ದಾವಣಗೆರೆ

ಕುತೂಹಲ ಕೆರಳಿಸಿದ ಮಾಯಕೊಂಡ, ಹರಪನಹಳ್ಳಿ

ಜಿಲ್ಲೆಯಲ್ಲಿ ಬಿಜೆಪಿ ಒಂದು ಸುತ್ತಿನ ಪರಿವರ್ತನಾ ಯಾತ್ರೆ ಮುಗಿಸಿದ್ದು, ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ದಾವಣಗೆರೆ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ನಕ್ಷೆ

ದಾವಣಗೆರೆ: ಪರಿವರ್ತನಾ ಯಾತ್ರೆಯಲ್ಲೇ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಘೋಷಿಸುತ್ತಿದ್ದು, ಪ್ರತಿಯೊಂದು ಕ್ಷೇತ್ರದ ಯಾತ್ರೆಯೂ ಈಗ ಕುತೂಹಲ, ನಿರೀಕ್ಷೆಗಳ ಕೇಂದ್ರವಾಗಿದೆ. ಪ್ರತಿ ಯಾತ್ರೆಯೂ ಪ್ರಬಲ ಆಕಾಂಕ್ಷಿಗಳ ಬಲಾಬಲ ಪ್ರದರ್ಶನದ ವೇದಿಕೆಯಾಗಿದ್ದು, ಆಯೋಜನೆಯಲ್ಲೂ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಎಲ್ಲ ಯಾತ್ರೆಗಳಿಗೂ ಸಹಸ್ರಾರು ಜನರನ್ನು ಸೇರಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಬಿಜೆಪಿ ಒಂದು ಸುತ್ತಿನ ಪರಿವರ್ತನಾ ಯಾತ್ರೆ ಮುಗಿಸಿದ್ದು, ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಮತ್ತೊಂದು ಸುತ್ತಿನ ಯಾತ್ರೆ ಜನವರಿ 2 ಮತ್ತು 3ರಂದು ಜಿಲ್ಲೆಯಲ್ಲಿ ಸಂಚರಿಸಲಿದ್ದು, ಮೀಸಲು ಕ್ಷೇತ್ರ ಮಾಯಕೊಂಡ, ತುರುಸಿನ ಪೈಪೋಟಿಯ ಹರಪನಹಳ್ಳಿ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಯಾರ ಹೆಸರು ಹೇಳುತ್ತಾರೆಂಬ ಕುತೂಹಲ ಕೆರಳಿದೆ.

ಯಾತ್ರೆ ಈಗಾಗಲೇ ಹರಿಹರ, ದಾವಣಗೆರೆ ಉತ್ತರ, ದಕ್ಷಿಣ, ಹೊನ್ನಾಳಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದೆ. ಜನವರಿ 2ರಂದು ಚನ್ನಗಿರಿ ಕ್ಷೇತ್ರಕ್ಕೆ ಬರಲಿದೆ. 3ರಂದು ಬೆಳಿಗ್ಗೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆನಗೋಡು, ಮಧ್ಯಾಹ್ನ ಜಗಳೂರು ಹಾಗೂ ಸಂಜೆ ಹರಪನಹಳ್ಳಿಯಲ್ಲಿ ಪ್ರವಾಸ ಮಾಡಿ ಯಾತ್ರೆ ಕೊನೆಗೊಳ್ಳಲಿದೆ.

ಹರಿಹರದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್ ಅವರಿಗೆ, ಹೊನ್ನಾಳಿಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರಿಗೆ ಟಿಕೆಟ್‌ ಘೋಷಣೆ ಮಾಡಿದ್ದು ಕೆಲ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ನಿರೀಕ್ಷೆಯಂತೆ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್‌ ಹೆಸರು ಘೋಷಣೆಯಾಗಿದೆ. ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್ ಹೆಸರು ಘೋಷಣೆಯಾಗುವ ನಿರೀಕ್ಷೆ ಇದ್ದರೂ ಯಡಿಯೂರಪ್ಪ ಅವರ ಹೆಸರು ಹೇಳುವವರೆಗೂ ಯಾರಿಗೂ ಖಚಿತವಾಗಿರಲಿಲ್ಲ.

ಬಿ.ಪಿ.ಹರೀಶ್ ಕೆಜೆಪಿ, ಕಾಂಗ್ರೆಸ್‌ ಪಕ್ಷಗಳಿಗೆ ಹೋಗಿ ಬಂದವರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದ ಎಸ್‌.ಎಂ.ವೀರೇಶ್‌ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರು. ಯಾತ್ರೆಯಲ್ಲೇ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಪೊಲೀಸ್‌ ಅಧಿಕಾರಿ ಕುಣಿಬೆಳಕೆರೆ ದೇವೇಂದ್ರಪ್ಪ ಕುರುಬ ಸಮಾಜಕ್ಕೆ ಸೇರಿದವರು ಹಾಗೂ ಜನಾರ್ದನ ರೆಡ್ಡಿ, ಶ್ರೀರಾಮಲು ಅವರ ಕೃಪಾರ್ಶೀವಾದ ಇರುವವರು. ಈ ಮೂವರು ಪ್ರಬಲ ಆಕಾಂಕ್ಷಿಗಳಾಗಿದ್ದರು. ಈಗ ಹರೀಶ್‌ ಅವರನ್ನೇ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದ್ದು ಕೆಲ ಮುಖಂಡರ ಮುನಿಸಿಗೆ ಕಾರಣವಾಗಿದೆ. ಮುಂದೆ ಭಿನ್ನಮತಕ್ಕೂ ಅವಕಾಶ ಆಗಬಹುದು ಎಂದು ಪಕ್ಷದ ಕೆಲ ಮುಖಂಡರು ವಿಶ್ಲೇಷಿಸುತ್ತಾರೆ.

ಹೊನ್ನಾಳಿಯಲ್ಲಿ ರೇಣುಕಾಚಾರ್ಯ ಅವರ ಜತೆಗೆ ಎ.ಬಿ.ಹನುಮಂತಪ್ಪ, ಡಾ.ಡಿ.ಬಿ.ಗಂಗಪ್ಪ, ಬಿಸಾಟೆ ಸುರೇಶ್, ಹನುಮನಹಳ್ಳಿ ಬಸವರಾಜ್ ಅವರೂ ಪ್ರಬಲ ಆಕಾಂಕ್ಷಿಗಳಾಗಿದ್ದರು. ಪಕ್ಷದ ಆದೇಶದಂತೆ ಸರ್ವೆ, ಸಮೀಕ್ಷೆ ಮಾಡಿ ಟಿಕೆಟ್‌ ಘೋಷಣೆ ಮಾಡಬೇಕಾಗಿತ್ತು. ಆದರೆ, ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಯಡಿಯೂರಪ್ಪ ಟಿಕೆಟ್‌ ಘೋಷಣೆ ಮಾಡಿದ್ದಾರೆ ಎಂದು ಯಾತ್ರೆ ವೇಳೆ ಅವರ ಕಾರಿಗೆ ಮುತ್ತಿಗೆ ಹಾಕಿ ಭಿನ್ನ ಮುಖಂಡರು ಪ್ರತಿಭಟನೆ ಮಾಡಿದ್ದಾರೆ.ಇದು ಮುಂದೆ ರೇಣುಕಾಚಾರ್ಯ ಗೆಲುವಿಗೆ ಅಡ್ಡಿಯಾಗಲಿದೆಯೇ ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬಂದಿವೆ.

ಜಗಳೂರಿನಲ್ಲಿ ಮಾಜಿ ಶಾಸಕ ಎಸ್‌.ವಿ.ರಾಮಚಂದ್ರ, ಚನ್ನಗಿರಿಯಲ್ಲಿ ಮಾಡಾಳ್‌ ವಿರೂಪಾಕ್ಷಪ್ಪ ಇವರಿಬ್ಬರು ಪ್ರಬಲ ಆಕಾಂಕ್ಷಿಗಳು. ಇವರ ಹೆಸರು ಘೋಷಿಸಲು ಯಡಿಯೂರಪ್ಪ ಅವರಿಗೆ ಯಾವುದೇ ಅಡ್ಡಿ–ಆತಂಕಗಳು ಎದುರಾಗುವುದಿಲ್ಲ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಯಾರಿಗೆ ಟಿಕೆಟ್‌?: ಇಡೀ ಜಿಲ್ಲೆಯಲ್ಲಿ ತೀವ್ರ ಕುತೂಹಲ ಹುಟ್ಟಿಸಿದ್ದು ಮಾಯಕೊಂಡ, ಹರಪನಹಳ್ಳಿ ಕ್ಷೇತ್ರಗಳು. ಮಾಯಕೊಂಡದಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮಾಜಿ ಶಾಸಕ ಎಂ.ಬಸವನಾಯ್ಕ, ಎಚ್‌.ಆನಂದಪ್ಪ, ‘ಪ್ರೊ.ಲಿಂಗಣ್ಣ, ಎಚ್‌.ಕೆ.ಬಸವರಾಜ್, ಎನ್‌.ಹನುಮಂತ ನಾಯ್ಕ ಹಾಗೂ ಬಿ.ವೆಂಕಟಪ್ಪ ಇವರಲ್ಲಿ ಪೈಪೋಟಿ ತೀವ್ರವಾಗಿದೆ. ಆಕಾಂಕ್ಷಿಗಳಲ್ಲಿ ಒಬ್ಬರಾದ ಪ್ರೊ.ಲಿಂಗಣ್ಣ ಅವರು ಈಚೆಗೆ, ಎಚ್‌.ಆನಂದಪ್ಪ, ಎಚ್‌.ಕೆ.ಬಸವರಾಜ್, ಎನ್‌.ಹನುಮಂತ ನಾಯ್ಕ ಹಾಗೂ ನನ್ನನ್ನು ಸೇರಿದಂತೆ ಯಾರಿಗೇ ಟಿಕೆಟ್‌ ನೀಡಿದರೂ ಒಗ್ಗಟ್ಟಾಗಿ ಗೆಲುವಿಗೆ ಶ್ರಮಿಸುತ್ತೇವೆ ಎಂದು ದೇವರಲ್ಲಿ ಆಣೆ, ಪ್ರಮಾಣ ಮಾಡಿದ್ದೇವೆ’ ಎಂದು ಈ ನಾಲ್ಕು ಜನರ ಎದುರಿಗೇ ಹೇಳಿದ್ದರು. ಆದರೆ, ಇದಕ್ಕೆ ಬಸವರಾಜ ನಾಯ್ಕ, ಬಿ.ವೆಂಕಟಪ್ಪ ಅವರ ಒಪ್ಪಿಗೆ ಇದ್ದಂತೆ ಇರಲಿಲ್ಲ. ಹಾಗಾಗಿ, ಇಲ್ಲಿ ಗೊಂದಲ ಮುಂದುವರಿಯಲಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ.

ಹರಪನಹಳ್ಳಿಯಲ್ಲೂ ಗೊಂದಲ: ಹರಪನಹಳ್ಳಿಯಲ್ಲಿ ಪ್ರಬಲ ಆಕಾಂಕ್ಷಿಗಳಲ್ಲಿ ಮೂಲ, ಅನಿವಾಸಿ ಹೀಗೆ ಚರ್ಚೆಗಳು ಎದ್ದಿವೆ. ಮಾಜಿ ಸಚಿವ ಕರುಣಾಕರ ರೆಡ್ಡಿ ಸ್ಥಳೀಯರಲ್ಲ ಎಂಬ ವಾದ ಇನ್ನೊಬ್ಬ ಆಕಾಂಕ್ಷಿ ಕೊಟ್ರೇಶ್‌ ಅವರದ್ದು. ಹರಪನಹಳ್ಳಿ ಅಭಿವೃದ್ಧಿ ಕಾಣಲು ಕರುಣಾಕರ ರೆಡ್ಡಿಯೇ ಕಾರಣ. ಅವರನ್ನೇ ಮತ್ತೊಮ್ಮೆ ಆಯ್ಕೆ ಮಾಡಬೇಕೆಂಬ ಪ್ರಬಲ ಒತ್ತಡ ಅವರ ಬೆಂಬಲಿಗರದ್ದು. ಈ ಮಧ್ಯೆ ಜ. 3ರ ಪರಿವರ್ತನಾ ಯಾತ್ರೆಯನ್ನು ಯಾರ ನೇತೃತ್ವದಲ್ಲಿ ಕೈಗೊಳ್ಳಬೇಕೆಂಬ ರೆಡ್ಡಿ–ಕೊಟ್ರೇಶ್‌ ಬಣಗಳ ಜಗಳ ಈಗ ಜಿಲ್ಲೆಯ ಮುಖಂಡರನ್ನೂ ಮೀರಿ ರಾಜ್ಯ ವರಿಷ್ಠರನ್ನು ತಲುಪಿದೆ. ಟಿಕೆಟ್‌ ಯಾರಿಗೇ ಘೋಷಣೆಯಾದರೂ ಗೊಂದಲ, ಗದ್ದಲಗಳು ಉಳಿದುಕೊಳ್ಳುತ್ತವೆ ಎನ್ನುತ್ತವೆ ಪಕ್ಷದ ಮೂಲಗಳು.

‘ಸರ್ವೆ ನಡೆಸಿಯೇ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಬೇಕೆಂಬ ನಿಯಮ ಇದ್ದಿದ್ದು ನಿಜ. ಆದರೆ, ಈಗಾಗಲೇ ಸರ್ವೆ ವರದಿ ಯಡಿಯೂರಪ್ಪ ಅವರ ಕೈ ಸೇರಿರಬಹುದು. ಹಾಗಾಗಿ, ಅವರು ಅಷ್ಟು ಆತ್ಮವಿಶ್ವಾಸದಿಂದ ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸುತ್ತಿದ್ದಾರೆ. ಮಾಯಕೊಂಡ, ಹರಪನಹಳ್ಳಿ ಕ್ಷೇತ್ರಗಳಲ್ಲಿ ಯಾರ ಹೆಸರು ಘೋಷಿಸಿದರೂ ಸಮಸ್ಯೆ ಎದುರಾಗುವುದು ಸಹಜ. ಹಾಗಾಗಿ, ಅಲ್ಲಿ ಯಡಿಯೂರಪ್ಪ ಅಭ್ಯರ್ಥಿಗಳ ಹೆಸರು ಘೋಷಿಸದೆಯೂ ಇರಬಹುದು’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪಕ್ಷದ ಮುಖಂಡರೊಬ್ಬರು.

‘ಘೋಷಣೆಯಿಂದ ಪಕ್ಷಕ್ಕೆ ಲಾಭ’

ಯಾತ್ರೆ ಸಂದರ್ಭದಲ್ಲೇ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುತ್ತಿರುವುದರಿಂದ ಪಕ್ಷ ಸಂಘಟನೆ, ಅಭ್ಯರ್ಥಿಗಳ ಗೆಲುವಿಗೆ ಅನುಕೂಲವಾಗಲಿದೆ. ಬಹಳಷ್ಟು ಗೊಂದಲಗಳು ನಿವಾರಣೆಯಾಗಲಿವೆ. ಕೊನೆಗಳಿಗೆಯಲ್ಲಿ ಟಿಕೆಟ್‌ ಕೈತಪ್ಪಿದ ಅಭ್ಯರ್ಥಿಗಳು ದಿಢೀರ್‌ ಬೇರೆ ಪಕ್ಷಕ್ಕೆ ಹೋಗುವುದರಿಂದ ಪಕ್ಷಕ್ಕೆ ಹಾನಿಯಾಗುತ್ತಿತ್ತು. ಅಲ್ಲದೇ, ಪಕ್ಷದ ಅಭ್ಯರ್ಥಿಗಳ ಗೆಲುವಿಗೂ ತೊಡಕಾಗುತ್ತಿತ್ತು. ಈಗಲೇ ಹೆಸರು ಘೋಷಿಸುವುದರಿಂದ ಸಿದ್ಧತೆಗೆ ಹಾಗೂ ಸಮಸ್ಯೆ ನಿವಾರಣೆಗೆ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್.

* *

ಪೈಪೋಟಿ ಹೆಚ್ಚಿರುವುದರಿಂದ ಮಾಯಕೊಂಡ, ಹರಪನಹಳ್ಳಿ ಕ್ಷೇತ್ರಗಳ ಅಭ್ಯರ್ಥಿಗಳ ಘೋಷಣೆ ಸ್ವಲ್ಪ ತಡವಾಗಬಹುದು.
ಯಶವಂತರಾವ್ ಜಾಧವ್
ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ

Comments
ಈ ವಿಭಾಗದಿಂದ ಇನ್ನಷ್ಟು
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ

ದಾವಣಗೆರೆ
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಘೋಷಿಸಿ

19 Mar, 2018
‘ಕುಡಿಯುವ ನೀರಿಗೆ ಸರ್ಕಾರದ ಬಳಿ ಹಣವಿಲ್ಲವೇ’

ದಾವಣಗೆರೆ
‘ಕುಡಿಯುವ ನೀರಿಗೆ ಸರ್ಕಾರದ ಬಳಿ ಹಣವಿಲ್ಲವೇ’

17 Mar, 2018
ಹಣ ಚಲಾವಣೆ ಬಗ್ಗೆ ವಿಶೇಷ ನಿಗಾ ಇಡಿ

ದಾವಣಗೆರೆ
ಹಣ ಚಲಾವಣೆ ಬಗ್ಗೆ ವಿಶೇಷ ನಿಗಾ ಇಡಿ

17 Mar, 2018

ಜಗಳೂರು
ಸರ್ಕಾರದಿಂದ ಬರ ನಿವಾರಣೆಗೆ ಕ್ರಮ

ಬರಪೀಡಿತ ತಾಲ್ಲೂಕಿನ ಜೀವನಾಡಿಯಾಗಿರುವ ಕೆರೆಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಕ್ರಮ ಅತ್ಯಂತ ಮಹತ್ವದ್ದಾಗಿದೆ' ಎಂದು ಶಾಸಕ ಎಚ್‌.ಪಿ. ರಾಜೇಶ್ ಹೇಳಿದರು. ...

17 Mar, 2018

ಹರಪನಹಳ್ಳಿ
ರಾಜ್ಯದಲ್ಲೂ ತ್ರಿಪುರಾ ಫಲಿತಾಂಶ ಬರಲಿದೆ: ವಿನೋದ್‌ ಗೋಯಕರ್‌

‘ತ್ರಿಪುರಾ ವಿಧಾನಸಭಾ ಫಲಿತಾಂಶವೇ ರಾಜ್ಯದ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದ್ದು, ಇಲ್ಲಿಯೂ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆ ಏರಲಿದೆ’ ಎಂದು ಬಿಜೆಪಿ ರಾಷ್ಟ್ರೀಯ...

17 Mar, 2018