ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದಕರಿಗೆ ವಿಮಾ ಯೋಜನೆ ಜಾರಿ

ಹಾಲು ಉತ್ಪಾದಕರಿಗೆ ಸ್ಟೀಲ್‌ ಕ್ಯಾನ್ ವಿತರಣೆ ಕಾರ್ಯಕ್ರಮದಲ್ಲಿ ಕೋಚಿಮುಲ್‌ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ ಹೇಳಿಕೆ
Last Updated 16 ನವೆಂಬರ್ 2017, 10:57 IST
ಅಕ್ಷರ ಗಾತ್ರ

ಕೋಲಾರ: ಒಕ್ಕೂಟದಿಂದ ವಿಮಾ ಯೋಜನೆ ಜಾರಿಗೊಳಿಸಿದ್ದು, ಹಾಲು ಉತ್ಪಾದಕರು ಯೋಜನೆಯ ಸದುಪಯೋಗ ಪಡೆಯಬೇಕು ಎಂದು ಕೋಲಾರ– ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ ಕರೆ ನೀಡಿದರು.

ಕೋಚಿಮುಲ್‌ ಹಾಗೂ ಎಂಟಿಆರ್‌ ಪ್ರೈವೇಟ್‌ ಲಿಮಿಟೆಡ್‌ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರಿಗೆ ಸ್ಟೀಲ್‌ ಕ್ಯಾನ್ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಮೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಸುಮಾರು ₹ 3 ಲಕ್ಷದವರೆಗೆ ವಿಮೆ ಸೌಲಭ್ಯ ಸಿಗುತ್ತದೆ. ಇದರಿಂದ ಕುಟುಂಬ ಸದಸ್ಯರಿಗೂ ಅನುಕೂಲವಾಗುತ್ತದೆ ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ನೂತನ ಕಟ್ಟಡ ನಿರ್ಮಿಸಲು ಒಕ್ಕೂಟದಿಂದ ₹ 2 ಲಕ್ಷ ಹಾಗೂ ಕೆಎಂಎಫ್‌ನಿಂದ ₹ 3 ಲಕ್ಷ ಮಂಜೂರು ಮಾಡಿಸಲಾಗುತ್ತದೆ. ಒಕ್ಕೂಟಕ್ಕೆ ಬಂದ ಲಾಭದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಹಸು ಮೃತಪಟ್ಟರೆ ಪರಿಹಾರ ನೀಡಲಾಗುತ್ತಿದೆ. ರಿಯಾಯಿತಿ ದರದಲ್ಲಿ ಪಶು ಆಹಾರ ವಿತರಿಸಲಾಗುತ್ತಿದೆ. ಒಕ್ಕೂಟವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ರೈತರು ಸಹಕರಿಸಬೇಕು ಎಂದರು.

ಒಕ್ಕೂಟದ ವ್ಯಾಪ್ತಿಯ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರತಿನಿತ್ಯ ಸುಮಾರು 10 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಒಕ್ಕೂಟವು ಹಾಲು ಉತ್ಪಾದನೆಯಲ್ಲಿ ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ. ದೂರದ ಗ್ರಾಮಗಳಿಂದ ಹಾಲು ಬರುವ ವೇಳೆಗೆ ಕೆಟ್ಟು ಹೋಗುತ್ತಿದೆ. ಇದನ್ನು ತಪ್ಪಿಸಲು ಹಾಗೂ ಎಂಟಿಆರ್‌ ಸಂಸ್ಥೆ ಮತ್ತು ಇತರೆ ಖಾಸಗಿ ಸಂಸ್ಥೆಗಳಿಗೆ ಗುಣಮಟ್ಟದ ಹಾಲು ಪೂರೈಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಸೌಕರ್ಯ ಕಲ್ಪಿಸಬೇಕು: ಅವಳಿ ಜಿಲ್ಲೆಯಲ್ಲಿ 90 ಸಾವಿರಕ್ಕೂ ಹೆಚ್ಚು ಮಂದಿ ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುತ್ತಿದ್ದಾರೆ. ಇವರಲ್ಲಿ ಸಣ್ಣ, ಮಧ್ಯಮ ಹಾಗೂ ಸ್ಥಿತಿವಂತ ರೈತರಿದ್ದಾರೆ. ಬಡತನ ರೇಖೆಗಿಂತ ಕೆಳಗಿನ ರೈತರಿಗೆ ಹೆಚ್ಚಿನ ಸೌಕರ್ಯ ಕಲ್ಪಿಸಲು ಎಂಟಿಆರ್ ಸಂಸ್ಥೆಯ ಜತೆಗೆ ಹೆಚ್ಚಿನ ಉದ್ಯಮಗಳು ಮುಂದೆ ಬರಬೇಕು. ಸಂಸ್ಥೆಗಳು ಗಳಿಸುವ ಲಾಭದಲ್ಲಿ ರೈತರಿಗೆ ಹೆಚ್ಚಿನ ಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯ ರೈತರು ಬರ ಪರಿಸ್ಥಿತಿ ನಡುವೆಯೂ ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡಿದ್ದಾರೆ. ಬರಗಾಲ ಮುಂದುವರಿದಿದ್ದರೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ದೇವರ ಆಶೀರ್ವಾದದಿಂದ ಎರಡೂ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದ್ದು, ಹಾಲಿನ ಉತ್ಪಾದನೆ ಸಹ ಹೆಚ್ಚಿದೆ. ಇದರಿಂದ ರೈತರು ಮತ್ತಷ್ಟು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಮೆ ಪಾವತಿ: ಜಿಲ್ಲೆಯ ಬಹುಪಾಲು ರೈತರು ರೇಷ್ಮೆ ಮತ್ತು ಹೈನೋದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ಮುಳಬಾಗಿಲು ತಾಲ್ಲೂಕಿನಲ್ಲಿ ಹೈನೋದ್ಯಮ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಶಾಸಕ ಕೊತ್ತೂರು ಜಿ.ಮಂಜುನಾಥ್ ಎಲ್ಲಾ ಹಾಲು ಉತ್ಪಾದಕರಿಗೆ ಕ್ಯಾನ್‌ ವಿತರಿಸುತ್ತಿದ್ದಾರೆ. ಜತೆಗೆ ರೈತರು ಹಸುಗಳಿಗೆ ಪಾವತಿಸಬೇಕಾದ ವಿಮೆ ಹಣವನ್ನು ಶಾಸಕರೇ ಕಟ್ಟುತ್ತಿದ್ದಾರೆ ಎಂದು ಕೋಚಿಮುಲ್‌ ನಿರ್ದೇಶಕ ಆರ್‌.ಆರ್‌.ರಾಜೇಂದ್ರಗೌಡ ತಿಳಿಸಿದರು.

ಜಿಲ್ಲೆಯ ರೈತರು ಉತ್ಪಾದಿಸುವ ಹಾಲು ಸಂಸ್ಥೆಗೆ ಪೂರೈಕೆಯಾಗುತ್ತಿದ್ದು, ಇದರಿಂದ ಸಂಸ್ಥೆಗೆ ಹೆಚ್ಚಿನ ಲಾಭ ಬರುತ್ತಿದೆ. ರೈತರ ಹಿತರಕ್ಷಣೆಗೆ ಸಂಸ್ಥೆ ಬದ್ಧವಾಗಿದೆ ಎಂದು ಎಂಟಿಆರ್ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ಜಿ.ಎಲ್.ಎನ್.ಮೂರ್ತಿ ಭರವಸೆ ನೀಡಿದರು.

ಕೋಚಿಮುಲ್‌ ನಿರ್ದೇಶಕರಾದ ಆರ್.ರಾಮಕೃಷ್ಣೇಗೌಡ, ಎಂ.ಬೈರಾರೆಡ್ಡಿ, ಸುನಂದಮ್ಮ, ಉಪ ವ್ಯವಸ್ಥಾಪಕ ಶ್ರೀನಿವಾಸಗೌಡ, ಎಂಟಿಆರ್ ಸಂಸ್ಥೆ ಪ್ರಧಾನ ವ್ಯವಸ್ಥಾಪಕಿ ರೇಖಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT