ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೈಸ್ತ ಧರ್ಮಕ್ಕೆ ಮತಾಂತರವಾದ ದಲಿತರ ಬಗ್ಗೆ ಅಧ್ಯಯನ: ಮಾಲಗತ್ತಿ

Last Updated 5 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿದ ದಲಿತರ ಬಗ್ಗೆ ಅಧ್ಯಯನ, ಕನ್ನಡದಲ್ಲಿನ ಎಲ್ಲ ಸಾಹಿತಿಗಳನ್ನು ಪರಿಚಯಿಸುವ ಸಮಗ್ರ ಕೋಶ ಹೊರತರುವುದು ಸೇರಿ ಕರ್ನಾಟಕ  ಸಾಹಿತ್ಯ ಅಕಾಡೆಮಿಯಿಂದ ಐದು ಪ್ರಮುಖ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಅರವಿಂದ ಮಾಲಗತ್ತಿ ಹೇಳಿದರು.

ಈ ಯೋಜನೆಗಳ ಪ್ರಾರಂಭೋತ್ಸವ, ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮವನ್ನು ಇದೇ 7ರಂದು ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ದಲಿತ ಕ್ರೈಸ್ತ ಸಾಂಸ್ಕೃತಿಕ ಶೋಧ’ ಯೋಜನೆಯನ್ನು ವಿಶೇಷ ಘಟಕ/ ಗಿರಿಜನ ಉಪಯೋಜನೆಯ ಅನುದಾನದಡಿ ರೂಪಿಸಲಾಗಿದೆ. ದಲಿತ ಸೇರಿ ತಳ ಸಮುದಾಯದ ಎಲ್ಲ ವರ್ಗದವರು ಕ್ರೈಸ್ತ ಧರ್ಮೀಯರಾಗಿ ಮತಾಂತರಗೊಂಡ ಬಳಿಕ ಅವರ ಸಾಮಾಜಿಕ, ಧಾರ್ಮಿಕ, ರಾಜಕೀಯ ಸ್ಥಾನಮಾನಗಳಲ್ಲಾದ ಬದಲಾವಣೆ ಕುರಿತು ವಿಶ್ಲೇಷಿಸಲಾಗುತ್ತದೆ. ಜಿಲ್ಲಾವಾರು ಸಂಶೋಧನಾ ಲೇಖಕರನ್ನು ನಿಯೋಜಿಸಲಾಗಿದೆ. ನಾಲ್ಕು ಕಂದಾಯ ವಿಭಾಗಗಳಲ್ಲಿ ಸಂಪಾದಕರಿದ್ದು, ಸಮಗ್ರ ವಿವರಗಳನ್ನು ಹತ್ತು ಸಂಪುಟಗಳಲ್ಲಿ ಪ್ರಕಟಿಸಲಾಗುವುದು’ ಎಂದು ವಿವರಿಸಿದರು.

ಕ್ರೈಸ್ತ ಪಾದ್ರಿಗಳು ಕರ್ನಾಟಕಕ್ಕೆ ಯಾವಾಗ ಬಂದರು, ಯಾವ ಭಾಗದಲ್ಲಿ ಮತಾಂತರ ಹೆಚ್ಚಾಗಿದೆ, ಮಿಷನರಿಗಳ ಆರಂಭ ಮತ್ತು ಕಾರ್ಯವೈಖರಿ, ಮೂಲ ಕ್ರೈಸ್ತರು ಹಾಗೂ ದಲಿತ ಕ್ರೈಸ್ತರ ಪರಿಕಲ್ಪನೆ, ಮತಾಂತರದ ಆಶಯ ಹಾಗೂ ವೈಫಲ್ಯಗಳು, ವೈವಾಹಿಕ ಸಂಬಂಧ– ಕುಟುಂಬ– ವೃತ್ತಿಯಲ್ಲಾದ ಬದಲಾವಣೆ ಕುರಿತೂ ಅಧ್ಯಯನ ಮಾಡಲಾಗುತ್ತದೆ. ಈ ಮಾದರಿಯ ಅಧ್ಯಯನ ಭಾರತದಲ್ಲೇ ಇದೆ ಮೊದಲು ಎಂದು ವಿವರಿಸಿದರು.

1820ರಿಂದ 2020ರವರೆಗಿನ ಕನ್ನಡದ ಎಲ್ಲ ಸಾಹಿತಿಗಳನ್ನು ಪರಿಚಯಿಸಲು ‘ಬಂಗಾರದ ಎಲೆಗಳು ಯೋಜನೆ’ ರೂಪಿಸಲಾಗಿದೆ. ಸಾಹಿತ್ಯ ಪ್ರಕಾರಗಳಲ್ಲಿ ಕನಿಷ್ಠ ಎರಡು ಕೃತಿ ಬರೆದವರನ್ನು ಪರಿಗಣಿಸಿ ಅವರ ಸ್ವ ವಿವರ, ಕೃತಿಗಳು, ಪ್ರಶಸ್ತಿ ಮತ್ತು ಸಂಪರ್ಕದ ವಿವರ ಸಂಗ್ರಹಿಸಲಾಗುತ್ತದೆ. ಇದನ್ನು ಎಂಟು ಸಂಪುಟಗಳಲ್ಲಿ ಹೊರತರುವ ಉದ್ದೇಶ ಇದೆ. ವಿದ್ವಾಂಸರ ಸಲಹಾ ಸಮಿತಿಯಲ್ಲಿ ಬಿ.ಎ. ವಿವೇಕ ರೈ, ಸಿ.ಎನ್. ರಾಮಚಂದ್ರನ್, ಬರಗೂರು ರಾಮಚಂದ್ರಪ್ಪ, ಸಂಧ್ಯಾರೆಡ್ಡಿ ಇದ್ದಾರೆ. ಇದು ಎರಡು ವರ್ಷಗಳ ಯೋಜನೆ ಎಂದು ಮಾಲಗತ್ತಿ ವಿವರಿಸಿದರು.

ಇದಲ್ಲದೆ, ‘ವಜ್ರದ ಬೇರುಗಳು’ ಯೋಜನೆಯಡಿ ಪ್ರಾಚೀನ ಮತ್ತು ಆಧುನಿಕ ಕನ್ನಡ ಸಾಹಿತ್ಯದಲ್ಲಿ 25 ಪ್ರಕಾರಗಳನ್ನು ಗುರುತಿಸಿ, ಪ್ರತಿ ಪ್ರಕಾರದಲ್ಲೂ 100ರಿಂದ 125 ಪುಟಗಳ ಪುಸ್ತಕವನ್ನು ಬರೆಯಿಸಲಾಗುತ್ತಿದೆ. ಸಾಹಿತ್ಯಾಸಕ್ತರಿಗೆ ಮತ್ತು ಸಾಹಿತ್ಯ ಕ್ಷೇತ್ರ ಪ್ರವೇಶಿಸುವ
ವಿದ್ಯಾರ್ಥಿಗಳಿಗೆ ಇದು ಸಹಕಾರಿಯಾಗುತ್ತದೆ ಎಂದರು.

‘ಚಕೋರ’ ಕವಿ–ಕಾವ್ಯ ಸಂವಾದ ವೇದಿಕೆ ಹಮ್ಮಿಕೊಳ್ಳಲಾಗಿದ್ದು, ಪ್ರತಿ ಜಿಲ್ಲೆಯಲ್ಲಿ ತಿಂಗಳಿಗೊಮ್ಮೆ 30 ಮಂದಿ ಲೇಖಕರು ಇದರಲ್ಲಿ ಭಾಗವಹಿಸಬೇಕು. ಇದರಲ್ಲಿ ಇಬ್ಬರು ಅಕಾಡೆಮಿ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಬೇಕು. ಕವಿಗೋಷ್ಠಿ, ಕವನವಾಚನ ವಿಮರ್ಶಕರಿಂದ ಉಪನ್ಯಾಸ ಏರ್ಪಡಿಸಬೇಕು. ಪ್ರತಿ ತಿಂಗಳ ಕಾರ್ಯಕ್ರಮದ ವೆಚ್ಚಕ್ಕಾಗಿ ₹ 3,000ದಿಂದ ₹ 5,000 ವರೆಗೆ ನೀಡಲಾಗುತ್ತದೆ.  ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕಾಲೇಜು ಹಂತದಲ್ಲಿ ‘ಕಾವ್ಯ ಕಮ್ಮಟ’ ಯೋಜನೆಯನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಡಿ.7ರಂದು ನಡೆಯುವ ಕಾರ್ಯಕ್ರಮದಲ್ಲಿ ‘ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ತಲ್ಲಣಗಳು’ ಹಾಗೂ ‘ಬಹುತ್ವ ಭಾರತ ಮತ್ತು ಅಸ್ತಿತ್ವ’ ವಿಷಯಗಳ ಕುರಿತು ಸಂವಾದ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಅರವಿಂದ ಮಾಲಗತ್ತಿ ಅವರು ಹೇಳಿದರು.

ಭಾರತ ಬಹುತ್ವ ರಾಷ್ಟ್ರ. ಆದರೆ, ಧರ್ಮದ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ಎಲ್ಲ ಇತಿಮಿತಿಗಳ ಕುರಿತು ಗೋಷ್ಠಿಯಲ್ಲಿ ಚರ್ಚಿಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT