ಹಿತ್ತಲಲ್ಲಿ ಕಂಡ ಕೆಂಪು ಸುಂದರಿ

ಶರೀರಕ್ಕಿಂತ ಒಂದೂವರೆ ಪಟ್ಟು ಉದ್ದದ ಹಾಗೂ ರೇಷ್ಮೆಯಂತಹ ಬಾಲ ಹೊಂದಿರುವ ಈ ಕೆಂದಳಿಲು ಕುಶಲ ಕಲೆಗಾರನಂತೆ ಹಲ್ಲಿನಿಂದಲೇ ಬಲಿತ ಕಾಯಿಗಳನ್ನು ತೂತು ಮಾಡಿ ಎಳನೀರು ಕುಡಿಯುವ ಕೌಶಲಕ್ಕೆ ಯಾರಾದರೂ ತಲೆದೂಗಲೇಬೇಕು

ಹಿತ್ತಲಲ್ಲಿ ಕಂಡ ಕೆಂಪು ಸುಂದರಿ

ನಮ್ಮ ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೊ ಹಾಗೂ ಮಂದಣ್ಣ ಅವರುಗಳು ಹಾರುವ ಓತಿಯನ್ನು ಹುಡುಕಿಕೊಂಡು ಹೊರಟ ರಸವತ್ತಾದ ಕಥೆಯನ್ನು ನೀವೂ ಓದಿರಬಹುದು. ಆ ಕಥೆಯನ್ನು ಓದಿ ರೋಮಾಂಚನಗೊಂಡಿದ್ದ ನನ್ನಂಥವರಿಗೆ ಹಾರುವ ಓತಿಯನ್ನು ಕಾಣುವ ಅದೃಷ್ಟ ಒಲಿಯದಿದ್ದರೂ ಹಾರುವ ಕೆಂದಳಿಲನ್ನು ನೋಡುವ ಭಾಗ್ಯ ಸಿಕ್ಕಿತ್ತು.

ಸಹ್ಯಾದ್ರಿಯ ತಪ್ಪಲಿನಲ್ಲಿ ನಮ್ಮ ಮನೆ. ನಾನು ಚಿಕ್ಕವಳಿದ್ದಾಗ ‘ತೋಟ ಮತ್ತು ಬೆಟ್ಟದಲ್ಲಿ ಇದ್ದ ಹಣ್ಣುಗಳನ್ನು ಕೆಂದಳಿಲುಗಳು ತಿನ್ನುತ್ತಿವೆ’ ಎಂದು ಅಪ್ಪ ಒಮ್ಮೆ ಮನೆಯಲ್ಲಿ ಹೇಳುತ್ತಿದ್ದುದನ್ನು ಕೇಳಿ ಅವುಗಳನ್ನು ನೋಡುವ ತವಕದಿಂದ ಓಡಿಹೋಗಿದ್ದೆ. ಓಟದ ಸದ್ದಿಗೆ ಹೆದರಿ ಆ ಅಳಿಲುಗಳು ಒಂದು ಮರದಿಂದ ಇನ್ನೊಂದಕ್ಕೆ ಹಾರಿ ಕ್ಷಣ ಮಾತ್ರದಲ್ಲಿ ಕಣ್ಮರೆಯಾಗಿದ್ದವು. ಹಾಗೆಯೇ ವಿದ್ಯಾಭ್ಯಾಸದ ನಿಮಿತ್ತ ಪರ ಊರಿಗೆ ಹೋಗಬೇಕಾದ್ದರಿಂದ ಅದರ ನೆನಪು ಮರೆತುಹೋಗಿತ್ತು.

ಹಬ್ಬಕ್ಕೆಂದು ಮೊನ್ನೆ ಊರಿಗೆ ಬಂದವಳಿಗೆ ಮನೆಯ ಹಿಂದಿದ್ದ ಬೆಟ್ಟದಲ್ಲಿ ಗರಗಸ ಆಡಿಸುತ್ತಿರುವ ಶಬ್ದ ಕೇಳುತ್ತಿತ್ತು. ಅಪ್ಪನಲ್ಲಿ ‘ಯಾವ ಮರ ಕಡಿಸುತ್ತಿದ್ದೀರಿ’ ಎಂದೆ. ‘ಮರ ಕಡಿಸುತ್ತಿಲ್ಲ ಕಣೆ, ಯಾವುದೋ ಹಕ್ಕಿಯ ಕೂಗು ಇರಬೇಕು’ ಎಂದರು. ಅರೆ! ಇದು ಯಾವ ಹಕ್ಕಿಯ ಕೂಗು ಇದಾಗಿರಬಹುದು ಎಂಬ ಕುತೂಹಲದಿಂದ ಕೂಗನ್ನು ಆಲಿಸಿ ಮನೆಯ ಹಿತ್ತಲಲ್ಲಿ ಹುಡುಕುತ್ತ ಹೋದವಳಿಗೆ ಕಂಡದ್ದು, ಎಳೆ ತೆಂಗಿನ ಕಾಯಿಗಳನ್ನು

ಕೊರೆಯುತ್ತಿದ್ದ ಹಾಗೂ ಚಿಕ್ಕವಳಿದ್ದಾಗ ನೋಡಲು ಹಾತೊರೆಯುತ್ತಿದ್ದ ಕೆಂಜಳಿಲು!

ವಿಶ್ವದ ಅತ್ಯಂತ ಸುಂದರ ಅಳಿಲುಗಳಲ್ಲಿ ಒಂದಾದ ಕೆಂದಳಿಲು ಅಥವಾ ಕೆಂಜಳಿಲನ್ನು ಕಣ್ಣಾರೆ ಕಂಡ ಆ ಕ್ಷಣ ಅವಿಸ್ಮರಣೀಯ. ಹಾರುವ ಸಸ್ತನಿಗಳಲ್ಲಿ ಒಂದಾಗಿರುವ ಭಾರತದ ಈ ದೈತ್ಯ ಅಳಿಲುಗಳು (Indian Gaint Squirrel / Malabar Gaint Squirrel) ಸಾಮಾನ್ಯವಾಗಿ ದಟ್ಟ ಕಾಡು, ಸಹ್ಯಾದ್ರಿ ಶ್ರೇಣಿ, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡು ಬರುತ್ತವೆ. ನಮ್ಮ ರಾಜ್ಯದ ಮಲೆನಾಡು, ನಾಗರಹೊಳೆ ಹಾಗೂ ಭದ್ರಾ ಅಭಯಾರಣ್ಯಗಳಲ್ಲಿ ಇವುಗಳ ಸಂತತಿ ಹೆಚ್ಚಾಗಿದೆ.

ಕೆಂದಳಿಲುಗಳು ಜೀವಿಸುವ ಪ್ರದೇಶಕ್ಕೆ ಅನುಗುಣವಾಗಿ ಕೆಂಪು, ತಿಳಿಗೆಂಪು ಹಾಗೂ ಕಂದು ಬಣ್ಣವನ್ನು ಹೊಂದಿರುತ್ತವೆ. ಇವುಗಳ ಕಾಲುಗಳ ನಡುವೆ ಇರುವ ತೆಳು ಚರ್ಮ ರೆಕ್ಕೆಯಂತೆ ಕೆಲಸ ಮಾಡಿ ಸುಮಾರು ಆರು ಅಡಿಗಳಷ್ಟು ದೂರ ಹಾರಲು ನೆರವಾಗುತ್ತವೆ. ಸುಮಾರಾಗಿ ಇವುಗಳು 3-4 ಕೆ.ಜಿ.ಗಳಷ್ಟು ತೂಕ ಹೊಂದಿದ್ದು, ಅದರ ರೇಷ್ಮೆಯಂತಹ ಆಕರ್ಷಕ ಬಾಲ, ಅದರ ಶರೀರಕ್ಕಿಂತ ಒಂದೂವರೆ ಪಟ್ಟು ಉದ್ದವಿರುವುದು ಮತ್ತೊಂದು ವೈಶಿಷ್ಟ್ಯ.

ಹೆಚ್ಚಾಗಿ ಬಿದಿರುಗಳ ಒಳಗೆ ಗೂಡು ಕಟ್ಟುವ ಇದು ಬಿಸಿಲೇರಿದಂತೆ ವಿಶ್ರಾಂತಿ ಪಡೆದು, ಮುಂಜಾನೆ ಹಾಗೂ ಸಂಜೆ ವೇಳೆ ಆಹಾರದ ಹುಡುಕಾಟ ನಡೆಸುತ್ತದೆ. ಸಸ್ಯಾಹಾರಿಯಾದ ಈ ಸಸ್ತನಿ ಕಾಡಿನ ಮರಗಳಲ್ಲಿ ಸಿಗುವ ಹಣ್ಣುಗಳನ್ನು ತಿನ್ನುವುದೇ ಹೆಚ್ಚು. ಹಾಗಾಗಿ ಮರ ಬಿಟ್ಟು ನೆಲದ ಮೇಲೆ ಇಳಿಯುವುದು ಕಡಿಮೆ. ಆದರೆ ಈಗ ಬರಿದಾಗುತ್ತಿರುವ ಕಾಡುಗಳಲ್ಲಿ ಆಹಾರದ ಅಭಾವ ತಲೆದೂರಿರುವುದರಿಂದ ನಾಡಿಗೂ ಲಗ್ಗೆ ಇಡುತ್ತಿದೆ. ತೆಂಗು ಕೃಷಿಕರಿಗೆ ಹೆಚ್ಚು ತಲೆನೋವು ಆಗಿರುವ ಕೆಂದಳಿಲುಗಳು ಫಲಭರಿತ ತೆಂಗುಗಳಿಗೆ ಬಾಯಿಕ್ಕುತ್ತವೆ. ಕುಶಲ ಕಲೆಗಾರನಂತೆ ಹಲ್ಲಿನಿಂದಲೇ ಬಲಿತ ಕಾಯಿಗಳನ್ನು ತೂತು ಮಾಡಿ ಎಳನೀರು ಕುಡಿಯುವ ಕೌಶಲಕ್ಕೆ ಯಾರಾದರೂ ತಲೆದೂಗಲೇಬೇಕು.

ಇತ್ತೀಚಿನ ದಿನಗಳಲ್ಲಿ ಕೆಂದಳಿನ ಅಳಿವು ಹೆಚ್ಚಾಗುತ್ತಿದೆ. ಇದರ ಆಹಾರ ಹಾಗೂ ಚರ್ಮಕ್ಕಾಗಿ ಕೊಲ್ಲುವ ಪ್ರವೃತ್ತಿ ಹೆಚ್ಚುತ್ತಿದೆ. ರೈತರು ಸಹ ತಮ್ಮ ಫಸಲನ್ನು ಉಳಿಸಿಕೊಳ್ಳಲು ಕೊಲ್ಲುತ್ತಿದ್ದಾರೆ. ವನ್ಯಜೀವಿ ರಕ್ಷಣೆಗೆ ಹಲವು ಕಾಯ್ದೆಗಳಿವೆ ಏನೋ ನಿಜ. ಆದರೆ, ನಮ್ಮ ಪರಿಸರದ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುವ ಇಂತಹ ಜೀವಿಗಳ ರಕ್ಷಣೆಯಲ್ಲಿ ನಮ್ಮೆಲ್ಲರ ಹೊಣೆಯೂ ಇದೆಯಲ್ಲವೆ?

⇒ಚಿತ್ರಗಳು: ಲೇಖಕರವು

Comments
ಈ ವಿಭಾಗದಿಂದ ಇನ್ನಷ್ಟು
ಹಿನ್ನೀರಲಿ ತೇಲುವ ಭವಿಷ್ಯದ ದೋಣಿ!

ಕರ್ನಾಟಕ ದರ್ಶನ
ಹಿನ್ನೀರಲಿ ತೇಲುವ ಭವಿಷ್ಯದ ದೋಣಿ!

17 Apr, 2018
ಬಿಸಿಲಲಿ ನಲಿವ ಮುಳ್ಳುಮುತ್ತುಗ

ಕರ್ನಾಟಕ ದರ್ಶನ
ಬಿಸಿಲಲಿ ನಲಿವ ಮುಳ್ಳುಮುತ್ತುಗ

17 Apr, 2018
ಕಲೆಯಲ್ಲಿ ಮೀಯಿಸುವ ಮೀಯ್ಯಾರು

ಕರ್ನಾಟಕ ದರ್ಶನ
ಕಲೆಯಲ್ಲಿ ಮೀಯಿಸುವ ಮೀಯ್ಯಾರು

17 Apr, 2018
ಸಿಳ್ಳೆ ಹೊಡೆಯುವ ಹರಟೆ ಮಲ್ಲರು!

ಹಳದಿ ಕಣ್ಣಿನ ಹರಟೆ ಮಲ್ಲ
ಸಿಳ್ಳೆ ಹೊಡೆಯುವ ಹರಟೆ ಮಲ್ಲರು!

10 Apr, 2018
ಎಲ್ಲುಂಟು ಸೋಗೆ ಚಾವಣಿ?

‘ನೈಸರ್ಗಿಕ ಎ.ಸಿ’
ಎಲ್ಲುಂಟು ಸೋಗೆ ಚಾವಣಿ?

10 Apr, 2018