ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾನತೆಯ ಹರಿಕಾರ ಟಿಪ್ಪು ಸುಲ್ತಾನ್’

Last Updated 11 ನವೆಂಬರ್ 2017, 4:53 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಸಮಾನತೆಯ ಹರಿಕಾರನಾಗಿದ್ದ ಟಿಪ್ಪು ಸುಲ್ತಾನ್, ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ನಾಯಕ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಬಣ್ಣಿಸಿದರು. ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಟಿಪ್ಪು ತನ್ನ ಆಡಳಿತದಲ್ಲಿ ಕೃಷಿ ಹಾಗೂ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು.

ಉಳುವವನೇ ಭೂಮಿಯ ಒಡೆಯ ನೀತಿ ಜಾರಿಗೆ ತಂದಿದ್ದ ಅವರು, ಬೆವರಿನ ಬೆಲೆ ಅರಿತಿದ್ದರು. ದಲಿತರನ್ನು ಮೇಲೆತ್ತಲು ಅವರು ಕೈಗೊಂಡ ಕಾರ್ಯ ಶ್ಲಾಘನೀಯ. ದಲಿತ ವಿರೋಧಿ ನೀತಿಗಳನ್ನು ವಿರೋಧಿಸಿದ್ದರು. ಆದರೆ, ಇಂದು ಕೆಲ ದಲಿತ ನಾಯಕರು ಅವರ ಜಯಂತಿ ವಿರೋಧಿಸುತ್ತಿರುವುದು ನೋವಿನ ಸಂಗತಿಯಾಗಿದೆ’ ಎಂದರು.

‘ಕೆಲವರು ಇತಿಹಾಸವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಿದ್ದಾರೆ. ಸಮಾಜದಲ್ಲಿ ವಿಷಬೀಜ ಬಿತ್ತಿ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ರವಾನಿಸುತ್ತಿದ್ದಾರೆ. ಅಧಿಕಾರದ ಲಾಲಸೆಗಾಗಿ ಧ್ವನಿ ಇಲ್ಲದವರಿಗೆ ನೆರವಾಗದಿರುವುದು ವಿಷಾದಕರ ಸಂಗತಿ’ ಎಂದರು.

ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಟಿಪ್ಪು, 39 ಸಾವಿರ ಕೆರೆ ನಿರ್ಮಾಣ, ನದಿಗೆ ಅಡ್ಡಲಾಗಿ 24 ಬ್ಯಾರೇಜ್ ನಿರ್ಮಾಣದ ಜೊತೆಗೆ 16 ಸಾವಿರ ಬಾವಿಗಳನ್ನು ತೋಡಿಸಿದ್ದರು. ಶ್ರೀರಂಗ ಪಟ್ಟಣದ ಬಳಿ ಹರಿಯುವ ಕಾವೇರಿ ನದಿಗೆ ಮೊದಲ ಅಣೆಕಟ್ಟು ನಿರ್ಮಾಣ ಮಾಡಿದ್ದಾರೆ. ರೇಷ್ಮೆಯನ್ನು ಪರಿಚಯಿಸಿದ ಕೀರ್ತಿ ಟಿಪ್ಪುವಿಗೆ ಸಲ್ಲುತ್ತದೆ ಎಂದರು.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ‘ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕರುನಾಡಿನಲ್ಲಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಿಲ್ಲ. ಬ್ರಿಟಿಷರಿಗೆ ತನ್ನ ಮಕ್ಕಳನ್ನು ಒತ್ತೆಯಾಳಾಗಿರಿಸಿ ಯುದ್ದದಲ್ಲಿ ಹೋರಾಡಿದ ಮಹಾನ್ ವ್ಯಕ್ತಿಯನ್ನು ಭಯೋತ್ಪಾದಕನ ರೀತಿಯಲ್ಲಿ ಬಿಂಬಿಸುತ್ತಿರುವುದು ವಿಷಾದದ ಸಂಗತಿಯಾಗಿದೆ’ ಎಂದರು.

‘ವಿಶ್ವವಿಖ್ಯಾತ ತಾಜ್‌ಮಹಲ್ ಅನ್ನು ಐತಿಹಾಸಿಕ ಪರಂಪರೆ ಪಟ್ಟಿಯಿಂದ ಕೈಬಿಟ್ಟಿರುವುದು ದೇಶದಲ್ಲಿ ಅಸಹಿಷ್ಣುತೆ ಇರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಟಿಪ್ಪು ಸುಲ್ತಾನ್‌ನನ್ನು ನಮ್ಮವರೆಂದು ತಿಳಿದು ಅವರ ವ್ಯಕ್ತಿತ್ವವನ್ನು ಗೌರವಿಸಬೇಕು’ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಅಂಜುಮನ್ ಪದವಿ ಪೂರ್ವ ಮಹಾ ವಿದ್ಯಾಲಯದ ಪ್ರಾಚಾರ್ಯ ಡಾ.ಮೈನುದ್ದಿನ್ ರೇವಡಿಗಾರ ಮಾತನಾಡಿ, ಅಪ್ರತಿಮ ದೇಶಭಕ್ತ ಹಾಗೂ ಕನ್ನಡ ಪ್ರೇಮಿಯಾಗಿದ್ದ ಟಿಪ್ಪು ಸುಲ್ತಾನರು ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು ಎಂದರು. ಟಿಪ್ಪುವಿನ ಬಾಲ್ಯಜೀವ ಹಾಗೂ ಅವರ ಆಡಳಿತ ವ್ಯವಸ್ಥೆ ಹಾಗೂ ಕಾರ್ಯಗಳ ಕುರಿತು ವಿವರವಾಗಿ ತಿಳಿಸಿದರು.

ಶಾಸಕ ಎಚ್.ವೈ.ಮೇಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಚನ್ನನಗೌಡರ ಪರನಗೌಡರ, ಬಿ.ಟಿ.ಡಿ.ಎ ಅಧ್ಯಕ್ಷ ಎ.ಡಿ.ಮೊಕಾಶಿ, ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ, ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಕಾಸ್ ಸುರಳಕರ್ ಉಪಸ್ಥಿತರಿದ್ದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ ಸ್ವಾಗತಿಸಿದರು. ಅಲ್ಪಸಂಖ್ಯಾತರ ಇಲಾಖೆಯ ಉಪನಿರ್ದೇಶಕ ಎಂ.ಎ.ಮೇಲಿನಮನಿ ವಂದಿಸಿದರು. ಶಂಕರಲಿಂಗ ದೇಸಾಯಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT