ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಸುತ್ತಿಗೆ ಸೈನಾ, ಸಿಂಧು

Last Updated 22 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕೌಲೂನ್‌: ಭಾರತದ ಸೈನಾ ನೆಹ್ವಾಲ್, ಪಿ.ವಿ ಸಿಂಧು ಹಾಗೂ ಎಚ್‌.ಎಸ್‌ ಪ್ರಣಯ್‌ ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್‌ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದುಕೊಂಡಿದ್ದ ಸೈನಾ ಮಹಿಳೆಯರ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ 21–19, 23–21ರಲ್ಲಿ ನೇರ ಗೇಮ್‌ಗಳಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ 44ನೇ ಸ್ಥಾನದಲ್ಲಿರುವ ಡೆನ್ಮಾರ್ಕ್‌ನ ಮೆಟ್ಟೆ ಪುಲ್ಸನ್ ಅವರನ್ನು ಮಣಿಸಿದರು.

46 ನಿಮಿಷಗಳ ಪೈಪೋಟಿಯಲ್ಲಿ 11ನೇ ರ‍್ಯಾಂಕ್‌ನ ಸೈನಾ ಸ್ಮ್ಯಾಷ್‌ ಮತ್ತು ರಿಟರ್ನ್ಸ್‌ಗಳ ವೇಳೆ ನಿಖರ ಆಟದಿಂದ ಗಮನ ಸೆಳೆದರು. ಮೊದಲ ಗೇಮ್‌ನಲ್ಲಿ ಸುಲಭವಾಗಿ ಗೆದ್ದರು. ಆದರೆ ಎರಡನೇ ಗೇಮ್‌ನಲ್ಲಿ ಡೆನ್ಮಾರ್ಕ್‌ನ ಆಟಗಾರ್ತಿ ಪ್ರಬಲ ಪೈಪೋಟಿ ನೀಡಿದರು. ಒಂದು ಹಂತದಲ್ಲಿ ಸಮಬಲ ಹೊಂದಿದ್ದ ಪಂದ್ಯದ ಕೊನೆಯ ನಿಮಿಷಗಳಲ್ಲಿ ಸೈನಾ ತಮ್ಮ ಚಾಣಾಕ್ಷತೆಯಿಂದ ಜಯಿಸಿದರು.

ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದಿರುವ ಸೈನಾ ಮುಂದಿನ ಪಂದ್ಯದಲ್ಲಿ ಚೀನಾದ ಕಠಿಣ ಎದುರಾಳಿ ಚೆನ್ ಯೂಫಿ ವಿರುದ್ಧ ಆಡಲಿದ್ದಾರೆ.

ಸಿಂಧುಗೆ ಜಯ: ಎರಡನೇ ಶ್ರೇಯಾಂಕದ ಸಿಂಧು 21–18, 21–10ರಲ್ಲಿ ಹಾಂಕಾಂಗ್‌ನ ಲೆವುಂಗ್ ಯೆಟ್‌ ಯೀ ವಿರುದ್ಧ ಜಯಿಸಿದರು. ಅವರು ಮುಂದಿನ ಪಂದ್ಯದಲ್ಲಿ ಜಪಾನ್‌ನ ಅಯಾ ಓಹರಿ ಅಥವಾ ರಷ್ಯಾದ ಎವಾಗೆನಿಯಾ ಕೋಸೆಕಯಾ ವಿರುದ್ಧ ಆಡಲಿದ್ದಾರೆ.

ಪ್ರಣಯ್‌ಗೆ ಜಯ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯ ಆಟಗಾರ ಎಚ್‌.ಎಸ್‌.ಪ್ರಣಯ್‌ 19–21, 21–17, 21–15ರಲ್ಲಿ ಹಾಂಕಾಂಗ್‌ನ ಹು ಯುನ್ ಎದುರು ಗೆದ್ದು ಸಂಭ್ರಮಿಸಿದರು.

ಭಾರತದ ಆಟಗಾರ ಎರಡನೇ ಸುತ್ತಿನ ಪಂದ್ಯದಲ್ಲಿ ಜಪಾನ್‌ನ ಕುಜುಮಸಾ ಸಕಾಯ್ ಎದುರು ಆಡಲಿದ್ದಾರೆ. ಇಂಡೊನೇಷ್ಯಾ ಸೂಪರ್ ಸರಣಿ ಟೂರ್ನಿಯಲ್ಲಿ ಜಪಾನ್‌ನ ಆಟಗಾರನ ಎದುರು ಸೆಮಿಫೈನಲ್‌ನಲ್ಲಿ ಪ್ರಣಯ್ ಸೋತರು.

ಕಶ್ಯಪ್‌, ಸೌರಭ್‌ಗೆ ಸೋಲು: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿದ್ದ ಪರುಪಳ್ಳಿ ಕಶ್ಯಪ್‌ ಮೊದಲ ಸುತ್ತಿನ ಹೋರಾಟದಲ್ಲಿ ಸೋತರು. 21–15, 9–21, 20–22ರಲ್ಲಿ ಕೊರಿಯಾದ ಲೀ ಡಾಂಗ್‌ ಕುಯೆನ್ ಎದುರು ಸೋತರು.

ಸೌರಭ್ ವರ್ಮಾ 15–21, 8–21ರಲ್ಲಿ ನೇರ ಗೇಮ್‌ಗಳಿಂದ ಇಂಡೊನೇಷ್ಯಾದ ಟಾಮಿ ಸುಗಾರ್ತೊ ಅವರ ಸವಾಲನ್ನು ಎದುರಿಸುವಲ್ಲಿ ವಿಫಲರಾದರು.

ಅಶ್ವಿನಿ, ಸಿಕ್ಕಿ ಜೋಡಿಗೆ ಸೋಲು: ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಅಗ್ರಗಣ್ಯ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್‌.ಸಿಕ್ಕಿ ರೆಡ್ಡಿ ಜೋಡಿ 11–21, 21–19, 19–21ರಲ್ಲಿ ಚೀನಾದ ಹುವಾಂಗ್ ಡಾಂಗ್‌ಪಿಂಗ್ ಮತ್ತು ಲೀ ವೆನ್‌ಮಿ ವಿರುದ್ಧ ತಮ್ಮ ಹೋರಾಟ ಅಂತ್ಯಗೊಳಿಸಿತು.

ಪ್ರಬಲ ಪೈಪೋಟಿ ನೀಡಿದ ಭಾರತದ ಜೋಡಿ ಅಂತಿಮ ಸೆಟ್‌ನಲ್ಲಿ ಚುರುಕಾಗಿ ಆಡಲು ವಿಫಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT