ಸುಳ್ಳುಸುದ್ದಿ ಎಂಬ ಅಪಾಯಕಾರಿ ಬ್ಯುಸಿನೆಸ್

ಸುಳ್ಳುಸುದ್ದಿಗಳನ್ನು ಪರಾಮರ್ಶಿಸುವ, ಪ್ರಮಾಣಿಸಿ ನೋಡುವ ವ್ಯವಧಾನ ಯಾರಲ್ಲಿಯೂ ಇಲ್ಲ. ಸತ್ಯದ ಪೋಷಾಕಿನಲ್ಲಿ ಹರಿದಾಡುವ ಇವುಗಳಿಂದ ಆಗುವ ಅವಾಂತರಗಳು ಒಂದೆರಡಲ್ಲ. ನಿಯಂತ್ರಣವೂ ಸುಲಭವಲ್ಲ... ಕಷ್ಟಸಾಧ್ಯ...

ಚಿತ್ರಗಳು: ಸೃಜನ್

ಅಂತರ್ಜಾಲದಲ್ಲಿ ತಲ್ಲೀನರಾಗಿರುತ್ತೀರಿ. ವೆಬ್‌ಸೈಟ್ ಒಂದು ತನ್ನ ಸಾಮಾಜಿಕ ಜಾಲತಾಣದ ಲಿಂಕ್‌ನಲ್ಲಿ ಆಕರ್ಷಕ ವಿನ್ಯಾಸದೊಂದಿಗೆ ಪ್ರಕಟಿಸಿರುವ ತಲೆಬರಹವೊಂದು ನಿಮ್ಮನ್ನು ಥಟ್ಟನೆ ಆಕರ್ಷಿಸುತ್ತದೆ. ಇರಾಕ್‌ನಲ್ಲಿ ಶ್ರೀರಾಮ ಮತ್ತು ಆಂಜನೇಯನ ಪುರಾತನ ಶಿಲ್ಪಕೃತಿ ಪತ್ತೆ. ಭಾರತದಿಂದ ಇರಾಕ್‌ವರೆಗೆ ಹರಡಿತ್ತು ಹಿಂದೂ ಸಾಮ್ರಾಜ್ಯ ಎಂಬ ಒಕ್ಕಣೆಯಿರುವ ಆ ವೆಬ್‌ಸೈಟ್ ಬರಹ ನಿಮ್ಮನ್ನು ತಕ್ಷಣವೇ ಸೆಳೆಯುತ್ತದೆ. ಆ ಲಿಂಕ್ ಮೇಲೆ ಕ್ಲಿಕ್ ಮಾಡಿದ ಕೂಡಲೇ ನೀವು ವೆಬ್‌ಸೈಟ್ ಒಂದನ್ನು ಪ್ರವೇಶಿಸುತ್ತೀರಿ. ಅಲ್ಲಿ ಇರಾಕ್‌ನಲ್ಲಿ ಸಿಕ್ಕ ಶ್ರೀರಾಮ ಮತ್ತು ಆಂಜನೇಯರ ಶಿಲ್ಪಕೃತಿಗಳ ಬಗ್ಗೆ ಪುಂಖಾನುಪುಂಖವಾಗಿ ವರದಿಯೊಂದು ಇರುತ್ತದೆ. ಓದಿದ ನಂತರ ಬೇರೆಯವರೂ ಓದಲೆಂದು ಅದನ್ನು ನಿಮ್ಮ ಫೇಸ್‌ಬುಕ್ ವಾಲ್, ವಾಟ್ಸಾಪ್ ಗ್ರೂಪ್‌ಗಳ ಜೊತೆಗೆ ಹಂಚಿಕೊಳ್ಳುತ್ತೀರಿ.

ನಂತರ ಒಂದೊಳ್ಳೆಯ ಸಂಗತಿ- ಸುದ್ದಿಯನ್ನು ನೂರಾರು ಮಂದಿಯೊಂದಿಗೆ ಹಂಚಿಕೊಂಡ ಖುಷಿ ನಿಮ್ಮದಾಗುತ್ತದೆ. ಆದರೆ, ಇವಿಷ್ಟೂ ಪ್ರಕ್ರಿಯೆಗಳಲ್ಲಿ ಇರಾಕ್‌ನ ಮಧ್ಯಯುಗೀನ ಕಾಲಘಟ್ಟದ ಹುರಿಯನ್ ಸಾಮ್ರಾಜ್ಯದ ಸೈನಿಕರ ಶಿಲ್ಪಕೃತಿಯೊಂದನ್ನು ನಿಮಗೇ ತಿಳಿಯದಂತೆ ಶ್ರೀರಾಮ, ಆಂಜನೇಯರ ಚಿತ್ರವೆಂದು ಸುಳ್ಳುಸುದ್ದಿಯೊಂದನ್ನು ಸಾವಿರಾರು ಮಂದಿಗೆ ತಲುಪಿಸಿಬಿಟ್ಟಿರುತ್ತೀರಿ. ಇದು ಫೇಕ್ ನ್ಯೂಸ್ ಅಥವಾ ಸುಳ್ಳುಸುದ್ದಿಗಳು ನಮ್ಮೆಲ್ಲರನ್ನೂ ನಯವಾಗಿ ನಂಬಿಸಿ ವಂಚಿಸುವ ಪರಿ. ದಿನನಿತ್ಯ ಇಂತಹ ಸುಳ್ಳುಸುದ್ದಿಗಳು ಹುಟ್ಟುತ್ತಲೇ ಇರುತ್ತವೆ. ಸತ್ಯವೆಂದು ನಂಬಿಸಿ ನಮ್ಮನ್ನು ವಂಚಿಸುತ್ತಲೇ ಇರುತ್ತವೆ. ಇಷ್ಟಕ್ಕೂ ಈ ಸುಳ್ಳುಸುದ್ದಿಗಳು ಯಾಕಾಗಿ ಹುಟ್ಟುತ್ತವೆ, ಇವುಗಳ ಹಿಂದಿನ ನಿಜವಾದ ಉದ್ದೇಶವೇನು, ಇದರ ಹಿಂದಿರುವ ವ್ಯಾಪಾರಿ ಮಾರ್ಕೆಟ್ ಎಂಥಹದ್ದು ಎಂಬುದನ್ನು ಅರ್ಥ ಮಾಡಿಕೊಳ್ಳದಿದ್ದರೆ ಸುಳ್ಳುಸುದ್ದಿ ಬ್ಯುಸಿನೆಸ್ ಎಂಬುದು ಅರ್ಥವಾಗುವುದೇ ಇಲ್ಲ.

ಸುಳ್ಳುಸುದ್ದಿ ಬ್ಯುಸಿನೆಸ್ ಎನ್ನುವುದು ಹೆಚ್ಚು ಕಡಿಮೆ ಇವತ್ತಿನ ಪ್ರಧಾನಧಾರೆ ಪತ್ರಿಕೋದ್ಯಮಕ್ಕೆ ಎದುರಾಗಿ ಹುಟ್ಟಿಕೊಳ್ಳುತ್ತಿರುವ ಪರ್ಯಾಯ ಉದ್ಯಮ. ಬ್ರಾಂಡೆಡ್ ಪ್ರಾಡಕ್ಟ್‌ಗಳಿಗೆ ಎದುರು ಅವನ್ನೇ ಹೋಲುವ ನಕಲಿ ಪ್ರಾಡಕ್ಟ್‌ಗಳು ಕಡಿಮೆ ಗುಣಮಟ್ಟ ಮತ್ತು ಬೆಲೆಯಲ್ಲಿ ಜನರಿಗೆ ತಲುಪುತ್ತಿರುವ ರೀತಿಯಲ್ಲೇ ಸುದ್ದಿಗಳೂ ಸುಳ್ಳಿನ ವೇಷ ಧರಿಸಿ, ರೋಚಕತೆಯ ಬಣ್ಣ ಬಳಿದುಕೊಂಡು ಸಮಾಜದೊಳಗೆ ಹರಡಿಕೊಳ್ಳುತ್ತಿವೆ. ಇವತ್ತಿನ ವೇಗದ ಬದುಕಿನ ಗಡಿಬಿಡಿಯಲ್ಲಿ ಅಪಘಾತ, ಭ್ರಷ್ಟಾಚಾರ, ಅಪರಾಧ, ರಾಜಕೀಯ, ಗಾಸಿಪ್ ತರಹದ ಒಂದೇ ಬಗೆಯ ಸುದ್ದಿಗಳು ಓದುಗರಿಗೆ ಸಪ್ಪೆಯೆನಿಸುತ್ತಿರುವ ಹೊತ್ತಿನಲ್ಲೇ ಈ ಸುಳ್ಳುಸುದ್ದಿಗಳ ಅಬ್ಬರ ಶುರುವಾಗಿದೆ. ಸತ್ಯದ ತಲೆ ಮೇಲೆ ಹೊಡೆದಂತೆ ಕಟ್ಟಲಾಗುವ ಈ ಸುಳ್ಳುಸುದ್ದಿಗಳ ಟಾರ್ಗೆಟ್ ಎಲ್ಲ ವರ್ಗ, ವಯೋಮಾನದ ಜನಸಾಮಾನ್ಯರು. ಸಾಮಾಜಿಕ ಜಾಲತಾಣಗಳ ಮುಖೇನ ಕಿರಿದಾಗಿ ಹೋಗಿರುವ ಜಗತ್ತಿನಲ್ಲಿ ಸುದ್ದಿಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಪಡೆಯುವಷ್ಟರ ಮಟ್ಟಿಗೆ ಸಂವಹನ ಸುಲಭವಾಗಿ ಹೋಗಿದೆ. ಅಂತರ್ಜಾಲದ ನ್ಯೂಸ್ ವೆಬ್‌ಸೈಟ್‌ಗಳು, ಸುದ್ದಿ ಪೋರ್ಟಲ್‌ಗಳು ನಾಯಿಕೊಡೆಗಳಂತೆ ಹಬ್ಬುತ್ತಿವೆ.

ಜಿಲ್ಲೆ, ತಾಲ್ಲೂಕು, ಹೋಬಳಿಮಟ್ಟದಲ್ಲೂ ಹತ್ತಾರು ವಾರ್ತಾ ವೆಬ್‌ಸೈಟ್‌ಗಳು ಹುಟ್ಟಿಕೊಂಡಿವೆ. ಧರ್ಮಾಧಾರಿತ ಸಂಘಟನೆ ಸಂಸ್ಥೆಗಳು, ಸೈದ್ಧಾಂತಿಕ ವಿಚಾರಗಳ ವಿಸ್ತರಣೆಗೆಂದು ಹುಟ್ಟಿಕೊಂಡ ವಾರ್ತಾ ವೆಬ್‌ಸೈಟ್‌ಗಳು, ಫೇಸ್‌ಬುಕ್ ಪುಟಗಳು ಎಲ್ಲವಕ್ಕೂ ಜನರನ್ನು ಹೆಚ್ಚೆಚ್ಚು ತಲುಪುವ ಉಮೇದಿ ಹೆಚ್ಚುತ್ತಿದ್ದಂತೆಯೇ, ಇವು ಜಾಹೀರಾತುಗಳನ್ನು ಅಳವಡಿಸಿ ಗ್ರಾಹಕರನ್ನು ಹುಡುಕುವ- ಆಕರ್ಷಿಸುವ ತಾಣಗಳಾಗಿಯೂ ಬದಲಾಗಿವೆ.

ಪರಿಣಾಮವಾಗಿ ಅತಿಹೆಚ್ಚು ಜನರು ಓದುವ, ಭೇಟಿ ಕೊಡುವ ಜನಪ್ರಿಯ ಜಾಲತಾಣಗಳು ಜಾಹೀರಾತುಗಳ ಅಡ್ಡೆಯಾಗಿಯೂ ಮಾರ್ಪಟ್ಟಿವೆ. ಯಾವ ವೆಬ್‌ಸೈಟ್‌ಗೆ ಹೆಚ್ಚಿನ ಜನರು ಭೇಟಿ ಕೊಡುತ್ತಾರೋ ಅಲ್ಲಿ ಮಾರುಕಟ್ಟೆ ಉತ್ಪನ್ನಗಳ ಜಾಹೀರಾತುಗಳನ್ನು ಅಳವಡಿಸಿ ವೆಬ್‌ಸೈಟ್ ನಿರ್ವಾಹಕರಿಗೆ ಇಂತಿಷ್ಟು ಹಣ ಸಂದಾಯ ಮಾಡುವ ವ್ಯವಸ್ಥೆಯನ್ನು ಜಾಹೀರಾತು ಕಂಪನಿಗಳು ಮತ್ತು ಮಾರುಕಟ್ಟೆ ಉತ್ಪನ್ನಗಳ ಕಂಪನಿಗಳು ಯಾವತ್ತು ಅಳವಡಿಸಿಕೊಂಡವೋ, ಆವತ್ತೇ ಸುಳ್ಳುಸುದ್ದಿಗಳ ಬ್ಯುಸಿನೆಸ್ ಹುಟ್ಟಿಕೊಂಡಿತು. ನಿಮ್ಮ ವಾರ್ತಾ ವೆಬ್‌ಸೈಟ್‌ಗೆ, ಲಾಭ ಬರಬೇಕೆಂದರೆ ಜಾಹೀರಾತುಗಳು ಬರಬೇಕು. ಜಾಹೀರಾತು ಬರಬೇಕೆಂದರೆ ವೆಬ್‌ಸೈಟ್ ಜನಪ್ರಿಯವಾಗಬೇಕು. ವೆಬ್‌ಸೈಟ್ ಜನಪ್ರಿಯವಾಗಲು ಜನರನ್ನು ಸೆಳೆಯುವ ಪ್ರಚೋದನಾಕಾರಿ ಸುದ್ದಿಗಳು ಬೇಕು... ಆ ಪ್ರಚೋದನೆ ಸುಳ್ಳುಗಳಲ್ಲಿ ದಂಡಿಯಾಗಿ ಇರುತ್ತದೆ ವಿನಾ ಸತ್ಯಗಳಲ್ಲಿ ಅಲ್ಲ. ಹಾಗಾಗಿ, ಜನರನ್ನು ತಕ್ಷಣಕ್ಕೆ ಪ್ರಚೋದಿಸುವ ಸುಳ್ಳುಸುದ್ದಿಗಳತ್ತ ವಾರ್ತಾ ಜಾಲತಾಣಗಳು ಹೊರಳಿಕೊಂಡವು.

ವ್ಯಕ್ತಿ, ಧರ್ಮ, ಘಟನೆಗಳು, ಇತಿಹಾಸ, ಪ್ರಚಲಿತ ವಿದ್ಯಮಾನ, ಸಿನಿಮಾ ನಟ- ನಟಿಯರ ಕೇಂದ್ರಿತ ಮಸಾಲೆಭರಿತ ಸುಳ್ಳು ಸುದ್ದಿಗಳು ಹುಟ್ಟಿದ್ದು ಹೀಗೆ. ಈ ಸುಳ್ಳು ಸುದ್ದಿಗಳು ನಿಜವೋ ಸತ್ಯವೋ ಎಂದು ಪರಾಮರ್ಶೆ ಮಾಡುವಷ್ಟು ವ್ಯವಧಾನ ಯಾರಲ್ಲಿಯೂ ಇಲ್ಲದಿರುವುದರಿಂದ ಈ ಸುದ್ದಿಗಳು ಸತ್ಯದ ಪೋಷಾಕಿನಲ್ಲಿ ಧೈರ್ಯವಾಗಿ ಹರಿದಾಡುತ್ತಲೇ ಇರುತ್ತವೆ. ಘಟನಾವಳಿಗಳ ಆಧರಿತ ವರ್ತಮಾನದ ಸುದ್ದಿಗಳಿಗೆ ಸುಳ್ಳನ್ನು ಇಂಜೆಕ್ಟ್ ಮಾಡುತ್ತಲೇ ಇರುತ್ತವೆ.

ಇದಿಷ್ಟೇ ಆಗಿದ್ದರೆ ಅಪಾಯ ಒಂದು ಮಟ್ಟಕ್ಕೆ ಮಾತ್ರ ಇರುತ್ತಿತ್ತು. ಒಂದಿಷ್ಟು ಸತ್ಯದ ಜೊತೆಗೆ ಸುಳ್ಳುಗಳನ್ನೇ ಬೆರೆಸಿ ಮಾಧ್ಯಮಗಳನ್ನೂ ಸಲೀಸಾಗಿ ನಂಬಿಸಿ ವಂಚಿಸುವಷ್ಟು ಸೊಗಸಾಗಿ ಹೆಣೆಯಲಾಗಿರುವ ಈ ಸುಳ್ಳುಸುದ್ದಿಗಳು ಇವತ್ತಿನ ಟಿ.ವಿ. ವಾಹಿನಿಗಳು ಮತ್ತು ಪ್ರಧಾನಧಾರೆ ಮಾಧ್ಯಮಗಳ ಗಮನವನ್ನೂ ಸೆಳೆಯುತ್ತಿವೆ. ಮತ್ತು ಇಲ್ಲಿ ಸುದ್ದಿಗಳ ಹೆಸರಲ್ಲಿ ಪ್ರಸಾರವೂ ಆಗುತ್ತಿವೆ.

ಪ್ರಧಾನಮಂತ್ರಿ ನರೇಂದ್ರಮೋದಿ ರೈಲ್ವೆ ಸ್ಟೇಷನ್‌ನಲ್ಲಿ ಕಸ ಗುಡಿಸುತ್ತಿರುವ ಅಪರೂಪದ ಚಿತ್ರ. ₹ 2000 ನೋಟಿನಲ್ಲಿ ನ್ಯಾನೋ ಚಿಪ್ ಇದೆ. ಶ್ರೀಲಂಕಾದಲ್ಲಿ ಆಂಜನೇಯನ ಗದೆ ಸಿಕ್ಕಿದೆ. ರೊಹಿಂಗ್ಯಾ ಮುಸ್ಲಿಮರು ಭಯೋತ್ಪಾದಕರು.ವಿಶಾಖಪಟ್ಟಣಂ ಸಮುದ್ರತೀರದಲ್ಲಿ ಮತ್ಸ್ಯಕನ್ಯೆ ಪತ್ತೆ. ಈ ನಂಬರ್‌ನಿಂದ ಕಾಲ್ ಬಂದರೆ ನಿಮ್ಮ ಮೊಬೈಲ್ ಫೋನ್ ಸ್ಫೋಟ ಆಗುತ್ತದೆ. ನಾಸ್ಟ್ರಡಾಮಸ್ ಈ ವರ್ಷ ಪ್ರಳ ಆಗುತ್ತದೆಂದು ಹೇಳಿದ್ದಾನೆ. ಹೀಗೆ ನಂಬಲಿಕ್ಕೆ ಅಸಾಧ್ಯವಾದ ಸುಳ್ಳುಗಳನ್ನು ರೋಚಕ ತಲೆಬರಹಗಳೊಂದಿಗೆ ಹರಿಯಬಿಡುವ ಸುಳ್ಳುಸುದ್ದಿಯ ವ್ಯಾಪಾರಿಗಳು ಜನರ ಗಮನವನ್ನು ರಪ್ಪನೆ ತಮ್ಮ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್, ಫೇಸ್‌ಬುಕ್ ಪೇಜ್‌ಗಳತ್ತ ತಿರುಗಿಸಿಕೊಳ್ಳುತ್ತಾರೆ. ಇದನ್ನು ಓದಿದ್ರೆ ನೀವು ಶಾಕ್ ಆಗೋದು ಖಂಡಿತ. ಆ ನಟಿ ಹಾಗೇಕೆ ಮಾಡಿದಳು ಗೊತ್ತಾ? ಈ ಕಾರಣಕ್ಕೋಸ್ಕರ ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಳು, ಹೀಗೆ ತರಹೇವಾರಿ ಹುಚ್ಚು ತಲೆಬರಹಗಳೇ ಸುಳ್ಳುಸುದ್ದಿಗಳ ಬಂಡವಾಳ. ಬಲಿಯಾಗುವವರು ಜನಸಾಮಾನ್ಯರು.

ಇದು ಇಷ್ಟಕ್ಕೇ ನಿಂತಿಲ್ಲ. ಈ ಸುಳ್ಳುಸುದ್ದಿಗಳು ಜಾಹೀರಾತು ದುಡ್ಡಿನ ಆಸೆಯಾಚೆಗೂ ಸಮಾಜವನ್ನು ವಿಭಜಿಸುವ, ಮನುಷ್ಯ- ಮನುಷ್ಯರ ನಡುವೆ ಗೋಡೆ ಕಟ್ಟುವ ಸಾಧನಗಳಾಗಿಯೂ ಬಳಕೆಯಾಗುತ್ತಿರುವುದು ವರ್ತಮಾನದ ದುರಂತ. ಕೋಮುಗಲಭೆಗಳನ್ನು ಸೃಷ್ಟಿಸಲು, ಅನ್ಯಧರ್ಮೀಯರ ಬಗ್ಗೆ ಜನರಲ್ಲಿ ಹೆದರಿಕೆ ಹುಟ್ಟಿಸಲು ನಡೆದೇ ಇರದ ಘಟನೆಯೊಂದನ್ನು ಕಲ್ಪಿಸಿಕೊಂಡು, ಬೇರಾವುದೋ ದೇಶದಲ್ಲಿ ನಡೆದ ಬರ್ಬರತೆಯ ಫೋಟೊವನ್ನಿಟ್ಟುಕೊಂಡು ಅದು ನಮ್ಮ ದೇಶದಲ್ಲಿ ಇಂಥ ಕಡೆ ನಡೆದಿದೆಯೆಂದು ಸುಳ್ಳು ಹಬ್ಬಿಸಿ ಸಾಮಾಜಿಕ ಸಹಬಾಳ್ವೆಯ ಆತ್ಮಕ್ಕೇ ಕೊಳ್ಳಿಯಿಡುವಷ್ಟರ ಮಟ್ಟಿಗೆ ಈ ಸುಳ್ಳಿನ ವ್ಯಾಪಾರಿಗಳು ಬೆಳೆದುಬಿಟ್ಟಿದ್ದಾರೆ. ಇವನ್ನು ನಿರ್ಲಕ್ಷಿಸುವಂತಿಲ್ಲ ಎನ್ನುವುದಕ್ಕೆ ಈ ಫೇಸ್‌ಬುಕ್ ಮತ್ತು ವಾಟ್ಸ್ಆ್ಯಪ್‌ ಸುಳ್ಳುಸುದ್ದಿಗಳ ಹಿನ್ನೆಲೆಯಲ್ಲಿ ದೇಶದ ಹಲವೆಡೆ ನಡೆದ ಕೋಮುಗಲಭೆಗಳು ಮತ್ತು ಅಮಾಯಕರ ಹತ್ಯೆಗಳು ನಮ್ಮ ಕಣ್ಣೆದುರಿಗೇ ಇವೆ. ಸುಳ್ಳುಸುದ್ದಿಗಳು ಜೀವಗಳನ್ನೂ ತೆಗೆಯುತ್ತವೆ ಎಂಬುದಕ್ಕೆ ಸುಳ್ಳುಸುದ್ದಿಯನ್ನು ನಂಬಿ ಜಾರ್ಖಂಡ್ ರಾಜ್ಯದಲ್ಲಿ ನಡೆದ ಅಮಾಯಕರ 7 ಕೊಲೆಗಳು ಸಾಕ್ಷಿ.

ಪ್ರಧಾನಧಾರೆ ಪತ್ರಿಕೋದ್ಯಮದ ನೈತಿಕತೆ ಮತ್ತು ವಸ್ತುನಿಷ್ಠತೆಯನ್ನು ಅಕ್ಷರಶಃ ಕೊಂದೇ ಹಾಕುವಷ್ಟು ಅಪಾಯಕಾರಿಯಾಗಿ ಬೆಳೆಯುತ್ತಿರುವ ಸುಳ್ಳುಸುದ್ದಿ ಬ್ಯುಸಿನೆಸ್ ಅನ್ನು ನಿಯಂತ್ರಿಸಲು ತಕ್ಕುದಾದ ಸಶಕ್ತ ಕಾನೂನುಗಳು ನಮ್ಮಲ್ಲಿಲ್ಲ. ಇವುಗಳನ್ನು ನಿಯಂತ್ರಿಸುವತ್ತ ಆಳುವ ಸರ್ಕಾರಗಳೂ ಹೆಚ್ಚು ಗಮನ ಕೊಡದೆ ಇರುವುದರಿಂದಾಗಿ ಈ ಸುಳ್ಳುಸುದ್ದಿಗಳ ಬ್ಯುಸಿನೆಸ್ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇನ್ನೊಂದು ಲೆಕ್ಕದಲ್ಲಿ ಈ ಸುಳ್ಳುಸುದ್ದಿಗಳ ಪ್ರಯೋಜನ ಅತಿಹೆಚ್ಚು ಹೋಗುತ್ತಿರುವುದು ರಾಜಕೀಯ ವಲಯಕ್ಕೆ. ಮೊದಲಿನ ಸಾಂಪ್ರದಾಯಿಕ ಚುನಾವಣಾ ತಂತ್ರೋಪಾಯಗಳು, ಆಶ್ವಾಸನೆ- ಭರವಸೆ, ಪ್ರಣಾಳಿಕೆ, ಭಾಷಣಗಳ ಜಾಗವನ್ನು ಸುಳ್ಳು ಸುದ್ದಿಗಳು ಆಕ್ರಮಿಸಿಕೊಳ್ಳುತ್ತಿವೆ.

ಇವತ್ತಿನ ಚುನಾವಣೆಗಳು ಜನರ ಮನಸ್ಸನ್ನು ಗೆಲ್ಲುವ, ಅವರ ಬೆಂಬಲ ಗಳಿಸುವ ನೈತಿಕ ದಾರಿಗಳನ್ನು ಬದಿಗೊತ್ತಿ ಪೊಲಿಟಿಕಲ್ ಕ್ಯಾಂಪೇನ್ ಸ್ಟ್ರಾಟೆಜಿಸ್ಟ್‌ಗಳನ್ನು ನೇಮಕ ಮಾಡಿಕೊಂಡು ಅವರ ಮೂಲಕ ತಮ್ಮ ಸಾಧನೆಗಳ ಬಗೆಗೆ ಮತ್ತು ಎದುರಾಳಿ ಗುಂಪಿನ ನಾಯಕರ ಬಗ್ಗೆ ಸುಳ್ಳು ಸುದ್ದಿಗಳನ್ನು ಡಿಜಿಟಲ್ ಕ್ಯಾಂಪೇನ್ ಮೂಲಕ ಜನರಿಗೆ ತಲುಪಿಸಿ ಸುಳ್ಳುಸುದ್ದಿಗಳ ಮೂಲಕವೇ ಚುನಾವಣೆ ಗೆಲ್ಲುವ ಅಡ್ಡದಾರಿ ಹಿಡಿದಿವೆ. ಅದನ್ನು ಇವತ್ತಿನ ರಾಜಕೀಯ ಧುರೀಣರೇ ಹುಟ್ಟು ಹಾಕಿದ್ದಾರೆ. ವಿದೇಶಗಳ ಕ್ಯಾಂಪೇನ್ ಸ್ಟ್ರಾಟೆಜಿಸ್ಟ್ ಕಂಪನಿಗಳನ್ನು ಇದೇ ಉದ್ದೇಶಕ್ಕೆ ಭಾರತದಲ್ಲಿಯೂ ಬಳಸಲಾಗುತ್ತಿದೆ. ಈ ಕ್ಯಾಂಪೇನ್ ಸ್ಟ್ರಾಟೆಜಿಸ್ಟ್‌ಗಳು ಲಭ್ಯವಿರುವ ಎಲ್ಲ ಸಂವಹನ ಮಾಧ್ಯಮಗಳಲ್ಲಿಯೂ ಸುಳ್ಳುಸುದ್ದಿಗಳ ಮೂಲಕ ಜನನಾಯಕರ ಹುಸಿ ಸಾಧನೆಗಳನ್ನು ತಿರುಚಲ್ಪಟ್ಟ ಫೋಟೊಗಳು, ಅಂಕಿಅಂಶಗಳು, ಎದುರಾಳಿ ಗುಂಪಿನ ನಾಯಕರ ಚಾರಿತ್ರ್ಯಹನನವನ್ನು ಸುಳ್ಳುಸುದ್ದಿಗಳೊಡನೆ ಬೆರೆಸಿ ಜನರ ನಡುವೆ ಹರಿಯಬಿಡುತ್ತಾರೆ. ಇವುಗಳನ್ನು ಸತ್ಯ- ಸುಳ್ಳಿನ ಹಂಸಕ್ಷೀರ ನ್ಯಾಯದ ತಕ್ಕಡಿಯೊಳಗಿಟ್ಟು ಪರಾಮರ್ಶಿಸುವ ವ್ಯವಧಾನವಿಲ್ಲದ ಜನಸಾಮಾನ್ಯರೂ ಸಿಕ್ಕದ್ದೆಲ್ಲವನ್ನೂ ಸತ್ಯವೆಂದು ಬಗೆದು ಅದನ್ನು ಇನ್ನೊಂದಷ್ಟು ಮಂದಿಯ ಜೊತೆಗೆ ಹಂಚಿಕೊಳ್ಳುತ್ತಾರೆ.

ಒಂದು ಸುಳ್ಳನ್ನು ನೂರು ಸಲ ಹೇಳಿದರೆ ಅದೇ ಸತ್ಯವಾಗಿ ಮಾರ್ಪಡುತ್ತದೆ ಎಂಬ ಗೋಬೆಲ್ಸ್ ತಂತ್ರಗಾರಿಕೆಯೇ ಇವರ ಬಂಡವಾಳ. ಆರ್ಥಿಕ, ಸಾಮಾಜಿಕವಾಗಿ ಹಳ್ಳ ಹಿಡಿದ ರಾಜ್ಯಗಳು ಇವರ ಕ್ಯಾಂಪೇನ್ ತಂತ್ರಗಳಲ್ಲಿ ಆದರ್ಶ ರಾಜ್ಯವಾಗಿ ಹೊರ ಹೊಮ್ಮುತ್ತವೆ. ಎದುರಾಳಿ ಪಕ್ಷದ ಗುಂಪಿನ ಹಿರಿಯ ನಾಯಕ ವುಮನೈಸರ್ ಆಗಿ ಪ್ರೊಜೆಕ್ಟ್ ಆಗುತ್ತಾನೆ. ಇದಕ್ಕೆ ಪೂರಕವಾದ ನಕಲಿ ಚಿತ್ರಗಳು, ಅಂಕಿಅಂಶದ ರಾಶಿಯನ್ನೇ ಜನರ ಮುಂದೆ ಸುಳ್ಳುಸುದ್ದಿಗಳ ಪ್ರೊಪಗ್ಯಾಂಡಾ ಮೂಲಕ ಇಡಲಾಗುತ್ತದೆ. ಈ ಸುಳ್ಳುಸುದ್ದಿಗಳು ಪ್ರಜೆಗಳ ಯೋಚನಾಶಕ್ತಿಯನ್ನೇ ಬುಡಮೇಲು ಮಾಡಿಬಿಡುವಷ್ಟು ಸಶಕ್ತವಾಗಿ ಎಲ್ಲ ದೇಶಗಳಲ್ಲೂ ಹಬ್ಬಿ, ಅಧಿಕಾರ ಹಿಡಿಯುವ ಅಡ್ಡದಾರಿಯೊಂದಕ್ಕೆ ಅನೈತಿಕ ತಂತ್ರವಾಗಿ ಬಳಕೆಯೂ ಆಗುತ್ತಿದೆ.

ಸುಳ್ಳುಸುದ್ದಿ ಬ್ಯುಸಿನೆಸ್ ಒಂದು ಸಾರಿ ಹುಟ್ಟಿ, ಒಂದೇ ಸಲಕ್ಕೆ ಸಾಯುವಷ್ಟು ದುರ್ಬಲವಾದ ವ್ಯಾಪಾರವಲ್ಲ. ಜನರನ್ನು ಆಕರ್ಷಿಸುವ ಒಂದು ಸುಳ್ಳುಸುದ್ದಿ ಹುಟ್ಟುತ್ತಿದ್ದಂತೆಯೇ ಬೇರೆ ಬೇರೆ ರೂಪಗಳಲ್ಲಿ ಇನ್ನಷ್ಟು ರೆಕ್ಕೆಪುಕ್ಕ ಸೇರಿಸಿಕೊಂಡು ಸಾವಿರಾರು ಸುಳ್ಳುಸುದ್ದಿ ಸೃಷ್ಟಿಸುವ ವೆಬ್‌ಸೈಟ್‌ಗಳಿಗೆ ಹರಿದು ಹಂಚಿಕೆಯಾಗುತ್ತದೆ. ಅಲ್ಲಿಂದ ವಾಟ್ಸ್ಆ್ಯಪ್ ಗ್ರೂಪ್‌ಗಳಿಗೆ ತಲುಪಿದ ಮೇಲೆ ಅದರ ನಾಗಾಲೋಟವನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲೋ ಒಡಿಶಾದಲ್ಲಿ ನಡೆದ ಘಟನೆಯೊಂದು ಇಲ್ಲೇ ಧಾರವಾಡದಲ್ಲೋ, ಮೈಸೂರಿನಲ್ಲೋ ನಡೆದಂತೆ ತಿರುಚಿ ಅದನ್ನು ಜನರನ್ನು ಆಕರ್ಷಿಸುವ ಚಿತ್ರವಿನ್ಯಾಸ ಮತ್ತು ತಲೆಬರಹ ಕೊಟ್ಟು ತಮ್ಮ ವೆಬ್‌ಸೈಟ್‌ಗಳ ಹಿಟ್ಸ್ (ವೆಬ್‌ಸೈಟ್‌ಗೆ ಭೇಟಿ ಕೊಡುವುದು) ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ.

ಹಿಟ್ಸ್ ಹೆಚ್ಚಿದಷ್ಟೂ ಜಾಹೀರಾತುಗಳ ಒಳಹರಿವು ಹೆಚ್ಚಾಗುತ್ತದೆ. ಜಾಹೀರಾತು ಹೆಚ್ಚಿದಷ್ಟೂ ಲಾಭ ಹೆಚ್ಚಾಗುತ್ತದೆ. ಲಾಭ ಹೆಚ್ಚಾಗಬೇಕೆಂದರೆ ಹೆಚ್ಚು ಸುಳ್ಳು ಹೇಳಬೇಕು ಎಂಬುದು ಸುಳ್ಳು ಸುದ್ದಿ ವ್ಯಾಪಾರಿ ಜಗತ್ತಿನ ಅಲಿಖಿತ ನಿಯಮ. ತಾವು ಸೃಷ್ಟಿಸುವ ಸುಳ್ಳುಗಳು ಸಾಮಾಜಿಕ ಸಂರಚನೆಯನ್ನು ಹದಗೆಡಿಸಿ ಮನುಷ್ಯ ಮನುಷ್ಯರ ನಡುವೆ ಅಪನಂಬಿಕೆ ಹುಟ್ಟಿಸಿ, ಧರ್ಮ- ಧರ್ಮಗಳ ನಡುವೆ ವೈಮನಸ್ಸು ತಂದಿಟ್ಟು ತಮಾಷೆ ನೋಡಿದರೂ, ಗಲಭೆ- ಹತ್ಯೆಗಳು ನಡೆದು ಹೋದರೂ ಈ ಸುಳ್ಳಿನ ವ್ಯಾಪಾರಿಗಳಿಗೆ ಯಾವ ಪಾಪಪ್ರಜ್ಞೆಯೂ ಕಾಡುವುದಿಲ್ಲ. ಹಣ ಗಳಿಕೆಯೊಂದೇ ಮುಂದಾಗಿ, ಮಿಕ್ಕಿದ್ದೆಲ್ಲವೂ ನಗಣ್ಯವಾಗಿರುವ ಅಪಾಯಕಾರಿ ಬ್ಯುಸಿನೆಸ್ ಎಂದರೆ ಅದು ಸುಳ್ಳುಸುದ್ದಿಗಳ ಬ್ಯುಸಿನೆಸ್.

ಇದೆಲ್ಲ ಆಘಾತಕಾರಿ ಬೆಳವಣಿಗೆಗಳ ನಡುವೆಯೂ ಈ ಸುಳ್ಳುಸುದ್ದಿ ಕಾರ್ಖಾನೆ ಖದೀಮರನ್ನು ಬೆತ್ತಲುಗೊಳಿಸಲು ಭರವಸೆಯ ಓಯಸಿಸ್‌ನಂತೆ ಆನ್‌ಲೈನ್ ಫ್ಯಾಕ್ಟ್ ಚೆಕ್ಕರ್‌ಗಳು (ಸತ್ಯ ಶೋಧಕರು) ಹುಟ್ಟಿಕೊಂಡಿದ್ದಾರೆ. ಈ ಸುಳ್ಳುಸುದ್ದಿಗಳು ಎಲ್ಲೇ ಹುಟ್ಟಿದರೂ ಅದನ್ನು ಪರಾಮರ್ಶಿಸಿ, ಅವಲೋಕನ ನಡೆಸಿ ಇದು ಸತ್ಯವಲ್ಲ, ಸುಳ್ಳೆಂದು ಆಧಾರಸಹಿತವಾಗಿ ಜನರ ಮುಂದಿಡುವ ಕೆಲಸವನ್ನು ಈ ಆನ್‌ಲೈನ್ ಸತ್ಯಶೋಧಕರು ಯಶಸ್ವಿಯಾಗಿ ಮಾಡುತ್ತಿದ್ದಾರೆ. ಆಲ್ಟ್‌ನ್ಯೂಸ್.ಕಾಂನ ಪ್ರತೀಕ್ ಸಿನ್ಹಾ, ಎಸ್.ಎಂ. ಹೋಕ್ಸ್‌ಸ್ಲೇಯರ್.ಕಾಂನ ಪಂಕಜ್ ಜೈನ್, ಚೆಕ್4ಸ್ಪಾಮ್.ಕಾಂನ ಓಲಿಯತ್, ಬೂಮ್‌ಲೈವ್.ಕಾಂನ ಗೋವಿಂದರಾಜ್ ಯತಿರಾಜ್ ಇವರಲ್ಲಿ ಪ್ರಮುಖರು.

ಪುಟ್ಟಪುಟ್ಟ ತಂಡಗಳಾಗಿ ಕೆಲಸ ಮಾಡುವ ಈ ಯುವಪೀಳಿಗೆಯ ಸತ್ಯಶೋಧಕರು ಇದುವರೆಗೂ ಸಾವಿರಾರು ಸುಳ್ಳುಸುದ್ದಿಗಳನ್ನು ಆಧಾರಸಹಿತವಾಗಿ ಬಯಲುಮಾಡಿ ಜನರ ಮುಂದಿಡುವ ಕೆಲಸ ಮಾಡುತ್ತಿರುವು ದೊಂದೇ ಸದ್ಯಕ್ಕೆ ಭರವಸೆಯ ಬೆಳಕಿಂಡಿ. ಪ್ರಚೋದನಾಕಾರಿ ಸುಳ್ಳುಸುದ್ದಿಗಳಿಗೆ ಬಲಿಯಾಗುವ ಮೊದಲು ಈ ವೆಬ್‌ಸೈಟ್‌ಗಳಿಗೆ ಒಮ್ಮೆ ಭೇಟಿ ಕೊಡುವುದು ಒಳ್ಳೆಯದು. ಅಥವಾ ಅನುಮಾನಾಸ್ಪದ ರೀತಿಯಲ್ಲಿ ಕಾಣುವ ತಿರುಚಲ್ಪಟ್ಟ ಚಿತ್ರಗಳನ್ನು ಟಿನ್‌ಐ.ಕಾಂ ವೆಬ್‌ಸೈಟಿಗೆ ಆ ಚಿತ್ರವನ್ನು ಅಪ್ಲೋಡ್ ಮಾಡಿ ಅದರ ಮೂಲ ಚಿತ್ರ ಪ್ರಕಟವಾಗಿರುವ ವೆಬ್‌ಸೈಟಿನ ವಿವರಗಳನ್ನು ಖುದ್ದಾಗಿ ಅರಿಯುವುದು, ಜೊತೆಗೆ ತಾವು ಕಂಡುಕೊಂಡ ಸತ್ಯವನ್ನು ಇತರರಿಗೂ ತಿಳಿಸುವ ಕೆಲಸಗಳ ಮೂಲಕವಷ್ಟೇ ಸುಳ್ಳುಸುದ್ದಿಗಳ ಹಾವಳಿಯನ್ನು ನಿಯಂತ್ರಿಸಬಹುದು. ಇವನ್ನು ಹೊರತುಪಡಿಸಿದಂತೆ ಅಪಾಯಕಾರಿ ಉದ್ಯಮವಾಗಿ ಬೆಳೆದಿರುವ ಸುಳ್ಳುಸುದ್ದಿ ಬ್ಯುಸಿನೆಸ್ ಅನ್ನು ನಿಗ್ರಹಿಸುವುದು ನಿಜಕ್ಕೂ ಕಷ್ಟಸಾಧ್ಯ.

Comments
ಈ ವಿಭಾಗದಿಂದ ಇನ್ನಷ್ಟು
ಸೋಲಿಗಿಂತ ಮಾನವೀಯತೆ ಮುಖ್ಯ

ಮಕ್ಕಳ ಕತೆ
ಸೋಲಿಗಿಂತ ಮಾನವೀಯತೆ ಮುಖ್ಯ

18 Mar, 2018
ಪೃಥ್ವಿ ಪರಿಚಯದ ಕೆಲವು ಪ್ರಶ್ನೆಗಳು

ವಿಜ್ಞಾನ ವಿಶೇಷ
ಪೃಥ್ವಿ ಪರಿಚಯದ ಕೆಲವು ಪ್ರಶ್ನೆಗಳು

18 Mar, 2018
ತೆಳ್ಳಗಿನ ಬಂಗಲೆ

ಕಥೆ
ತೆಳ್ಳಗಿನ ಬಂಗಲೆ

18 Mar, 2018
ಪಾದಕ್ಕೂ ಕಣ್ಣುಂಟು

ಕಾವ್ಯ
ಪಾದಕ್ಕೂ ಕಣ್ಣುಂಟು

18 Mar, 2018
ನಗೆಯುಕ್ಕಿಸಿದ ‘ಗುಗ್ಗು’ವಿಗೆ ನೂರು...

ನೆನಪು
ನಗೆಯುಕ್ಕಿಸಿದ ‘ಗುಗ್ಗು’ವಿಗೆ ನೂರು...

18 Mar, 2018