ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ದೂರು ಎಳನೀರು ಮಾರುಕಟ್ಟೆ: ದಾಖಲೆ ವಹಿವಾಟು

Last Updated 9 ನವೆಂಬರ್ 2017, 8:55 IST
ಅಕ್ಷರ ಗಾತ್ರ

ಮಂಡ್ಯ: ಮೂರು ವರ್ಷಗಳಿಂದ ಬರದ ಕರಿನೆರಳಲ್ಲಿ ಬದುಕುತ್ತಿರುವ ಜಿಲ್ಲೆಯ ರೈತರನ್ನು ಮದ್ದೂರು ಎಳನೀರು ಮಾರುಕಟ್ಟೆ ರಕ್ಷಿಸಿದೆ. ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಎಳನೀರು ಮಾರುಕಟ್ಟೆ ಎನಿಸಿರುವ ಇದು ಎರಡು ವರ್ಷಗಳಿಂದ ದಾಖಲೆಯ ವಹಿವಾಟು ನಡೆಸಿದೆ.

ಖಾರ ತಿನಿಸಿನಲ್ಲಿ ಮದ್ದೂರು ವಡೆ ಪ್ರಸಿದ್ಧಿ ಪಡೆದಿರುವಂತೆ ಸಿಹಿಯಲ್ಲಿ ಮದ್ದೂರು ಎಳನೀರು ಅಷ್ಟೇ ಪ್ರಸಿದ್ಧಿ ಪಡೆದಿದೆ. ‘ಅತಿ ಹೆಚ್ಚು ನೀರು ಹಾಗೂ ಸಿಹಿ’ ಇಲ್ಲಿಯ ಎಳನೀರಿನ ವಿಶೇಷ. ಇದಕ್ಕೆ ದೇಶದಾದ್ಯಂತ ಬೇಡಿಕೆ ಇದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ದೆಹಲಿ, ರಾಜಸ್ಥಾನ, ಕೋಲ್ಕತ್ತ ಮುಂತಾದ ರಾಜ್ಯಗಳಿಗೆ ಎಳನೀರು ರವಾನೆಯಾಗುತ್ತದೆ.

2015–16ನೇ ಸಾಲಿನಲ್ಲಿ ಅತಿ ಹೆಚ್ಚು ₹ 137 ಕೋಟಿ ದಾಖಲೆಯ ವಹಿವಾಟು ನಡೆಸಿದ್ದು, 18 ಕೋಟಿ ಎಳನೀರು ಆವಕವಾಗಿತ್ತು. 2016–17ನೇ ಸಾಲಿನಲ್ಲಿ ಬರ ಇದ್ದರೂ ₹ 100 ಕೋಟಿ ವಹಿವಾಟು ನಡೆಸಿದೆ. 2012–13ರಲ್ಲಿ ₹ 96 ಕೋಟಿ ವಹಿವಾಟು ನಡೆಸಿದೆ. ಐದು ವರ್ಷದಿಂದೀಚೆಗೆ ಆವಕ ಮತ್ತು ವಹಿವಾಟು ಹೆಚ್ಚಳವಾಗುತ್ತಿದೆ.

‘ಎರಡು ವರ್ಷಗಳಿಂದ ಕೆಆರ್‌ಎಸ್‌ ಜಲಾಶಯ ತುಂಬಿಲ್ಲ. ನಗರದ ಮೈಷುಗರ್‌ ಕಾರ್ಖಾನೆಯ ಚಕ್ರ ತಿರುಗಲಿಲ್ಲ. ಕಬ್ಬು, ಭತ್ತ ಬೆಳೆದ ರೈತರು ಬೆಲೆ ಇಲ್ಲದೆ ನಷ್ಟ ಅನುಭವಿಸಿದರು. ನೂರಾರು ರೈತರು ಆತ್ಮಹತ್ಯೆ ಹಾದಿ ಹಿಡಿದರು. ಇಂತಹ ಸಂದರ್ಭದಲ್ಲಿ ಮದ್ದೂರಿನ ಎಳನೀರು ಮಾರುಕಟ್ಟೆ ರೈತರನ್ನು ರಕ್ಷಿಸಿತು’ ಎನ್ನುತ್ತಾರೆ ರೈತಸಂಘದ ಮುಖಂಡ ಕೆ.ಬೋರಯ್ಯ.

ತೋಟದಲ್ಲೇ ವ್ಯಾಪಾರ: ವ್ಯಾಪಾರಿಗಳು ರೈತರ ತೋಟದಲ್ಲೇ ವ್ಯಾಪಾರ ಮುಗಿಸಿ ಎಳನೀರು ಕೊಯ್ಯುತ್ತಾರೆ. ನಂತರ ಮಾರುಕಟ್ಟೆಯಿಂದ ವಿವಿಧ ರಾಜ್ಯಗಳಿಗೆ ರವಾನೆಯಾಗುತ್ತದೆ. ಶೇ 10ರಷ್ಟು ರೈತರು ಮಾತ್ರ ಮಾರುಕಟ್ಟೆಗೆ ತಂದು ಮಾರುತ್ತಾರೆ.

‘ಮದ್ದೂರು ಎಪಿಎಂಸಿಯಿಂದ 150 ವರ್ತಕರಿಗೆ ಪರವಾನಗಿ ನೀಡಲಾಗಿದೆ. 600ಕ್ಕೂ ಹೆಚ್ಚು ಹಮಾಲಿಗಳು ಮಾರುಕಟ್ಟೆಯಿಂದ ಜೀವನ ಕಟ್ಟಿಕೊಂಡಿದ್ದಾರೆ. 2015 ಮಾರ್ಚ್ 16ರಂದು ಒಂದೇ ದಿನ ಮಾರುಕಟ್ಟೆಗೆ 15.5 ಲಕ್ಷ ಎಳನೀರು ಆವಕವಾಗಿತ್ತು.

ಕೆ.ಆರ್‌.ಪೇಟೆ, ಮದ್ದೂರು ತಾಲ್ಲೂಕಿನ ಗುಡಿಗೆರೆಯಲ್ಲಿ ಎಳನೀರಿನ ಉಪ ಮಾರುಕಟ್ಟೆ ಆರಂಭವಾಗಿದೆ. ಶೇ 30ರಷ್ಟು ಎಳನೀರು ಅಲ್ಲಿಗೆ ಹೋಗುತ್ತಿದೆ. ಆದರೂ ಮದ್ದೂರು ಮಾರುಕಟ್ಟೆಯಲ್ಲಿ ದಾಖಲೆ ವಹಿವಾಟು ನಡೆಸುತ್ತಿದೆ’ ಎಂದು ಎಪಿಎಂಸಿ ಕಾರ್ಯದರ್ಶಿ ಬಿ.ಶ್ರೀಕಂಠಪ್ರಭು ಹೇಳಿದರು.

ಖಾಸಗಿ ಕಂಪೆನಿಗಳ ಪ್ರವೇಶ: ಮದ್ದೂರು ಮಾರುಕಟ್ಟೆಯಲ್ಲಿ ಸಿಗುವ ಎಳನೀರನ್ನು ಸಂಸ್ಕರಿಸಿ ಬಾಟಲ್‌ ಗಳಿಗೆ ತುಂಬಿ ಮಾರಾಟ ಮಾಡುವ ಹಲವು ಖಾಸಗಿ ಘಟಕಗಳು ಜಿಲ್ಲೆಗೆ ಬಂದಿವೆ. ಇದರಿಂದ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು ರೈತರಿಗೂ ಲಾಭವಾಗಿದೆ. ಮದ್ದೂರು ಸಮೀಪದ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಖಾಸಗಿ ಕಂಪೆನಿಯೊಂದು ತಯಾರಿಸುವ ‘ಕೊಕೊ ಜಲ್‌’ ಎಳನೀರು ಬಾಟಲ್‌ ಪ್ರಸಿದ್ಧಿ ಪಡೆದಿದೆ ಎಂದು ಅವರು ತಿಳಿಸಿದರು.

‘ಎಳನೀರು ಸಂಸ್ಕರಿಸಿ ತಯಾರಿಸಿದ ಪಾನೀಯಗಳು ಈಚೆಗೆ ಹೆಚ್ಚು ಪ್ರಸಿದ್ಧಿ ಪಡೆಯುತ್ತಿವೆ. ಎಳನೀರು ಬುರುಡೆಯನ್ನು ಎಲ್ಲೆಡೆ ಸಾಗಿಸಲು ಸಾಧ್ಯವಿಲ್ಲ. ನೀರನ್ನು ಸಂಸ್ಕರಿಸಿ ಬಾಟಲ್‌ ಮಾಡಿದರೆ ಎಲ್ಲೆಡೆ ಕೊಂಡೊಯ್ಯಬಹುದು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂತಹ ಬಾಟಲ್‌ಗಳು ಪ್ರಸಿದ್ಧಿ ಪಡೆದಿವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT