ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿಯ ‘ಫೈನಲ್‌’ನಲ್ಲಿ ಗೆಲುವಿನ ನಿರೀಕ್ಷೆ

Last Updated 16 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಎರಡು ವರ್ಷಗಳಿಂದ ತವರಿನಲ್ಲಿ ಸರಣಿ ಸೋಲು ಕಾಣದ ಭಾರತ ಮತ್ತು ಇಲ್ಲಿ ಮೊತ್ತ ಮೊದಲ ಸರಣಿ ಜಯದ ಕನಸು ಕಾಣುತ್ತಿರುವ ಶ್ರೀಲಂಕಾ ತಂಡದವರು ಭಾನುವಾರ ಜಯದ ಕನಸು ಹೊತ್ತು ಇಲ್ಲಿ ಅಂಗಣಕ್ಕೆ ಇಳಿಯಲಿದ್ದಾರೆ.

ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಲಾ ಎರಡು ಪಂದ್ಯಗಳನ್ನು ಗೆದ್ದಿರುವ ಭಾರತ ಮತ್ತು ಲಂಕಾ ತಂಡಗಳು ಇಲ್ಲಿನ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುವ ‘ಫೈನಲ್‌’ ಪಂದ್ಯದಲ್ಲಿ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿವೆ.

2015ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಐದು ಪಂದ್ಯಗಳ ಏಕದಿನ ಸರಣಿ ಸೋತ ನಂತರ ಭಾರತ ತವರಿನ ಎಲ್ಲ ಸರಣಿಗಳನ್ನು ತನ್ನದಾಗಿಸಿಕೊಂಡಿದೆ. ಆದರೆ ಈಗ ಸಂಕಷ್ಟದ ಸ್ಥಿತಿಯಲ್ಲಿದೆ. ಮೊಹಾಲಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದರೂ ಮೊದಲ ಪಂದ್ಯದಲ್ಲಿ ಅನುಭವಿಸಿದ ನಿರಾಸೆ ತಂಡವನ್ನು ಇನ್ನೂ ಕಾಡುತ್ತಿದೆ. ಆದ್ದರಿಂದ ಪಂದ್ಯದಲ್ಲಿ ಈ ತಂಡದಲ್ಲಿ ಎಚ್ಚರಿಕೆಯ ಹೆಜ್ಜೆ ಇರಿಸಲು ರೋಹಿತ್ ಶರ್ಮಾ ಬಳಗ ಮುಂದಾಗಲಿದೆ.

ಮೊಹಾಲಿಯಲ್ಲಿ ದ್ವಿಶತಕ ಗಳಿಸಿ ದಾಖಲೆ ಬರೆದಿದ್ದ ರೋಹಿತ್ ಶರ್ಮಾ ಇಲ್ಲೂ ಮಿಂಚುವ ಭರವಸೆ ಮೂಡಿಸಿದ್ದಾರೆ. ಇದು ಭಾರತದ ಪಾಲಿಗೆ ಅದೃಷ್ಟದ ಕ್ರೀಡಾಂಗಣ. ಒಟ್ಟು ಏಳು ಪಂದ್ಯಗಳನ್ನು ಆಡಿರುವ ತಂಡ ಒಂದರಲ್ಲಿ ಮಾತ್ರ ಸೋತಿದೆ. ಈ ಪಂದ್ಯದಲ್ಲೂ ಅಂಗಣ ಕೈಹಿಡಿಯುವ ಭರವಸೆ ತಂಡಕ್ಕಿದೆ.

ಮೊಹಾಲಿಯಲ್ಲಿ ಶತಕದ ಜೊತೆಯಾಟವಾಡಿರುವ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್‌ ಮತ್ತೊಮ್ಮೆ ಭರವಸೆ ಮೂಡಿಸಿದ್ದಾರೆ. ಧವನ್ ಔಟಾದ ನಂತರ ಶ್ರೇಯಸ್ ಅಯ್ಯರ್ ಕೂಡ ಉತ್ತಮ ಆಟ ಆಡಿದ್ದರು. ಹೀಗಾಗಿ ಅಗ್ರ ಕ್ರಮಾಂಕದ ಸಾಮರ್ಥ್ಯದ ಮೇಲೆ ತಂಡಕ್ಕೆ ಆತಂಕ ಇಲ್ಲ. ಮಧ್ಯಮ ಕ್ರಮಾಂಕಕ್ಕೆ ದಿನೇಶ್ ಕಾರ್ತಿಕ್‌, ಮನೀಷ್ ಪಾಂಡೆ, ಮಹೇಂದ್ರ ಸಿಂಗ್‌ ದೋನಿ ಮತ್ತು ಹಾರ್ದಿಕ್ ಪಾಂಡ್ಯ ಬಲ ತುಂಬಲಿದ್ದಾರೆ. ಎದುರಾಳಿ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಬಲ್ಲ ಬೌಲಿಂಗ್‌ ಬಲವೂ ಭಾರತ ಪಾಳಯದಲ್ಲಿದೆ.

ತಂಡಗಳು ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್‌, ಶ್ರೇಯಸ್ ಅಯ್ಯರ್‌, ದಿನೇಶ್‌ ಕಾರ್ತಿಕ್‌, ಮನೀಷ್ ಪಾಂಡೆ, ಮಹೇಂದ್ರ ಸಿಂಗ್‌ ದೋನಿ, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್‌, ಭುವನೇಶ್ವರ್ ಕುಮಾರ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್, ಅಜಿಂಕ್ಯ ರಹಾನೆ, ಅಕ್ಷರ್ ಪಟೇಲ್‌, ಸಿದ್ಧಾರ್ಥ ಕೌಲ್‌. ಶ್ರೀಲಂಕಾ: ತಿಸ್ಸಾರ ಪೆರೇರ (ನಾಯಕ), ಉಪುಲ್ ತರಂಗ, ದನುಷ ಗುಣತಿಲಕ, ಲಾಹಿರು ತಿರಿಮನ್ನೆ, ಅಸೇಲಾ ಗುಣರತ್ನೆ, ಸದೀರ ಸಮರವಿಕ್ರಮ, ನಿರೋಷನ್ ಡಿಕ್ವೆಲ್ಲಾ, ಧನಂಜಯ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್‌, ಸಚಿತ್‌ ಪತಿರಣ, ಸುರಂಗ ಲಕ್ಮಲ್‌, ನುವಾನ್ ಪ್ರದೀಪ್, ಅಕಿಲ ಧನಂಜಯ, ಚದುರಂಗ ಡಿ ಸಿಲ್ವಾ, ದುಷ್ಮಂತ ಚಮೀರ, ಕುಶಾಲ್‌ ಪೆರೇರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT