ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಯಕ–ದಾಸೋಹದ ಪಾಠ ಹೇಳಿದ ಸಿದ್ದರಾಮಯ್ಯ

Last Updated 23 ನವೆಂಬರ್ 2017, 19:38 IST
ಅಕ್ಷರ ಗಾತ್ರ

ಬೆಳಗಾವಿ: ಹಿಂದಿನ ವಿಧಾನಸಭೆ ಕಲಾಪದಲ್ಲಿ ವ್ಯಾಕರಣ ಪಾಠ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಸವಣ್ಣನವರು ಪ್ರತಿಪಾದಿಸಿದ ಕಾಯಕ–ದಾಸೋಹದ ಬಗ್ಗೆ ಗುರುವಾರ ಪಾಠ ಮಾಡಿದರು.

‘ಎಮ್ಮೆ–ಕೋಣಗಳು ಮೃತಪಟ್ಟಾಗ ಪರಿಹಾರ ನೀಡಬೇಕು’ ಎಂದು ಬಿಜೆಪಿಯ ಉಮೇಶ ಕತ್ತಿ ಕೋರಿದರು.

‘ಏಯ್ ಕತ್ತಿ, ನಾನು ಎಮ್ಮೆ ಮೇಯಿಸಿದ್ದೇನೆ. ನೀನು ಎಮ್ಮೆ ಮೇಯಿಸಿದ್ದೀಯಾ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ‘ಇಲ್ಲ’ ಎಂದು ಕತ್ತಿ ತಲೆ ಅಲ್ಲಾಡಿಸಿದರು.

‘ಮತ್ತೆ ಎಮ್ಮೆ ಕಷ್ಟ ನಿನಗೆ ಏನು ಗೊತ್ತಿದೆ. ಕುರಿ ಸತ್ತಾಗ ಮಾತ್ರ ಪರಿಹಾರ ಕೊಡಲು ಆರಂಭಿಸಲಾಗಿತ್ತು. ಈಗ ಹಸು, ಎತ್ತುಗಳು ಸತ್ತರೂ ಪರಿಹಾರ ನೀಡಲಾಗುತ್ತಿದೆ. ಹಾಗಂತ ಕುರುಬರು ಮಾತ್ರ ಕುರಿ ಸಾಕುವುದಿಲ್ಲ. ಎಲ್ಲ ಜಾತಿಯವರೂ ಸಾಕುತ್ತಾರೆ’ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.

‘ನಾವು ಲಿಂಗಾಯಿತರು. ಕುರಿ ಸಾಕುವುದಿಲ್ಲ’ ಎಂದು ಕತ್ತಿ ಪ್ರತಿಕ್ರಿಯಿಸಿದರು.

‘ಲಿಂಗಾಯತ ಅಂತೀಯಾ. ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳುತ್ತಾರೆ. ಕಾಯಕ– ದಾಸೋಹ ಎಂಬುದರ ಅರ್ಥ ಗೊತ್ತಿದೆಯಾ ಕತ್ತಿ... ಸಂಪತ್ತನ್ನು ಉತ್ಪಾದನೆ ಮಾಡುವುದೇ ಕಾಯಕ. ದಾಸೋಹ ಎಂದರೆ ಹಾಸ್ಟೆಲ್‌, ಭೋಜನ ಶಾಲೆ ಕಟ್ಟಿ ಊಟ ಹಾಕುವುದಲ್ಲ. ದುಡಿದ ಸಂಪತ್ತಿನ ಸಮಾನ ಹಂಚಿಕೆ ಅಂತ’ ಎಂದು ಹೇಳಿದ ಮುಖ್ಯಮಂತ್ರಿ, ‘ನಾನು ಹೇಳುವುದು ಸರಿಯಿದೆಯಾ’ ಎಂದು ಜೆಡಿಎಸ್‌ನ ವೈ.ಎಸ್‌.ವಿ. ದತ್ತ ಅವರನ್ನು ಪ್ರಶ್ನಿಸಿದರು.

‘ಯಾವುದೇ ಕಾಯಕ ಕೀಳಲ್ಲ. ಶ್ರೇಷ್ಠವೂ ಅಲ್ಲ. ಬಸವಣ್ಣನವರ ಕಾಲದಲ್ಲೂ ಕೆಲವರು ಕಾಯಕ ಮಾಡುತ್ತಿದ್ದರು. ಕೆಲವರು ಕುಳಿತು ತಿನ್ನುತ್ತಿದ್ದರು’ ಎಂದು ಸಿದ್ದರಾಮಯ್ಯ ಹೇಳಿದರು.

‘ಬಸವಣ್ಣನವರು ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ಹೇಳಿದ್ದಾರೆ. ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಯ್ಯ ಬಡವನಯ್ಯ. ಎನ್ನ ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಶವಯ್ಯ ಎಂದೂ ಅವರು ಹೇಳಿದ್ದರು. ನಾನು ಅವರ ತತ್ವವನ್ನು ಪಾಲನೆ ಮಾಡುತ್ತಿದ್ದೇನೆ. ಆದರೆ ನೂರಕ್ಕೆ ನೂರರಷ್ಟು ಅಲ್ಲ. ಅವರ ವಿಚಾರಧಾರೆಯಲ್ಲಿ ನಡೆಯುವುದೇ ಸಮಾಜದ ಎಲ್ಲ ಸಮಸ್ಯೆಗಳಿಗೆ ಪರಿಹಾರ’ ಎಂದು ಮುಖ್ಯಮಂತ್ರಿ ವಿವರಿಸಿದರು.

‌‘ಆ ಕಾಲದಲ್ಲಿ ವೃತ್ತಿಯ ಆಧಾರದಲ್ಲಿ ಜಾತಿಯನ್ನು ನಿಗದಿ ಮಾಡಲಾಗಿತ್ತು. ಆದರೆ, ಬಸವಣ್ಣನವರು ಸಮ ಸಮಾಜದ ಕನಸು ಕಂಡವರು. ನಮ್ಮ ಸಂವಿಧಾನಕ್ಕೆ ಅವರ ಸಿದ್ಧಾಂತವೇ ಮಾದರಿ. ಈಗಿನ ವಿಧಾನಸಭೆ ರೀತಿಯಲ್ಲಿ ಅನುಭವ ಮಂಟಪ ಇತ್ತು. ಅಲ್ಲಿ ಆಯ್ದಕ್ಕಿ ಮಾರಯ್ಯ ಎಂಬ ವಚನಕಾರ ಇದ್ದರು. ಹೌದಲ್ವ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಆಗ ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ಆಯ್ದಕ್ಕಿ ಲಕ್ಕಮ್ಮ ಎಂದು ಹೇಳಿದರು. ‘ನೀನು ವೀರಶೈವ ಮಹಾಸಭಾದ ಕಾರ್ಯದರ್ಶಿಯಾಗಿದ್ದು ಸಾರ್ಥಕ ಆಯಿತು. ಪ್ರವಚನಕ್ಕೆ ಯಾರೂ ನನ್ನನ್ನು ಕರೆಯುವುದಿಲ್ಲ. ಕರೆದರೆ ಇದಕ್ಕಿಂತ ಚೆನ್ನಾಗಿ ಬಸವಣ್ಣನವರ ಬಗ್ಗೆ, ಶರಣ ತತ್ವಗಳ ಬಗ್ಗೆ ವಿವರಿಸುತ್ತೇನೆ’ ಎಂದರು.

‘ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತೆ ಪ್ರಧಾನಿ ವರ್ತನೆ’
ಬೆಳಗಾವಿ:
‘ಮಹದಾಯಿ ನದಿ ನೀರಿನ ವಿಷಯದಲ್ಲಿ ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎಂಬಂತೆ ಪ್ರಧಾನಿ ನರೇಂದ್ರ ಮೋದಿ ವರ್ತಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಹದಾಯಿ ಕುರಿತ ಚರ್ಚೆಗೆ ವಿಧಾನಸಭೆಯಲ್ಲಿ ಗುರುವಾರ ಉತ್ತರ ನೀಡಿದ ಅವರು, ‘ಮಹಾರಾಷ್ಟ್ರ, ಗೋವಾದ ಕಾಂಗ್ರೆಸ್‌ ನಾಯಕರನ್ನು ಒಪ್ಪಿಸಿಕೊಂಡು ಬನ್ನಿ ಎಂದು ಪ್ರಧಾನಿ ಹೇಳುತ್ತಿದ್ದಾರೆ. ನನ್ನನ್ನು ಮಾತುಕತೆಗೆ ಕರೆದರೆ, ಸದನದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಅಲ್ಲಿನ ಮುಖ್ಯಮಂತ್ರಿಗಳೂ ಅದನ್ನೇ ಮಾಡಬೇಕು. ಪರಿಸ್ಥಿತಿ ಹೀಗಿರುವಾಗ, ಮೂರು ಸರ್ಕಾರಗಳ ಜತೆ ಮಾತುಕತೆ ನಡೆಸಿ ಇತ್ಯರ್ಥ ಪಡಿಸಬೇಕಾದ ಪ್ರಧಾನಿ ಅದನ್ನು ಮಾಡುತ್ತಿಲ್ಲ’ ಎಂದು ದೂರಿದರು.

‘ಒಂದು ತಿಂಗಳಿನಲ್ಲಿ ಇತ್ಯರ್ಥ ಪಡಿಸುವುದಾಗಿ ಯಡಿಯೂರಪ್ಪನವರು ಹೇಳಿದ್ದಾರೆ.  ಕುರುಡನಿಗೆ ಏನು ಬೇಕು, ಎರಡು ಕಣ್ಣು ಬೇಕು. ಅವರು ಮಾಡಿದರೆ ಸಂತೋಷ’ ಎಂದರು.

‘ನಾವು ಎಷ್ಟೇ ದೈನ್ಯರಾಗಿ ಬೇಡಿದರೂ ಗೋವಾದವರು ಜಪ್ಪಯ್ಯ ಅನ್ನುತ್ತಿಲ್ಲ. ನಾವೆಲ್ಲ ವೈರಿಗಳಲ್ಲ. ಭಾರತೀಯರು. ಅಕ್ಕಪಕ್ಕದ ರಾಜ್ಯಗಳವರು ಒಟ್ಟಾಗಿ ಹೋಗಬೇಕು ಎಂದರೂ ಅವರು ಒಪ್ಪಿಕೊಳ್ಳುತ್ತಿಲ್ಲ. ಇಂತಹ ಹೊತ್ತಿನಲ್ಲಿ ನೀವೇ ಬಗೆಹರಿಸಿಕೊಳ್ಳಿ ಎಂದು ಪ್ರಧಾನಿ ಹೇಳಿದರೆ ಹೇಗೆ’ ಎಂದೂ ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT