ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೆಲುಗು ಮೇಲಿದೆ ಶೈವ ಸಾಹಿತ್ಯದ ಗಾಢಪ್ರಭಾವ’

ವಿಚಾರ ಸಂಕಿರಣ ಉದ್ಘಾಟನೆಯಲ್ಲಿ ಕೊಲಕಲೂರಿ ಇನಾಕ್‌ ಅಭಿಮತ
Last Updated 27 ನವೆಂಬರ್ 2017, 19:27 IST
ಅಕ್ಷರ ಗಾತ್ರ

ಬೆಂಗಳೂರು: ‘ಶೈವ ಸಾಹಿತ್ಯ ಕರ್ನಾಟಕಕಷ್ಟೇ ಸೀಮಿತವಾಗದೆ, ವಿಶ್ವಮಾನ್ಯತೆ ಪಡೆದಿದೆ. ತೆಲುಗು ಮೇಲೂ ಶೈವ ಸಾಹಿತ್ಯ ಗಾಢ ಪ್ರಭಾವ ಬೀರಿದೆ ಎಂದು’ ತೆಲುಗು ಲೇಖಕ ಕೊಲಕಲೂರಿ ಇನಾಕ್‌ ಅಭಿಪ್ರಾಯಪಟ್ಟರು.

ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಬೆಂಗಳೂರು ವಿಶ್ವ ವಿದ್ಯಾಲಯದ ತೆಲುಗು ವಿಭಾಗ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ತೆಲುಗು– ಕನ್ನಡ ಶೈವ ಸಾಹಿತ್ಯ–ಒಂದು ಸಾಮಾಜಿಕ ದೃಷ್ಟಿಕೋನ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿದ್ದ ಅಸಮಾನತೆ, ಮೇಲು–ಕೀಳು, ಶೋಷಣೆ ಧಿಕ್ಕರಿಸಿ ಹುಟ್ಟಿದ್ದೇ ಶಿವಶರಣರ ಸಾಹಿತ್ಯ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಅವರಂತಹ ಶಿವಶರಣರು ವಚನ ಸಾಹಿತ್ಯದ ಮೂಲಕ ಕ್ರಾಂತಿಯನ್ನೇ ಮಾಡಿದರು. ಇವರಿಂದ ಪ್ರಭಾವಿತರಾದ ಪಾಲ್ಕುರಿಕೆ ಸೋಮನಾಥ, ಮಲ್ಲಿಕಾರ್ಜುನ ಪಂಡಿತ ಅವರು ತೆಲುಗು ನೆಲದಲ್ಲಿ ಶೈವ ಸಾಹಿತ್ಯವನ್ನು ಸಮೃದ್ಧವಾಗಿ ಬೆಳೆಸಿದರು. ಬಸವಣ್ಣನ ಕುರಿತು 12ನೇ ಶತಮಾನದಿಂದ 19ನೇ ಶತಮಾನದವರೆಗೆ ತೆಲುಗು ನಾಡಿನಲ್ಲಿ 355 ಕೃತಿಗಳು ರಚನೆಯಾಗಿವೆ. ಕನ್ನಡ ಮತ್ತು ತೆಲುಗು ನಡುವೆ ಶೈವ ಸಾಹಿತ್ಯ ಗಾಢ ಸಂಬಂಧ ಬೆಸೆದಿದೆ’ ಎಂದರು.

‘ಆರ್ಯರ ಆಕ್ರಮಣಕ್ಕೂ ಮೊದಲು ಈ ದೇಶದ ಉದ್ದಗಲಕ್ಕೂ ಶಿವನನ್ನು ಆರಾಧಿಸುವ ಶೈವ ಪಂಥವಿತ್ತು. ಶೈವ ಪಂಥ, ಶೈವ ಸಾಹಿತ್ಯದ ಹೆಜ್ಜೆ ಗುರುತು ಇಂದಿಗೂ ದೇಶದೆಲ್ಲೆಡೆ ಇದೆ. ಇದಕ್ಕೆ ಉತ್ತರದ ಕಾಶಿ ಕ್ಷೇತ್ರವೇ ನೈಜ ಸಾಕ್ಷಿ’ ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಾದೇಶಿಕ ಕಾರ್ಯದರ್ಶಿ ಎಸ್‌.ಪಿ.ಮಹೇಶ್‌ ಮಾತನಾಡಿ, ‘12ನೇ ಶತಮಾನದಲ್ಲಿ ಕನ್ನಡದ ನೆಲದಲ್ಲಿ ಹುಟ್ಟಿದ ವಚನ ಸಾಹಿತ್ಯ ಸಾಮಾಜಿಕ ಕ್ರಾಂತಿಯನ್ನೇ ಉಂಟು ಮಾಡಿತು. ಯಾವುದೇ ಜಾತಿ, ಮತಗಳಿಗೆ ಪ್ರಾಧಾನ್ಯತೆ ನೀಡದೆ, ದುಡಿಯುವ ಜನರಿಗೆ ಮನ್ನಣೆ ಕೊಟ್ಟು, ಕಾಯಕವೇ ಕೈಲಾಸ ತತ್ವವನ್ನು ವಚನ ಸಾಹಿತ್ಯ ಬೋಧಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT