ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿಜಿಗುಟ್ಟಿದ ಜನ, ಝಣಝಣ ಎನ್ನದ ಕಾಂಚಾಣ

ಸಾಹಿತ್ಯ ಸಮ್ಮೇಳನದಲ್ಲಿ ಸದ್ದು ಮಾಡದ ಪುಸ್ತಕ ವ್ಯಾಪಾರ
Last Updated 26 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ’ಪುಸ್ತಕ ಮಳಿಗೆಗಳಿಗೆ ಜನ ಸಾಕಷ್ಟು ಮಂದಿ ಬರುತ್ತಿದ್ದಾರೆ. ವ್ಯಾಪಾರ ಮಾತ್ರ ಹೇಳಿಕೊಳ್ಳುವಂತಿಲ್ಲ’ ಎಂದು ಸಾಹಿತ್ಯ ಸಮ್ಮೇಳನದಲ್ಲಿನ ಬಹುತೇಕ ಪುಸ್ತಕ ವ್ಯಾಪಾರಿಗಳ ಅಳಲು.

ಮೈಸೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ನಿರ್ಧರಿಸುತ್ತಿದ್ದಂತೆ ಪುಸ್ತಕ ವ್ಯಾಪಾರಿಗಳಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದ್ದವು. ಆ ಕಾರಣದಿಂದಲೇ 449 ಮಳಿಗೆಗಳು ಭರ್ತಿಯಾದ ನಂತರವೂ ನೂರಕ್ಕೂ ಹೆಚ್ಚು ಮಂದಿ ವ್ಯಾಪಾರಿಗಳು, ಪ್ರಕಾಶಕರು ಮಳಿಗೆ ಕೋರಿ ಬೇಡಿಕೆ ಸಲ್ಲಿಸಿದ್ದರು. ಈ ನಿರೀಕ್ಷೆಗೆ ತಕ್ಕೆಂತೆ ಸಮ್ಮೇಳನದ ಪುಸ್ತಕ ಮಳಿಗೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಸಹೃದಯರು ಭೇಟಿಕೊಟ್ಟಿದ್ದಾರೆ. ವ್ಯಾಪಾರದ ಮಾತನಾಡಿದರೆ ಮಾತ್ರ ಮಳಿಗೆಗಳ ಮಾಲೀಕರ ಮುಖ ಬಾಡುತ್ತದೆ.

ಪುಸ್ತಕ ವ್ಯಾಪಾರ ಕಳೆಗುಂದಲಿಕ್ಕೆ ಜನರ ನಿರಾಸಕ್ತಿ ಮಾತ್ರವೇ ಕಾರಣವಲ್ಲ. ಮಳಿಗೆಗಳ ಅವೈಜ್ಞಾನಿಕ ರಚನೆ ಕೂಡ ವ್ಯಾಪಾರಕ್ಕೆ ಪೆಟ್ಟು ನೀಡಿದೆ ಎಂದು ಬಹಳಷ್ಟು ವ್ಯಾಪಾರಿಗಳು ದೂರಿದರು.

’ಮಳಿಗೆಗಳನ್ನು ರೂಪಿಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು, ಪ್ರಕಾಶಕರ ಸಂಘದ ಸಲಹೆ ಪಡೆಯಬಹುದಿತ್ತು. ಸಮ್ಮೇಳನದ ಆಯೋಜಕರು ತಮಗಿಷ್ಟ ಬಂದಂತೆ ನಡೆದುಕೊಳ್ಳುತ್ತಾರೆ’ ಎಂದು ’ಸೃಷ್ಟಿ ಪ್ರಕಾಶನ’ದ ನಾಗೇಶ್ ದೂರಿದರು.

’ಮಳಿಗೆಗಳನ್ನು ಬ್ಲಾಕ್‌ಗಳನ್ನಾಗಿ ರೂಪಿಸಲಾಗಿದೆ. ಮೊದಲ ಬ್ಲಾಕ್‌ಗೆ ಭೇಟಿ ನೀಡಿದ ಜನ ಅಲ್ಲಿಯೇ ಪುಸ್ತಕ ಖರೀದಿಸಿ ನಂತರದ ಬ್ಲಾಕ್‌ಗಳತ್ತ ಹೋಗುತ್ತಿರಲಿಲ್ಲ. ಇದರಿಂದಾಗಿ 2ನೇ ಬ್ಲಾಕ್‌ ನಂತರದ ಎಲ್ಲ ಬ್ಲಾಕ್‌ಗಳಲ್ಲಿ ಪುಸ್ತಕದ ವ್ಯಾಪಾರ ನೀರಸವಾಗಿತ್ತು’ ಎಂದು ನಾಗೇಶ್ ಹೇಳಿದರು.

₹ 10ರ ಪುಸ್ತಕಕ್ಕೂ ಇರದ ಬೇಡಿಕೆ: ಮೊದಲ ಬ್ಲಾಕ್‌ ಹೊರತುಪಡಿಸಿದರೆ ಉಳಿದ ಬ್ಲಾಕ್‌ನಲ್ಲಿ ₹ 10ರ ಬೆಲೆಯ ಪುಸ್ತಕಕಗಳೂ ಹೆಚ್ಚು ಮಾರಾಟವಾಗಿಲ್ಲ. ಸಮ್ಮೇಳನದ ಅಂತಿಮ ದಿನವಾದ ಭಾನುವಾರ ಶೇ 10ರಿಂದ 50ರವರೆಗೂ ರಿಯಾಯಿತಿ ನೀಡಿದರು. ಹಳೆಯ ಅಮೂಲ್ಯ ಪುಸ್ತಕಗಳಿಗೆ ಹಿಂದಿನ ದರವನ್ನೇ ನಿಗದಿಪಡಿಸಿದರೂ ಓದುಗರ ಆಸಕ್ತಿ ಕಂಡುಬರಲಿಲ್ಲ.

ಪುಸ್ತಕ ಮಳಿಗೆಗಳ ಹೊರಾಂಗಣದಲ್ಲಿ ಸುತ್ತಲೂ ವಾಣಿಜ್ಯ ಮಳಿಗೆಗಳನ್ನು ಹಾಕಲಾಗಿತ್ತು. ಮೊದಲು ಇಲ್ಲಿಗೆ ಬಂದವರು ಖರೀದಿ ನಡೆಸಿ, ತಿನಿಸುಗಳನ್ನು ತಿಂದು ನಂತರವೇ ಪುಸ್ತಕ ಮಳಿಗೆಗಳತ್ತ ಬರುತ್ತಿದ್ದರು. ಮಧ್ಯಮವರ್ಗದ ಜನರು ಸಾಕಷ್ಟು ಹಣವನ್ನು ವಾಣಿಜ್ಯ ಮಳಿಗೆಗಳಲ್ಲಿಯೇ ವ್ಯಯಿಸಿದ್ದರಿಂದ ಪುಸ್ತಕಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದುದು ಕಂಡುಬಂತು.

ಹಿಂದಿನ ಸಮ್ಮೇಳನಗಳೇ ಉತ್ತಮ:
‘ರಾಯಚೂರು ಹಾಗೂ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಬರುತ್ತಿದ್ದ ಸಾಹಿತ್ಯಾಸಕ್ತರು ನಮ್ಮನ್ನು ಎಬ್ಬಿಸಿ ಪುಸ್ತಕ ಖರೀದಿಸುತ್ತಿದ್ದರು. ಇಲ್ಲಿ 10 ಗಂಟೆಯಾದರೂ ಜನರ ಸುಳಿವಿಲ್ಲ. ಬರುವ ಜನರೂ ಪುಸ್ತಕ ಖರೀದಿಸದೇ ಸುಮ್ಮನೆ ನೋಡಿ ಹೋಗುತ್ತಿದ್ದಾರೆ. ಗಂಗಾವತಿಯಿಂದ ಪುಸ್ತಕಗಳನ್ನು ತರುವುದಕ್ಕೆ ₹ 15 ಸಾವಿರ ವೆಚ್ಚವಾಗಿದೆ. ಕನಿಷ್ಠ ಅಷ್ಟು ಪ್ರಮಾಣದ ವ್ಯಾಪಾರವೂ ಆಗಿಲ್ಲ’ ಎಂದು ವಿಜಯಪುರದ ’ಡಾ.ಜಚನಿ ಪುಸ್ತಕ ಪ್ರಕಾಶನ’ದ ಎಂ.ಬಿ.ರೋಡಗಿ ಬೇಸರ ವ್ಯಕ್ತಪಡಿಸಿದರು.

’ವ್ಯಾ‍ಪಾರ ತೀರಾ ಸಾಧಾರಣವಾಗಿದೆ. ಇಲ್ಲಿಗೆ ಬರುವ ಮೊದಲು ಇದ್ದ ನಿರೀಕ್ಷೆಗಳು ಹುಸಿಯಾಗಿವೆ. ಮಳಿಗೆಗಳ ರಚನೆಯೂ ಸರಿಯಾಗಿಲ್ಲ’ ಎಂದು ಲೇಖಕ ಹಾಗೂ ’ಅನ್ವೇಷಣೆ’ ಪ್ರಕಾಶನದ ಆರ್.ಜಿ. ಹಳ್ಳಿ ನಾಗರಾಜು ಹೇಳಿದರು.

’ಹಳೆಯ ಪುಸ್ತಕಗಳನ್ನು  ₹ 10ಕ್ಕೆ ಮಾರಾಟ ಮಾಡುತ್ತಿದ್ದೇನೆ.  ಆಸಕ್ತರಿಗೆ ಪುಸ್ತಕ ಸಿಗಲಿ ಎಂದು ಮಾರಾಟಕ್ಕೆ ಇಟ್ಟಿದ್ದೇನೆ. ಆದರೆ, ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆ ಇದೆ’ ಎಂದು ಮೈಸೂರಿನ ಸೀತಾರಾಮಯ್ಯ ಹೇಳಿದರೆ, ’ಪ್ರಚಾರ ಸರಿಯಾಗಿ ಮಾಡಿಲ್ಲ. ವಾಣಿಜ್ಯ ಮಳಿಗೆಗಳಿಗೆ ಕೊಟ್ಟಷ್ಟು ಆದ್ಯತೆ ಪುಸ್ತಕ ಮಳಿಗೆಗಳಿಗೆ ಕೊಟ್ಟಿಲ್ಲ. ಹೋಬಳಿ ಮಟ್ಟದಲ್ಲಿ ಸಮ್ಮೇಳನ ನಡೆದಿದ್ದರೂ ಇದಕ್ಕಿಂತ ಹೆಚ್ಚಿನ ಬೇಡಿಕೆ ಇರುತ್ತಿತ್ತು’ ಎಂದು ’ಕರ್ನಾಟಕ ಬುಕ್ ಏಜೆನ್ಸಿ’ಯ ರಾಜಣ್ಣ ಕಟುವಾಗಿ ಹೇಳಿದರು.

***

ಪುಸ್ತಕ ವ್ಯಾಪಾರಿಗಳ ಆರೋಪಗಳು

* ಮಳಿಗೆಗಳನ್ನು ಬ್ಲಾಕ್ ಸ್ವರೂಪದಲ್ಲಿ ಹಾಕಿದ್ದು ಸರಿಯಲ್ಲ. ಒಂದೇ ಬ್ಲಾಕ್‌ನಲ್ಲಿ ಸುತ್ತಲೂ ಮಳಿಗೆಗಳು ಇರುವಂತೆ ನೋಡಿಕೊಂಡಿದ್ದರೆ ಎಲ್ಲ ಮಳಿಗೆಗಳಲ್ಲೂ ವ್ಯಾಪಾರ ಆಗುತ್ತಿತ್ತು
* ಶೌಚಾಲಯ ವ್ಯವಸ್ಥೆ ಸರಿ ಇರಲಿಲ್ಲ
* ಕುಡಿಯುವ ನೀರಿನ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಇದರಿಂದ ದುಬಾರಿ ಬೆಲೆ ತೆತ್ತು ಬಾಟಲಿ ನೀರನ್ನೇ ವ್ಯಾಪಾರಿಗಳು ಆಶ್ರಯಿಸಿದರು
* ಬ್ಲಾಕ್‌ನ ಮುಂದೆ ಪುಸ್ತಕ ಪ್ರಕಾಶನಗಳ ಹೆಸರನ್ನು ಹಾಕಿದ್ದರೆ ಪ್ರಸ್ತಕ ಪ್ರಿಯರು ತಮಗೆ ಬೇಕಾದ ನಿರ್ದಿಷ್ಟ ಪುಸ್ತಕಗಳ ಅಂಗಡಿ ಹುಡುಕಲು ಸುಲಭವಾಗುತ್ತಿತ್ತು
* ಮಳಿಗೆಗಳ ಸಂಖ್ಯೆಯೂ ಅನುಕ್ರಮವಾಗಿಲ್ಲ
* ಸ್ವಚ್ಛತೆ ಇಲ್ಲ

***

ಅನಕೃ ಕಾದಂಬರಿಗಳನ್ನು ಕಡಿಮೆ ಬೆಲೆಗೆ ಕೊಟ್ಟರೂ ತೆಗದುಕೊಳ್ಳುವವರಿಲ್ಲ. ₹ 20ಕ್ಕೆ ಒಳ್ಳೆಯ ಕಾದಂಬರಿಗಳನ್ನು ಕೊಡುತ್ತಿದ್ದೇವೆ. ಬೇಡಿಕೆ ನಿರೀಕ್ಷೆಯಷ್ಟಿಲ್ಲ.
–ಬಸವರಾಜೇಗೌಡ, ಬಿ.ಎಸ್.ಗೌಡ ಬುಕ್‌ ಹೌಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT