ಜನಪದಕ್ಕೆ ಬದುಕು ಮುಡಿಪಿಟ್ಟ ಕಲಾವಿದ ಮುನಿರೆಡ್ಡಿ

ವಿಶೇಷವಾಗಿ ನೀರು, ಪರಿಸರದ ಸಂರಕ್ಷಣೆ, ಶೌಚಾಲಯಗಳ ಮಹತ್ವದ ಕುರಿತು ಜನಪದ ಗೀತೆಗಳ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸಲು ಶ್ರಮಿಸುತ್ತಿದ್ದಾರೆ.

ಮುನಿರೆಡ್ಡಿ

ಕಲೆ, ಸಂಗೀತ ಸಾಮಾನ್ಯವಾಗಿ ಎಲ್ಲರಿಗೂ ಒಲಿಯುವುದಿಲ್ಲ. ಅದು ಒಲಿದರೆ ಅವರನ್ನು ಕೈಬಿಡುವುದಿಲ್ಲ. ಚಿಂತಾಮಣಿ ತಾಲ್ಲೂಕಿನ ನಾರಮಾಕಲಹಳ್ಳಿ ಮುನಿರೆಡ್ಡಿ ಸಾಧನೆಯಿಂದಲೇ ಜನಪದ ಕಲೆಯನ್ನು ಒಲಿಸಿಕೊಂಡವರು.

ತಾಲ್ಲೂಕಿನಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ ಮುನಿರೆಡ್ಡಿಯ ಜನಪದ ಕಾರ್ಯಕ್ರಮ ಇದ್ದೇ ಇರುತ್ತದೆ. ಅದರಲ್ಲೂ ರೈತಗೀತೆ ಮತ್ತು ನಾಡಗೀತೆ ಹಾಡುವುದರಲ್ಲಿ ಎತ್ತಿದಕೈ. ಪದವೀಧರರಾದರೂ ಜನಪದ ಕಲೆಯನ್ನು ಮೈಗೂಡಿಸಿಕೊಂಡು ಹಳ್ಳಿಯಲ್ಲೇ ಉಳಿದ ಮುನಿರೆಡ್ಡಿ ತಾಲ್ಲೂಕು ಮತ್ತು ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮ ನೀಡಿ ಎಲ್ಲರ ಮನದಲ್ಲಿ ನೆಲೆಯೂರಿದ್ದಾರೆ.

ತಾಲ್ಲೂಕಿನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯು ನಡೆಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಮುನಿರೆಡ್ಡಿ ಹಾಜರಿರುತ್ತಾರೆ. ಎಲ್ಲ ಜಾತಿ, ಜನಾಂಗ, ಧರ್ಮದ ಕಾರ್ಯಕ್ರಮಗಳಲ್ಲೂ ಭಾಗವಹಿಸುವರು. ಹೀಗಾಗಿ ಅಜಾತಶತ್ರು ಎನಿಸಿಕೊಂಡಿದ್ದಾರೆ.

ಗ್ರಾಮದ ಗುಜ್ಜಾರಪ್ಪ ಮತ್ತು ಮುನಿಯಮ್ಮ ಅವರ ಮಗನಾಗಿ ಜನಿಸಿದ ಮುನಿರೆಡ್ಡಿ, ಬಾಲ್ಯದಿಂದಲೇ ಬಡತನದ ಬೇಗುದಿಯಲ್ಲಿ ಬೆಂದವರು. ಆದರೂ 25 ವರ್ಷಗಳಿಂದಲೂ ಹಳ್ಳಿಯಲ್ಲೇ ನೆಲೆಸಿ ಸಮಾಜ ಹಾಗೂ ಸರ್ಕಾರದ ಕಾರ್ಯಕ್ರಮಗಳಲ್ಲಿ ಜನಪದ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜನಪರ ಚಳ‌ವಳಿ, ಹೋರಾಟಗಳಲ್ಲೂ ಭಾಗವಹಿಸುವರು.

ಸಂಪೂರ್ಣ ಸಾಕ್ಷರತಾ ಆಂದೋಲನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ, ಜಲ ಸಂವರ್ಧನೆ, ಸಮಾಜ ಕಲ್ಯಾಣ ಇಲಾಖೆ, ಜಲಾನಯನ, ಪರಿಸರ, ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಸಾಂಸ್ಕೃತಿಕ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ.

ಬಯಲು ಸೀಮೆಯ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಒದಗಿಸಬೇಕೆಂದು ನಡೆಯುತ್ತಿರುವ ಹೋರಾಟದ ಕಾರ್ಯಕ್ರಮಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಭಾಗವಹಿಸಿ ತಮ್ಮ ಜನಪದ ಗೀತೆಗಳ ಮೂಲಕ ಹೋರಾಟಗಾರರನ್ನು ಹುರಿದುಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ವಿಶೇಷವಾಗಿ ನೀರು, ಪರಿಸರದ ಸಂರಕ್ಷಣೆ, ಶೌಚಾಲಯಗಳ ಮಹತ್ವದ ಕುರಿತು ಜನಪದ ಗೀತೆಗಳ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸಲು ಶ್ರಮಿಸುತ್ತಿದ್ದಾರೆ. ನೀರಿನ ಮಿತಬಳಕೆ ಹಾಗೂ ರೈತರು ರಾಸಾಯನಿಕ ಗೊಬ್ಬರ, ಮಿಶ್ರ ತಳಿಗಳನ್ನು ಕಡಿಮೆ ಮಾಡಿ ದೇಶೀಯ ನಾಟಿ ತಳಿಗಳನ್ನು ಹಾಗೂ ಕೊಟ್ಟಿಗೆ ಗೊಬ್ಬರವನ್ನು ಉಪಯೋಗಿಸಿಕೊಂಡು ಸಾವಯವ ಬೇಸಾಯ ಪದ್ಧತಿಯ ಕುರಿತು ರೈತರಿಗೆ ಗೀತೆಗಳ ಮೂಲಕ ಅರಿವು ಮೂಡಿಸುತ್ತಾರೆ.

ಇವರ ಸೇವೆಯನ್ನು ಗುರುತಿಸಿ ಸರ್ಕಾರ ಮತ್ತು ಸಮಾಜದ ವಿವಿಧ ಸಂಘ ಸಂಸ್ಥೆಗಳು ಹಲವು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ಜಿಲ್ಲಾ ಯುವ ಪ್ರಶಸ್ತಿ, ರಂಗ ಗೌರವ ಪ್ರಶಸ್ತಿ, ಜಾನಪದ ಹುಂಜ ಪ್ರಶಸ್ತಿ, ಸಂಕ್ರಾಂತಿ ಪ್ರಶಸ್ತಿ, ಅಂಕಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಮುಡಿಗೇರಿವೆ.

ಅನೇಕ ಜನಪದ ಗಾಯಕರನ್ನು ಹಾಗೂ ತಂಡಗಳನ್ನು ಬೆಳಕಿಗೆ ತಂದಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಅನೇಕರು ಸ್ವತಂತ್ರವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಎಲ್ಲ ಸಮುದಾಯದ ಜನರೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾರೆ.

‘ಕಮ್ಯೂನಿಸ್ಟ್‌ ಮತ್ತು ದಲಿತ ಸಂಘಟನೆಗಳ ಸೆಳೆತದಿಂದ ಜನಪದ ಕಲಾವಿದನಾದೆ. ಜಲತಜ್ಞ ಕೆ.ನಾರಾಯಣಸ್ವಾಮಿ, ಕಲಾವಿದ ಕೊಟಿಗಾನಹಳ್ಳಿ ರಾಮಯ್ಯ, ಕವಿ ಸಿದ್ದಲಿಂಗಯ್ಯ, ಸಿಪಿಎಂ ಮುಖಂಡ ಜಿ.ವಿ.ಶ್ರೀರಾಮರೆಡ್ಡಿ ಪ್ರಭಾವಕ್ಕೆ ಒಳಗಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡೆ ಎನ್ನುತ್ತಾರೆ ಮುನಿರೆಡ್ಡಿ.

‘ಸಮಾಜ ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಪ್ರತಿಯೊಂದು ಕುಡಿಯೂ ಶಾಂತಿ, ನೆಮ್ಮದಿ, ಸೌಹಾರ್ದದಿಂದ ಬದುಕಬೇಕು ಎಂಬುದು ನನ್ನ ಕಳಕಳಿ‘ ಎಂದು ವಿನಮ್ರತೆಯಿಂದ ನುಡಿಯುತ್ತಾರೆ.

* * 

ಜನಪದ ಕಲೆ ನನಗೆ ಬದುಕು ಕಟ್ಟಿಕೊಟ್ಟಿದೆ. ಇದೇ ನನ್ನ ಉಸಿರು. ಹಾಡುವುದರಿಂದ ಹಣ ಸಿಗದಿರಬಹುದು. ಆದರೆ ಸಂಪೂರ್ಣ ತೃಪ್ತಿ ಇದೆ. ಅದೇ ನನಗೆ ನೆಮ್ಮದಿ
ಮುನಿರೆಡ್ಡಿ ಜನಪದ ಕಲಾವಿದ

 

Comments
ಈ ವಿಭಾಗದಿಂದ ಇನ್ನಷ್ಟು

ಚಿಂತಾಮಣಿ
ಚಿಂತಾಮಣಿ: ರಂಗು ಪಡೆದ ಚುನಾವಣಾ ಕಣ

ವಿಧಾನಸಭಾ ಚುನಾವಣೆಗೆ ವಿವಿಧ ಅಭ್ಯರ್ಥಿಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸು ತ್ತಿದ್ದಂತೆ ಚುನಾವಣಾ ಕಣ ರಂಗೇರಿದ್ದು, ರಾಜಕಾರಣಿಗಳು ಮೈಕೊಡವಿ ಕೊಂಡು ಭರ್ಜರಿ ಪ್ರಚಾರಕ್ಕೆ ಮತ್ತು ಮತದಾರರನ್ನು...

26 Apr, 2018
ಇಂದು ನಗರಕ್ಕೆ ಜಿಗ್ನೇಶ್‌ ಮೇವಾನಿ

ಚಿಕ್ಕಬಳ್ಳಾಪುರ
ಇಂದು ನಗರಕ್ಕೆ ಜಿಗ್ನೇಶ್‌ ಮೇವಾನಿ

26 Apr, 2018
ರಜೆಯ ಮೋಜಿಗೆ ಬಂದವರು ಜಲ ಸಮಾಧಿ

ಚಿಕ್ಕಬಳ್ಳಾಪುರ
ರಜೆಯ ಮೋಜಿಗೆ ಬಂದವರು ಜಲ ಸಮಾಧಿ

26 Apr, 2018

ಚಿಕ್ಕಬಳ್ಳಾಪುರ
ಗ್ರಾಮ ದತ್ತು ಪಡೆಯಲು ನಿರ್ಧಾರ

ಚಿಕ್ಕಬಳ್ಳಾಪುರದಲ್ಲಿ ಬುಧವಾರ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆಯ 2016–17ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ಜಿಲ್ಲೆಯಲ್ಲಿ ಹಳ್ಳಿಯೊಂದನ್ನು ದತ್ತು...

26 Apr, 2018

ಚಿಂತಾಮಣಿ
‘ಮನೆಯೊಂದು ಮೂರು ಬಾಗಿಲು’ ಆದ ಬಿಜೆಪಿ

ವಿಧಾನಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಕ್ಷೇತ್ರದ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಇದು ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದ್ದು, ಬಿಜೆಪಿ ಪರಿಸ್ಥಿತಿ ‘ಮನೆಯೊಂದು ಮೂರು...

25 Apr, 2018