ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

49 ಕೆಎಸ್‌ಆರ್‌ಟಿಸಿ ಬಸ್‌ ಸಂಚಾರಕ್ಕೆ ಸಮ್ಮತಿ

Last Updated 13 ಡಿಸೆಂಬರ್ 2017, 6:47 IST
ಅಕ್ಷರ ಗಾತ್ರ

ಶಿವಮೊಗ್ಗ: ಹೊಸ ಮಾರ್ಗಗಳಲ್ಲಿ 49 ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳ ಸಂಚಾರಕ್ಕೆ ಜಿಲ್ಲಾ ಸಾರಿಗೆ ಪ್ರಾಧಿಕಾರ ಅನುಮತಿ ನೀಡಿದೆ. ಕೆ.ಎಸ್‌.ಆರ್‌.ಟಿ.ಸಿ ಶಿವಮೊಗ್ಗ ವಿಭಾಗ ಸಾರಿಗೆ ಜಾಲ ವಿಸ್ತರಿಸುವ ಸಲುವಾಗಿ 91 ಹೊಸ ಮಾರ್ಗಗಳಿಗೆ ರಹದಾರಿ ಅನುಮತಿ (ಪರ್ಮಿಟ್‌) ಕೋರಿ ಎಂಟು ತಿಂಗಳ ಹಿಂದೆ ಅರ್ಜಿ ಸಲ್ಲಿಸಿತ್ತು. ಮಂಗಳವಾರ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದ್ಯ ಲಭ್ಯವಿರುವ 49 ಬಸ್‌ಗಳ ಸಂಚಾರಕ್ಕೆ ಹೊಸ ರಹದಾರಿ ಅನುಮತಿ ನೀಡಿತು.

ಸಭೆ ಆರಂಭವಾಗುತ್ತಿದ್ದಂತೆ ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡುವುದಕ್ಕೆ ಖಾಸಗಿ ಬಸ್‌ ಮಾಲೀಕರು ತೀವ್ರ ಆಕ್ಷೇಪ ವ್ಯಕ್ತ
ಪಡಿಸಿದರು. ಅವರ ಪರವಾಗಿ ಬೆಂಗಳೂರಿನಿಂದ ಬಂದಿದ್ದ ವಕೀಲರು ಹೊಸ ಪರವಾನಗಿ ನೀಡುವುದಕ್ಕೆ ಇರುವ ಮಿತಿಗಳ ಕುರಿತು ವಾದ ಮಂಡಿಸಿದರು.

ಎಲ್ಲಾ ಮಾರ್ಗಗಳಲ್ಲೂ ಈಗಾಗಲೇ ಸಾಕಷ್ಟು ಬಸ್‌ಗಳು ಸಂಚರಿಸುತ್ತಿವೆ. ಮೊದಲು ಬಸ್‌ಗಳಿಗೆ ಜನರು ಕಾಯುತ್ತಿದ್ದರು. ಇಂದು ಬಸ್‌ಗಳೇ ಜನರಿಗಾಗಿ ಕಾಯವ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳ ದಟ್ಟಣೆಯಿಂದ ಸಾಕಷ್ಟು ಸಾವು, ನೋವು ಸಂಭವಿಸುತ್ತಿವೆ. ಶಿವಮೊಗ್ಗ–ಆನವಟ್ಟಿ, ಸಾಗರ– ಸಿಗಂದೂರು-ಹೊಳೆಬಾಗಿಲು ಮಾರ್ಗಗಳಲ್ಲಿ ಹೊಸ ಬಸ್‌ಗಳ ಅವಶ್ಯಕತೆ ಇಲ್ಲಎಂದು ಖಾಸಗಿ ಬಸ್‌ಗಳ ಪರ ವಕೀಲರು ಗಮನ ಸೆಳೆದರು.

ಶಿವಮೊಗ್ಗ–ಸಾಗರ ಮಾರ್ಗವನ್ನು ಜಿಲ್ಲಾ ಪೊಲೀಸರು ಅಪಘಾತ ವಲಯ ಎಂದು ಘೋಷಿಸಿದ್ದಾರೆ. ಈಗಾಗಲೇ ಆ ಮಾರ್ಗದಲ್ಲಿ ಐದು ನಿಮಿಷಕ್ಕೆ, ಶಿವಮೊಗ್ಗ–ಆನವಟ್ಟಿ ಮಾರ್ಗದಲ್ಲಿ ಸಹ ಪ್ರತಿ 15 ನಿಮಿಷಕ್ಕೆ ಒಂದು ಬಸ್‌ ಸಂಚರಿಸುತ್ತಿದೆ. ಸಿಗಂದೂರು–ಹೊಳೆ ಬಾಗಿಲು– ಸಿಂಗಂದೂರು ಮಾರ್ಗದಲ್ಲಿ ಲಾಂಚ್‌ಗಳ ಮೇಲೆ ಸಾಗಬೇಕಿದೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ವಿವರ ನೀಡಿದರು.

ಪ್ರತಿವಾದ ಮಂಡಿಸಿದ ಕೆ.ಎಸ್‌.ಆರ್‌.ಟಿ.ಸಿ ಪರ ವಕೀಲರು, ಬಸ್‌ ಸಂಚಾರಕ್ಕೆ ಸಾಕಷ್ಟು ಅವಕಾಶಗಳು ಇವೆ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಿಗೆ ವಿಶೇಷ ಅವಕಾಶ ನೀಡುವುದಕ್ಕೆ ಸುಪ್ರೀಂಕೋರ್ಟ್‌ ಸಹ ಸಮ್ಮತಿಸಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಸಾರಿಗೆ ಪ್ರಾಧಿಕಾರಕ್ಕೆ ವಾಹನಗಳ ರಹದಾರಿ ಅನುಮತಿ ನೀಡುವ, ತಿರಸ್ಕರಿಸುವ ಸಂಪೂರ್ಣ ಅಧಿಕಾರವಿದೆ. ಜನರ ಹಿತಾಸಕ್ತಿ, ಸಾರಿಗೆ ಇಲಾಖೆಯ 17 ನಿಯಮ ಪರಿಶೀಲಿಸಿದ ನಂತರ ಮತ್ತೊಂದು ಸಭೆ ಕರೆಯಲಾಗುವುದು. ನಂತರ ಹೊಸ ಮಾರ್ಗಗಳಿಗೆ ರಹದಾರಿ ಅನುಮತಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಾರ್ವಜನಿಕರ ಕುಂದು–ಕೊರತೆ: ಆನವಟ್ಟಿ, ಶಿರಾಳಕೊಪ್ಪ, ಸೊರಬ, ಶಿಕಾರಿಪುರ, ಚಿಕ್ಕೇರೂರು, ನ್ಯಾಮತಿ, ಹೊನ್ನಾಳಿ ಭಾಗದ ಗ್ರಾಮಗಳಿಗೆ ಕೆ.ಎಸ್‌.ಆರ್‌.ಟಿ.ಸಿ ಬಸ್‌ ಸಂಚಾರ ಆರಂಭಿಸಬೇಕು ಎಂದು ಆ ಭಾಗದ ಮುಖಂಡರು ಒತ್ತಾಯಿಸಿದರು.

ಸೊರಬ-‌ಆನವಟ್ಟಿ, ಸೊರಬ-ಶಿರಾಳಕೊಪ್ಪ ಭಾಗದಲ್ಲಿ 200ಕ್ಕೂ ಹೆಚ್ಚು ಹಳ್ಳಿಗಳಿವೆ. ಜನರು ಈಗ ಖಾಸಗೀ ಬಸ್‌ಗಳನ್ನೇ ನಂಬಿಕೊಂಡು ಓಡಾಡುತ್ತಿದ್ದಾರೆ. ಬೆಳಿಗ್ಗೆ, ಸಂಜೆ ಶಾಲಾ ಮಕ್ಕಳು ಬಸ್‌ ಚಾವಣಿ ಮೇಲೆ ಕುಳಿತು ಪಯಣಿಸುತ್ತಾರೆ. ಈಗಾಗಲೇ ಜಂಟಿ ಸರ್ವೆ ಕಾರ್ಯ ನಡೆದಿದ್ದರೂ ಬಸ್ ಸಂಚಾರ ಆರಂಭವಾಗಿಲ್ಲ ಎಂದರು.

ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಬಸ್‌ಗಳ ನಿಲುಗಡೆಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಅಶೋಕ್ ಖರೆ, ಸಾರಿಗೆ ಇಲಾಖೆ ಉಪ ಆಯುಕ್ತ ಶಿವರಾಜ್‌ ಪಾಟೀಲ್ ಉಪಸ್ಥಿತರಿದ್ದರು.

ದರದ ತಾರತಮ್ಯ

ಖಾಸಗಿ ಬಸ್‌ಗಳು ಹೆಚ್ಚಾಗಿ ಇರುವ ಮಾರ್ಗಗಳಲ್ಲಿ ಸಂಚರಿಸುವ ಕೆ.ಎಸ್‌.ಆರ್‌.ಟಿ.ಸಿ ಬಸ್‌ಗಳಲ್ಲಿ ದರ ಕಡಿಮೆ ಮಾಡಲಾಗಿದೆ ಎಂದು ಖಾಸಗಿ ಬಸ್‌ ಮಾಲೀಕರು ಆರೋಪಿಸಿದರು.

ಸಾಗರ ಮತ್ತು ತೀರ್ಥಹಳ್ಳಿ ಮಾರ್ಗಗಳ ನಡುವೆ ದರ ತಾರತಮ್ಯ ಮಾಡುತ್ತಿರುವುದು ಖಾಸಗಿ ಬಸ್‌ಗಳವರು ಎಂದು ಕೆ.ಎಸ್‌.ಆರ್‌.ಟಿ.ಸಿ ಅಧಿಕಾರಿಗಳು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT