ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ.ಪಂ. ಅಧ್ಯಕ್ಷ ಪಟ್ಟ ಇಂದು ಯಾರ ಮುಡಿಗೆ?

Last Updated 13 ಡಿಸೆಂಬರ್ 2017, 9:58 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲಾ ಪಂಚಾಯ್ತಿ ನೂತನ ಅಧ್ಯಕ್ಷ ಗಾದಿಗಾಗಿ ಕಳೆದ ಎರಡು ತಿಂಗಳಿನಿಂದ ಬಿಜೆಪಿ ಪಡಸಾಲೆಯಲ್ಲಿ ನಡೆಯುತ್ತಿದ್ದ ಚರ್ಚೆಗೆ ಬುಧವಾರ ನಡೆಯುವ ಚುನಾವಣೆ ಮೂಲಕ ಅಂತಿಮ ತೆರೆಬಿಳಲಿದೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಅದರಂತೆ ಹೊನ್ನಾಳಿಯ ನ್ಯಾಮತಿ ಕ್ಷೇತ್ರದ ಉಮಾ ಎಂ.ಪಿ.ರಮೇಶ್‌ ಅವರು 16 ತಿಂಗಳ ಅವಧಿಯವರೆಗೆ ಅಧಿಕಾರ ನಡೆಸಿ, ಪಕ್ಷದ ಒಳ ಒಪ್ಪಂದಂತೆ ಅ.10ರಂದು ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದಿನಿಂದಲೇ ಪಕ್ಷದ ಪಡಸಾಲೆಯಲ್ಲಿ ಮುಂದಿನ ಅಧ್ಯಕ್ಷ ಸ್ಥಾನಕ್ಕಾಗಿ ಹಲವರು ವರಿಷ್ಠರಲ್ಲಿ ತಮ್ಮದೇ ಆದ ವಾದ ಮಂಡಿಸುತ್ತಲೇ ಬಂದಿದ್ದರು.

ಸಾಮಾನ್ಯ ಮಹಿಳೆ ವರ್ಗದಲ್ಲಿ ಈಗಾಗಲೇ ಐದು ಮಂದಿ ಸದಸ್ಯೆಯರಿದ್ದು, ಎಲ್ಲರೂ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಕೆಲವರು ತಮಗೆ ಈ ಬಾರಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಹೈಕಮಾಂಡ್‌ ಮೇಲೆ ಒತ್ತಡ ಹಾಕಿದ್ದಾರೆ.

ವಿಧಾನಸಭೆ ಚುನಾವಣೆ ಕೂಡ ಹೊಸ್ತಿಲಲ್ಲಿ ಇರುವುದರಿಂದ ಪಕ್ಷದ ವರಿಷ್ಠರು ಕೂಡ ಅಧ್ಯಕ್ಷರ ಆಯ್ಕೆಯಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ. ಈಗಾಗಲೇ ಸ್ಥಾನ ನೀಡಿರುವ ತಾಲ್ಲೂಕುಗಳನ್ನು ಹೊರತುಪಡಿಸಿ, ಇತರೆ ತಾಲ್ಲೂಕುಗಳನ್ನು ಪರಿಗಣಿಸುವ ಸಾಧ್ಯತೆ ಇದೆ.

ಆಕಾಂಕ್ಷಿಗಳ ಪಟ್ಟಿಯಲ್ಲಿ...:
ಸಾಮಾನ್ಯ ಮಹಿಳೆ ಮೀಸಲು ಇರುವುದರಿಂದ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು ಕ್ಷೇತ್ರದ ಆರುಂಡಿ ಸುವರ್ಣ ನಾಗರಾಜ್, ಚನ್ನಗಿರಿ ತಾಲ್ಲೂಕಿನ ಹೊನ್ನೇಬಾಗಿ ಕ್ಷೇತ್ರದ ಮಂಜುಳಾ ಟಿ.ವಿ.ರಾಜು, ಹೊದಿಗೆರೆ ಕ್ಷೇತ್ರದ ಯಶೋದಮ್ಮ ಮರುಳಪ್ಪ, ದಾವಣಗೆರೆ ಬಾಡ ಕ್ಷೇತ್ರದ ಶೈಲಜಾ ಬಸವರಾಜ್ ಹಾಗೂ ಹೊನ್ನಾಳಿಯ ಕುಂದೂರು ಕ್ಷೇತ್ರದ ದೀಪಾ ಜಗದೀಶ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಇವರಲ್ಲಿ ಆರುಂಡಿ ಸುವರ್ಣ ನಾಗರಾಜ್‌ ಹಾಗೂ ಮಂಜುಳಾ ಟಿ.ವಿ.ರಾಜು ಪ್ರಬಲ ಆಕಾಂಕ್ಷಿಗಳಾಗಿದ್ದು, ತಮಗೇ ಅಧ್ಯಕ್ಷ ಸ್ಥಾನ ಸಿಗಬೇಕು ಎಂದು ತಮ್ಮ ತಮ್ಮ ಕ್ಷೇತ್ರಗಳ ಶಾಸಕರಲ್ಲಿ ಬಿಗಿಪಟ್ಟು ಹಿಡಿದ್ದಾರೆ.

ಹಿಂದುಳಿದ ತಾಲ್ಲೂಕು ಪರಿಗಣಿಸುವ ಸಾಧ್ಯತೆ: ಪಕ್ಷದ ವರಿಷ್ಠರು ಆರಂಭದಲ್ಲಿಯೇ ಹೊನ್ನಾಳಿ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದರು. ಉಪಾಧ್ಯಕ್ಷ ಸ್ಥಾನವನ್ನು ದಾವಣಗೆರೆಯ ಅಣಜಿ ಕ್ಷೇತ್ರದ ಗೀತಾ ಗಂಗಾನಾಯ್ಕ ಅವರಿಗೆ ವಹಿಸಿದ್ದಾರೆ. ಹರಿಹರ ತಾಲ್ಲೂಕು ಪ್ರತಿನಿಧಿಸಲು ಯಾವ ಸದಸ್ಯರೂ ಇಲ್ಲ. ಉಳಿದಂತೆ ಹರಪನಹಳ್ಳಿ, ಜಗಳೂರು ಹಾಗೂ ಚನ್ನಗಿರಿ ಕ್ಷೇತ್ರ ವ್ಯಾಪ್ತಿಯ ಸದಸ್ಯರನ್ನು ಪರಿಗಣಿಸುವ ಸಾಧ್ಯತೆ ಇದೆ ಎಂದು ಬಿಜೆಪಿಯು ಹಿರಿಯ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಆರುಂಡಿ ಸುವರ್ಣ ನಾಗರಾಜ್, ‘ನಮ್ಮ ತಾಲ್ಲೂಕು ಹಿಂದುಳಿದಿದೆ. ನಾನು ಸ್ನಾತಕೋತ್ತರ ಪದವೀಧರೆಯಾಗಿದ್ದು, ಇದುವರೆಗೂ ಯಾವುದೇ ಸ್ಥಾನ ಕೊಟ್ಟಿಲ್ಲ. ಹೀಗಾಗಿ ಈ ಬಾರಿಯ ಅಧ್ಯಕ್ಷ ಸ್ಥಾನವನ್ನು ನನಗೆ ಕೊಡಬೇಕು ಎಂದು ವರಿಷ್ಠರಲ್ಲಿ ಪ್ರಬಲವಾಗಿ ವಾದ ಮಂಡಿಸಿದ್ದೇನೆ. ವರಿಷ್ಠರು ಕೂಡ ಒಲವು ತೋರಿದ್ದಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.


ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿಯವರೇ ಮುಂದು: ‘ಚನ್ನಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರು ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿ ಐದು ಸ್ಥಾನಗಳಲ್ಲಿ ನಮ್ಮ ಪಕ್ಷದವರೇ ಇದ್ದಾರೆ. ತಾಲ್ಲೂಕು ಪಂಚಾಯ್ತಿಯಲ್ಲಿಯೂ ಬಿಜೆಪಿ ಸದಸ್ಯರ ಬಹುಮತವಿದೆ. ಈಚೆಗೆ ನಡೆದ ಎಪಿಎಂಸಿ ಚುನಾವಣೆಯ 11 ಸ್ಥಾನಗಳಲ್ಲಿ 10 ಸ್ಥಾನಗಳು ನಮಗೆ ಬಂದಿವೆ. ಪಿಎಲ್‌ಡಿ ಬ್ಯಾಂಕ್‌ ಸದಸ್ಯ ಸ್ಥಾನಗಳಲ್ಲಿಯೂ ನಮ್ಮ ಪಕ್ಷದವರೇ ಇದ್ದಾರೆ. ಹೀಗಾಗಿ ಚನ್ನಗಿರಿ ಕ್ಷೇತ್ರದಲ್ಲಿ ನಾವೇ ಮುಂದೆ ಇದ್ದು, ನಮಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದೇವೆ. ಹೈಕಮಾಂಡ ಕೂಡ ಆಸಕ್ತಿ ತೋರಿಸಿದೆ. ಆದರೂ, ವರಿಷ್ಠರು ತೆಗೆದುಕೊಳ್ಳುವ ಅಂತಿಮ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಮಂಜುಳಾ ಅವರ ಪತಿ ಟಿ.ವಿ.ರಾಜು ಹೇಳುತ್ತಾರೆ.

ಕೆಲ ಆಕಾಂಕ್ಷಿಗಳು ಬೆಂಬಲ ನೀಡುತ್ತೇವೆ ಎಂದು ಪ್ರಬಲ ಪೈಪೋಟಿಗಳಿಗೆ ಭರವಸೆಯ ಮಾತು ಹೇಳುತ್ತಿದ್ದರೂ ತಮಗೇ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಪಕ್ಷದ ವರಿಷ್ಠರಲ್ಲಿ ಪರೋಕ್ಷವಾಗಿ ಮನವಿ ಮಾಡಿದ್ದಾರೆ. ಅಂತಿಮವಾಗಿ ಯಾರ ಮುಡಿಗೆ ಪಟ್ಟ ಅಲಂಕಾರವಾಗಲಿದೆ ಎನ್ನುವುದು ಬುಧವಾರ ನಿರ್ಣಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT