ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೆ ಆಡುತ್ತಾವ, ಗಾಣ ತಿರುಗುತ್ತಾವ...

Last Updated 2 ಡಿಸೆಂಬರ್ 2017, 4:50 IST
ಅಕ್ಷರ ಗಾತ್ರ

ಮೂಡುಬಿದಿರೆ: ಪಕ್ಷಿ, ಪ್ರಾಣಿ, ಸಸ್ಯ, ಕೃಷಿರಂಗ, ವಾಣಿಜ್ಯಿಕ ಬಳಕೆ ಹೀಗೆ... ವೈವಿಧ್ಯತೆಯೊಂದಿಗೆ ಆಳ್ವಾಸ್‌ ಕೃಷಿಸಿರಿ ವಿಶಾಲ ಕರ್ನಾಟಕದ ಕೃಷಿ ಬದುಕಿನ ವಿವಿಧ ಕೋನಗಳನ್ನು ಪರಿಚಯಿಸುತ್ತಿದೆ.

ಮುಂಡ್ರುದೆಗುತ್ತು ರಾಮ ಮೋಹ ನರೈ ಆವರಣದ ಸುಮಾರು 6 ಎಕರೆ ಪ್ರದೇಶದಲ್ಲಿ ಭಾನುವಾರದವರೆಗೆ ನಡೆ ಯಲಿರುವ ಕೃಷಿಸಿರಿ ರೈತಾಪಿ ಗಳಂ ತೆಯೇ ಆಸಕ್ತರಿಗೆ, ವಿದ್ಯಾ ರ್ಥಿಗಳಿಗೆ ಹೊಸ ಲೋಕವನ್ನೇ ಪರಿಚಯಿಸುತ್ತಿದೆ.

ಮತ್ಸ್ಯಲೋಕ, ಸಮುದ್ರ ಚಿಪ್ಪುಗಳ ವಿಭಾಗ, ವಿವಿಧ ತೆರನಾದ ಪುಷ್ಪಲೋಕ, ಗೆಡ್ಡೆಗೆಣಸು ಹಣ್ಣುಕಾಯಿಗಳ ವಿಭಾ ಗ, ಜಗತ್ತಿನ ವಿವಿಧ ‍ಪ್ರಭೇದದ ಪಕ್ಷಿ ಪ್ರಪಂಚ, ಪ್ರಾಣಿಗಳು– ಸಾಕು ಪ್ರಾಣಿಗಳು, ಗಿಡಮೂಲಿಕೆಗಳ ವಿಭಾಗ, ಬೋನ್ಸಾಯ್‌ (ಕುಬ್ಜ ಮರ ಕುಂಡಗಳು) ಗಿಡಗಳು ಪ್ರಾಣಿ ಸಸ್ಯ ಕ್ಷೇತ್ರವನ್ನು ಪರಿಚಯಿಸಿ ಕುತೂಹಲವನ್ನು ಹೆಚ್ಚಿಸುತ್ತಿವೆ.

ಗ್ರಾಮೀಣ ಹಾಗೂ ಕೃಷಿ ಬದುಕಿನ ವಿವಿಧ ನೆಲೆಗಳನ್ನು ಪರಿಚಯಿಸುವ ಪ್ರಯತ್ನವೂ ಇಲ್ಲಿದೆ. ಆಲೆಮನೆ ಕಬ್ಬಿನ ಗಾಣದಲ್ಲಿ ರಸಹಿಂಡುವುದು, ಬೆಲ್ಲತಯಾರಿಸುವ ವಿಧಾನ,  ಕರಟ ಶಿಲ್ಪ, ಹಣ್ಣುಗಳಲ್ಲಿ ಚಿತ್ರಣ ಮುಂತಾದ ಕರಕುಶಲ ಕಲೆ ಇಲ್ಲಿ ಕಾಣಬಹುದು. ಇದರೊಂದಿಗೆ  ಹೈನು ಉದ್ಯಮ, ವಿವಿಧ ತಳಿಯ ಎತ್ತುದನಗಳು, ಮೊಲ ಸಾಕಣೆ, ಆಲಂಕಾರಿಕ ಹೂವು, ಮೀನು, ಪಕ್ಷಿಗಳ ಸಾಕಣೆಯ ಪರಿಚಯವೂ ಇಲ್ಲಿ ಕಾಣ ಸಿಗುತ್ತದೆ.

ನಾರಿಕೇಳ ವೈವಿಧ್ಯ: ಲಕ್ಷದ್ವೀಪ, ಅಂಡಮಾನ್‌, ಕೇರಳ (ಕಾಸರಗೋಡು) ಮತ್ತಿತರ ಕಡೆಗಳಲ್ಲಿ ಬೆಳೆಯುವ ತೆಂಗಿನ ಕಾಯಿಗಳೂ ಕೇಂದ್ರ ತೋಟಗಾರಿಕೆ ಬೆಳೆಗಳ ಸಂಶೋಧನಾ ಕೇಂದ್ರ (ಸಿಪಿಸಿಆರ್‌ಐ) ಮೂಲಕ ಆಕಾರ ಬರ್ಣ ಗೊಂಚಲಿನಲ್ಲಿ ಮನ ಸೆಳೆಯುತ್ತವೆ. ಲಕ್ಷದ್ವೀಪದ ‘ಲಕ್ಕದೀವ್‌ ಮೈಕ್ರೊಟೆಲ್‌‘, ‘ಕೇಂರಚಂದ್ರ‘, ‘ಚಂದ್ರ ಶಂಕರ‘, ‘ಗೌತಮಿ ಗಂಗಾ‘, ‘ಕಲ್ಪಶ್ರೀ‘, ‘ಶತ್ಪದಿ ಕಲ್ಪ’.... ಮುಂತಾದವುಗಳು ಹಳದಿ, ಕೆಂಪು, ದೊಡ್ಡ ಸಣ್ಣಗಾತ್ರದ ತೆಂಗಿನ ಕಾಯಿ ತಳಿಗಳ ಹೆಸರು.

ಕರಟ ಶಿಲ್ಪ: ಗಾಂಧೀಜಿ ಆಶ್ರಮದಲ್ಲಿ ಇದ್ದ ಮೂರು ಕೋತಿಗಳು– ಕಣ್ಣೂ, ಕಿವಿ, ಬಾಯಿ ಮುಚ್ಚಿರುವ ಶೈಲಿಯಲ್ಲಿ ಕುಳಿತ್ತಿದ್ದವಂತೆ. ಇಲ್ಲಿನ ಮಳಿಗೆಯಲ್ಲಿ ಇಂತಹ ಶಿಲ್ಪ ಗಮನಸೆಳೆಯುತ್ತದೆ. ಇದು ತೆಂಗಿನ ಕಾಯಿ ಗೆರಟೆಯಿಂದ ಮಾಡಿದ್ದು ಜಗದೀಶ ಬಾವಿ ಹಳ್ಳಿ,  ಕೆಳಗೇರಿ ಡಿ. ಮುಂತಾದ ಕಲಾವಿದರ ಹೆಸರುಗಳು ಇಲ್ಲಿ ಕಾಣ ಸಿಗುತ್ತದೆ. ಅವರ ಕೈ ಚಕದಲ್ಲಿ ಮೂಡಿದ ವಿಭಿನ್ನ ಶೈಲಿಯ ಕರಟ ಶಿಲ್ಪಗಳು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ. ಕೂರಿಗಿ ಜೋಡಿಸಿದ ಜೋಡಿ ಎತ್ತುಗಳ ಶಿಲ್ಪವಂತೂ ಕೃಷಿ ಗ್ರಾಮೀಣ ಬದುಕಿನ ಸ್ತಬ್ದ ಚಿತ್ರದಂತಿದೆ. ಇದೂ ಕರಟದಲ್ಲಿ ಒದಮೂಡಿದೆ.

ಮೊಲಸಾಕಣೆ: ದಾವಣೆಗೆರೆಯ ಶಿವರಾಜ್‌ ಮಾಲೀಕತ್ವದ ‘ಶ್ರೀ ಪದ್ಮಗಿರಿ ಮೊಲ ಸಾಕಣಿಕೆ ಕೇಂದ್ರ’ ವಿಶೇಷ ಗಮನಸೆಳೆಯುತ್ತದೆ. ಆಧುನಿಕ ಶೈಲಿಯ ಗೂಡುಗಳು ಪೈಪ್‌ನಿಂದ ತಾವೇ ನೀರು ಹೀರುವ ಮೊಲಗಳು ಆಕರ್ಷಕವಾಗಿವೆ.

‘ಮರಿಗಳ ಖರೀದಿಗೆ ಅವಕಾಶ ಇಲ್ಲಿದೆ.  ಒಂದು ಗಂಟೆ ಸಾಕಾಣಿಕೆ ಮಾಹಿತಿ ನೀಡುತ್ತೇವೆ. ಬೆಳೆದ ಮೊಲಗಳನ್ನು ನಾವೇ ಖರೀದಿ ಮಾಡುತ್ತೇವೆ’ ಎನ್ನುತ್ತಾರೆ ಶಿವರಾಜ್‌.  ಇಷ್ಟಲ್ಲದೆ ಸಾಕಣಿಕೆಯ ಬಗ್ಗೆ ಮಾಹಿತಿ ಪಟ್ಟಯನ್ನೂ ಅವರು ನಮ್ಮ ಕೈಗಿರಿಸುತ್ತಾರೆ. ಆಸಕ್ತರು (9108073400) ಶಿವರಾಜ್‌ ಅವರನ್ನು ಸಂಪರ್ಕಿಸಬಹುದು.

ಕವಿ ಸಾಹಿತಿಗಳು: ಹಣ್ಣುಗಳು, ಗೆಡ್ಡೆ ಗೆಣಸುಗಳ ವಿಶಾಲ ಮಳಿಗೆಯ ಒಳಹೊಕ್ಕರೆ ಇಲ್ಲಿ ಜ್ಞಾನಪೀಠ ಪುರಸ್ಕೃತ ಕನ್ನಡದ ಕವಿ– ಸಾಹಿತಿಗಳು ಕಾಣಿಸುತ್ತಾರೆ. ಚಿತ್ರಪಟದಲ್ಲಿ ಅಲ್ಲ.  ಕಲ್ಲಂಗಡಿ ಹಣ್ಣಿನ ಮೇಲೆ. ಸುಂದರವಾಗಿ ಕೆತ್ತನೆ ಮಾಡಿದ  ಈ ಚಿತ್ರ ಕಲೆ , ಹೂವು ಹಣ್ಣುಗಳ ಚಿತ್ರ ಪ್ರೇಕ್ಷಕರನ್ನು ಇತ್ತ ಸೆಳೆಯುತ್ತದೆ.

ಮತ್ಸ್ಯ ಲೋಕ: ಸಮುದ್ರದ ಮೀನುಗಳು ಹಾಗೂ ಚಿಪ್ಪುಗಳ ವೈವಿಧ್ಯ ಪ್ರಬೇಧಗಳು ಇಲ್ಲಿ ವಿವಿಧ ಮೀನುಗಳ ತೊಟ್ಟಿಯಲ್ಲಿ ಇವೆ.  ವಿಶೇಷ ಬಣ್ಣ, ಆಕಾರ ಹಾಗೂ ಸಮುದ್ರದ ವಿವಿಧ ಹಂತದಲ್ಲಿ ವಾಸಿಸುವ ಇವುಗಳನ್ನು ಅದೇ ಉಷ್ಣತೆಯಲ್ಲಿ ಇರಿಸಲಾಗಿದೆ.

ಸಾಯಿವಾಲಾ: ಜಾನುವಾರಗಳ ಪ್ರದರ್ಶನದಲ್ಲಿ ಗುಜರಾತ್‌ನ ಗಿಡ್ಡ, ರಾಜಸ್ಥಾನದ ಸಾಯಿವಾಲ ಭಾರಿ ಗಾತ್ರ ದನ ಎತ್ತುಗಳು ಆಕರ್ಷಣೆಯಂತಿದ್ದುವು. ಉಳಿದಂತೆ ದೇಸಿ ತಳಿಗಳೂ, ಜೆರ್ಸಿ,  ಎಚ್.ಎಫ್‌ ಮುಂತಾದವುಗಳು, ಎಮ್ಮೆ, ಕೋಣ ಇವುಗಳೂ ಇವೆ.

ಪಕ್ಷಿ ಲೋಕ: ಆಳ್ವಾಸ್‌ ಕೃಷಿ ಸಿರಿಯಲ್ಲಿ 300ಕ್ಕೂ ಅಧಿಕ ಪಕ್ಷಿ ಪ್ರಬೇಧಗಳಿವೆ. ಗೌಡಿಯನ್‌ ಪೆಸೆಂಟ್‌, ಗರ್ಮನ್‌ ಬ್ಯೂಟಿ ಒಮನ್‌, ಬೆಲ್‌ ಬಾಲ್ಟನ್‌, ಎಮು, ಸಿಲ್ವರ್‌ ಜಾವಾ, ಕಟ್‌ಥ್ರಾಟ್‌, ರೆಡ್‌ ಮಾಲ್ಟಾ ಕೆಲವು ಮಾತ್ರ. ಗಿನಿ ಹಂದಿಯೂ ತನ್ನ ಪುಟಾಣಿ ಗಾತ್ರದಲ್ಲಿ ಗಮನಸೆಳೆಯುತ್ತದೆ.

ಮಣ್ಣಿನ ಫ್ರಿಡ್ಜ್‌– ಅಡಿಕೆ ಜ್ಯೂಸ್‌!
ಮಣ್ಣಿನಿಂದ ತಯಾರಿಸಿದ ಫ್ರಿಡ್ಜ್‌  ಅಲ್ಲೊಂದು ಮಳಿಗೆಯಲ್ಲಿ ಗಮನ ಸೆಳೆಯಿತು. ‘ಬೆಲೆ ಕೇವಲ ₹6 ಸಾವಿರ; ಹಾಲು ಮೊಸರು 3 ದಿನಗಳಾದರೂ ಇದರಲ್ಲಿ ಕೆಡುವುದಿಲ್ಲ, ಮೇಲ್ಭಾಗದಲ್ಲಿ ಸ್ವಲ್ಪ ನೀರು ಹಾಕಬೇಕು, ವಿದ್ಯುತ್‌ ಬೇಡ. ಇದನ್ನು  ಗುಜರಾತ್‌ನಿಂದ ತರಿಸಲಾಗಿದೆ’ ಎಂದು ಮಾಲೀಕ  ಗಣೇಶ್‌ ಚೇತನ್‌ ವಿವರಿಸಿದರು. ಇದೇ ರೀತಿ ದೆಹಲಿಯಿಂದ ತರಿಸಿದ  ಇಡ್ಲಿ ಪಾತ್ರೆಯೂ ಮಣ್ಣಿನದ್ದೇ. ಇಲ್ಲಿ ಇನ್ನೂ ವಿಶೇಷ ಇದೆ. ಅಡಿಕೆಯಿಂದ ಮಾಡಿದ ಜ್ಯೂಸ್‌ ‘ಪೂಗ ಸ್ವಾದ‘, ಸಾಬೂನು‘ಪೂಗ  ಸಿಂಗಾರ್‌‘ ಕೊಡಿಯಾಲ್‌ ಬೈಲ್‌ನ  ಎಂಪಯರ್‌ ಬಿಲ್ಡಿಂಗ್‌ ಬಳಿ ಇರುವ ಕ್ಷಿತಿಜ  ಎಂಟರ್‌ ಪ್ರೈಸಸ್‌ನಲ್ಲಿ ಇವುಗಳೆಲ್ಲ ಸಿಗುತ್ತವೆ ಎಂದರು.

ಆಳ್ವಾಸ್‌ ತರಕಾರಿ ಕ್ಷೇತ್ರ
ಕೃಷಿ ಸಿರಿಯಲ್ಲಿ  ಗಮನಸೆಳೆಯುವ ಅಂಶವೆದಂದರೆ ಆಳ್ವಾಸ್‌ ತರಕಾರಿ ಕ್ಷೇತ್ರ. ‘ನೋಡಿ ಆನಂದಿಸಿ, ಮುಟ್ಟಿ ಕೆಡಿಸದಿರಿ’ ಎನ್ನುವ ಘೋಷವಾಕ್ಯದೊಂದಿಗೆ ಮೈ ತುಂಬಿ ನಿಂತಿರುವ ತರಕಾರಿ ಗಿಡಗಳು ಮಾತನ್ನು ಅರ್ಥಪೂರ್ಣಗೊಳಿಸುವಂತಿವೆ.

ಮೈದುಂಬಿ ನಿಂತಿರುವ ಪಡುವಲ, ಹಾಗಲ ಚಪ್ಪರಗಳು, ಸೌತೆಕಾಯಿಯ ವಿವಿಧ ನಮೂನೆಗಳು , ಕುಂಬಳ ಕಾಯಿ ಮತ್ತಿತರ  ತರಕಾರಿಗಳು ನೋಡುಗರನ್ನು ವಿಸ್ಮಯಗೊಳಿಸುತ್ತದೆ. ಕೃಷಿಯ ಆನಂದವನ್ನು ಅನುಭವಿಸುವಂತೆ ಮಾಡುತ್ತದೆ. ಚೆಂಡುಹೂವಿನ ವಿವಿಧ ಪ್ರಬೇಧ  ಇಲ್ಲಿ ಮೈಮನ ಪುಳಕಗೊಳಿಸುತ್ತಿದೆ. ಪುಷ್ಪಕಾಶಿಯಂತೆ ಕಂಗೊಳಿಸುತ್ತಿದೆ.

ಬೋನ್ಸಾಯ್‌–ಕುಬ್ಜ ಗಿಡಗಳು
ಕೃಷಿ ಸಿರಿ ಆವರಣದಲ್ಲಿ  ಬೋನ್ಸಾಯ್‌ಗಾಗಿ ಪ್ರತ್ಯೇಕ ಮಳಿಗೆ ಇದೆ. ಇಲ್ಲಿ 53 ವರ್ಷದ ‘ರೆಂಜೆ’ ಗಿಡ ಅತಿ ವಯಸ್ಸಾದ ಕುಬ್ಜ ಸಸ್ಯ. 43 ವರ್ಷದ ಆಫ್ರಿಕಾದ ‘ಬವೋಬಾಬ್‌’ ಕೂಡ ಇಲ್ಲಿದೆ. ಇನ್ನಿತರ ಆಲದಮರ ಮತ್ತಿತರ ವಾಸ್ತು ಅಪೇಕ್ಷೆಯ ಬೋನ್ಸಾಯ್‌, ಫೆಂಗ್‌ಶುಯಿ ಚೀನಿ ವಾಸ್ತು ಶೈಲಿಯ ಗಿಡಗಳೂ  ಬೋನ್ಸಾಯ್‌ ಇವೆ.ಹೈದರಾಬಾದ್‌ನ ಪಿ.ವಿ. ಗೋವಿಂದ ರಾಜ್‌ ಅವರ ‘ಈಶ್ವರಿ ಮೋನ್ಸಾಯ್‌ ನರ್ಸರಿ‘ವತಿಯಿಂದ ಇದೆಲ್ಲವನ್ನೂ ಇಲ್ಲಿ ಜೋಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT