ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ.ಇಂದಿರಾ ಗಾಂಧಿ ಅವರ ಕುಡ್ಲ ನಂಟು

Last Updated 19 ನವೆಂಬರ್ 2017, 3:22 IST
ಅಕ್ಷರ ಗಾತ್ರ

ದೇಶ ಕಂಡ ಅದ್ವಿತೀಯ ರಾಜಕಾರಣಿ, ಮಹಿಳಾ ಪ್ರಧಾನಿ ದಿ. ಇಂದಿರಾ ಗಾಂಧಿ ಅವರು ಇಂದು ಬದುಕಿದ್ದರೆ ಅವರಿಗೆ ಭರ್ತಿ ನೂರು ವರ್ಷ ತುಂಬಿ ರುತ್ತಿತ್ತು. 1917ರ ನವೆಂಬರ್‌ 19ರಂದು ಜನಿಸಿದ ಇಂದಿರಾ ಗಾಂಧಿ ಅವರು ತಮ್ಮ ರಾಜಕೀಯ ಜೀವನದಲ್ಲಿ ಏರಿಳಿತ ಕಂಡರೂ ಕೂಡ ದಕ್ಷ ರಾಜಕಾರಣಿಯಾಗಿಜನತೆಯ ಮನಗೆದ್ದವರು. ಜನ್ಮ ಶತಮಾನೋತ್ಸವದ ಈ ಹೊತ್ತಿನಲ್ಲಿ ‘ವಾಕಿಂಗ್‌ ಡಿಕ್ಷನರಿ ಆಫ್‌ ಕ್ರಿಕೆಟ್‌’ ಎಂಬ ಬಿರುದು ಹೊಂದಿರುವ ಮಂಗಳೂರಿನ ಕಸ್ತೂರಿ ಬಾಲಕೃಷ್ಣ ಪೈ ಅವರು ಇಂದಿರಾ ಗಾಂಧಿ ಅವರಿಗೆ ಮಂಗಳೂರಿನೊಂದಿಗೆ ಇದ್ದ ನಂಟು ಕುರಿತು ನೆನಪಿಸಿಕೊಂಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

‘ಇಂದಿರಾ ಗಾಂಧಿ ಅಂದರೆ ನನಗೆ ಮೊಲಿನಿಂದಲೂ ತುಂಬಾ ಅಭಿಮಾನ. ಕುಲ್‌ದೀಪ್‌ ನಾಯರ್‌ ಅವರ ‘ಬಿಟ್ವೀನ್‌ ದಿ ಲೈನ್ಸ್‌’ ಪುಸ್ತಕ ಓದಿದ ನಂತರ ಇಂದಿರಾ ಅವರ ಬಗೆಗಿನ ಅಭಿಮಾನ ಮತ್ತಷ್ಟು ಹೆಚ್ಚಾಯಿತು.

ಇಂದಿರಾ ಗಾಂಧಿ ಅವರಿಗೆ ಮಂಗಳೂರಿನ ನಂಟು ಬೆಳೆದಿದ್ದು, ಶ್ರೀನಿವಾಸ ಮಲ್ಯ ಅವರ ಮೂಲಕ. ‘ಬ್ಯೂ ಐಯ್ಡ್‌ ಬಾಯ್‌ ಆಫ್‌ ಕಾಂಗ್ರೆಸ್‌’ ಎಂದೇ ಜನಪ್ರಿಯರಾಗಿದ್ದ ಮಲ್ಯರು ಆಗ ಜವಹರಲಾಲ್‌ ನೆಹರೂ ಅವರ ಸಂಸದೀಯ ಕಾರ್ಯದರ್ಶಿ ಆಗಿದ್ದರು. ಮಲ್ಯರನ್ನು ಕೇಳದೆ ನೆಹರೂ ಅವರು ಏನನ್ನೂ ಮಾಡುತ್ತಿರಲಿಲ್ಲ. ಹಾಗಾಗಿ, ಇಂದಿರಾ ಗಾಂಧಿ ಅವರಿಗೆ ಮಲ್ಯರ ಮೂಲಕ ಮಂಗಳೂರಿನ ನಂಟು ಬೆಳೆದಿತ್ತು.

ಮಲ್ಯರು 1965ರಲ್ಲಿ ತೀರಿ ಹೋದಾಗ ಮೊದಲು ಅವರ ಮನೆಗೆ ಬಂದಿದ್ದು ಇಂದಿರಾ ಗಾಂಧಿ. ನೆಹರೂ ಅವರಿಗೆ ರಷ್ಯನ್‌ ಸರ್ಕಾರ ನೀಡಿದ್ದ ಏರ್‌ಕ್ರಾಫ್ಟ್‌ನಲ್ಲೇ ಮಲ್ಯರ ದೇಹವನ್ನು ಮಂಗಳೂರಿಗೆ ತರಲಾಗಿತ್ತು. ನೆಹರೂ ಅವರು ಆ ಏರ್‌ಕ್ರಾಫ್ಟ್‌ಗೆ ‘ಮೇಘ್‌ದೂತ್‌’ ಎಂದು ಹೆಸರಿಟ್ಟಿದ್ದರು. ಶ್ರೀನಿವಾಸ ಮಲ್ಯರ ಕನೆಕ್ಷನ್‌ನಿಂದಾಗಿಯೇ ಇಂದಿರಾ ಗಾಂಧಿ ಅವರಿಗೆ ಮಂಗಳೂರಿನ ಸಂಪರ್ಕ ಬೆಳೆಯಿತು.

ರಾಷ್ಟ್ರರಾಜಕಾರಣದಲ್ಲಿ ಇಂದಿರಾ ಅವರು ತೆಗೆದುಕೊಳ್ಳುತ್ತಿದ್ದ ಪ್ರತಿಯೊಂದು ನಿರ್ಧಾರವನ್ನು ಕಿವಿ ನಿಮಿರಿಸಿ ಕೇಳಿಸಿಕೊಳ್ಳುತ್ತಿದ್ದ ನನಗೆ 1971ರಲ್ಲಿ ಅವರನ್ನು ನೋಡುವ ಅವಕಾಶ ಸಿಕ್ಕಿತು. ನಾನು ಆಗಷ್ಟೇ ಪದವಿ ಮುಗಿಸಿ, ಐಎಎಸ್‌ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಆ ವೇಳೆ ನನ್ನ ತಂದೆ ಹೋಟೆಲ್‌ನಲ್ಲಿ ಬಂದುಕೂರುವಂತೆ ಹೇಳಿದರು.

ಓದಿನ ಜತೆಗೆ ಮೋತಿ ಮಹಲ್‌ ಹೋಟೆಲ್‌ನಲ್ಲಿ ಅಕೌಂಟ್ಸ್‌ ನೋಡಿಕೊಳ್ಳುತ್ತಿದ್ದೆ. ಅದು1971. ಆಗ ಇಂದಿರಾ ಗಾಂಧಿ ಅವರು ವರ್ಲ್‌ ವಿಂಡ್‌ ಟೂರ್‌ ಮಾಡುತ್ತಿದ್ದರು. ಆ ಸಂರ್ಭದಲ್ಲಿ ಅವರು ಕೇರಳದ ಮೂಲಕ ಮಂಗಳೂರಿಗೆ ಬಂದಿದ್ದರು. ಇಂದಿರಾ ಅವರು ಸರ್ಕಿಟ್‌ ಹೌಸ್‌ನಲ್ಲಿ ಉಳಿದುಕೊಂಡಿದ್ದರು. ಅವರ ಜತೆಗೆ ಬಂದಿದ್ದ ಸಿಬ್ಬಂದಿ ವರ್ಗಕ್ಕೆಲ್ಲ ನಮ್ಮ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು. ಇಂದಿರಾಗಾಂಧಿ ಅವರೊಂದಿಗೆ ಬಂದಿದ್ದ ಪೈಲೆಟ್‌ಗಳು, ಅಂಗರಕ್ಷಕರು ನಮ್ಮ ಹೋಟೆಲ್‌ನಲ್ಲೇ ತಂಗಿದ್ದರು.

ಆ ವೇಳೆ ನನಗೆ ಅವರೊಂದಿಗೆ ಒಡನಾಡುವ ಅವಕಾಶ ಸಿಕ್ಕಿತು. ಮೂರು ದಿನ ತಂಗಿದ್ದ ಅವರನ್ನು ನಾನು ಮಂಗಳೂರು ಬೀಚ್‌, ಕೊಲ್ಲೂರು, ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿಬಂದೆ. ಆಗ ಅವರೊಂದಿಗೆ ಸ್ನೇಹವೂ ಬೆಳೆಯಿತು. ಮಂಗಳೂರಿನಿಂದ ಅವರ ಪ್ರವಾಸ ಮುಂದುವರಿಯಿತು. ಆದರೆ, ಅವರೆಲ್ಲರೂ ದೆಹಲಿಗೆ ತೆರಳಿದ ನಂತರವೂ ನಾನು ಅವರೊಂದಿಗೆ ಫೋನ್‌ನಲ್ಲಿ ಸಂಪರ್ಕ ಇಟ್ಟುಕೊಂಡಿದ್ದೆ. ದೆಹಲಿಗೆ ಹೋದಾಗಲೆಲ್ಲ ಭೇಟಿ ಮಾಡುತ್ತಿದ್ದೆ.

1977ರಲ್ಲಿ ಇಂದಿರಾ ಗಾಂಧಿ ಚುನಾವಣೆಯಲ್ಲಿ ಸೋತಾಗ ನನಗೆ ತುಂಬ ದುಃಖವಾಗಿತ್ತು. ಅದೇವೇಳೆ, ಕರ್ನಾಟಕದಲ್ಲಿ ದೇವರಾಜ ಅರಸು ಅವರು ಇಂದಿರಾ ಗಾಂಧಿ ಅವರನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಯೋಜಿಸಿದರು. ‘ತುರ್ತುಪರಿಸ್ಥಿತಿ’ ಯಲ್ಲಿ ಅವರಿಗೆ ಜೈಲಾಗಲಿಲ್ಲ. ಚಿಕ್ಕಮಗಳೂರಿನಿಂದ ಇಂದಿರಾ ಗಾಂಧಿ ಅವರನ್ನು ಸ್ಪರ್ಧೆಗೆ ನಿಲ್ಲಿಸಬೇಕು ಎಂಬುದು ತೀರ್ಮಾನವಾದಾಗ ಅವರು ಮತ್ತೇ ಮರಳಿ ಕರ್ನಾಟಕಕ್ಕೆ ಬಂದರು.

1978 ರಲ್ಲಿ ಅವರು ತಿರುವನಂತಪುರ, ಕ್ಯಾಲಿಕಟ್‌, ಕಾಸರಗೋಡು ಮೂಲಕ ಮಂಗಳೂರಿಗೆ ಬಂದರು. ಹೀಗೆ ಅವರು ಮಂಗಳೂರಿಗೆಬರುತ್ತಿರುವ ಸಂದರ್ಭದಲ್ಲಿ ಅವರ ಪ್ರಯಾಣಿಸುತ್ತಿದ್ದ ಕಾರು ಕ್ಯಾಲಿಕಟ್‌ನಲ್ಲಿ ಕೆಟ್ಟು ನಿಂತಿತು. ಅವರ ಅಂಗರಕ್ಷಕರು ಹಳೆ ಸ್ನೇಹದಿಂದ ನನಗೆ ಕರೆಮಾಡಿದರು. ಆಗ ನಾನು ಮಂಗಳೂರಿನಿಂದ ಒಂದು ಕಾರನ್ನು ತೆಗೆದುಕೊಂಡು ಹೋದೆ. ಇಂದಿರಾ ಗಾಂಧಿ ಅವರು ನಾನು ತೆಗೆದುಕೊಂಡು ಹೋದ ಕಾರಿನಲ್ಲೇ ಮಂಗಳೂರಿಗೆ ಬಂದರು.

ಅವರು ಇಲ್ಲಿಗೆ ಬಂದಾಗ ಬೆಳಿಗ್ಗೆ ಆಗಿತ್ತು. ಹಾಗಾಗಿ, ನಮ್ಮ ಹೋಟೆಲ್‌ನಲ್ಲೇ ಅವರು ಬ್ರೇಕ್‌ಫಾಸ್ಟ್‌ ಮಾಡಿದರು. ಬೆಳಿಗಿನ ತಿಂಡಿಗೆ ನಾವು ಅವರಿಗೆ ಬ್ರೆಡ್‌ ಸ್ಯಾಂಡ್‌ವಿಚ್‌, ಕ್ಯಾಶ್ಯೂನಟ್‌ ಉಪ್ಕರಿ, ಬಟರ್‌ಮಿಲ್ಕ್‌ ನೀಡಿದೆವು. ನಂತರ ಅವರು ಮಂಗಳೂರಿನಿಂದ ಹಾಸನಕ್ಕೆ ಹೆಲಿಕಾಪ್ಟರ್‌ನಲ್ಲಿ ಹೋದರು. ಅವರು ನನಗೆ ಚಿಕ್ಕಮಗಳೂರಿಗೆ ಬರುವಂತೆಯೂ ತಿಳಿಸಿದರು. ಹತ್ತು ದಿನ ಅವರಜತೆಗೆ ತಿರುಗಿದ್ದು ಜೀವನದಲ್ಲಿ ಮರೆಯಲಾಗದ ಕ್ಷಣ. ಅವರುಗೆದ್ದು ಮತ್ತೇ ಅಧಿಕಾರದ ಗದ್ದುಗೆ ಏರಿದ ನಂತರವೂನಮ್ಮ ಬಗ್ಗೆ, ಮಂಗಳೂರಿನ ಬಗ್ಗೆ ಅಭಿಮಾನ ಇರಿಸಿಕೊಂಡಿದ್ದರು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT