ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಗನ್ನಡದ ಮುಂಗೋಳಿಗೆ ರಾಷ್ಟ್ರಮನ್ನಣೆ

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಮುದ್ದಣ ಕನ್ನಡಿಗರ ಹೃದಯದಿಂದ ಮರೆತು ಹೋಗಿಲ್ಲ. ಮರೆಯದಂತೆ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇದೆ. ಅಂತಹ ಪ್ರಯತ್ನದ ಮುಂದುವರಿದ ಭಾಗವೇ ಅಂಚೆ ಚೀಟಿ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನವದೆಹಲಿಯಲ್ಲಿ ಮುದ್ದಣನ ಭಾವಚಿತ್ರದೊಂದಿಗೆ ₹ 5 ಮುಖಬೆಲೆಯ ಅಂಚೆ ಚೀಟಿ ಬಿಡುಗಡೆಗೊಳ್ಳುತ್ತಿದೆ. ಮುದ್ದಣ ಜನಿಸಿ ಒಂದೂವರೆ ಶತಮಾನ ಸಮೀಪಿಸುತ್ತಿರುವಂತೆಯೇ ಅಂಚೆ ಚೀಟಿಯ ರೂಪದಲ್ಲಿ ಆತ ಮತ್ತೊಮ್ಮೆ ಕನ್ನಡಿಗರ ಸಹಿತ ಭಾರತೀಯರ ಹೃದಯದಲ್ಲಿ ನೆಲೆ ನಿಲ್ಲುತ್ತಿದ್ದಾನೆ.

ಕನ್ನಡದಲ್ಲಿ ನವೋದಯದ ಬೆಳಗು ಆಗುತ್ತಿದೆ ಎಂಬುದನ್ನು ಕೂಗಿ ಹೇಳಿದ ಕವಿ ನಂದಳಿಕೆ ಲಕ್ಷ್ಮೀನಾರಣಪ್ಪ (ಮುದ್ದಣ) ಗತಿಸಿ 116 ವರ್ಷಗಳು ಸಂದಿವೆ. ಆತ ರಚಿಸಿದ್ದು ಪ್ರಮುಖವಾಗಿ ಮೂರೇ ಕೃತಿಗಳನ್ನಾದರೂ, ಅವುಗಳು ಬೀರಿದ ಪ್ರಭಾವ ನೂರಾರು ವರ್ಷಗಳ ನಂತರವೂ ಕನ್ನಡ ನಾಡಿನಲ್ಲಿ ಶಾಶ್ವತವಾಗಿರುವಂತಹದ್ದು. ಮತ್ತೆ ಮತ್ತೆ ‘ಮುದ್ದಣ’ ನೆನಪಾಗುತ್ತಲೇ ಇರುವಂತಹ ಕೊಡುಗೆಯನ್ನು ಆತ ಬಿಟ್ಟು ಹೋಗಿದ್ದಾನೆ.

ಗದ್ಯ– ಪದ್ಯ ಎರಡರಲ್ಲೂ ಬರವಣಿಗೆಯನ್ನು ಕುದುರಿಸಿಕೊಂಡ ಆತ ಒಳ್ಳೆಯ ವಿಮರ್ಶಕನೂ ಆಗಿದ್ದ. ತನ್ನ ಮಟ್ಟಿಗೆ ‘ಪದ್ಯಂ ವದ್ಯಂ, ಗದ್ಯಂ ಹೃದ್ಯಂ’ ಎಂದು ಭಾವಿಸಿದ ಆತ ಕೊನೆಗೆ ಬರೆಯಲಾರಂಭಿಸಿದ್ದು ‘ರಾಮಾಶ್ವಮೇಧ’ ಎಂಬ ವಿಶಿಷ್ಟ ಕೃತಿಯನ್ನು.

ಸಂಸ್ಕೃತದಂತೆ ಕನ್ನಡದಲ್ಲೂ ಸಹಜ ಸುಂದರವಾಗಿ ಶಬ್ದ, ಅರ್ಥ, ಅಲಂಕಾರ ಸಹಿತ ಛಂದೋಗತಿಯ ಲಯದೊಂದಿಗೆ ಗದ್ಯ ಬರೆಯಲು ಸಾಧ್ಯ ಎಂದು ಈ ಕೃತಿಯ ಮೂಲಕ ತೋರಿಸಿಕೊಟ್ಟ ಆತನಿಂದ ಇನ್ನೂ ಅನೇಕ ಮಹಾನ್‌ ಕೃತಿಗಳು ಹೊರಬರುವುದಿತ್ತು. ಆದರೆ ಕ್ಷಯರೋಗ ಆತನನ್ನು 31 ವರ್ಷಕ್ಕೇ ಬಲಿ ತೆಗೆದುಕೊಂಡಿತ್ತು. ನಿಜನಾಮದಿಂದ ಕೃತಿಯನ್ನು ಅಚ್ಚಿಗೆ ಕಳುಹಿಸಿದರೆ ಅದು ಪ್ರಕಟವಾಗದೆ ಹೋಗಬಹುದು ಎಂಬ ಅಂಜಿಕೆ ಮುದ್ದಣನಿಗೆ ಬಲವಾಗಿತ್ತು. ಹೀಗಾಗಿ ಗೋಪ್ಯ ಹೆಸರಿನಿಂದ

ಆಗ ಮೈಸೂರಿನಲ್ಲಿ ಪ್ರಕಟವಾಗುತ್ತಿದ್ದ ‘ಕಾವ್ಯಮಂಜರಿ’ ಪ್ರಕಟಣಾಲಯಕ್ಕೆ ತನ್ನ ಹಸ್ತಪ್ರತಿ ಕಳುಹಿಸಿ ಅವುಗಳನ್ನು ಮುದ್ರಿಸಿಕೊಂಡ. ಆತ ಯಾಕಾಗಿ ಈ ಹಾದಿ ತುಳಿದ ಎಂದರೆ ಮುಖ್ಯವಾಗಿ ಕಾಣಿಸುವುದು ಬಡತನ. ತಾನು ಹುಟ್ಟಿದ ನಂದಳಿಕೆ ಪರಿಸರ ಕುಗ್ರಾಮವಾಗಿತ್ತು. ಹೊಟ್ಟೆಪಾಡಿಗಾಗಿ ಉಡುಪಿಯಲ್ಲಿ ವ್ಯಾಯಾಮ ಮತ್ತು ಕನ್ನಡ ಶಿಕ್ಷಕನಾಗಿ ದುಡಿಯುತ್ತಲೇ ಸ್ವಂತ ಅಧ್ಯಯನದಿಂದ ಇಂಗ್ಲಿಷ್‌, ಸಂಸ್ಕೃತಗಳನ್ನು ಕರಗತ ಮಾಡಿಕೊಂಡ. ಯೌವನಾವಸ್ಥೆಯಲ್ಲೇ ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ಆತ ಮೂರು ಮಹಾನ್ ಕೃತಿಗಳನ್ನು, ಎರಡು ಯಕ್ಷಗಾನ ಕೃತಿಗಳನ್ನು ಬರೆದು ಅಚ್ಚು ಹಾಕಿಸಿಬಿಟ್ಟಿದ್ದ. ಇನ್ನಷ್ಟು ಕೃತಿಗಳು ಹಸ್ತಪ್ರತಿಯಲ್ಲೇ ಉಳಿದುಬಿಟ್ಟು ಕಳೆದು ಹೋದವು.

ಹಸ್ತಪ್ರತಿಗಳು ಕಳೆದು ಹೋಗುವುದಕ್ಕಿಂತಲೂ ಮಿಗಿಲಾಗಿ ಸ್ವತಃ ಮುದ್ದಣನೇ ಅವಸರದಿಂದ ಸಾಹಿತ್ಯ ಲೋಕದಿಂದ ಕಳೆದುಹೋದ.
ಮುದ್ದಣ ನೂರ್ಕಾಲ ಬಾಳಲಿಲ್ಲ. ಅದೇ ಕಾರಣಕ್ಕೆ ಆತನಿಂದ ನೂರಾರು ಕೃತಿಗಳೂ ಹೊರಬರಲಿಲ್ಲ. ಹೊರಬಂದ ಐದು ಕೃತಿಗಳೂ ಪ್ರಸಿದ್ಧಿಗೆ ಬಂದುದು ಆತ ಗತಿಸಿದ ಮೇಲೆಯೇ. ಅದು ಎಂತಹ ಪ್ರಸಿದ್ಧಿ ಎಂದರೆ ಅವನು ರಚಿಸಿದ ಕೃತಿಗಳೆಲ್ಲವೂ ರಾಜ್ಯದ ಎಲ್ಲ ಪ್ರದೇಶಗಳಲ್ಲೂ ಪಠ್ಯಗಳಾದವು. ಆತ ಕರಾವಳಿ ಪ್ರದೇಶದ ಪ್ರಾತಿನಿಧಿಕ ಕವಿಯಾಗಿ ಉಳಿಯಲೇ ಇಲ್ಲ. ಪಂಪ, ರನ್ನ, ಕುಮಾರವ್ಯಾಸ, ರತ್ನಾಕರವರ್ಣಿ, ಷಡಕ್ಷರಿಗಳಂತೆ ಪ್ರಾದೇಶಿಕತೆ ಮೀರಿ ನಿಂತುಬಿಟ್ಟ.

ಮುದ್ದಣನ ಈ ಮಹಾನ್‌ ಸಾಧನೆಯ ಹಿಂದೆ ನಂದಳಿಕೆಯ ಪರಿಸರ ಪ್ರಭಾವ ಬೀರಿದೆ ಎಂಬುದನ್ನು ಗಮನಿಸಬೇಕು. ಅತ್ಯಂತ ಕುಗ್ರಾಮವಾಗಿದ್ದ ನಂದಳಿಕೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವಾಗಲೇ ಅಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿದ್ದ ಜಾತ್ರೆ, ಭಜನೆ, ಯಕ್ಷಗಾನದ ಹಾಡುಗಳು, ಪುರಾಣ ವಾಚನ, ಬಯಲಾಟಗಳಿಂದ ಪ್ರಭಾವಿತನಾಗಿದ್ದ. ಇಂಗ್ಲಿಷ್‌ ಕಲಿಯುವ ಆಸೆಯಿಂದ ಉಡುಪಿಯ ಶಾಲೆಗೆ ಸೇರಿದ ಆತನಿಗೆ ಕಡು ಬಡತನದ ಕಾರಣ ಇಂಗ್ಲಿಷ್‌ ಶಿಕ್ಷಣ ಮುಂದುವರಿಸುವುದು ಸಾಧ್ಯವಾಗಲಿಲ್ಲ.

ಕನ್ನಡ ಟ್ರೇನಿಂಗ್ ಶಾಲೆ ಸೇರಿ, ಬಳಿಕ ಉದ್ಯೋಗ ಗಿಟ್ಟಿಸುವ ಸಲುವಾಗಿಯೇ ವ್ಯಾಯಾಮ ಶಿಕ್ಷಕನ ತರಬೇತಿ ಪಡೆಯಲು ಮದ್ರಾಸಿಗೆ ಹೋದ. ಟ್ರೇನಿಂಗ್ ಮುಗಿಸಿ ಬಂದ ಮುದ್ದಣ ಉಡುಪಿಯ ಬೋರ್ಡ್‌ ಹೈಸ್ಕೂಲ್‌ನಲ್ಲಿ ವ್ಯಾಯಾಮ ಶಿಕ್ಷಕನಾಗಿ ಸೇರಿಕೊಂಡ. ಅಲ್ಲಿ ಶಿಕ್ಷಕರಾಗಿದ್ದ ಮಳಲಿ ಸುಬ್ಬರಾಯರಿಂದ ಪ್ರಭಾವಿತನಾಗಿ ಮುದ್ದಣ ಸಾಹಿತ್ಯ ರಚನೆಗೆ ತೊಡಗಿದ. 1893ರಲ್ಲಿ ಶಿವಮೊಗ್ಗದ ಕಾಗೆಕೋಡಮಗ್ಗಿಯ ಕಮಲಾಳೊಂದಿಗೆ ವಿವಾಹವಾದ ಮುದ್ದಣನ ಸಂಸಾರ ಹೇಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ ರಾಮಾಶ್ವಮೇಧದ ‘ಮುದ್ದಣ–ಮನೋರಮೆ ಸರಸ ಸಲ್ಲಾಪ’ ಪ್ರಸಂಗ.

ಹೊಸಗನ್ನಡ ಸಾಹಿತ್ಯ ರೂಪ ತಳೆದುದು ಕ್ರಿ.ಶ.1900ರ ಆಸುಪಾಸಿನಲ್ಲಿ. ಕನ್ನಡದ ಮೊದಲ ಕಾದಂಬರಿ ‘ಇಂದಿರಾ ಬಾಯಿ’ ಅಥವಾ ‘ಸದ್ಧರ್ಮ ವಿಜಯ’ದ ಕರ್ತೃ ಗುಲವಾಡಿ ವೆಂಕಟರಾಯರು, ಸಣ್ಣಕತೆಗಳನ್ನು ಮೊದಲಿಗೆ ಬರೆಯತೊಡಗಿದ ಪಂಜೆ ಮಂಗೇಶರಾಯರು ಮುದ್ದಣನ ಸಮಕಾಲೀನರು. ಹೊಸ ಕಾಲದಲ್ಲಿ ಹಳಗನ್ನಡದ ಅಧ್ಯಯನಕ್ಕೆ ಬುನಾದಿಯಾದ ‘ಶಬ್ದಮಣಿದರ್ಪಣಂ’, ‘ಛಂದೋಂಬುಧಿ’, ‘ಕೆಟ್ಟೆಲ್‌ಕೋಶ’ ಮೊದಲಾದ ಕೃತಿಗಳು ಮುದ್ದಣನ ಕಾಲದಲ್ಲೇ ಹೊರಬಂದವು. ಆತ ಬದುಕಿದ್ದ ಕಾಲ ಸಾಹಿತ್ಯದ ದೃಷ್ಟಿಯಿಂದ ಸಂಧಿಕಾಲವಾಗಿತ್ತು.

ಹಳಗನ್ನಡದ ಬಳಕೆ ಮುದ್ದಣನ ಕಾಲಕ್ಕೆ ಸಹಜವಾದುದಾಗಿರಲಿಲ್ಲ. ಅದು ಅಭ್ಯಾಸದಿಂದ ರೂಢಿಸಿಕೊಂಡದ್ದಾಗಿತ್ತು. ಡಾ.ಪಾದೇಕಲ್ಲು ವಿಷ್ಣು ಭಟ್ಟರು ಗುರುತಿಸುವಂತೆ, ‘ಮುದ್ದಣನ ಕೃತಿಗಳಲ್ಲಿ ಹಳೆಯ ಮತ್ತು ಹೊಸ ಸಾಹಿತ್ಯದ ಲಕ್ಷಣಗಳು ಮತ್ತು ಹೊಸಕಾಲದ ಅಭಿರುಚಿಗಳ ಮೊಳಕೆ ಕಾಣಿಸುತ್ತದೆ’.

‘ಅದ್ಭುತ ರಾಮಾಯಣಂ’, ‘ಶ್ರೀರಾಮಾಶ್ವಮೇಧ’ಗಳಲ್ಲಿನ ಹಳಗನ್ನಡದ ಬಳಕೆ, ಗದ್ಯಕಥನ ವಿಧಾನ, ‘ಶ್ರೀರಾಮಪಟ್ಟಾಭಿಷೇಕ’ದ ಷಟ್ಪದಿ ಪ್ರಯೋಗ, ದೇಸಿ ಸಾಹಿತ್ಯ, ಯಕ್ಷಗಾನ ಪದ್ಯರೂಪ (ರತ್ನಾವತೀ ಕಲ್ಯಾಣ, ಕುಮಾರವಿಜಯ) ಮುದ್ದಣನನ್ನು ಹೊಸಗನ್ನಡದ ಹೊಸ್ತಿನಲ್ಲಿ ನಿಲ್ಲಿಸಿತ್ತು ಎಂಬುದನ್ನು ಅವರು ಉಲ್ಲೇಖಿಸುತ್ತಾರೆ. ನಂದಳಿಕೆಯಿಂದ ಮುದ್ದಣ ಗತಿಸಿದ ಬಳಿಕವೂ ಊರು ಹಾಗೆಯೇ ಉಳಿದಿತ್ತು.

ಊರನ್ನೂ ಬೆಳಗಿಸಬೇಕು, ಮುದ್ದಣನೂ ಶತ ಶತಮಾನ ಕಾಲ ನಂದಳಿಕೆಯ ನೆಲದಲ್ಲಿ ಚಿರಸ್ಥಾಯಿಯಾಗಬೇಕು ಎಂಬ ಆಶಯದೊಂದಿಗೆ ಹುಟ್ಟಿಕೊಂಡ ‘ಮುದ್ದಣ ಸ್ಮಾರಕ ಮಿತ್ರ ಮಂಡಳಿ’ಯ ಪ್ರಯತ್ನದ ಫಲವೇ ನಂದಳಿಕೆಯಲ್ಲಿ ಸ್ಥಾಪನೆಗೊಂಡ ಮುದ್ದಣ ಸ್ಮಾರಕ ಭವನ ಹಾಗೂ ಇದೀಗ ಬಿಡುಗಡೆಗೊಳ್ಳುತ್ತಿರುವ ಅಂಚೆ ಚೀಟಿ.

*

ನಂದಳಿಕೆಯ ‘ಭಗೀರಥ’
ನಂದಳಿಕೆ ಇಂದಿಗೂ ನಳನಳಿಸುವಂತೆ ಇರುವುದಕ್ಕೆ ಕಾರಣ ಅದೇ ನಂದಳಿಕೆಯಲ್ಲಿ ಹುಟ್ಟಿದ ಹುಟ್ಟು ಹೋರಾಟಗಾರ ನಂದಳಿಕೆ ಬಾಲಚಂದ್ರ ರಾವ್. ಕರ್ನಾಟಕ ಬ್ಯಾಂಕ್‌ನಲ್ಲಿ 32 ವರ್ಷ ಕೆಲಸ ಮಾಡಿದ ಅವರದು ಹಿಡಿದ ಹಠ ಸಾಧಿಸಿಯೇ ತೀರುವ ಜಾಯಮಾನ. ಅದಕ್ಕಾಗಿಯೇ ಅವರು ‘ಬಂದಳಿಕೆ’ ಎಂಬ ಅಪಹಾಸ್ಯವನ್ನೂ ಸಹಿಸಿಕೊಂಡವರು.

ಮುದ್ದಣ ಹುಟ್ಟಿದ ನೆಲದಲ್ಲಿ ಹುಟ್ಟಿದ್ದಕ್ಕಾಗಿಯೇ ಬಾಲಚಂದ್ರ ರಾವ್‌ ಅವರಿಗೆ ಕವಿಯ ಬಗ್ಗೆ ಇನ್ನಿಲ್ಲದ ಆದರ. ಅವರಿಗೆ ಐದು ವರ್ಷವಾಗಿದ್ದಾಗಲೇ ಅಂದರೆ 1958ರಲ್ಲಿ ಊರಿನಲ್ಲಿ ‘ಕವಿ ಮುದ್ದಣ ಸ್ಮಾರಕ ರೈತ ಸಂಘ’ ಸ್ಥಾಪನೆಗೊಂಡಿತ್ತು.

ನಂದಳಿಕೆ ಭಾಸ್ಕರ ರಾವ್, ಚಾವಡಿ ಅರಮನೆಯ ಸುಂದರರಾಮ ಹೆಗ್ಡೆ ಮತ್ತು ಎಂ.ಅನಂತ ಪದ್ಮನಾಭ ಅವರು ಈ ಸಂಘದ ರೂವಾರಿಗಳು. ಭಾಸ್ಕರ ರಾವ್ ಅವರು ಬಾಲಚಂದ್ರ ರಾವ್‌ ಅವರ ಹಿರಿಯಣ್ಣ. ‘ಮುದ್ದಣ ಸ್ಮಾರಕ ಭವನ’ ಸ್ಥಾಪಿಸಬೇಕೆಂಬ ಛಲ ತೊಟ್ಟ ಸಂಘ ಟಿ.ಎ.ಪೈ ಅವರನ್ನು ಆಹ್ವಾನಿಸಿ ಸ್ಮಾರಕ ಭವನಕ್ಕೆ ಅಡಿಗಲ್ಲು ಹಾಕಿಸಿತು. ಆದರೆ 20 ವರ್ಷಗಳಾದರೂ ಕಲ್ಲು ಮೇಲೇಳಲೇ ಇಲ್ಲ. ಇದನ್ನು ನೋಡುತ್ತಲೇ ಬೆಳೆದ ಬಾಲಚಂದ್ರ ರಾವ್‌ ಅವರು ನಂದಳಿಕೆಯ ತರುಣರನ್ನು ಒಂದುಗೂಡಿಸಿ ‘ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ’ ಸ್ಥಾಪಿಸಿದರು.

ಆಗ ತರುಣರಿಗೆ ಮಾರ್ಗದರ್ಶನ ನೀಡಿದ್ದು ಸುಂದರರಾಮ ಹೆಗ್ಡೆ, ಎನ್‌. ದಿವಾಕರ ಶೆಟ್ಟಿ ಮತ್ತು ಸದಾಶಿವ ಹೆಗ್ಡೆ. ಸುಂದರರಾಮ ಹೆಗ್ಡೆ ಅವರ ಪುತ್ರರಾದ ಎನ್‌.ಸುಹಾಸ್ ಹೆಗ್ಡೆ, ಸುದೇಶ್‌ ಹೆಗ್ಡೆ, ಸಂದೇಶ್‌ ಹೆಗ್ಡೆ ಅವರೂ ಮಿತ್ರಮಂಡಳಿಯ ಜತೆಗೆ ಕೈಜೋಡಿಸಿದರು.

ಈ ಮಿತ್ರಮಂಡಳಿಯ ಛಲದಿಂದಾಗಿ ಕುಗ್ರಾಮವಾಗಿದ್ದ ನಂದಳಿಕೆ ಆಧುನಿಕ ಸ್ಪರ್ಶ ಪಡೆಯಿತು. ಜತೆಗೆ ಮುದ್ದಣ ಸ್ಮಾರಕ ಭವನವೂ ತಲೆ ಎತ್ತಿ 1987ರ ಮೇ 16ರಂದು ಲೋಕಾರ್ಪಣೆಗೊಂಡಿತು.

ಕವಿಯಾಗಿ ಮುದ್ದಣ ಈಗಾಗಲೇ ಜನಮಾನಸದಲ್ಲಿ ನೆಲೆಸಿದ್ದಾನೆ. ಆದರೆ ನಂದಳಿಕೆಯ ಕುಡಿಯಾಗಿ ಆತ ಈಗಲೂ ಜೀವಂತ ಇದ್ದಾನೆ ಎಂದಾದರೆ ಅದಕ್ಕೆಲ್ಲ ಕಾರಣ ‘ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿ’ ಮತ್ತು ಅದರ ಸೂತ್ರಧಾರ ನಂದಳಿಕೆ ಬಾಲಚಂದ್ರ ರಾವ್‌. ಅಕಾಲ ಮೃತ್ಯುವಿಗೆ ಮುದ್ದಣ ತುತ್ತಾಗಿರಬಹುದು, ಆದರೆ ಆತ ರಚಿಸಿದ ಕೃತಿಗಳು ಮತ್ತು ಆತನ ಆಶಯಗಳಿಗೆ ನೂರಲ್ಲ, ಸಾವಿರ ವರ್ಷಗಳಾದರೂ ಮುಪ್ಪು ಅಡರಬಾರದು ಎಂಬ ಕಾಳಜಿ ಈ ಮಿತ್ರಮಂಡಳಿಯ ಪ್ರತಿಯೊಂದು ಕ್ರಿಯೆಯಲ್ಲೂ ಗೋಚರ.

ಹೀಗಾಗಿಯೇ ಮುದ್ದಣನ 112ನೇ ಜನ್ಮದಿನ ಸಂದರ್ಭದಲ್ಲಿ ಅಂದರೆ 1982ರ ಜನವರಿ 24ರಂದು ವಿಶೇಷ ಅಂಚೆ ಕವರ್‌ ಅನ್ನು ಬಿಡುಗಡೆಗೊಳಿಸುವಲ್ಲಿ ಮಿತ್ರಮಂಡಳಿ ಸಫಲವಾಯಿತು. 1995ರಲ್ಲಿ ಮುದ್ದಣ ಪ್ರಕಾಶನ ಆರಂಭವಾಯಿತು. ಮುದ್ದಣನ ಕೃತಿಗಳತ್ತ ಮತ್ತೆ ಬೆಳಕು ಚೆಲ್ಲುವ ಮಹತ್ವದ ಕೆಲಸವನ್ನು ಈ ಪ್ರಕಾಶನ ಮಾಡಿತು. ಮುದ್ದಣ ವಿರಚಿತ ಕೃತಿಗಳ ಯಕ್ಷಗಾನದ ಸಿ.ಡಿ.ಗಳನ್ನು ಹೊರತಂದಿತು.

2001ರಲ್ಲಿ ಮುದ್ದಣ ಶತಸ್ಮೃತಿ ಉತ್ಸವ ನಂದಳಿಕೆಯಲ್ಲಿ ನಡೆಯಿತು. 100 ವರ್ಷದ ಹಿಂದೆ ಕ್ಷಯ ರೋಗದಿಂದ 31ರ ಹರೆಯದಲ್ಲೇ ಮರಣ ಹೊಂದಿದ ಮುದ್ದಣನನ್ನು ನೆನೆಯುವ ಕಾರ್ಯಕ್ರಮ ಅದಾಗಿತ್ತು. ಆಗ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರೇ ಸ್ವತಃ ಕಾರ್ಯಕ್ರಮಕ್ಕೆ ಶುಭ ಕೋರಿ ಪತ್ರ ಬರೆದಿದ್ದರು. ಈ ಪತ್ರ ನಂದಳಿಕೆ ಬಾಲಚಂದ್ರ ರಾವ್‌ ಅವರಲ್ಲಿ ಹೊಸ ಹುರುಪನ್ನು ತಂದಿತು.

ಪ್ರಧಾನಿ ಸಂದೇಶ ಹೊತ್ತ ಅಂಚೆ ಪತ್ರಕ್ಕೆ ಅದೆಷ್ಟು ಮಹತ್ವ ಇದೆ, ಈ ಪತ್ರ ರವಾನೆಯಾಗಲು ಕಾರಣವಾದ ಅಂಚೆ ಚೀಟಿಗೂ ಅಷ್ಟೇ ಮಹತ್ವ ಇದೆ. ದೇಶದ ಮಹಾನ್ ನಾಯಕರು, ಸಾಧಕರ ಅಂಚೆ ಚೀಟಿಗಳು ಮುದ್ರಣಗೊಂಡಿವೆ, ಕವಿ ಮುದ್ದಣನೂ ಅವರಿಗೆ ಕಮ್ಮಿ ಇಲ್ಲ. ಮುದ್ದಣನ ಅಂಚೆಚೀಟಿಯೂ ಹೊರಬರುವಂತಾಗಬೇಕು ಎಂಬ ಛಲ ತೊಟ್ಟರು ಬಾಲಚಂದ್ರ ರಾವ್. 16 ವರ್ಷಗಳ ಕಾಲ ನಿರಂತರವಾಗಿ ಅದಕ್ಕಾಗಿ ಓಡಾಡಿದರು. ಐದು ಬಾರಿ ದೆಹಲಿಗೆ ಹೋಗಿ ಬಂದರು.

ಅದೆಷ್ಟು ನಾಯಕರನ್ನು ಬೆನ್ನು ಹತ್ತಿದ್ದರೋ, ಅದೆಷ್ಟು ಪತ್ರ ವ್ಯವಹಾರ ನಡೆಸಿದ್ದರೋ, ಅದೆಲ್ಲದರ ಫಲವಾಗಿ ಇದೀಗ ಮುದ್ದಣನ ಅಂಚೆ ಚೀಟಿ ಮುದ್ರಣಗೊಂಡಿದೆ. ಕೇಂದ್ರ ಸರ್ಕಾರದ ಸಂಪರ್ಕ ಸಚಿವಾಲಯವು ಕವಿ ಮುದ್ದಣ, ನನ್ನಯ ಭಟ್ಟ ಮತ್ತು ದ್ರಾಕ್ಷಾರಾಮಂ ದೇಗುಲದ ಅಂಚೆ ಚೀಟಿಯನ್ನು ಒಟ್ಟಿಗೆ ಹೊರ ತರುತ್ತಿದ್ದು, ಮುದ್ದಣ ದೇಶದೆಲ್ಲೆಡೆ ಮನೆ ಮಾತಾಗುತ್ತಿದ್ದಾನೆ.

ನಂದಳಿಕೆ ಬಾಲಚಂದ್ರ ರಾವ್‌ ಅವರ ಈ ಎಲ್ಲ ಕೆಲಸಗಳಲ್ಲಿ ಬೆನ್ನೆಲುಬಾಗಿ ನಿಂತವರು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಹಿರಿಯ ಸಾಹಿತಿ ಕೋಟ ಶಿವರಾಮ ಕಾರಂತ, ಪ್ರೊ.ಕು.ಶಿ.ಹರಿದಾಸ ಭಟ್ಟ, ಹಾ.ಮಾ.ನಾಯಕ, ಡಾ.ಬಿ.ಎ.ವಿವೇಕ ರೈ, ಸುಂದರರಾಮ ಬಂಗೇರ, ವಿ.ಕೆ.ರಾವ್, ಚಂದ್ರಹಾಸ ಚೌಟ, ಚಂದ್ರಶೇಖರ ರಾವ್, ಸುಧಾಕರ ರಾವ್, ಸುಧಾಕರ ಶೆಟ್ಟಿ, ಮನೋಹರ್, ಉದಯಕುಮಾರ್, ವಸಂತ ಕುಮಾರ್, ಸುರೇಶ್, ಸತೀಶ್‌, ಮನೋಜ್‌, ಪ್ರವೀಣ್. ಡಾ.ನಾ. ಮೊಗಸಾಲೆ, ಡಾ. ಎಂ.ಪ್ರಭಾಕರ ಜೋಷಿ, ಜಯರಾಮ ಕಾರಂತ, ವಿ.ಗ. ನಾಯಕ, ಅಂಬಾತನಯ ಮುದ್ರಾಡಿ, ಜಿ.ಕೆ. ಐತಾಳ್, ಕೆ.ಎಲ್. ಕುಂಡಂತಾಯ, ಡಾ.ಕಬ್ಬಿನಾಲೆ ವಸಂತ ಭಾರಧ್ವಾಜ್, ಡಾ.ಬಿ.ಜನಾರ್ದನ ಭಟ್, ಕೆ.ರಾಮ, ಡಾ.ನಾ. ದಾಮೋದರ ಶೆಟ್ಟಿ. ಪಾರ್ಲ ನಾರಾಯಣ ಭಟ್‌ ಸಹೋದರರು, ಜನಾರ್ದನ ಶಾಸ್ತ್ರಿ ಬೈಪಡಿತ್ತಾಯ, ಪದ್ಮನಾಭ ರಾವ್‌, ಇನ್ನ ರಾಮಮೋಹನ ರಾವ್, ಡಾ.ಎನ್.ಟಿ. ಭಟ್‌, ಮೂಡುಮನೆ ಕುಟುಂಬದ ಸದಸ್ಯರು ಮೊದಲಾದವರು.

ನಂದಳಿಕೆ ಬಾಲಚಂದ್ರ ರಾವ್‌ ಅವರು ಮುದ್ದಣ ಸ್ಮಾರಕ ಮಿತ್ರ ಮಂಡಳಿಯ ಸ್ಥಾಪಕ ಗೌರವ ಅಧ್ಯಕ್ಷರಾಗಿ 31 ವರ್ಷ ಸಾರ್ಥಕ ಸೇವೆ ಸಲ್ಲಿಸಿದವರು.

2014ರಲ್ಲಿ ಸುಂದರರಾಮ ಹೆಗ್ಡೆ ಅವರ ಪುತ್ರ ಸುಹಾಸ್‌ ಹೆಗ್ಡೆ ಅವರು ಕವಿ ಮುದ್ದಣ ಸ್ಮಾರಕ ಮಿತ್ರಮಂಡಳಿ ಮತ್ತು ಮುದ್ದಣ ಸ್ಮಾರಕ ಭವನದ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡಿದ್ದು, ರವಿರಾಜ್‌ ಭಟ್‌ ಕಾರ್ಯದರ್ಶಿಯಾಗಿದ್ದಾರೆ.

ನಂದಳಿಕೆ ಅವರ ಕನಸಿಗೆ ಕೊನೆಯೇ ಇಲ್ಲ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಮುದ್ದಣ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು, ಮುದ್ದಣ ಸಂಚಾರಿ ಗ್ರಂಥಾಲಯ ರಚನೆಯಾಗಬೇಕು, ಮುದ್ದಣ ವಸ್ತುಸಂಗ್ರಹಾಲಯ ನಿರ್ಮಾಣವಾಗಬೇಕು, ನಂದಳಿಕೆಯನ್ನು ಕುಪ್ಪಳಿ ಮಾದರಿಯಲ್ಲಿ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು ಎಂಬ ಗುರಿ ಇಟ್ಟುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಈಗಾಗಲೇ ಓಡಾಟ ಆರಂಭಿಸಿದ್ದಾರೆ.

ನಂದಳಿಕೆಯ ನಂದಾದೀಪಗಳು
ನಂದಳಿಕೆಯಲ್ಲಿ ಹುಟ್ಟಿದ ಐವರು ದೇಶ, ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಅವರೆಂದರೆ ಕವಿ ಮುದ್ದಣ, ಸಂಗೀತ ವಿದ್ವಾನ್‌ ಬಿಡಾರಂ ಕೃಷ್ಣಪ್ಪ, ಇತಿಹಾಸ ಸಂಶೋಧಕ ಎನ್‌.ಎ.ಶೀನಪ್ಪ ಹೆಗ್ಡೆ, ನ್ಯಾಯಮೂರ್ತಿ ಎನ್‌.ಡಿ.ಕೃಷ್ಣರಾವ್‌ ಹಾಗೂ ಸಾಹಿತಿ ನಂದಳಿಕೆ ಮೂಡುಮನೆ ವಾಸುದೇವ ರಾವ್‌. ಇವರನ್ನು ‘ನಂದಳಿಕೆಯ ನಂದಾದೀಪ’ ಎಂದು ಕರೆಯಲಾಗುತ್ತಿದೆ. ಕವಿ ಮುದ್ದಣನನ್ನೇ ಉಸಿರಾಗಿ ಮಾಡಿಕೊಂಡಿರುವ ಅಪ್ರತಿಮ ಸಂಘಟಕ ಬಾಲಚಂದ್ರ ರಾವ್‌ ಅವರೂ ಈ ನಂದಾದೀಪದ ಸಾಲಿನಲ್ಲಿ ಈಗ ಮತ್ತೊಂದು ಜ್ಯೋತಿಯಾಗಿ ಕಂಗೊಳಿಸಿದ್ದಾರೆ.

ಮುದ್ದಣನ ಕೃತಿಗಳು
*ರತ್ನಾವತೀ ಕಲ್ಯಾಣ, ಕುಮಾರ ವಿಜಯ- ಯಕ್ಷಗಾನ ಪ್ರಸಂಗ
*ಶ್ರೀರಾಮ ಪಟ್ಟಾಭಿಷೇಕ- ವಾರ್ಧಕ ಷಟ್ಪದಿ ಕಾವ್ಯ
*ಅದ್ಭುತ ರಾಮಾಯಣ, ಶ್ರೀ ರಾಮಾಶ್ವಮೇಧ- ಕನ್ನಡ ಗದ್ಯಕಾವ್ಯಗಳು
*ಜೋಜೋ ಎಂಬ ಹಾಡು (ಜೋಗುಳ ಶಬ್ದ ನಿಷ್ಪತ್ತಿಯ ಕುರಿತು ಪ್ರಬಂಧ)
*ಭಗವದ್ಗೀತೆ (ಕನ್ನಡದಲ್ಲಿ ಭಾಮಿನೀ ಷಟ್ಪದಿ– ಲಭ್ಯವಿಲ್ಲ)
*ಗೋದಾವರಿ (ಕಾದಂಬರಿ– ಲಭ್ಯವಿಲ್ಲ)
*ಕರ್ನಾಟಕ ರಾಮಾಯಣ (ವಾರ್ಧಕ ಷಟ್ಪದಿ–ಲಭ್ಯವಿಲ್ಲ)
*ಕಾಮಶಾಸ್ತ್ರ (ಲಭ್ಯವಿಲ್ಲ)
*ಕುಶ ವಿಜಯ (ಲಭ್ಯ ಇಲ್ಲ)
*ಕನ್ನಡ ವ್ಯಾಕರಣ (ಕೆಲವು ಟಿಪ್ಪಣಿಗಳು ಮಾತ್ರ ಸಿಕ್ಕಿವೆ)
*17 ಸಂಪ್ರದಾಯ ಹಾಡುಗಳನ್ನು ಮುದ್ದಣ ರಚಿಸಿದ್ದಾನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT