ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಲು ಕಲಿಯಿರಿ

Last Updated 11 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಮಕ್ಕಳಿಗೆ ಏನನ್ನು ಹೇಳಬಹುದು ಅಂತ ‘ಪ್ರಜಾವಾಣಿ’ ನನ್ನನ್ನು ಕೇಳಿದಾಗ ನನಗೆ ಹೊಳೆದ ಮಾತೆಲ್ಲವೂ ತಂದೆ–ತಾಯಿಗಳಿಗೆ ಹೇಳುವಂಥವೇ. ಯಾಕೆಂದರೆ ಮಕ್ಕಳು ಹುಟ್ಟುತ್ತಲೇ ಸಮಸ್ಯೆಗಳನ್ನು ಹೊತ್ತು ಬಂದಿರುವುದಿಲ್ಲ. ಸಮಾಜ, ಪರಿಸರ, ತಂದೆ-ತಾಯಿಯರ ನಿರೀಕ್ಷೆಯ ಭಾರ ಅವರನ್ನು ನಾನಾ ರೀತಿಯ ಬಂಧಗಳಿಗೆ ಒಳಪಡಿಸುತ್ತವೆ.

ಸ್ವಚ್ಛಂದ ಪರಿಸರದಲ್ಲಿ ಅರಳಬೇಕಾದ ಮನಸ್ಸುಗಳು ಹೀಗೆ ಯಾವ್ಯಾವುದೋ ಸಂಕೋಲೆಗಳಿಗೆ ಒಳಪಟ್ಟಾಗ ಪುಟ್ಟ ಮಕ್ಕಳು ಅಥವಾ ಹದಿವಯಸ್ಸಿನವರು ತಮಗೆ ತಿಳಿದ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಅದನ್ನು ತಂದೆ, ತಾಯಿಯರು ‘ಸಮಸ್ಯೆ’ ಎಂದುಕೊಳ್ಳುತ್ತಾರೆ. ಹಾಗಂತ ತಾಯ್ತಂದೆಗಳದ್ದೇ ಎಲ್ಲಾ ತಪ್ಪು ಎಂದು ಹೇಳಲೂ ಆಗದು. ಅವರಿಗೂ ಈ ‘ಪೋಷಕ’ ಪಟ್ಟ ಮಕ್ಕಳೊಂದಿಗೆ ಬರುವಂಥದ್ದೇ...

ಯಾರೂ ತಾಯ್ತಂದೆ ಕೆಲಸಕ್ಕೆ ಟ್ರೈನಿಂಗ್ ತೆಗೆದುಕೊಂಡು ಬಂದಿರುವುದಿಲ್ಲ. ಮಕ್ಕಳು ದೊಡ್ಡವರಾದಂತೆ ಅವರ ಜೊತೆಗೇ ಇವರೂ ದೊಡ್ಡವರಾಗುತ್ತಿರುತ್ತಾರೆ. ಹಾಗಾಗಿ ಇಬ್ಬರೂ ಸಾಧ್ಯವಾದಷ್ಟು ಸಮನ್ವಯ ಸಾಧಿಸಿಕೊಂಡು ಹೋಗಬೇಕಿದೆ.

ಮಕ್ಕಳ ಮೇಲೆ ದೊಡ್ಡ ನಿರೀಕ್ಷೆಗಳ ಭಾರ ಹೊರಿಸುವುದು. ನಮಗೆ ಸಿಕ್ಕದ್ದನ್ನು ಅವರಿಗೆ ಕೊಟ್ಟ ಮಾತ್ರಕ್ಕೆ ನಮ್ಮ ಎಲ್ಲಾ ನಿರೀಕ್ಷೆಗಳನ್ನು ಮಕ್ಕಳು ಪೂರೈಸಬೇಕು ಎಂದುಕೊಳ್ಳುವುದು ತಪ್ಪು.

ಅಂತೆಯೇ ಮಕ್ಕಳು ಕೂಡ ಅತೀ ತಂತ್ರಜ್ಞಾನದ ಸುಳಿಯಲ್ಲಿ ಸಿಲುಕಿ ಕುಬ್ಜರಾಗುತ್ತಿದ್ದಾರೆ. ಅವರ ಕಲ್ಪನಾಶಕ್ತಿ ಕಡಿಮೆಯಾಗುತ್ತಿದೆ. ಜನಗಳೊಂದಿಗೆ ಬೆರೆಯುವ, ತನ್ನ ಸುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಳೆದುಹೋಗುತ್ತಿದೆ. ಮೊಬೈಲಿನಲ್ಲೋ ಟ್ಯಾಬಿನಲ್ಲೋ ಅವರ ಕಾಲ ಸೋರಿಹೋಗುತ್ತಿದೆ.

ಮಕ್ಕಳಿಗೆ ಒಂದೆರಡು ಮಾತು. ದಯವಿಟ್ಟು ‘ಸೋಲಲು’ ಕಲಿಯಿರಿ. ನಿಮಗೆ ಬೇಕಾದ ವಸ್ತು ಸಿಗದೇ ಇದ್ದಾಗ ಮನಸ್ಸನ್ನು ನಿಮ್ಮ ನಿಯಂತ್ರಣದಲ್ಲಿ ಉಳಿಸಿಕೊಳ್ಳಿ. ಚಿಕ್ಕ ಚಿಕ್ಕ ವಿಷಯಕ್ಕೆ ಜೀವನ ಮುಗಿದುಹೋದಂತೆ ಆಡಬೇಡಿ. ನಾನು ಯಾವಾಗಲೂ ಫಸ್ಟ್ ಬರಬೇಕು, ನೂರಕ್ಕೆ ನೂರು ಅಂಕಗಳನ್ನು ಗಳಿಸಬೇಕು... ಇವೆಲ್ಲಾ ನಿಮ್ಮ ಬಾಲ್ಯ, ಮನಸ್ಸು ಹಾಗೂ ಆಸಕ್ತಿಗಳನ್ನು ಬಲಿಕೊಟ್ಟು ಸಾಧಿಸಬೇಕಿಲ್ಲ. ಎಲ್ಲವನ್ನೂ ಅನುಭವಿಸುತ್ತಲೇ ಬೆಳೆಯಬೇಕು ನೀವು. ನಮ್ಮ ದೇಶದ ಭವಿಷ್ಯ ನೀವು ಎನ್ನುವುದನ್ನು ಮರೆಯದಿರಿ.

ಅಪ್ಪ–ಅಮ್ಮ ಏನನ್ನಾದರೂ ತೆಗೆದು ಕೊಡದಿದ್ದರೆ, ನೀವಂದುಕೊಂಡಷ್ಟು ಅಂಕಗಳು ಬರದಿದ್ದರೆ, ನಿಮ್ಮ ಪ್ಲಾನ್ ಪ್ರಕಾರ ಏನೋ ನಡೆಯದಿದ್ದರೆ ನೊಂದುಕೊಳ್ಳಬೇಡಿ. ಸೋಲು ಒಳ್ಳೆಯ ಗುರು. ಪದೇ ಪದೇ ಸೋತಾಗ ಗೆಲುವಿನ ರುಚಿ ಹೆಚ್ಚುತ್ತದೆ. ಹಾಡಲು, ಆಡಲು, ಚಿತ್ರ ಬರೆಯಲು, ಸ್ನೇಹಿತರೊಂದಿಗೆ ಒಡನಾಡಲು, ಸಂಬಂಧಿಗಳೊಂದಿಗೆ ಬೆರೆಯಲು ಹಿಂದೇಟು ಹಾಕಬೇಡಿ.

ನಿಮ್ಮ ತಂದೆ-ತಾಯಿ ನಿಮ್ಮ ಒಳ್ಳೆಯದಕ್ಕೆ ಏನೇನೆಲ್ಲಾ ಪ್ರಯತ್ನ ಪಡುತ್ತಾರೆ ಎನ್ನುವುದೇನೋ ಸರಿಯಾದ ಮಾತೇ. ಆದರೆ, ಅವರ ನಿರೀಕ್ಷೆಗಳು ನಿಮ್ಮಲ್ಲಿ ಭಯ ಹುಟ್ಟಿಸಿದರೆ, ಅವರ ಕನಸುಗಳು ನಿಮ್ಮ ಗುರಿ ಅಲ್ಲದೇ ಹೋದರೆ ದಯವಿಟ್ಟು ಅವರೊಂದಿಗೆ ಕುಳಿತು ಮಾತನಾಡಿ. ನಿಮ್ಮ ಕನಸನ್ನು ಅವರೊಂದಿಗೆ ಹಂಚಿಕೊಳ್ಳಿ. ಒಪ್ಪುತ್ತಾರೋ ಇಲ್ಲವೋ ಎನ್ನುವ ಭಯ ಬೇಡ. ಒತ್ತಡಕ್ಕೆ ಒಳಗಾಗಿ ಅವಸರದ ನಿರ್ಧಾರಗಳನ್ನು ಕೈಗೊಂಡು ಚಿನ್ನದಂತಹ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ನಿಮ್ಮೊಳಗಿನ ಎಂಥ ಕನಸು ನನಸಾಗಲಿದೆಯೋ ಯಾರು ಬಲ್ಲರು?

ಎಲ್ಲರೂ ಡಾಕ್ಟರು, ಎಂಜಿನಿಯರು, ಸೈಂಟಿಸ್ಟು ಅಥವಾ ಇನ್ನೇನೋ ಆಗಲು ಸಾಧ್ಯವಿಲ್ಲ. ಅದೊಂದೇ ಎಲ್ಲರ ಗುರಿಯಾಗಬಾರದು. ನಿಮ್ಮೊಳಗೆ ನಟರೊಬ್ಬರಿರಬಹುದು, ಅಥವಾ ನಿರ್ದೇಶಕ/ಕಿ ಇರಬಹುದು, ಹಾಡುಗಾರರು ಇರ ಬಹುದು, ಚಿತ್ರಕಲಾವಿದರು ಅವಕಾಶ ಬಂದಾಗ ಪ್ರಕಟಗೊಳ್ಳಲು ಕಾಯುತ್ತಿರಬಹುದು. ಎಲ್ಲರೂ ಡಾಕ್ಟರಾದರೆ ಈ ಭೂಮಿಯ ಮೇಲೆ ಬಣ್ಣ ತುಂಬುವವರಾರು?

ನಿಮ್ಮ ಕನಸನ್ನು ಜೋಪಾನವಾಗಿಟ್ಟುಕೊಳ್ಳಿ. ಅವುಗಳನ್ನು ಸಾಯಿಸಬೇಡಿ. ನಿಮ್ಮದಲ್ಲದ ಜೀವನಕ್ಕೆ ಕುತ್ತಿಗೆ ಒಡ್ಡಬೇಡಿ. ನಿಮ್ಮ ದಾರಿ ನಿಮ್ಮನ್ನು ಕಾಪಾಡಲಿ. ನಿಮ್ಮ ಕನಸುಗಳ ದೀಪದ ಬೆಳಕು ಇಡೀ ಸಮಾಜದ ಮೇಲೆ ಬೆಳದಿಂಗಳಂತೆ ಚೆಲ್ಲಲಿ. ಆ ಬೆಳಕಲ್ಲಿ ಎಲ್ಲರೂ ತಂಪಾಗಿರೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT