಿಗೆ ಈ ಕೀಲಿಮಣೆ ಸಿಗಲಿದೆ.

ಈಗ ಎಲ್ಲೆಡೆ ಬಳಕೆಯಲ್ಲಿರುವ ವೃತ್ತಿಪರರೂ ಬಳಸಬಹುದಾದ ಕೀಲಿಮಣೆ ತಯಾರಿಸಲು ಹೆಚ್ಚಿನ ಬಂಡವಾಳದ ಅಗತ್ಯವಿದೆ. ಸಮಯವೂ ಹಿಡಿಯುತ್ತದೆ. ಇಂಥ ಕೀಲಿಮಣೆ 2018ರ ಮಾರ್ಚ್‌ನಿಂದ ಮಾರುಕಟ್ಟೆಯಲ್ಲಿ ಸಿಗಲಿದೆ.

ಸಂಪರ್ಕಕ್ಕೆ: 9606796810.

ಇಮೇಲ್–info@ka-naada.com

*


ಕೀಲಿಮಣೆ ವಿನ್ಯಾಸಕರು
ಕ–ನಾದ ಕೀಲಿಮಣೆಯ ಅಕ್ಷರ ವಿನ್ಯಾಸ ಪರಿಷ್ಕಾರ ನಡೆಸಿದವರು ಕನ್ನಡಿಗರೇ. ಬಾಹ್ಯಾಕಾಶ ಹಾಗೂ ಸಿಮ್ಯುಲೇಟರ್ ತಜ್ಞ ಡಾ. ಗುರುಪ್ರಸಾದ್‌ ಮತ್ತು ಭಾಷಾ ಸಂಶೋಧಕ ಪ್ರೊ. ಬಿ.ವಿ.ಕೆ. ಶಾಸ್ತ್ರಿ ಅವರು ಅಮೆರಿಕದಲ್ಲಿ ಈ ಅಕ್ಷರ ವಿನ್ಯಾಸಕ್ಕಾಗಿ ಸಂಶೋಧನೆ ನಡೆಸಿದರು. ಬಹಳ ವರ್ಷಗಳ ಬಳಿಕ ಇದಕ್ಕೆ ಯು.ಎಸ್‌.ಪೇಟೆಂಟ್‌ ದೊರೆತಿದೆ.

ಈ ಆವಿಷ್ಕಾರದ ಪ್ರಮುಖ ಸೂತ್ರದಾರ ಗುರುಪ್ರಸಾದ್‌ ಅವರು ಉಡುಪಿಯವರು. ಮಂಡ್ಯದ ಪಿ.ಇ.ಎಸ್‌. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ರೊಬಾಟ್‌ ವಿಷಯದಲ್ಲಿ ಐಐಎಸ್‌ಸಿ ಮಾಡಿದ್ದಾರೆ. ಇಸ್ರೊದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿರುವ ಇವರು ಅಮೆರಿಕದ University of Central Florida ದಲ್ಲಿ MS in Mechanical & Aerospace, PhD in Industrial Engineering (Simulation) ಕಲಿತಿದ್ದಾರೆ. Aximetric ಎಂಬ ತಮ್ಮದೇ ಕಂಪೆನಿಯನ್ನೂ ಸ್ಥಾಪಿಸಿದ್ದಾರೆ. ಕಳೆದ ಏಳು ತಿಂಗಳಿನಿಂದ ಭಾರತದಲ್ಲಿ ಇದ್ದುಕೊಂಡು ಕೀಲಿಮಣೆ ತಯಾರಿಸಲು ‘ಕ–ನಾದ ಫೊನೆಟಿಕ್ಸ್‌’ ಸ್ಥಾಪನೆ ಮಾಡಿದ್ದಾರೆ.

ತಂಡದಲ್ಲಿ ಇರುವವರು: ಶಿವಮೊಗ್ಗದ ಆದರ್ಶ ಸರಫ್‌ ಅವರು ಕೀಲಿಮಣೆಗೆ ತಂತ್ರಾಂಶ ಅಭಿವೃದ್ಧಿಪಡಿಸಿದ್ದಾರೆ. ಮೈಸೂರಿನ ಪರಮೇಶ್ವರ ಭಟ್‌ ಹಾಗೂ Embedded Systems Designer ಬೆಂಗಳೂರಿನ ಗಿರೀಶ ಅವರು ಹಾರ್ಡ್‌ವೇರ್‌ ವಿನ್ಯಾಸಕ್ಕೆ ಸಹಕಾರ ನೀಡಿದ್ದಾರೆ.

*ಕನ್ನಡ ಭಾಷೆಗೆ ಅನುಗುಣವಾಗಿ ಸ್ವರ–ವರ್ಣಾಕ್ಷರಗಳ ಜೋಡಣೆ.

*ಭಾರತದ ಭಾಷೆಗಳ ಜತೆ ಇಂಗ್ಲಿಷ್‌ ವರ್ಣಾಕ್ಷರಗಳ ಸಂಯೋಜನೆಗೆ ಅವಕಾಶ.

*ಯುನಿಕೋಡ್ ಸಂಕೇತ ಶಿಷ್ಟತೆ.

*ಬ್ರಾಹ್ಮೀ ಭಾಷೆಗೆ ಅನುಗುಣವಾದ ಸ್ವರ ವ್ಯಂಜನ ವಿಭಾಗವನ್ನು ಅನುಸರಿಸಿ ವರ್ಣಾಕ್ಷರ ವಿನ್ಯಾಸ.

*ಜೋಡಕ್ಷರ, ಸಂಯುಕ್ತಾಕ್ಷರಗಳನ್ನು ಕೀಲಿಸಲು ಏಕರೂಪದ ಕೀಲಿ.

*ವಿಂಡೋಸ್‌, ಲಿನಕ್ಸ್‌, ಆಂಡ್ರ್ಯಾಯ್ಡ್‌ನಲ್ಲಿ ಬಳಕೆ ಮಾಡಬಹುದು.

*ಶೀಘ್ರವೇ ಮೊಬೈಲ್‌ಗೂ ಹೊಂದುವಂತಹ ವಿನ್ಯಾಸವಿರುವ ಕೀಲಿಮಣೆ ಬರಲಿದೆ.

*ಕನ್ನಡದಲ್ಲಿಯೇ ಕಡತ ಸೇವ್ ಮಾಡಬಹುದು. ಇ–ಮೇಲ್ ವಿಳಾಸವನ್ನೂ ಕನ್ನಡದಲ್ಲಿಯೇ ಸಿದ್ಧಪಡಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT