ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ನಮ್ಮತನ ಗಟ್ಟಿಗೊಳಿಸುವ ಭಾಷೆ

Last Updated 20 ನವೆಂಬರ್ 2017, 10:15 IST
ಅಕ್ಷರ ಗಾತ್ರ

ಶಿವಮೊಗ್ಗ: ‘ನಾವು ಎಷ್ಟೇ ಪರಭಾಷೆಗಳ ಪ್ರಭಾವಕ್ಕೆ ಒಳಗಾದರೂ ಅದು ಜೀರ್ಣವಾಗಿ ಕನ್ನಡವಾಗಿಯೇ ಹೊರಹೊಮ್ಮಿದಾಗ ಮಾತ್ರ ಕನ್ನಡ ಭಾಷೆ, ನೆಲೆ, ಜಲ ಉಳಿಯಲು ಸಾಧ್ಯ’ ಎಂದು ಶಿವಮೊಗ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಸವಿತಾ ನಾಗಭೂಷಣ ಹೇಳಿದರು.

ತಾಲ್ಲೂಕಿನ ಪಿಳ್ಳಂಗಿರಿಯ ರಾಷ್ಟ್ರಕವಿ ಕುವೆಂಪು ಮಹಾ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಏರ್ಪಡಿಸಿದ್ದ ಶಿವಮೊಗ್ಗ ತಾಲ್ಲೂಕು 7ನೇ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಕನ್ನಡ ಎಂಬ ಪದವೇ ಒಂದು ರೀತಿಯ ಸಂಭ್ರಮ. ಕನ್ನಡ ನಮ್ಮತನವನ್ನು ಗಟ್ಟಿಗೊಳಿಸುವ ಸಾಧನ. ಹಾಗಾಗಿ ಕನ್ನಡ ಭಾಷೆ ನಮ್ಮ ಜತೆಯಲ್ಲಿಯೇ ಇರಬೇಕು. ನಮ್ಮ ತೊಗಲಿನ ಜತಗೆ ಬಂದಿರುವ ಕನ್ನಡ ಎಂಬ ಕವಚವನ್ನು ತೆಗೆದು ಹಾಕಿದರೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ, ಪ್ರತಿಯೊಬ್ಬರೂ ಅಗತ್ಯ ಬಿದ್ದಾಗ ಮಾತ್ರವೇ ಅನ್ಯಭಾಷೆಗಳನ್ನು ಮಾತನಾಡಬೇಕೇ ವಿನಾ ಅವಕಾಶ ಸಿಕ್ಕಾಗಲೆಲ್ಲಾ ಕನ್ನಡವನ್ನೇ ನುಡಿಯಬೇಕು’ ಎಂದರು.

ಸರ್ಕಾರಿ ಶಾಲೆಗಳು ಹಾಗೂ ಕನ್ನಡ ಶಾಲೆಗಳು ಮಕ್ಕಳನ್ನು ಕ್ರಿಯಾಶೀಲರನ್ನಾಗಿ ಮಾಡುತ್ತವೆ. ಬದುಕಿನ ಶಿಕ್ಷಣ ಅಲ್ಲಿ ಸಿಗುತ್ತದೆ. ಆದರೆ, ಪೋಷಕರು ಮಕ್ಕಳ ಅಭಿರುಚಿ ಅರ್ಥೈಸಿಕೊಳ್ಳದೆ ಆಂಗ್ಲ ಮಾಧ್ಯಮಕ್ಕೆ ಸೇರಿಸುವ ಸಂಕಲ್ಪ ಮಾಡುತ್ತಿದ್ದಾರೆ. ಕೇವಲ ಅಂಕಗಳು, ಆಂಗ್ಲ ಭಾಷೆಯ ವ್ಯಾಮೋಹ ಮಾತ್ರವೇ ಮಕ್ಕಳನ್ನು ಪರಿಪೂರ್ಣ ವ್ಯಕ್ತಿಗಳನ್ನಾಗಿ ಮಾಡುವುದಿಲ್ಲ.

ಮಕ್ಕಳು ತಮ್ಮ ಬಾಲ್ಯವನ್ನು ಅನುಭವಿಸಿದಾಗ ಮಾತ್ರ ಮುಂದೆ ಅವರು ಉತ್ತಮ ಕವಿಗಳಾಗಿ, ಸಾಹಿತಿಗಳಾಗಿ, ಕಲಾವಿದರಾಗಿ ಬೆಳೆಯಲು ಸಾಧ್ಯ. ಹಾಗಾಗಿ ಪೋಷಕರು ಕನ್ನಡವನ್ನು ಅನ್ನದ ಭಾಷೆಯಲ್ಲ, ಚಿನ್ನದ ಭಾಷೆಯಲ್ಲ ಎನ್ನುವ ಗೊಡವೆಗೆ ಹೋಗದೆ ನಮ್ಮ ಭಾಷೆ, ನೆಲೆ, ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರೈತ ಮುಖಂಡ ಕಡಿದಾಳು ಶಾಮಣ್ಣ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಕನ್ನಡ ಎನ್ನುವುದು ಕೇವಲ ತೋರಿಕೆಯಾಗಬಾರದು. ಅದು ನಮ್ಮ ನಿತ್ಯದ ಬದುಕಿನ ಉಸಿರಾಗಬೇಕು. ಅಲ್ಲದೆ ನಾವಿಂದು ಕುವೆಂಪು ಅವರ ಕಥೆ, ಕವನಗಳನ್ನು ಓದುತ್ತಿದ್ದೇವೆಯೇ ವಿನಾ ಅವರು ಹೇಳಿಕೊಟ್ಟ ಮಂತ್ರ ಮಾಂಗಲ್ಯವನ್ನು ಪಾಲಿಸುತ್ತಿಲ್ಲ. ಸಾಲದಲ್ಲಿ ಸಿಲುಕಿರುವ ನಾವು ಆಡಂಬರದ ಮದುವೆಗಳಿಗೆ ಮನಸ್ಸು ಮಾಡದೆ ಮಂತ್ರ ಮಾಂಗಲ್ಯದಂತಹ ಸರಳ ಮದುವೆಗಳಿಗೆ ಮನಸ್ಸು ಮಾಡಬೇಕು’ ಎಂದರು.

ಪ್ರೊ.ಎಂ.ಬಿ. ನಟರಾಜ್ ಮಾತನಾಡಿ, ‘ನೆರೆಯ ರಾಷ್ಟ್ರಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕನ್ನಡ ಭಾಷೆ ಸಂದಿಗ್ಧದಲ್ಲಿ ಇದೆ. ಹಾಗಾಗಿ ನಾವು ಕೇವಲ ಸರ್ಕಾರದತ್ತ ಬೊಟ್ಟು ಮಾಡದೆ, ಕನ್ನಡ ಉಳಿಸುವ ಜವಾಬ್ದಾರಿ ಹೊರಬೇಕಿದೆ ಎಂದು ಅರ್ಥೈಸಿಕೊಳ್ಳಬೇಕು’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಿ.ಬಿ.ಶಂಕರಪ್ಪ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಹುತ್ತದೊಳಗಿನ ಹಾವುಗಳನ್ನಾಗಿ ಮಾಡದೆ ಈ ನಾಡಿನ ನೆಲ, ಜಲ, ಭಾಷೆಯನ್ನು ಕಟ್ಟಿ ಬೆಳೆಸುವ ವೀರರನ್ನಾಗಿ ಮಾಡಬೇಕು ಎಂದರು.

ಶಾಸಕಿ ಶಾರದಾ ಪೂರ‍್ಯಾನಾಯ್ಕ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಜಿ.ಪಿ.ಸಂಪತ್‌ ಕುಮಾರ್‌, ಸಿ.ಎಸ್.ಷಡಕ್ಷರಿ,  ಜಿ.ಪಲ್ಲವಿ, ಪಿ.ಆರ್‌.ನಿಂಗಪ್ಪ, ನಾಗರಾಜ್‌, ವನಜಾಕ್ಷಿ ಸುರೇಶ್,  ರವಿಶಂಕರ್, ಚನ್ನಬಸಪ್ಪ ನ್ಯಾಮತಿ, ಎಸ್‌.ಎಂ.ಲೋಕೇಶ್ವರಪ್ಪ, ಎಂ.ಎಲ್‌. ಶಿವಕುಮಾರ್ ಅವರೂ ಇದ್ದರು.

ಸಮ್ಮೇಳನಾಧ್ಯಕ್ಷರ ಅವಲೋಕನ: ಕನ್ನಡ ಪ್ರಾಧ್ಯಾಪಕ ಡಾ.ಕುಂಸಿ ಉಮೇಶ್‌ ‘ಸಮ್ಮೇಳನಾಧ್ಯಕ್ಷರ ಸಾಹಿತ್ಯಾವಲೋಕನ’ ಎಂಬ ಗೋಷ್ಠಿಯಲ್ಲಿ ಕಾವ್ಯಗಳ ಅವಲೋಕನ ಕುರಿತು ಮಾತನಾಡಿ, ‘ಅನೇಕ ಕವಯಿತ್ರಿಯರು ಸ್ತ್ರೀವಾದ, ದಲಿತವಾದ ಎನ್ನುವ ಚೌಕಟ್ಟು ಹಾಕಿಕೊಳ್ಳುತ್ತಾರೆ.

ಆದರೆ, ಸವಿತಾ ನಾಗಭೂಷಣ ಯಾವುದೇ ಚೌಕಟ್ಟು ಹಾಕಿಕೊಳ್ಳದೇ ನಯವಾಗಿ ತಮ್ಮ ಕಾವ್ಯಗಳನ್ನು ನಿವೇದಿಸುತ್ತಾರೆ. ಜನಸಾಮಾನ್ಯರ ಬದುಕು ಬವಣೆಗಳೇ ಇವರ ಕಾವ್ಯದ ವಸ್ತುಗಳಾಗಿವೆ’ ಎಂದರು. ಕುವೆಂಪು ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಕುಮಾರಚಲ್ಯ ಕನ್ನಡ ಸಾಹಿತ್ಯ ಪರಂಪರೆ ವಿಷಯದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಊರಲ್ಲೆಲ್ಲಾ ಹಬ್ಬದ ವಾತಾವರಣ
ಸಾಹಿತ್ಯ ಸಮ್ಮೇಳನದ ಹಿನ್ನಲೆಯಲ್ಲಿ ಪಿಳ್ಳಂಗಿರಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಎಲ್ಲೆಲ್ಲೂ ಕನ್ನಡ ಧ್ವಜಗಳು ರಾರಾಜಿಸುತ್ತಿದ್ದವು. ಊರನ್ನು ಹಸಿರು ತೋರಣಗಳಿಂದ ಸಿಂಗರಿಸಲಾಗಿತ್ತು.

ಊರಿನ ಹಲವು ಮನೆಗಳ ಎದುರು ‘ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುತ್ತಿರುವ ಪ್ರತಿಯೊಬ್ಬರಿಗೂ ಸ್ವಾಗತ’ ಎನ್ನುವ ರಂಗೋಲಿ ಹಾಕಲಾಗಿತ್ತು. ಸಮ್ಮೇಳನಾಧ್ಯಕ್ಷರನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ವೀರಗಾಸೆ, ಡೊಳ್ಳುಕುಣಿತ ಮೆರವಣಿಗೆ ಅಂದ ಹೆಚ್ಚಿಸಿದವು.

ಸಮ್ಮೇಳನ ನಿರ್ಣಯ
ಇಲ್ಲಿನ ಎಂಪಿಎಂ ಕಾರ್ಖಾನೆಯನ್ನು ಕೂಡಲೇ ಆರಂಭಿಸಬೇಕು. ವಿಐಎಸ್ಎಲ್ ಕಾರ್ಖಾನೆ ಖಾಸಗೀಕರಣ ಕ್ರಮವನ್ನು ವಿರೋಧಿಸಿ, ಅದನ್ನು ರಕ್ಷಿಸಬೇಕು. ಮನೆಯಿಲ್ಲದ ಬಡವರಿಗೆ ನಿವೇಶನ ಕೊಟ್ಟು ಮನೆ ಕಟ್ಟಿ ಕೊಡಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಬೆಲೆ ಏರಿಕೆ ತಡೆಯಲು ಕೇಂದ್ರ ಸರ್ಕಾರ ಮುಂದಾಗಬೇಕು. ರೈತರ ಬೆಳೆಗೆ ಯೋಗ್ಯ ಬೆಲೆ ನಿಗದಿ ಮಾಡಬೇಕು ಎಂಬ ನಿರ್ಣಯಗಳನ್ನು ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT