ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರೋಟಿನಲ್ಲಿ ಅಧ್ಯಕ್ಷರ ಮೆರವಣಿಗೆ

ಸಮ್ಮೇಳನದಲ್ಲಿ ಸಾಹಿತಿ, ಕವಿಗಳ ವೇಷ ಧರಿಸಲಿರುವ ಎರಡು ಸಾವಿರ ವಿದ್ಯಾರ್ಥಿಗಳು!
Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನಲ್ಲಿ ನ.24ರಿಂದ ಮೂರು ದಿನ ನಡೆಯಲಿರುವ ಅಖಿಲ ಭಾರತ 83ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಅವರನ್ನು ಮಲ್ಲಿಗೆ ಹೂವಿನಿಂದ ಅಲಂಕರಿಸಿದ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿಯಿಂದ ಹೊರಡುವ ಮೆರವಣಿಗೆಯಲ್ಲಿ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯರಿಗೂ ವಿಶೇಷವಾಗಿ ಸಿಂಗರಿಸಿದ ಸಾರೋಟುಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗಿದೆ ಎಂದು ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.

ಮೆರವಣಿಗೆಯಲ್ಲಿ 5,000 ವಿದ್ಯಾರ್ಥಿಗಳು ‍ಪಾಲ್ಗೊಳ್ಳಲಿದ್ದಾರೆ. ಇವರಲ್ಲಿ 2,000  ವಿದ್ಯಾರ್ಥಿಗಳು ಸಾಹಿತಿಗಳು ಮತ್ತು ಕವಿಗಳ ವೇಷ ಧರಿಸಿ ಭಾಗವಹಿಸಲಿದ್ದಾರೆ. ಸಾಂಪ್ರದಾಯಿಕ ಪೊಲೀಸ್ ಬ್ಯಾಂಡ್, ಕುದುರೆಗಳು ಇರಲಿವೆ ಎಂದೂ ಹೇಳಿದರು.

‘ಮಹಾರಾಜ ಕಾಲೇಜು ಮೈದಾನದಲ್ಲಿ ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಸಮಾರೋಪ ಭಾಷಣ ಮಾಡುವರು’ ಎಂದು ಅವರು ಮಾಹಿತಿ ನೀಡಿದರು.

‘ಸಾಹಿತಿ ಕೆ.ಎಸ್. ನಿಸಾರ್ ಅಹಮದ್, ಗಿರಿಶ್ ಕಾರ್ನಾಡ, ಚಂದ್ರಶೇಖರ ಕಂಬಾರ ಅವರಂಥ 50 ಹಿರಿಯ ಸಾಹಿತಿಗಳು ಮತ್ತು ಹೋರಾಟಗಾರರನ್ನು ವಿಶೇಷವಾಗಿ ಆಹ್ವಾನಿಸಲಾಗುತ್ತಿದೆ’ ಎಂದು ತಿಳಿಸಿದರು.

ಜರ್ಮನ್ ತಂತ್ರಜ್ಞಾನದ ಪೆಂಡಾಲ್: ಸಮ್ಮೇಳನದ ಎಲ್ಲಾ ಪೆಂಡಾಲ್‌ಗಳನ್ನು ಮಳೆ ಬಂದರೆ ಒದ್ದೆಯಾಗದಂತೆ ಜರ್ಮನ್ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುತ್ತಿದೆ. ಮುಖ್ಯ ಸಭಾಂಗಣದಲ್ಲಿ 25,000 ಜನ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ವೇದಿಕೆಯಲ್ಲೂ 100 ಗಣ್ಯರು ಕುಳಿತುಕೊಳ್ಳುವ ಅವಕಾಶ ಇರಲಿದೆ. 10ರಿಂದ 12 ಎಲ್‌ಇಡಿ ಪರದೆಗಳನ್ನೂ ಅಳವಡಿಸಲಾಗುವುದು ಎಂದು ಕಸಾಪ ಮೈಸೂರು ಜಿಲ್ಲಾಧ್ಯಕ್ಷ ವೈ.ಡಿ. ರಾಜಣ್ಣ ತಿಳಿಸಿದರು.

ವೇದಿಕೆ ಪಕ್ಕದಲ್ಲಿ 500 ಪುಸ್ತಕ ಮಳಿಗೆ, 100 ವಾಣಿಜ್ಯ ಮಳಿಗೆ, ಚಿತ್ರಕಲೆ ಪ್ರದರ್ಶನಕ್ಕೂ  50 ಮಳಿಗೆ ಮೀಸಲಿಡಲಾಗುವುದು. ವೇದಿಕೆ ಒಂದು ಬದಿಯಲ್ಲಿ ಸುಸಜ್ಜಿತ ಮಾಧ್ಯಮ ಕೇಂದ್ರ ತೆರೆಯಲಾಗುವುದು ಎಂದು ಹೇಳಿದರು.

ಗಣ್ಯರಿಗೆ, ಸಮ್ಮೇಳನದ ಪ್ರತಿನಿಧಿಗಳಿಗೆ ಬೇರೆ ಕಡೆ ಊಟದ ವ್ಯವಸ್ಥೆ ಇದೆ. ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಇರುವ ಕಡೆ 180 ಕೌಂಟರ್ ತೆರೆಯಲಾಗುತ್ತಿದ್ದು, ಏಕಕಾಲದಲ್ಲಿ 30,000 ಜನ ಊಟ ಮಾಡಲು ಅವಕಾಶವಾಗಲಿದೆ ಎಂದರು.

ಮುಖ್ಯ ವೇದಿಕೆ, ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನ, ಕಲಾಮಂದಿರ, ಚಿಕ್ಕಗಡಿಯಾರ ವೃತ್ತ, ಪುರಭವನ ಮತ್ತು ಸಾಹಿತ್ಯ ಭವನದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದೂ ಅವರು ವಿವರಿಸಿದರು.

ಸಮ್ಮೇಳನದಲ್ಲಿ ನೆನಪಿಗಾಗಿ ‘ವಿಕಾಸ ಕರ್ನಾಟಕ ಸಂಪುಟ’, ‘ಮೈಸೂರು ನುಡಿ ಮಲ್ಲಿಗೆ’ ಮತ್ತು ‘ಸಾಹಿತ್ಯ ಸಾಂಗತ್ಯ’ ಎಂಬ ಮೂರು ಪುಸ್ತಕಗಳನ್ನು ಹೊರ ತರಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

***
ಎರಡು ಸಮಾನಾಂತರ ವೇದಿಕೆ

ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನ ಮತ್ತು ಕಲಾಮಂದಿರ ಸಮಾನಾಂತರ ವೇದಿಕೆಗಳನ್ನು ನಿರ್ಮಿಸಲಾಗುವುದು. ಮುಖ್ಯ ವೇದಿಕೆ ಜೊತೆಗೆ ಸಮಾನಾಂತರ ವೇದಿಕೆಗಳಲ್ಲೂ ಕವಿಗೋಷ್ಠಿಗಳು ನಡೆಯಲಿವೆ. ಮುಖ್ಯ ವೇದಿಕೆಯಲ್ಲಿ 24 ಕವಿಗಳು, ಸಮಾನಾಂತರ ವೇದಿಕೆ–1ರಲ್ಲಿ 42 ಮತ್ತು ಸಮಾನಾಂತರ ವೇದಿಕೆ–2ರಲ್ಲಿ 48 ಕವಿಗಳು ಭಾಗವಹಿಸಲಿದ್ದಾರೆ ಎಂದೂ  ರಾಜಣ್ಣ ಮಾಹಿತಿ ನೀಡಿದರು.

***
ಗೋಷ್ಠಿಗಳ ವಿವರ

ಮುಖ್ಯ ವೇದಿಕೆ: ಶಿಕ್ಷಣ ಕ್ಷೇತ್ರದ ವರ್ತಮಾನದ ಸವಾಲುಗಳು, ದಲಿತ ಲೋಕ ದೃಷ್ಟಿ, ಮಾಧ್ಯಮದ ಮುಂದಿರುವ ಸವಾಲುಗಳು, ಮಹಿಳೆ–ಹೊಸಲೋಕ ಮೀಮಾಂಸೆ, ಕರ್ನಾಟಕ ಕೃಷಿ–ಸಂಕ್ರಮಣ ಸ್ಥಿತಿ, ಕನ್ನಡ ಸಂಶೋಧನೆ ಮತ್ತು ವಿಮರ್ಶೆ, ಸಾಮಾಜಿಕ ನ್ಯಾಯ–ಕನ್ನಡ ಪರಂಪರೆ, ಸಮಕಾಲೀನ ಸಂದರ್ಭ– ಬಹುತ್ವದ ಸವಾಲುಗಳು, ಕವಿಗೋಷ್ಠಿ, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ.

ಸಮಾನಾಂತರ ವೇದಿಕೆ–1: ಆಧುನಿಕ ಕರ್ನಾಟಕ ನಿರ್ಮಾಣ– ಮೈಸೂರು ರಾಜರ ಕೊಡುಗೆ, ಕರ್ನಾಟಕ ಏಕೀಕರಣ, ಅಲಕ್ಷಿತ ಜನಸಮುದಾಯಗಳು, ಕರ್ನಾಟಕ ನೀರಾವರಿ, ಯುವ ಗೋಷ್ಠಿ–ನನ್ನ ಹಾಡು ನನ್ನದು, ಕವಿಗೋಷ್ಠಿ–2, ಜನಪರ ಚಳವಳಿಗಳು, ಕನ್ನಡ ತಂತ್ರಜ್ಞಾನ, ವಿಜ್ಞಾನ ತಂತ್ರಜ್ಞಾನ–ಕನ್ನಡದ ಬಳಕೆ.

ಸಮಾನಾಂತ ವೇದಿಕೆ–2: ಮಕ್ಕಳ ಸಾಹಿತ್ಯ ಗೋಷ್ಠಿ, ಕವಿಗೋಷ್ಠಿ–3, ಕರ್ನಾಟಕ ಕಲಾ ಜಗತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT