ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುವಾದ ಕೊರತೆ; ಕೈತಪ್ಪಿದ ನೊಬೆಲ್

Last Updated 19 ನವೆಂಬರ್ 2017, 3:34 IST
ಅಕ್ಷರ ಗಾತ್ರ

ಮೈಸೂರು: ಕನ್ನಡದಲ್ಲಿ ಉತ್ಕೃಷ್ಟ ಸಾಹಿತ್ಯ ರಚನೆಯಾಗಿದೆ. ಆದರೆ ಇಂಗ್ಲಿಷ್‌ ಭಾಷೆಗೆ ನಮ್ಮ ಸಾಹಿತ್ಯ ಅನುವಾದವಾಗದೆ ನೊಬೆಲ್ ಕೈತಪ್ಪಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ವಿಷಾದ ವ್ಯಕ್ತಪಡಿಸಿದರು.

ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ವತಿಯಿಂದ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡಹಬ್ಬ ಮತ್ತು ಕವಿಗೋಷ್ಠಿ, ಕನ್ನಡ ವಿಕಾಸರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು ಅವರು ವಿಶ್ವಮಾನ್ಯ ಸಾಹಿತ್ಯ ರಚಿಸಿದ್ದಾರೆ. ರವೀಂದ್ರನಾಥ ಟ್ಯಾಗೋರ್ ಅವರಂಥ ಅಪ್ರತಿಮ ಪ್ರತಿಭೆ ಕುವೆಂಪು ಅವರದು. ಮಕ್ಕಳ ಸಾಹಿತ್ಯದಿಂದ ಹಿಡಿದು ಮಹಾಕಾವ್ಯದವರೆಗೂ ಕುವೆಂಪು ಅವರು ಸಾಹಿತ್ಯ ರಚಿಸಿದ್ದು, ಅನುವಾದಗೊಂಡಿದ್ದರೆ ಕನ್ನಡಿಗರಿಗೂ ನೊಬೆಲ್ ಗೌರವ ಸಲ್ಲುತ್ತಿತ್ತು ಎಂದರು.

ಶ್ರೀರಾಮಾಯಣ ದರ್ಶನಂ ಹೊರತುಪಡಿಸಿ ಕುವೆಂಪು ಅವರ ಬೇರೆ ಕೃತಿಗಳ ಅನುವಾದವಾಗಿರಲಿಲ್ಲ. ಬಿ.ಎಸ್.ಯಡಿಯೂರಪ‍್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ದೇಜಗೌ ಅವರ ನೇತೃತ್ವದಲ್ಲಿ ಕೇಳಿಕೊಂಡ ಬಳಿಕ ‘ಕುವೆಂಪು ಭಾಷಾಭಾರತಿ’ ಸ್ಥಾಪಿಸಲಾಯಿತು. ನಂತರ ಅನುವಾದದ ಕೆಲಸ ನಡೆಯುತ್ತಿದೆ ಎಂದರು.

ಕಲಾವಿದ ಬಿ.ಡಿ.ಜಗದೀಶ್ ಮಾತನಾಡಿ, ಹೊಗಳಿಕೆ, ಬಹುಮಾನ ಬಯಸದೆ ತನ್ನ ಕಾಯಕದಲ್ಲಿ ನಿರತನಾದ ವ್ಯಕ್ತಿಗೆ ಗೌರವ ಖಂಡಿತ ಸಿಕ್ಕೇಸಿಗುತ್ತದೆ. ಉತ್ತುವುದು ತನ್ನಿಚ್ಚೆ, ಫಲ ನೀಡುವುದು ದೈವಿಚ್ಛೆ ಎಂದು ಕುವೆಂಪು ಅಭಿಪ್ರಾಯಪಟ್ಟಿದ್ದಾರೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 27 ಸಾಧಕರಿಗೆ ‘ಕನ್ನಡ ವಿಕಾಸರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಎಚ್.ಕೆ.ರಾಮು ಅಧ್ಯಕ್ಷತೆ ವಹಿಸಿದ್ದರು. ಸುಯೋಗ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಪಿ.ಯೋಗಣ್ಣ ಕವಿಗೋಷ್ಠಿ ಉದ್ಘಾಟಿಸಿದರು.

ಕಸಾಪ ನಗರಾಧ್ಯಕ್ಷ ಕೆ.ಎಸ್.ಶಿವರಾಮ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕ ಟಿ.ಎನ್.ದಾಸೇಗೌಡ, ಡಾ.ವೈ.ಎಸ್.ಸಿದ್ದೇಗೌಡ, ವೇದಿಕೆ ಅಧ್ಯಕ್ಷೆ ಎಚ್.ಎಲ್.ಯಮುನಾ, ಜಾನಪದ ಗಾಯಕ ಅಮ್ಮ ರಾಮಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT