ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿನಿಸುಗಳ ಬೀದಿಯಲ್ಲಿ ಕಣ್ಮರೆಯಾಗುತ್ತಿದೆ ಕನ್ನಡತನ

Last Updated 31 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮುಸ್ಸಂಜೆಯಾಗುತ್ತಲೇ ಗ್ರಾಹಕರಿಂದ ಕಿಕ್ಕಿರಿದು ತುಂಬಿಕೊಳ್ಳುವ ವಿಶ್ವೇಶ್ವರಪುರದ ತಿನಿಸುಗಳ ಬೀದಿಯಲ್ಲಿ (ಫುಡ್‌ ಸ್ಟ್ರೀಡ್‌) ಕನ್ನಡದ ವಾತಾವರಣ ನಿಧಾನವಾಗಿ ಕಣ್ಮರೆಯಾಗುತ್ತಿದೆ.

ಬಗೆ ಬಗೆಯ ದೋಸೆ, ಕಡುಬು, ಪಡ್ಡು, ಇಡ್ಲಿ, ವಡೆ, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ, ಮೊಸರನ್ನ, ಪುಳಿಯೋಗರೆ, ಚಿತ್ರಾನ್ನ, ಪಲಾವ್‌ನಂತಹ ತಿನಿಸುಗಳು, ಹೋಳಿಗೆ, ಪೇಣಿ, ಕಜ್ಜಾಯದಂತಹ ಸಿಹಿತಿಂಡಿಗಳು ಹಾಗೂ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟು, ಬಜ್ಜಿಗಳಂತಹ ತಿಂಡಿಗಳ ಪರಿಮಳದಿಂದ ತುಂಬಿರುತ್ತಿದ್ದ ಈ ಬೀದಿಯಲ್ಲೀಗ ಆಲೂ ಟ್ವಿಸ್ಟ್‌, ನಮೂನೆ ನಮೂನೆಯ ಚಾಟ್ಸ್‌, ಮಸಾಲ, ಮಂಚೂರಿಗಳ ಘಾಟು ಆವರಿಸಿಕೊಳ್ಳುತ್ತಿದೆ. ಬಣ್ಣ ಬಣ್ಣದ ಕುಲ್ಫಿಗಳು ರಾರಾಜಿಸುತ್ತಿವೆ.

ಕೆಲ ವರ್ಷಗಳ ಹಿಂದೆ ಆರ್ಯವೈಶ್ಯ ಜನಾಂಗದವರು ನಡೆಸುತ್ತಿದ್ದ ಆಹಾರ ಮಳಿಗೆಗಳು ಈ ಬೀದಿಯ ಉದ್ದಕ್ಕೂ ಕಂಡು ಬರುತ್ತಿದ್ದವು. ಈಗ ಅವು ಬೆರಳೆಣಿಕೆಯಲ್ಲಿವೆ.

ಈ ಬೀದಿಯಲ್ಲಿ ಮಧ್ಯರಾತ್ರಿವರೆಗೂ ಕೇಳಿ ಬರುತ್ತಿದ್ದ ಕನ್ನಡದ ಕಲರವ ಈಗ ಕಡಿಮೆ ಆಗಿದೆ. ‘ಅಣ್ಣ–ತಮ್ಮ’ಗಳ ಬದಲು ಇಲ್ಲೀಗ ಹಿಂದಿಯ ‘ಭಾಯಿ’ಗಳದೇ ಕಾರುಬಾರು. ಈ ಬೀದಿಯಲ್ಲಿ ಖಾದ್ಯಗಳನ್ನು ಬಿಕರಿ ಮಾಡುವವರಲ್ಲಿ ಕನ್ನಡದಲ್ಲಿ ಮಾತನಾಡಿದರೆ ಹಿಂದಿಯಲ್ಲಿ ಪ್ರತಿಕ್ರಿಯೆ ಸಿಗುತ್ತಿದೆ. ಗ್ರಾಹಕರೂ ಅವರ ಭಾಷೆಯಲ್ಲೇ ಮಾತನಾಡುತ್ತಾ ‘ಚಾಟ್‌’ಗಳನ್ನು ಮೆಲ್ಲಲು ಶುರುಹಚ್ಚಿಕೊಂಡಿದ್ದಾರೆ.

‘ಕಾಸ್ಮೋಪಾಲಿಟನ್‌’ ಸಂಸ್ಕೃತಿಯು ನಗರದಲ್ಲಿ ಹೇಗೆ ಕನ್ನಡತನವನ್ನು ಕಬಳಿಸುತ್ತಿದೆ ಎಂಬುದಕ್ಕೆ ರೂಪಕದಂತಿದೆ ಈ ನೆಲದ ಸ್ವಾದಿಷ್ಟ ಆಹಾರಗಳಿಗೆ ಹೆಸರಾಗಿದ್ದ ಈ ಬೀದಿಯ ರೂಪಾಂತರ.

‘ನಮ್ಮ ಮಾಲೀಕರು ಮೂರು ವರ್ಷಗಳ ಹಿಂದೆ ಇಲ್ಲಿ ವ್ಯಾಪಾರ ಆರಂಭಿಸಿದರು. ನಮ್ಮಲ್ಲಿ ಉತ್ತರ ಭಾರತದ ಬಗೆ ಬಗೆಯ ಚಾಟ್ಸ್‌ಗಳು, ಕುಲ್ಫಿಗಳು, ಐಸ್‌ ಕ್ರೀಂಗಳನ್ನು ನಾವು ಮಾರಾಟ ಮಾಡುತ್ತೇವೆ. ಭರ್ಜರಿ ವ್ಯಾಪಾರವಾಗುತ್ತಿದೆ. ಚಾಟ್ಸ್‌ ಮಳಿಗೆಯಿಂದಲೇ ದಿನವೊಂದಕ್ಕೆ ಏನಿಲ್ಲವೆಂದರೂ ₹ 20 ಸಾವಿರದಷ್ಟು ಆದಾಯ ಬರುತ್ತದೆ’ ಎನ್ನುತ್ತಾರೆ ಚಾಟ್ಸ್‌ ಮಳಿಗೆಯೊಂದರ ಸಿಬ್ಬಂದಿ ಬಿಹಾರದ ಸುನಿಲ್‌.

‘ನಮ್ಮವರು ತಯಾರಿಸುವ ಚಾಟ್ಸ್‌ಗಳನ್ನು ಇಲ್ಲಿನ ಜನ ಇಷ್ಟಪಡುತ್ತಾರೆ. ಇಲ್ಲಿನವರು ಎಂದೂ ನಮ್ಮನ್ನು ಹೊರಗಿನವರಂತೆ ನಡೆಸಿಕೊಂಡಿಲ್ಲ. ನಮ್ಮ ಚಾಟ್ಸ್‌ ಅಂಗಡಿಗಳಲ್ಲಿ 20–30 ಮಂದಿ ಕೆಲಸಕ್ಕಿದ್ದಾರೆ. ಹೆಚ್ಚಿನವರು ಉತ್ತರ ಭಾರತದವರು’ ಎಂದು ಅವರು ಹಿಂದಿಯಲ್ಲಿ ತಿಳಿಸಿದರು.

‘ಈ ಬೀದಿಯಲ್ಲಿ ಏನಿಲ್ಲವೆಂದರೂ 100ಕ್ಕೂ ಅಧಿಕ ಆಹಾರ ಮಳಿಗೆಗಳಿವೆ. 15 ವರ್ಷಗಳ ಹಿಂದೆ ಇಲ್ಲಿನ ವಾತಾವರಣವೇ ಬೇರೆ ಇತ್ತು. ದೋಸೆ, ತಟ್ಟೆ ಇಡ್ಲಿ, ಚಿತ್ರಾನ್ನ ಮಾರುವವರ ಸಂಖ್ಯೆ ಹೆಚ್ಚು ಇತ್ತು. ನಾಲ್ಕೈದು ವರ್ಷಗಳಿಂದೀಚೆಗೆ ದೋಸೆ, ಇಡ್ಲಿಗಳ ಜಾಗವನ್ನು ಉತ್ತರ ಭಾರತದ ತಿನಿಸುಗಳು ಆಕ್ರಮಿಸಿಕೊಳ್ಳುತ್ತಿವೆ. ಜನರ ಅಭಿರುಚಿಗಳೂ ಬದಲಾಗುತ್ತಿವೆ’ ಎನ್ನುತ್ತಾರೆ ಇಲ್ಲಿನ ಮಳಿಗೆಯೊಂದರಲ್ಲಿ ದೋಸೆ ಹಾಕುವ ಸಂಕ್ರಾತ್‌. ಅವರು 17 ವರ್ಷದಿಂದ ಈ ಕಾಯಕದಲ್ಲಿ ತೊಡಗಿದ್ದಾರೆ.

‘ನಾನು 10 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಉತ್ತರ ಭಾರತದವರ ಮಳಿಗೆಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಜಯನಗರದ ಭಾವನಾ ಅಭಿಪ್ರಾಯಪಟ್ಟರು.

‘ನಾವು 25 ವರ್ಷಗಳಿಂದ ಇಲ್ಲಿನ ಕಾಯಂ ಗಿರಾಕಿಗಳು. ವಾರದಲ್ಲಿ ಒಮ್ಮೆಯಾದರೂ ಇಲ್ಲಿ ಭೇಟಿಯಾಗುತ್ತೇವೆ. ಈ ಜಾಗ ನಮ್ಮನ್ನು ಮತ್ತಷ್ಟು ಆಪ್ತರನ್ನಾಗಿಸಿದೆ’ ಎನ್ನುತ್ತಾರೆ ವಿಜಯನಗರದ ಲತಾ ದೀಕ್ಷಿತ್‌, ಗಿರಿನಗರದ ಅನುರಾಧಾ ಕಾಮತ್‌ ಹಾಗೂ ಕ್ರಾಂತಿ ಕಾಲನಿಯ ನಳಿನಾ.

ನಳಿನಾ ಅವರಿಗೆ ಇಲ್ಲಿನ ಕೋಡುಬಳೆ ಇಷ್ಟ. ‘ನಾನು ಇಲ್ಲಿನ ಕಡುಬು ಮತ್ತು ಒತ್ತುಶ್ಯಾವಿಗೆಯ ಅಭಿಮಾನಿ’ ಎಂದು ಹೇಳಿಕೊಳ್ಳುತ್ತಾರೆ ಲತಾ.

‘ದೋಸೆಗಳ ರುಚಿ ಸವಿಯಲೆಂದೇ ಇಲ್ಲಿಗೆ ಬರುತ್ತೇನೆ’ ಎನ್ನುತ್ತಾರೆ ಅನುರಾಧ.

‘ಈ ಬೀದಿ ಬದಲಾಗುತ್ತಿರುವುದನ್ನು ನಾವೂ ನೋಡುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಚಾಟ್ಸ್‌, ಚೈನೀಸ್‌ ತಿನಿಸುಗಳ ಮಳಿಗೆಗಳು ಹೆಚ್ಚಾಗುತ್ತಿವೆ. ಆ ತಿಂಡಿಗಳಲ್ಲಿ ಎಣ್ಣೆ ಹೆಚ್ಚು ಬಳಸುತ್ತಾರೆ. ಇಂದಿನ ಯುವಕ–ಯುವತಿಯರಿಗೆ ಅದು ಹೆಚ್ಚು ರುಚಿಸುತ್ತದೆ. ಆದರೆ, ನಮ್ಮಂಥ ಅನೇಕರಿಗೆ ಈಗಲೂ ಇಲ್ಲಿನ ದೋಸೆ, ಇಡ್ಲಿಯಂತಹ ಸಾಂಪ್ರದಾಯಿಕ ತಿನಿಸುಗಳೇ ಇಷ್ಟ. ಇಂತಹ ತಿನಿಸುಗಳು ಸಿಗುವವರೆಗೂ ನಾವು ಇಲ್ಲಿಗೆ ಬರುವುದನ್ನು ನಿಲ್ಲಿಸುವುದಿಲ್ಲ’ ಎಂದು ಈ ಗೆಳತಿಯರು ತಿಳಿಸಿದರು.

ಐದು ದಶಕಗಳ ಇತಿಹಾಸ
‘ಈ ಬೀದಿಯಲ್ಲಿ ಮೊದಲ ಆಹಾರದ ಮಳಿಗೆ ಆರಂಭಿಸಿದ್ದು ನಾನು. 1962ರಲ್ಲಿ ನಾನಿಲ್ಲಿ ವ್ಯಾಪಾರ ಶುರು ಮಾಡಿದಾಗ ಬೇರಾವ ಆಹಾರ ಮಳಿಗೆಯೂ ಇಲ್ಲಿರಲಿಲ್ಲ. ಆಗ ಇದಕ್ಕೆ ಫುಡ್‌ ಸ್ಟ್ರೀಟ್‌ ಎಂಬ ಹೆಸರೂ ಇರಲಿಲ್ಲ. ಕ್ರಮೇಣ ಒಂದೊಂದೇ ಮಳಿಗೆಗಳು ಆರಂಭವಾದವು’ ಎಂದು ಮೆಲುಕು ಹಾಕುತ್ತಾರೆ ಟಿ.ಮುರುಗನ್‌.

‘ನಾನು ಅಕ್ಷರ ಕಲಿತವನಲ್ಲ. ತಿನಿಸುಗಳನ್ನು ತಯಾರಿಸಿ ಮಾರುವುದನ್ನು ಬಿಟ್ಟು ಬೇರೆ ಉದ್ಯೋಗ ನನಗೆ ತಿಳಿದಿಲ್ಲ. ಹೊಟ್ಟೆಪಾಡಿಗಾಗಿ ಈ ವೃತ್ತಿಗೆ ಬಂದೆ. ಹೆಚ್ಚು ಲಾಭದ ನಿರೀಕ್ಷೆ ಇಟ್ಟುಕೊಳ್ಳದೆ ವ್ಯಾಪಾರ ಮಾಡುತ್ತಿದ್ದೇನೆ. ನನ್ನಂತೆಯೇ ಅನೇಕರು ಇಲ್ಲಿ ತಿನಿಸುಗಳನ್ನು ಮಾರಾಟ ಆರಂಭಿಸಿದರು. ಕ್ರಮೇಣ ಈ ಬೀದಿಯು ಬಗೆ ಬಗೆಯ ತಿನಿಸುಗಳಿಗಾಗಿಯೇ ಹೆಸರಾಯಿತು’ ಎಂದು ಅವರು ಫುಡ್‌ಸ್ಟ್ರೀಟ್‌ ಬೆಳೆದುಬಂದ ಬಗೆಯನ್ನು ವಿವರಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ಉತ್ತರ ಭಾರತದವರ ರಂಗು ರಂಗಿನ ತಿನಿಸುಗಳ ಮಾರಾಟ ಆರಂಭವಾಗಿದೆ. ಅದರಿಂದಾಗಿ ನಮ್ಮ ವ್ಯಾಪಾರ ಕಡಿಮೆ ಆಗಿದೆ ಎಂದೇನೂ ಅನಿಸಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಂಸಾಹಾರವಿಲ್ಲ: ‘ಈ ಬೀದಿಯಲ್ಲಿ ಹುಡುಕಿದರೂ ನಿಮಗೆ ಮಾಂಸಾಹಾರಿ ತಿನಿಸುಗಳನ್ನು ಮಾರುವ ಒಂದು ಮಳಿಗೆಯೂ ಸಿಗುವುದಿಲ್ಲ. ರಾತ್ರಿ 11.30ರವರೆಗೂ ಇಲ್ಲಿ ಆಹಾರ ಸಿಗುತ್ತದೆ’ ಎಂದು ಅವರು ತಿಳಿಸಿದರು.

‘10 ಪೈಸೆಗೆ ಇಡ್ಲಿ, 15 ಪೈಸೆಗೆ ಮಸಾಲೆ ದೋಸೆ’
’ನಾನು ಆರಂಭದಲ್ಲಿ ಇಲ್ಲಿ 10 ಪೈಸೆಗೆ ಇಡ್ಲಿ, 15 ಪೈಸೆಗೆ ದೋಸೆ ಮಾರಿದ್ದೇನೆ’ ಎಂದು ಸ್ಮರಿಸುತ್ತಾರೆ ಮುರುಗನ್‌.

ಈಗ ಒಂದು ಪ್ಲೇಟ್‌ ಇಡ್ಲಿಗೆ ₹ 30ರಿಂದ ₹ 40 ಬೆಲೆ ಇದೆ. ಮಸಾಲೆ ದೋಸೆ ₹ 45ರಿಂದ ₹ 60ಕ್ಕೆ ಮಾರಾಟವಾಗುತ್ತದೆ. ಪಾವ್‌ ಬಾಜಿಗೆ ₹ 60 ಬೆಲೆ ಇದೆ. ಇತರ ಚಾಟ್ಸ್‌ಗಳಿಗೆ ₹ 40ಕ್ಕೂ ಹೆಚ್ಚು ದರ ಇದೆ. ಚಿತ್ರಾನ್ನ, ಪಲಾವ್‌ಗಳಿಗೆ ₹ 30ರಿಂದ ₹50 ದರ ಇದೆ.

ವಾರಾಂತ್ಯದಲ್ಲಿ ಜನಜಂಗುಳಿ
‘ಶನಿವಾರ, ಭಾನುವಾರ ಹಾಗೂ ರಜಾದಿನಗಳಲ್ಲಿ ಇಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನಜಂಗುಳಿ ಇರುತ್ತದೆ. ಬೇರೆ ದಿನಗಳಲ್ಲಿ ವ್ಯಾಪಾರ ಕಡಿಮೆ’ ಎಂದು ಚಿತ್ರಾನ್ನ ಹಾಗೂ ಬಜ್ಜಿ ಮಾರುವ ವೇಲು ತಿಳಿಸಿದರು.

‘ಮಂಗಳವಾರ ಹಾಗೂ ಶುಕ್ರವಾರ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ’ ಎಂದು ಮುರುಗನ್‌ ಹೇಳಿದರು.

ಟಿ.ಮುರುಗನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT