ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿ, ಕಡಲೆಯಲ್ಲಿ ತೇವಾಂಶ ಕೊರತೆ

Last Updated 17 ನವೆಂಬರ್ 2017, 9:15 IST
ಅಕ್ಷರ ಗಾತ್ರ

ಜನವಾಡ: ಜಿಲ್ಲೆಯಲ್ಲಿ ತೊಗರಿ ಹಾಗೂ ಕಡಲೆ ಬೆಳೆಯಲ್ಲಿ ತೇವಾಂಶ ಕೊರತೆ ಕಂಡು ಬಂದಿದೆ. ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಕ್ಷಿಪ್ರ ಸಂಚಾರ ಸಮೀಕ್ಷೆ ನಡೆಸಿದ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳ ತಂಡವು ತೇವಾಂಶ ಕೊರತೆ ಇರುವುದನ್ನು ಗುರುತಿಸಿದೆ.

ಈ ಸಮಸ್ಯೆ ನೀಗಿಸಲು ರೈತರು ಹೊಲದಲ್ಲಿನ ಎರೆ ಬಿಡಿಗಳನ್ನು ಮುಚ್ಚಬೇಕು. ನೀರಾವರಿ ಸೌಲಭ್ಯ ಹೊಂದಿದವರು ತೆಳುವಾಗಿ ನೀರು ಹಾಯಿಸಬೇಕುಎಂದು ತಂಡದ ಸದಸ್ಯರು ತಿಳಿಸಿದ್ದಾರೆ.

ತೊಗರಿ ಬೆಳೆಯಲ್ಲಿ ಹಸಿರು ಕಾಯಿಕೊರಕ ಬಾಧೆ ಕಾಡುತ್ತಿದೆ. ಆದರೂ ರೈತರು ತಮ್ಮ ಹೊಲದಲ್ಲಿ ಕೀಟ ಇರುವುದನ್ನು ಖಚಿತ ಪಡಿಸಿಕೊಂಡು ತತ್ತಿನಾಶಕ ಕೀಟನಾಶಕಗಳಾದ 3 ಮಿ.ಲೀಟರ್‌ ಪ್ರೊಪೆನೊಫಾಸ್ 50 ಇ.ಸಿ ಅಥವಾ 0.6 ಗ್ರಾಂ ಮಿಥೋಮಿಲ್ 40 ಎಸ್.ಪಿ. ಅಥವಾ 0.6 ಗ್ರಾಂ. ಥೈಯೋಡಿಕಾರ್ಬ್ 75 ಡಬ್ಲ್ಯೂ. ಪಿ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ಅವರು ತಿಳಿಸಿದ್ದಾರೆ.

ಆಣದೂರ, ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಹಾಗೂ ನಿರ್ಣಾ ಗ್ರಾಮಗಳ ವ್ಯಾಪ್ತಿಯಲ್ಲಿ ತೊಗರಿಯಲ್ಲಿ ಚುಕ್ಕೆ ಕಾಯಿಕೊರಕ ಅಥವಾ ಬಲೆಕಟ್ಟುವ ಕೀಟ ಕಂಡು ಬಂದಿದೆ. ಈ ಕೀಟವು ಬೆಳೆಯ ಮೊಗ್ಗು ಹಾಗೂ ಕಾಯಿಗಳನ್ನು ಕೂಡಿಸಿ ಬಲೆ ಹೆಣೆದು ಒಳಗಡೆ ಇದ್ದುಕೊಂಡು ಹಾನಿ ಉಂಟು ಮಾಡುತ್ತದೆ. ಕೀಟದ ನಿರ್ವಹಣೆಗಾಗಿ 0.5 ಮಿ.ಲೀಟರ್‌ ಡಿ.ಡಿ.ವಿ.ಪಿ 76 ಇ.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ತೊಗರಿ ಕಾಯಿ ಕಟ್ಟುವ ಹಂತದಲ್ಲಿದೆ. ಈ ಹಂತದಲ್ಲಿ ಕಾಯಿ ನೋಣದ ಬಾಧೆಯ ಸಾಧ್ಯತೆ ಇರುತ್ತದೆ. ಕಾಯಿ ನೊಣ ಬಾಧೆಯಿಂದ ತೊಗರಿ ಕಾಳುಗಳು ಖಂಡಾಗುತ್ತವೆ. ಇದನ್ನು ತಪ್ಪಿಸಲು ಅಂತರ ವ್ಯಾಪಿ ಕೀಟನಾಶಕಗಳಾದ ಥೈಯೋಮ್ಭಿಥಾಕ್ಸಾಮ್ 25 ಡಬ್ಲ್ಯೂ.ಜಿ @ 0.25 ಗ್ರಾಂ ಅಥವಾ ಇಮಿಡಾಕ್ಲೋಪ್ರೀಡ್ 17.8 ಎಸ್.ಎಲ್ @ 0.3 ಮಿ.ಲೀಟರ್‌ ಅಥವಾ ಡೈಮಿಥೋಯೆಟ್ 30 ಇ.ಸಿ @ 1.7 ಮಿ.ಲೀಟರ್‌ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಬೀದರ್, ಹುಮನಾಬಾದ್ ಹಾಗೂ ಬಸವಕಲ್ಯಾಣ ತಾಲ್ಲೂಕುಗಳ ಕೆಲ ಗ್ರಾಮಗಳಲ್ಲಿ ತೊಗರಿ ಬೆಳೆಯಲ್ಲಿ ಗೊಡ್ಡು ರೋಗ ಬಾಧೆ ಪತ್ತೆಯಾಗಿದೆ. ಈ ರೋಗದಿಂದ ತೊಗರಿಯನ್ನು ಸಂರಕ್ಷಿಸಲು ರೋಗ ಬಾಧಿತ ತೊಗರಿಯನ್ನು ಕಿತ್ತು ನಾಶಪಡಿಸಿ, ನಂತರ ನುಶಿನಾಶಕಗಳಾದ ಡಿಕೋಫಾಲ್ 20 ಇ.ಸಿ. 2.5 ಮಿ.ಲೀಟರ್‌ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಸಣ್ಣ ಗೋಲಾಕಾರದ ಕಂದು ಬಣ್ಣದ ಚುಕ್ಕೆಗಳು ಎಲೆಯ ಮೇಲೆ ಕಂಡು ಬರುವುದು ಎಲೆಚುಕ್ಕೆ ರೋಗದ ಲಕ್ಷಣ. ರೋಗದ ತೀವ್ರತೆ ಹೆಚ್ಚಾದರೆ ಎಲೆಗಳು ಸಸ್ಯದಿಂದ ಉದುರಿ ಹೋಗುತ್ತವೆ. ಇದರ ನಿರ್ವಹಣೆಗೆ 1 ಗ್ರಾಂ. ಕಾರ್ಬನ್‌ಡೈಜಿಮ್ 50 ಡಬ್ಲ್ಯೂ.ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ರೈತರು ಸಮೀಪದ ಕೃಷಿ ಅಧಿಕಾರಿಗಳು ಅಥವಾ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಬಹುದು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಎನ್.ಎಂ. ಸುನೀಲಕುಮಾರ ಯರಬಾಗ್, ಡಾ. ಸುನೀಲ ಕುಲಕರ್ಣಿ, ಡಾ. ಆರ್.ಎಲ್. ಜಾಧವ್, ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಹೊಸಾಳೆ, ಕೃಷಿ ಅಧಿಕಾರಿಗಳಾದ ಶತ್ರುಘ್ನ ಸಧುವಾಲೆ, ಪ್ರವೀಣ ಗವಾಳೆ ಸಮೀಕ್ಷಾ ತಂಡದಲ್ಲಿ ಇದ್ದರು.

* * 

ವಾರದಿಂದ ಜಿಲ್ಲೆಯಲ್ಲಿ ಕಡಿಮೆ ಉಷ್ಣಾಂಶ ಇದೆ. ಇದು ಎಲೆಚುಕ್ಕೆ ರೋಗ ವೃದ್ಧಿಗೆ ಕಾರಣ ಆಗಬಹುದು.
ಡಾ. ಆರ್.ಎಲ್. ಜಾಧವ್
ಕೃಷಿ ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT