ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧ ಕಡೆ ಮುಂದುವರಿದ ಎಸಿಬಿ ದಾಳಿ

Last Updated 13 ಡಿಸೆಂಬರ್ 2017, 11:08 IST
ಅಕ್ಷರ ಗಾತ್ರ

ಬಂಟ್ವಾಳ: ಕೃಷಿ ಇಲಾಖೆಯ ಬಂಟ್ವಾಳ ತಾಲ್ಲೂಕು ಸಹಾಯಕ‌ ನಿರ್ದೇಶಕ ಪಿ.ಎಫ್.ಮಿರಾಂಡ ಅವರ ಬಂಟ್ವಾಳದ ತೋಕೂರಿನ ಮನೆ, ಕೃಷಿ ಇಲಾಖೆ ಕಚೇರಿ ಹಾಗೂ ಮಂಗಳೂರಿನ ಕಿನ್ನಿಗೋಳಿಯಲ್ಲಿರುವ ಮನೆಗಳ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂರೂ ಕಡೆಗಳಲ್ಲಿ ಶೋಧ ನಡೆಯುತ್ತಿದೆ.

ಎಸಿಬಿ ಪಶ್ಚಿಮ ವಲಯ ಎಸ್‌ಪಿ ಎನ್.ಎಸ್.ಶೃತಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುಧೀರ್ ಎಂ.ಹೆಗ್ಡೆ ಮತ್ತು ತಂಡ ಶೋಧಕಾರ್ಯ ನಡೆಸುತ್ತಿದೆ.

ಸಣ್ಣ ನೀರಾವರಿ ಇಲಾಖೆಯ ಎಇಇ ಕಚೇರಿ, ಮನೆ ಮೇಲೆ ಎಸಿಬಿ ದಾಳಿ

ಚಿಕ್ಕಬಳ್ಳಾಪುರ: ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿರುವ ಹೇಮಂತ್ ಅವರ ಕಚೇರಿ, ಫಾರ್ಮ್‌ ಹೌಸ್‌, ಮನೆಗಳು ಸೇರಿದಂತೆ ನಾಲ್ಕು ಕಡೆಗಳಲ್ಲಿ ಬುಧವಾರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿರುವ ಕಚೇರಿ, ಶಿಡ್ಲಘಟ್ಟ ತಾಲ್ಲೂಕಿನ ಟಿ.ಪೆದ್ದನಹಳ್ಳಿಯಲ್ಲಿರುವ ಮನೆ ಮತ್ತು ಫಾರ್ಮ್ ಹೌಸ್ ಹಾಗೂ ಬೆಂಗಳೂರಿನಲ್ಲಿರುವ ಮನೆ ಮೇಲೆ 11 ಎಸಿಬಿ ಅಧಿಕಾರಿಗಳ ತಂಡ ಬುಧವಾರ ಬೆಳಿಗ್ಗೆಯಿಂದ ದಾಳಿ ನಡೆಸಿ ದಾಖಲೆಗಳನ್ನು ಕಲೆ ಹಾಕುತ್ತಿದೆ.

ಎಇಇ ಮನೆ ಮೇಲೆ ಎಸಿಬಿ ದಾಳಿ
ಕಲಬುರ್ಗಿ:
ಇಲ್ಲಿನ ಕೋಟನೂರನಲ್ಲಿರುವ ಸಣ್ಣ ನೀರಾವರಿ ಇಲಾಖೆ ಎಇಇ ಎಚ್.ಬಿ.ಮಲ್ಲಪ್ಪ ಅವರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಬುಧವಾರ ದಾಳಿ ಮಾಡಿದ್ದಾರೆ.

ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಮಧ್ಯಾಹ್ನ 2 ಗಂಟೆಗೆ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ.

ಈ ಹಿಂದೆ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸಿದ್ದು ಇವರು ನಾಲ್ಕು ತಿಂಗಳ ಹಿಂದೆ ಕಲಬುರ್ಗಿಗೆ ವರ್ಗವಾಗಿದ್ದರು. ಸದ್ಯ ಇವರು ಬಾಡಿಗೆ ಮನೆಯಲ್ಲಿದ್ದು, ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಶೋಧ ಕಾರ್ಯ ಮುಂದುವರಿದಿದೆ ಎಂದು ಎಸಿಬಿ ಇನ್‌ಸ್ಪೆಕ್ಟರ್ ಕೃಷ್ಣಾ ಕಲ್ಲದೇವರು ತಿಳಿಸಿದರು.

ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಅಲ್ಲೂ ಕೂಡ ಅಧಿಕಾರಿಗಳ ತಂಡ ದಾಳಿ ಮಾಡಿದೆ.

ವಾಡಾ ಆಯುಕ್ತರ ಮನೆ, ಕಚೇರಿಯಲ್ಲಿ ದಾಖಲೆ ಪರಿಶೀಲನೆ

ಬಳ್ಳಾರಿ: ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ(ವಾಡಾ)ದ ಆಯುಕ್ತ ಶೇಕ್ಷಾವಲಿ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬಳ್ಳಾರಿಯ ಹೊಸಪೇಟೆ ರಸ್ತೆಯ ಸುಧಾ ಕ್ರಾಸ್, ಕುವೆಂಪು ನಗರ, ಮರಿಸ್ವಾಮಿ ಮಠದ ಬಳಿ ಇರುವ ಮನೆ, ಸಂಡೂರಿನ ವಾಡಾ ಕಚೇರಿ, ಆಯುಕ್ತರ ಮನೆ ಮೇಲೆ ಎಸಿಬಿ ಎಸ್ಪಿ ಪ್ರಸನ್ನ ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT