ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇರೆ ಭಾಷೆಗೆ ಕನ್ನಡದ ಕೃತಿಗಳು ಅನುವಾದಗೊಳ್ಳಬೇಕು

Last Updated 12 ನವೆಂಬರ್ 2017, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡದ ಉತ್ತಮ ಕೃತಿಗಳನ್ನು ದೇಶಿ ಹಾಗೂ ವಿದೇಶಿ ಭಾಷೆಗಳಿಗೆ ಅನುವಾದಿಸುವ ಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೈಗೊಳ್ಳಬೇಕು’ ಎಂದು ಸಂಸದ ಎಂ.ವೀರಪ್ಪ ಮೊಯಿಲಿ ಸಲಹೆ ನೀಡಿದರು.

ಭಾಗವತರು ಟ್ರಸ್ಟ್‌ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಶತಮಾನೋತ್ಸವ ಸಂದರ್ಭದಲ್ಲಿ ಅಷ್ಟ ದಿಗ್ಗಜರು’ ಎಂಬ ವಿಚಾರ ಸಂಕಿರಣ, ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡದ ಸೀಮಿತ ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಂಡಿವೆ. ಆದರೆ, ಮೌಲಿಕವಾದ ಕಾದಂಬರಿ, ಮಹಾಕಾವ್ಯ ಹಾಗೂ ಕಥಾ ಸಂಕಲನಗಳು ಸಾಕಷ್ಟಿದ್ದು, ಅವು ಇಂಗ್ಲಿಷ್‌ ಸೇರಿ ಬೇರೆ ಭಾಷೆಗಳಿಗೆ ಅನುವಾದಗೊಳ್ಳಬೇಕು. ಕುವೆಂಪು, ಶಿವರಾಮ ಕಾರಂತ, ಕೆ.ಎಸ್‌.ನಿಸಾರ್‌ ಅಹಮದ್‌ ಅವರ ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಂಡಿದ್ದರೆ ನಮ್ಮ ಭಾಗಕ್ಕೆ ಅನೇಕ ನೊಬೆಲ್‌ ಪ್ರಶಸ್ತಿಗಳು ಸಿಗುತ್ತಿದ್ದವು’ ಎಂದು ಅಭಿಪ್ರಾಯ
ಪಟ್ಟರು.

‘ನನ್ನ ಶ್ರೀರಾಮಾಯಣ ಅನ್ವೇಷಣಂ ಮಹಾಕಾವ್ಯವು 10 ಭಾಷೆಗಳಿಗೆ ಅನುವಾದ ಗೊಂಡಿದೆ. ಸಿರಿಮುಡಿ ಪರಿಕ್ರಮಣ ಮಹಾಕಾವ್ಯವು ಅನೇಕ ಭಾಷೆಗಳಿಗೆ ತರ್ಜುಮೆ ಆಗಿದೆ’ ಎಂದರು.

‘ಅನೇಕ ಸಾಹಿತಿ, ಲೇಖಕರು ಕಟ್‌ ಆ್ಯಂಡ್‌ ಪೇಸ್ಟ್‌ ಮಾಡುತ್ತಾರೆ. ಆದರೆ, ಎಂ.ಕೆ.ಇಂದಿರಾ ಅವರು ಬದುಕಿನ ಆಧಾರದ ಮೇಲೆ ಕಾದಂಬರಿ ಬರೆದಿದ್ದಾರೆ. ಕಳೆದು ಹೋದ ನಾಗರಿಕತೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಅವರು, ನಾಗರಿಕತೆಗೆ ಜೀವ ತುಂಬಿದ್ದಾರೆ’ ಎಂದು ಬಣ್ಣಿಸಿದರು.

‘ಸಾಹಿತಿ ದೇ.ಜವರೇಗೌಡ ಪ್ರಯತ್ನದಿಂದ ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶಕ್ಕೆ ಸಂಪನ್ನತೆ ಬಂದಿದೆ’ ಎಂದು ಶ್ಲಾಘಿಸಿದರು.

ಕವಿ ಕೆ.ಎಸ್‌.ನಿಸಾರ್‌ ಅಹಮದ್‌, ‘ಗೋಪಾಲಕೃಷ್ಣ ಅಡಿಗ, ಎಂ.ಕೆ.ಇಂದಿರಾ, ವಾಣಿ, ಜಿ.ವಿ.ಅಯ್ಯರ್‌, ದೇ.ಜವರೇಗೌಡ, ಟಿ.ಸುನಂದಮ್ಮ, ಬಿ.ಎಸ್‌.ರಂಗ ಹಾಗೂ ಪ್ರೊ.ಬಿ.ಚಂದ್ರಶೇಖರ ಅವರ ಕುರಿತ ಪರಿಚಯಾತ್ಮಕ ಲೇಖನಗಳು ಅಷ್ಟ ದಿಗ್ಗಜರು ಕೃತಿಯಲ್ಲಿವೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌, ‘ಕನ್ನಡ ಭಾಷೆ ಉಳಿಯಬೇಕಾದರೆ ಯುವ ಪೀಳಿಗೆಗೆ ಇಷ್ಟವಾಗುವಂತಹ ಸಾಹಿತ್ಯವನ್ನು ರಚನೆ ಮಾಡಬೇಕು’ ಎಂದು ಹೇಳಿದರು.

‘ಅಷ್ಟ ದಿಗ್ಗಜರು’ ಕೃತಿಯ ಸಂಪಾದಕ ಎನ್‌.ಎಸ್‌.ಶ್ರೀಧರಮೂರ್ತಿ, ‘ಈ ವರ್ಷ ಕವಿ ಸಿದ್ಧಯ್ಯ ಪುರಾಣಿಕ, ಕನ್ನಡಪರ ಹೋರಾಟಗಾರ ಮ.ರಾಮ
ಮೂರ್ತಿ, ಬಿ.ಶ್ರೀಧರ್‌ ಅವರ ಜನ್ಮಶತಮಾನೋತ್ಸವ ಇದೆ. ಅವರ ಕುರಿತು ವಿಚಾರ ಸಂಕಿರಣ ನಡೆಸಬೇಕು ತರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT