ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆಗೆ ಮರಳು ಪೂರೈಕೆ

Last Updated 17 ನವೆಂಬರ್ 2017, 5:32 IST
ಅಕ್ಷರ ಗಾತ್ರ

ಮಂಗಳೂರು: ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ವಸತಿ ಯೋಜನೆ ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಮರಳು ಕೊರತೆ ಆಗದಂತೆ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಟಿ.ಎಸ್‌. ಲೋಕೇಶ್‌ ಹೇಳಿದರು. ನಗರದ ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ನಡೆದ ಮಂಗಳೂರು ತಾಲ್ಲೂಕು ಮಟ್ಟದ ವಸತಿ ಅದಾಲತ್‌ನಲ್ಲಿ ಅವರು ಮಾತನಾಡಿದರು.

ವಸತಿ ಯೋಜನೆಯಡಿ ಮನೆ ಮಂಜೂರಾಗಿರುವ ಫಲಾನುಭವಿಗಳು, ಆದೇಶ ಪತ್ರದ ಪ್ರತಿಯನ್ನು ತೋರಿಸುವ ಮೂಲಕ ಮರಳನ್ನು ಸರ್ಕಾರಿ ಬೆಲೆಯಲ್ಲಿಯೇ ಖರೀದಿಸಬಹುದಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದರು.

ವಿಷಯ ಪ್ರಸ್ತಾಪಿಸಿದ ಬಜ್ಪೆ ಗ್ರಾಮ ಪಂಚಾಯಿತಿ ಸದಸ್ಯರು, ಮರಳಿನ ಸಮಸ್ಯೆಯಿಂದಾಗಿಯೇ ವಸತಿ ಯೋಜನೆಯಡಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಒಂದು ಲಾರಿ ಮರಳಿಗೆ ₹10 ಸಾವಿರ ಕೊಡಬೇಕಾಗಿದೆ. ಹೀಗಾದರೆ, ₹1.20 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಲು ಆಗುತ್ತಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕೇಶ್‌, ಇದುವರೆಗೆ ಸಮಸ್ಯೆ ಆಗಿತ್ತು. ಆದರೆ, ಜಿಲ್ಲಾಧಿಕಾರಿ ಆದೇಶದ ನಂತರ ಪರಿಸ್ಥಿತಿ ಸುಧಾರಿಸಿದೆ. ವಸತಿ ಯೋಜನೆ ಫಲಾನುಭವಿಗಳಿಗೆ ಮರಳು ಸಿಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರ ಸೂಚನೆಯಂತೆ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ವಸತಿ ಅದಾಲತ್‌ ನಡೆಸುವ ಮೂಲಕ ಕಾಮಗಾರಿಗಳನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಬಂಟ್ವಾಳ, ಬೆಳ್ತಂಗಡಿ ತಾಲ್ಲೂಕಿನ ಅದಾಲತ್‌ ನಡೆಸಲಾಗಿದ್ದು, ಪುತ್ತೂರು ಮತ್ತು ಸುಳ್ಯ ತಾಲ್ಲೂಕು ಅದಾಲತ್‌ ಸೋಮವಾರ ನಡೆಯಲಿದೆ ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ. ಮೊಹ್ಮದ್‌ ಮೋನು, ಉಪಾಧ್ಯಕ್ಷ ಪೂರ್ಣಿಮಾ ಭಟ್‌, ಕಾರ್ಯನಿರ್ವಾಹಕ ಅಧಿಕಾರಿ ಸದಾನಂದ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಜನಾರ್ದನ ಗೌಡ, ಸುಚರಿತ ಶೆಟ್ಟಿ ಇದ್ದರು. ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಅಧ್ಯಕ್ಷ–ಉಪಾಧ್ಯಕ್ಷರು, ಫಲಾನುಭವಿಗಳು ಭಾಗವಹಿಸಿದ್ದರು.

1286 ರಲ್ಲಿ 480 ಪೂರ್ಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವರ್ಷ 8,300 ಮನೆಗಳ ನಿರ್ಮಾಣ ಗುರಿ ಹೊಂದಲಾಗಿದೆ. ಅದರಲ್ಲಿ 3 ಸಾವಿರ ಮನೆಗಳು ಪೂರ್ಣಗೊಂಡಿದ್ದು, ಇನ್ನೂ 5 ಸಾವಿರ ಮನೆಗಳು ವಿವಿಧ ಹಂತಗಳಲ್ಲಿ ಬಾಕಿ ಇವೆ ಎಂದು ಟಿ.ಎಸ್‌.  ಲೋಕೇಶ್‌ ತಿಳಿಸಿದರು.

ಮಂಗಳೂರು ತಾಲ್ಲೂಕಿಗೆ ಸಂಬಂಧಿಸಿದಂತೆ 1,283 ಮನೆಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಅವುಗಳ ಪೈಕಿ ಈಗಾಗಲೇ 480 ಮನೆಗಳು ಪೂರ್ಣಗೊಂಡಿದ್ದು, ಇನ್ನೂ 803 ಮನೆಗಳು ವಿವಿಧ ಹಂತಗಳಲ್ಲಿವೆ. ಅವುಗಳನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

* * 

ವಸತಿ ಯೋಜನೆಯಡಿ ಈ ವರ್ಷ ₹15.30 ಕೋಟಿ ಅನುದಾನ ಬಂದಿದೆ. ಎಲ್ಲ ಅನುದಾನವನ್ನು ಬಳಕೆ ಮಾಡಲು, ಕಾಮಗಾರಿ ತ್ವರಿತಗೊಳಿಸಬೇಕು.
ಕೆ. ಮೊಹ್ಮದ್‌ ಮೋನು
ಮಂಗಳೂರು ತಾ.ಪಂ. ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT