ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ ಬಯಸಿದರೆ ಸ್ಪರ್ಧೆ: ನವಲಿಹಿರೇಮಠ

Last Updated 7 ನವೆಂಬರ್ 2017, 5:14 IST
ಅಕ್ಷರ ಗಾತ್ರ

ಇಳಕಲ್‌: ‘ಜನರೇ ನನಗೆ ಹೈಕಮಾಂಡ್‌. ನಾನು ರಾಜಕೀಯ ಪ್ರವೇಶಿಸಬೇಕು ಎಂದು ಅವರು ಬಯಸಿದರೆ ರಾಷ್ಟ್ರೀಯ ಪಕ್ಷಗಳೇ ಮನೆಗೆ ಬಂದು ಟಿಕೆಟ್‌ ನೀಡಲಿವೆ’ ಎಂದು ಎಸ್ಆರ್‌ಎನ್‌ಇ ಫೌಂಡೇಷನ್‌ ಅಧ್ಯಕ್ಷ ಎಸ್.ಆರ್‌. ನವಲಿಹಿರೇಮಠ ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಆಪ್ತರು. ಆದರೆ ನಾನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅವರೊಂದಿಗೆ ಚರ್ಚಿಸಿಲ್ಲ. ಹಾಗೆಯೇ ಬಿಜೆಪಿ ಟಿಕೆಟ್‌ ಬಯಸಿ ಯಾವ ಮುಖಂಡರನ್ನೂ ಸಂಪರ್ಕಿಸಿಲ್ಲ' ಎಂದರು.

ಸಮೀಪದ ಗುಗ್ಗಲಮರಿ ಗ್ರಾಮದಲ್ಲಿ ಎಸ್ಆರ್‌ಎನ್‌ಇ ಫೌಂಡೇಷನ್‌ ವತಿಯಿಂದ ಆಯೋಜಿಸಿದ್ದ ಬಲಕುಂದಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಸದಸ್ಯರ ಸಮಾವೇಶ ಹಾಗೂ ರಾಜ್ಯೋತ್ಸವ ನಿಮಿತ್ತ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚುನಾವಣೆಯಲ್ಲಿ ಸ್ಪರ್ಧೆಗಾಗಿ ನಾನು ಫೌಂಡೇಷನ್‌ ಆರಂಭಿಸಿಲ್ಲ. 20 ವರ್ಷಗಳಿಂದ ಫೌಂಡೇಷನ್‌ ಮೂಲಕ ಬಡವರಿಗೆ ಶಿಕ್ಷಣ ಹಾಗೂ ಆರೋಗ್ಯ ಸೇವೆ ನೀಡುತ್ತಿದ್ದೇನೆ. ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಯಾರಿಗೂ ಕುಡಿಯಲು, ತಿನ್ನಲು ನಾನು ಹಣ ಕೊಟ್ಟಿಲ್ಲ. ಬಡವರಿಗೆ ಶಿಕ್ಷಣಕ್ಕಾಗಿ, ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುವುದಕ್ಕಾಗಿ, ಯುವಕರ ಆಟೋಟಗಳಿಗೆ ಹಾಗೂ ದೇವಸ್ಥಾನಗಳ ನಿರ್ಮಾಣಕ್ಕೆ ಸಹಾಯ ಮಾಡುತ್ತಿದ್ದೇನೆ’ ಎಂದರು.

‘ಭಗವಂತ ಕೊಟ್ಟಿದ್ದು ಬಚ್ಚಿಡಲು ಅಲ್ಲ, ಇನ್ನೊಬ್ಬರಿಗೆ ನೆರವಾಗುವುದಕ್ಕೆ’ ಎಂದು ಟೀಕೆ ಮಾಡುವವರಿಗೆ ತಿರುಗೇಟು ನೀಡಿದ ಅವರು, ‘ಹಳ್ಳಿಗಳಲ್ಲಿ ರಾಜಕೀಯ ವೈಷಮ್ಯ ಹೆಚ್ಚುತ್ತಿದೆ. ಬೇವಿನಕಟ್ಟಿಗೆ ಕುಳಿತು ಮೋದಿ, ರಾಹುಲ್‌ಗಾಂಧಿ ಹಾಗೆ, ಹೀಗೆ ಅಂತ ಹರಟೆ ಹೊಡೆಯುವ ಬದಲು ಮಕ್ಕಳ ಬಗ್ಗೆ ಕಾಳಜಿ ವಹಿಸಿ. ತಾಯಂದಿರ ಪರಿಶ್ರಮದಿಂದ ಮನೆ ನಡೆದಿವೆ. ಮೊದಲು ಜನರು ಬುದ್ಧಿವಂತರಾಗಬೇಕು. ಜಾತಿ ಬಗ್ಗೆ ಕುರುಡು ಅಭಿಮಾನ ಬಿಡಬೇಕು’ ಎಂದರು.

ಅತಿಥಿಯಾಗಿದ್ದ ಚನ್ನಪ್ಪಗೌಡ ನಾಡಗೌಡ, ಬೆಂಗಳೂರಿನ ನಿಖಿತ್‌ರಾಜ್‌ ಮಾತನಾಡಿದರು. ಉದ್ಯಮಿ ಕಾಳಪ್ಪ ಬಂಡಿ ಅಧ್ಯಕ್ಷತೆ ವಹಿಸಿದ್ದರು. ಫೌಂಡೇಷನ್‌ನ ನಿರ್ದೇಶಕರಾದ ಎಲ್‌.ಎಂ. ಪಾಟೀಲ, ದುರುಗಪ್ಪ ಬಂಡಿ, ಸಣ್ಣದುರುಗಪ್ಪ ಬಂಡಿ, ಸುಮಿತ್ರಾಬಾಯಿ ರಜಪೂತ, ಜಾಕೀರ್‌ಹುಸೇನ ತಾಳಿಕೋಟಿ, ಮುತ್ತಣ್ಣ ಹಂಡಿ, ಸಿ.ಬಿ. ಸಜ್ಜನ, ಸಂಗನಬಸಪ್ಪ ಗದ್ದಿ, ಡಾ.ಎನ್‌.ಆರ್‌.ವನಕಿ, ಅನುಸೂಯಾ ಹೆಸರೂರ, ವಿಜಯಮಹಾಂತೇಶ ಗದ್ದನಕೇರಿ ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ವಿವಿಧ ಕಿರುತೆರೆಯ ನಟ, ನಟಿಯರು ಹಾಗೂ ಗಾಯಕರಿಂದ ರಸಮಂಜರಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT