ಪುಸ್ತಕ ಬಿಡುಗಡೆ

ಜ್ವಲಂತ ಕವಿಯ ಅಕ್ಷಯ ಕಾವ್ಯ

ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಕವಿ ಡಾ. ಕೆ.ವಿ. ತಿರುಮಲೇಶ್‌ ಕುರಿತ ಪೂರ್ಣ ಅಧ್ಯಯನದ ಮೊದಲ ಪುಸ್ತಕ ನಾಳೆ ಬಿಡುಗಡೆಯಾಗಲಿದೆ. ವಿಮರ್ಶಕ ಎಸ್. ಆರ್. ವಿಜಯಶಂಕರ ಬರೆದಿರುವ ಈ ಕೃತಿಯ ಆಯ್ದ ಭಾಗಗಳು ಇದೊ...

ಚಿತ್ರ: ಡಿ.ಕೆ. ರಮೇಶ್

ಕೆ.ವಿ. ತಿರುಮಲೇಶರ ಅಕ್ಷಯ ಕಾವ್ಯ 2010ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು. ಈ ಕಾವ್ಯ ಸಂಗ್ರಹ 2015ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು. ಸುಮಾರು 477ಪುಟಗಳ ಈ ಕೃತಿ ಅನೇಕ ಕಾವ್ಯ ಭಾಗಗಳು ಸೇರಿದ ಸಂಗ್ರಹ. ವಿಭಾಗಗಳಿಗಾಗಲೀ ಕಾವ್ಯ ಘಟಕಗಳಿಗಾಗಲೀ ಯಾವುದೇ ಪ್ರತ್ಯೇಕ ಹೆಸರುಗಳು ಇಲ್ಲಿಲ್ಲ. ಈ ಕ್ರಮ ಕಾಂಡ, ಪರ್ವ ಹೀಗೆ ವಿಭಾಗಗಳಿಗೆ ಹೆಸರಿಸುವ ಪುರಾಣಕಾಲದಿಂದ ಬೆಳೆದುಬಂದ ಅಭಿಜಾತ ಕ್ರಮದಿಂದ ಸಂಪೂರ್ಣ ಭಿನ್ನ.

ಇದಕ್ಕಿಂತ ಮೊದಲಿನ ತಿರುಮಲೇಶರ ಕವನ ಸಂಗ್ರಹ ಪಾಪಿಯೂ 1990ರಲ್ಲಿ ಪ್ರಕಟವಾಗಿ 20 ವರುಷಗಳ ಬಳಿಕ ಅಕ್ಷಯ ಹೊಸಕಾವ್ಯ ಹೊರಬಂತು ಎಂಬುದು ಕೂಡ ಗಮನಿಸಬೇಕಾದ ವಿಚಾರ. ಈ ನಡುವೆ ಅವರು ಇತರ ಕೆಲವು ಗದ್ಯ ಕೃತಿಗಳನ್ನು ಪ್ರಕಟಿಸಿದ್ದರು. ಆದರೆ ಇನ್ನೊಂದು ಕಾವ್ಯ ಸಂಗ್ರಹಕ್ಕೆ ಇಪ್ಪತ್ತು ವರುಷಗಳ ಕಾಲ ಕಾದರು ಎಂಬುದು ‘ಅಕ್ಷಯ ಕಾವ್ಯ’ದ ಧ್ಯಾನಶೀಲ ನೆಲೆಗಳನ್ನು ಪರೋಕ್ಷವಾಗಿ ಸೂಚಿಸುತ್ತದೆ.

ಕಾವ್ಯ ಭಾಗಗಳನ್ನು ಹಾಗೂ ಅದರೊಳಗಿನ ಬಿಡಿ ತುಣುಕುಗಳನ್ನು ಹೆಸರಿಸಿದರೆ, ಆ ಹೆಸರಿನ ಮೂಲಕವೇ ಅರ್ಥಮಾಡಿಕೊಳ್ಳಲು ತೊಡಗುತ್ತಾರೆ. ಅಂತಹ ಯಾವುದೇ ನಿಯಂತ್ರಣ ಬೇಡ. ಅಕ್ಷಯ ಕಾವ್ಯ ಮುಕ್ತವಾಗಿ ಪೂರ್ಣ ತೆರೆದ ಸ್ಥಿತಿ. ಅದು ಯಾವುದೇ ಚೌಕಟ್ಟು ಇಲ್ಲದೆ ಮುಕ್ತ ಸ್ವತಂತ್ರ ಎಂಬರ್ಥದ ಮಾತುಗಳನ್ನು ತಮ್ಮ ಒಂದು ಸಂದರ್ಶನದಲ್ಲಿ ತಿರುಮಲೇಶರು ಹೇಳಿದರು.

ಇಷ್ಟೂ ವರ್ಷ ತಡೆಹಿಡಿದಿದ್ದ ಈ ಕೃತಿಯನ್ನು ಪ್ರಕಟಿಸದಿದ್ದರೆ ಇನ್ನು ಮುಂದೆ ಏನೂ ಬರೆಯಲಾರೆ ಎಂದು ಅನಿಸಿದಾಗ ಅಕ್ಷಯ ಕಾವ್ಯ ಹೊರಬಂದಿದೆ. ಇಪ್ಪತ್ತು ವರುಷಗಳ ಕಾಲ ವಿಚಿತ್ರ ಧ್ಯಾನದ ವಿವಿಧ ನೆಲೆಗಳನ್ನು ಅದು ಹಾದಿರಬೇಕು.

ಮಹಾಕಾವ್ಯ ಲಕ್ಷಣಗಳನ್ನು ಮಹಾಕಾವ್ಯದ ಅಭಿಜಾತ ಸ್ವರೂಪವಿಲ್ಲದೆ ಮುಕ್ತ ಪ್ರತಿಮೆಗಳ ಮೂಲಕ ಕಟ್ಟಲು ಪ್ರಯತ್ನಿಸುವ ಕೃತಿ ಇದು. ವಾಸ್ತವದಲ್ಲಿ ಇಲ್ಲಿನ ಕಥಾರೂಪ ಬಹಳ ಚಿಕ್ಕದು. ಇಲ್ಲಿ ಕಾವ್ಯಕ್ಕೆ ಆತುಕೊಳ್ಳಲು ವಿಸ್ತರಿಸಿ ಹಬ್ಬುವ ವಿಸ್ತೀರ್ಣವಾದ ಕಥಾ ಹಂದರವೇನೂ ಇಲ್ಲ. ಪ್ರಾರಂಭದಲ್ಲೇ ನಿರೂಪಿತವಾದ ಇಲ್ಲಿನ ಕಥಾಭಿತ್ತಿ ಇಷ್ಟೆ: ಪರಸ್ಪರ ಪ್ರೇಮಿಸುವ ಒಂದು ಗಂಡು ಒಂದು ಹೆಣ್ಣು ಅಣಬೆ ಹೆಕ್ಕಲು ಕಾಡಿಗೆ ಹೋಗಿರುತ್ತಾರೆ. ಅದೊಂದು ಅಪರೂಪದ ಏಕಾಂತದ ಸಂದರ್ಭ.

ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವುದಕ್ಕೆ ಇಂಥ ಅವಕಾಶ ಇನ್ನೊಮ್ಮೆ ಸಿಗಲಾರದು ಎಂದು ಇಬ್ಬರಿಗೂ ಅನಿಸಿದೆ. ಆದರೂ ಹಾಗೆ ಮಾಡದೆ ದಾರಿ ಕವಲೊಡೆಯುವ ತನಕ ಅವರಿಬ್ಬರೂ ಮಾತಾಡಿಕೊಂಡುದು ಅಣಬೆಗಳ ಬಗ್ಗೆಯೇ. ಅದು ಯಾಕೆ? ಎಂಬುದೇ ಈ ಕಾವ್ಯದ ಮೂಲಭಿತ್ತಿ. ಯಾಕೆ ಎಂಬ ಪ್ರಶ್ನೆ, ವಿಸ್ಮಯಗಳಿಗೆ ಕಾವ್ಯ ಉತ್ತರ ಹುಡುಕುತ್ತದೆ. ಆ ಮೂಲಕ ಇಂದಿನ ಜೀವನದ ತಾತ್ವಿಕ ದರ್ಶನವನ್ನು ತೋರಿಸಿಕೊಡುತ್ತದೆ. ಯಾಕೆ ಎಂಬುದರ ಹಿಂದೆ ಇರುವ ಬದುಕಿನ ಮೌನದ ಬೆರಗು ಹಾಗೂ ರಹಸ್ಯಗಳಿಗೆ ಪ್ರತಿಮಾ ವಿಧಾನದ ಮೂಲಕ ಉತ್ತರ ಹುಡುಕುವ ಪ್ರಯತ್ನವನ್ನು ಅಕ್ಷಯ ಕಾವ್ಯ ಮಾಡುತ್ತಿದೆ.

ತಾತ್ವಿಕ, ವೈಚಾರಿಕ ನೆಲೆಗಳಲ್ಲೇ ಸಂಚರಿಸುವ ಇಲ್ಲಿನ ಶೋಧನೆಗೆ ಕಥೆಯ ಆಧಾರವಿಲ್ಲ. ಹಾಗಾಗಿ ಕಾವ್ಯದ ಪ್ರತಿ ಹೆಜ್ಜೆಯನ್ನೂ ಆಧರಿಸಿ ಅನುಭವಿಸಿ ವಿಸ್ತರಿಸಲು ಒದಗಿಬರುವುದು ಕೇವಲ ಪ್ರತಿಮೆಗಳು ಮಾತ್ರ. ಇಲ್ಲಿನ ಕಾವ್ಯಖಂಡಗಳನ್ನು ಬೆಸೆಯಲು ಕೊಂಡಿಗಳು (links) ಸುಲಭವಾಗಿ ಸಿಗುವುದಿಲ್ಲ. ಅವು ಒಂದು ಇನ್ನೊಂದಕ್ಕೆ ಸೇರಿ ಮಹಾಕಾವ್ಯ ಕ್ರಮದಲ್ಲಿ ಬೆಳೆಯುವುದು ಓದುಗನ ಅನುಭವದಲ್ಲಿ ಮತ್ತು ಅಮೂರ್ತ ಕಲ್ಪನೆಗಳಲ್ಲಿ. ಹಾಗಾಗಿ ಇದು ಏಕಾಗ್ರತೆಯನ್ನೂ, ದೊಡ್ಡದಾದೊಂದು ಅಮೂರ್ತ ಅನುಭವ ಭಿತ್ತಿಯನ್ನು ಮನಸ್ಸಲ್ಲಿ ತಾಳಿಕೊಂಡು ಗ್ರಹಿಸಬಲ್ಲ ಶಕ್ತಿಯನ್ನೂ ಸಾವಧಾನವನ್ನೂ ಬೇಡುತ್ತದೆ.

ಒಂದು ಕಡೆ ಜರ್ಮನ್ ಕವಿ ರಿಲ್ಕೆ, ತನ್ನ ಕಾದಂಬರಿ ಬಗ್ಗೆ ಹೇಳಿಕೊಂಡ ಹಾಗೆ ಪ್ರವಾಹದ ವಿರುದ್ಧ ಈಜಬಲ್ಲವನು ಮಾತ್ರ ಅರ್ಥ ಮಾಡಿಕೊಳ್ಳಬಲ್ಲ ಕೃತಿ ಇದು. ಅಭಿಜಾತ ಪರಂಪರೆಯ ಮಹಾಕಾವ್ಯ ಪರಂಪರೆಯಲ್ಲಿ ಸುಲಭದಲ್ಲಿ ಸಿಗುವ ಕಥನದ ಊರುಗೋಲಿನ ಸಹಾಯವಾಗಲಿ, ಪರಸ್ಪರ ವಿಭಾಗಗಳನ್ನು ಸೇರಿಸಿಕೊಂಡು ಪರಿಭಾವಿಸಲು ಬೇಕಾದ ಸಹಾಯಕ ಕೊಂಡಿ (link)ಗಳಾಗಲೀ ಅಥವಾ ಈಗಾಗಲೇ ಓದುವುದಕ್ಕೊಂದು ಸಿದ್ಧ ಕ್ರಮವಿರುವ ವರ್ಣನೆ, ಅಲಂಕಾರಗಳ ಸಹಾಯವಾಗಲಿ ಅಕ್ಷಯ ಕಾವ್ಯದ ಓದುಗನಿಗೆ ಸಿಗುವುದಿಲ್ಲ.

ಇಲ್ಲಿನ ಪ್ರತಿಮೆಗಳು ಸೃಷ್ಟಿಸುವ ಪ್ರಭೆಯಿಂದಲೇ ಓದುಗ ಅಕ್ಷಯ ಕಾವ್ಯದೊಳಗೆ ಸಂಚರಿಸಬೇಕಾಗಿದೆ. ಕಾವ್ಯದೊಳಗೆ ಭಿನ್ನಭಾಗಗಳೆಂಬಂತೆ ಹರಡಿಕೂತ ಕಾವ್ಯಖಂಡಗಳು ಸೃಷ್ಟಿಸುವ ಒಟ್ಟು ಜೀವನ ದೃಷ್ಟಿಯನ್ನು ಗ್ರಹಿಸಿಕೊಳ್ಳಲು ಶ್ರಮಪಡಬೇಕಾಗಿದೆ.

ಅಣಬೆ ಹೆಕ್ಕಲು ಕಾಡಿಗೆ ಹೋಗುವ ಇಲ್ಲಿನ ಗಂಡು- ಹೆಣ್ಣುಗಳ ಚಿತ್ರ ತನ್ನ ಮನಸ್ಸನ್ನು ಪ್ರವೇಶಿಸಿದ ಹಿನ್ನೆಲೆಯಲ್ಲಿ ತಿರುಮಲೇಶ್ ಹೀಗೆ ಹೇಳಿಕೊಂಡಿದ್ದಾರೆ: ಪ್ರಸಿದ್ಧ ಜರ್ಮನ್ ಕಾದಂಬರಿಕಾರ ಹರ್ಮನ್ ಬ್ರಾಖ್‌ನ ‘ಸ್ಲೀಪ್ ವಾಕರ್ಸ್‌’ ಕಾದಂಬರಿಯಲ್ಲಿನ ಈ ಪ್ರಸಂಗವನ್ನು ಜೆಕ್ ಕಾದಂಬರಿಕಾರ ಮಿಲಾನ್ ಕುಂದೇರ ತನ್ನದೊಂದು ಲೇಖನದಲ್ಲಿ ಪ್ರಸ್ತಾಪಿಸುತ್ತಲೂ ನನ್ನನ್ನದು ವಿಶೇಷವಾಗಿ ಹಿಡಿದುಕೊಂಡುಬಿಟ್ಟಿತು. ಆಯಸ್ಕಾಂತದಂತೆ ನನ್ನೆಲ್ಲಾ ವಿಚಾರಗಳನ್ನೂ ಸುತ್ತ ತೆಗೆದುಕೊಂಡಿತು. ಬ್ರಾಖ್‌ನ ‘ಡೆತ್ ಆಫ್ ವರ್ಜಿಲ್’ ನನಗೆ ತುಂಬಾ ಇಷ್ಟವಾದ ಕಾದಂಬರಿಯಾಗಿ ಅದೂ ಸೇರಿದಂತೆ ಬೇರೆ ಬೇರೆಯವರ ಬಹಳಷ್ಟು ಕೃತಿಗಳ ಪ್ರಸ್ತಾಪ  ಈ ಕಾವ್ಯದೊಳಗೆ ಬರುತ್ತದೆ...

ಆಧುನಿಕ ಕಾಲ ಅಖಂಡ ಸ್ಥಿತಿಯಲ್ಲ. ಇಂದು ನಮ್ಮ ಬದುಕು ಅಪರಿಪೂರ್ಣತೆಯಲ್ಲಿ ಸಂಚರಿಸಬೇಕಾಗಿದೆ. ಪ್ರಕೃತಿಯ ನಿಯಾಮಕ ಶಕ್ತಿಗಳನ್ನು ಮನುಷ್ಯ ಸ್ವನಿರ್ಮಿತ ಯಂತ್ರಶಕ್ತಿಯಿಂದಲೂ ಜ್ಞಾನಸಾಧನೆಯಿಂದಲೂ ನಿಯಂತ್ರಿಸುತ್ತಿದ್ದಾನೆ. ವಿಶ್ರಾಂತಿ ಇರಬೇಕಾದ ಇರುಳಿನಲ್ಲಿ ದುಡಿತ, ಹರಿಯುವ ನೀರಿನ ನಿಯಂತ್ರಣ - ಹೀಗೆ ಹಲವು ವಿಧಗಳಲ್ಲಿ, ಆವರ್ತನಗೊಳ್ಳಬೇಕಾದ ಪ್ರಕೃತಿಯ ಸಾಧ್ಯತೆಗಳನ್ನು ಮನುಷ್ಯ ತುಂಡರಿಸಿದ್ದಾನೆ.

ಪ್ರಕೃತಿಯ ವಿರುದ್ಧ ಮನುಷ್ಯ ಸಂಪೂರ್ಣ ಯಶಸ್ಸು ಹೊಂದದಿದ್ದರೂ ಅದು ಇಂದಿನ ಅನುಭವ ಹಾಗೂ ಜೀವನ ಶೈಲಿಯ ಛಿದ್ರೀಕರಣಕ್ಕೆ ಕಾರಣವಾಗಿದೆ. ಹಾಗಾಗಿ ಆಧುನಿಕ ಹಾಗೂ ಆಧುನಿಕೋತ್ತರ ಕವಿಯಾದ ತಿರುಮಲೇಶ್ ಒಡೆದ ಅನುಭವಗಳ, ಅಖಂಡವಲ್ಲದ ಸ್ಥಿತಿಯನ್ನು ಹೇಳುತ್ತಿದ್ದಾರೆ. ಹೀಗಾಗಿ ಪ್ರೇಮ ನಿವೇದನೆಯಿಂದ ಪರಸ್ಪರ ಸೇರಬೇಕಾದ ಪ್ರೇಮಿಗಳು ಹಾಗೆ ಮಾಡಲಾಗದೆ ದಾರಿ ಕವಲೊಡೆವ ಕಥೆಯನ್ನು ಆಯ್ದುಕೊಂಡಿದ್ದಾರೆ.

ಅಣಬೆ ಹೆಕ್ಕಲು ಹೋದವರಿಗೆ ಪರಸ್ಪರ ಇರುವ ಅನುರಾಗ ಗೊತ್ತು. ಇಂಥ ಇನ್ನೊಂದು ಅವಕಾಶವಿಲ್ಲವೆಂದೂ ತಿಳಿದಿದೆ. ಆದರೆ ದಾರಿ ಅಗಲುವವರೆಗೆ ಮಾತು ಮನಸ್ಸಿರುವ ಕಡೆ ತಿರುಗಲಿಲ್ಲ. ಅದು ಯಾಕೆ ಸೋತಿತ್ತು ಎಂಬುದಕ್ಕೂ ಅಖಂಡವಲ್ಲದ ಛಿದ್ರಗೊಂಡ ಸ್ಥಿತಿಯೇ ಕಾರಣ. ಅದರ ಅನ್ವೇಷಣೆಯೇ ಇಲ್ಲಿನ ಮೂಲ ಭಿತ್ತಿ:

ಮಂಜಿನೊಳಗಿದೆ ಒಂದು ಮುಖ
ಮುಟ್ಟಲಾರೆ ಅದನ್ನ
ಇಬ್ಬನಿಯೊಳಗಿದೆ ಇನ್ನೊಂದು ಲೋಕ
ತಲುಪಲಾರೆ ಅದನ್ನ.

ಕುವೆಂಪು, ಗೋಕಾಕ, ಮಾಸ್ತಿ, ಪುತಿನ ಮೊದಲಾದವರು ಕಥಾನಕಗಳ ಮೂಲಕ ಮಹಾಕಾವ್ಯಗಳನ್ನು ನಮ್ಮ ಕಾಲದಲ್ಲಿ ಸೃಜಿಸಿದವರು. ಆಧುನಿಕರಿಗೆ ಮಹಾಕಾವ್ಯ ಸಾಧ್ಯವಿಲ್ಲ ಎನ್ನುತ್ತಿರುವ ಕಾಲದಲ್ಲಿ ಕಥನವಿಲ್ಲದೆ ಒಡೆದ ತುಂಡುಗಳಾಗಿರುವ ಇಂದಿನ ಅನುಭವಗಳನ್ನು ವ್ಯಷ್ಟಿ ಹಾಗೂ ಸಮಷ್ಟಿಯ ಸಮಾನ ಅಭಿವ್ಯಕ್ತಿಯಾಗಿ ಇಂದಿನ ಮಹಾಕಾವ್ಯ ಇದು ಎಂಬಂತೆ ತೋರಿಸಬಹುದಾದ ರೀತಿಯಲ್ಲಿ ‘ಅಕ್ಷಯ ಕಾವ್ಯ’ದ ರಚನೆ ಇದೆ. ಆದರೆ ಇಲ್ಲಿನ ಪರಸ್ಪರ ಕಾವ್ಯಗುಚ್ಛಗಳ ಹಾಗೂ ಒಂದರಿಂದ ಇನ್ನೊಂದಕ್ಕೆ ನೆಗೆದಂತೆ ತೋರುವ ಅನುಭವ ಮತ್ತು ವಿಚಾರ ವೈವಿಧ್ಯಗಳಿಗೆ ಇರುವ ಪರಸ್ಪರ ಕೊಂಡಿಗಳನ್ನು ಕಂಡುಕೊಳ್ಳಲು ಸುಲಭ ಸಾಧ್ಯತೆಗಳು ಇಲ್ಲದಿರುವುದು ಈ ಕಾವ್ಯದ ಸಮಸ್ಯೆಯಾಗಿದೆ.

ಒಂದು ಸೂತ್ರದಲ್ಲಿ ವಿಸ್ತರಿಸಿಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಆಧುನಿಕ ಅನುಭವಗಳಿಗೆ ಮಹಾಕಾವ್ಯ ಸಹಜವಾಗಿ ಹೊಂದುವ ಪ್ರಕಾರವಲ್ಲ ಎಂಬ ಅಭಿಪ್ರಾಯವನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಹೀಗಿದ್ದೂ, ಸೂಕ್ಷ್ಮ ಓದಿಗೆ ಸಿಗಬಹುದಾದ ಕಾವ್ಯದೊಳಗಿನ ಸಂಪರ್ಕ ಕೊಂಡಿಗಳನ್ನು ಸೂಚಿಸಿದ್ದಾಗಿದೆ. ಆದರೂ ಆ ಕೊಂಡಿಗಳು ಮಹಾಕಾವ್ಯದ ತಡೆರಹಿತ ಸಹಜ ಓದಿಗೆ ಅನುಕೂಲಕರವಾಗಿಲ್ಲ. ಹಾಗಾಗಿ ಈ ಕವನ ಗುಚ್ಛಗಳನ್ನು ಬಿಡಿ ಭಾಗಗಳಾಗಿ ಓದುವಂತೆ ಕಾವ್ಯದ ಒಳಗಿನಿಂದಲೇ ಹುಟ್ಟುವ ಒತ್ತಡ ಇಲ್ಲಿನ ಕಾವ್ಯ ಸ್ವರೂಪದ ಸೊಗಸು ಹಾಗೂ ಮಿತಿ ಎರಡೂ ಆಗಿ ಪರಿಣಮಿಸುವುದು ಈ ಕಾವ್ಯದೊಳಗಿರುವ ವೈರುಧ್ಯವಾಗಿದೆ.

ಸಾಮಾನ್ಯತೆಯ ವಿಜೃಂಭಣೆ
ಪ್ರಮುಖ ಹಾಗೂ ಕಿರು ದಾರಿಗಳ ಸಂಘರ್ಷ ತಿರುಮಲೇಶ್‌ ಅವರ ಹಲವು ಕವನಗಳಲ್ಲಿವೆ. ‘ವಾನ್‌ಗಾಫ್ ನ ಬೂಟುಗಳು’ ಎಂಬ ಕವನ ಪ್ರಸಿದ್ಧ ಚಿತ್ರಗಾರ ವಾನ್‌ಗಾಫ್ ಮಾಡಿದ ಬೂಟಿನ ಚಿತ್ರಗಳನ್ನು ಧ್ಯಾನಿಸುತ್ತದೆ.

ಪ್ರಸಿದ್ಧ ಚಿತ್ರಗಾರ ವಿನ್‌ಸೆಂಟ್ ವಾನ್‌ಗಾಫ್ (1853–1890) ಇಂಪ್ರೆಷನಿಸ್ಟ್ ಕಾಲದ ನಂತರ ಬಹಳ ಪ್ರಭಾವ ಬೀರಿದ ಡಚ್ ಕಲಾವಿದ. ಅಭಿಜಾತ ಕಲಾವಿದರ ಮಾರ್ಗವನ್ನು ತ್ಯಜಿಸಿ, ಆತ ತನ್ನದೇ ಆದ ರೀತಿಯಲ್ಲಿ ಸಾಮಾನ್ಯತೆಯನ್ನು ವಿಜೃಂಭಿಸಿದ. ಅಂದರೆ ಆತನಕ ಪ್ರಮುಖ ಕಲಾವಸ್ತುಗಳಾದ ಕ್ರಿಸ್ತನ ಪುನರುತ್ಥಾನ, ಮಹಾಪ್ರಳಯ, ಗ್ರೀಕ್ ಪುರಾಣದಲ್ಲಿ ಮಯಣದ ರೆಕ್ಕೆ ಕಟ್ಟಿಕೊಂಡು ಆಕಾಶಕ್ಕೆ ಹಾರಿ, ಅಲ್ಲಿಂದ ಕೆಳಗೆ ಬಿದ್ದ ಇಕಾರಸ್‌ನ ಮರಣ ಇಂತಹ ವಸ್ತುಗಳನ್ನು ಬಿಟ್ಟು, ಸಾಮಾನ್ಯ ವಿಚಾರ, ವಸ್ತುಗಳಾದ, ಕೆಫೆಗಳನ್ನು, ಬೀದಿಗಳನ್ನು, ಪಾರ್ಕ್‌ಗಳನ್ನು, ಪೈನ್ ಮರಗಳನ್ನು ಬಣ್ಣಗಳಲ್ಲಿ ಚಿತ್ರಿಸಿದ. ಇಂತಹ ಸಾಮಾನ್ಯತೆಯ ಆರಾಧನೆಯ ಭಾಗವಾಗಿ ವಾನ್‌ಗಾಫ್ ಅನೇಕ ರೀತಿಗಳಲ್ಲಿ ಬೂಟುಗಳನ್ನು ಚಿತ್ರಿಸಿದ.

ಇಂತಹ ಸಾಮಾನ್ಯ ವಸ್ತುಗಳು ಕಲೆಯ ವಸ್ತುಗಳೆ? ದೊಡ್ಡ ಅಭಿಜಾತ ಪರಂಪರೆಯ ವಸ್ತುಗಳು ಮಾತ್ರವೇ ನಿಜವಾದ ಕಲೆಯ ವಸ್ತುಗಳೆಂದು ಕೆಲವು ವಿಮರ್ಶಕರು ಹೇಳಿದರು. ಆಗ ವಾನ್‌ಗಾಫ್ ಒಂದು ಜತೆ ಹಳೆಯ ಬೂಟುಗಳ ಚಿತ್ರ ಬರೆದ. ವಾನ್‌ಗಾಫ್ ಚರಿತ್ರೆಗೆ ಸೇರಿಹೋದ. ಅವನನ್ನು ಪ್ರಶ್ನಿಸಿದ ವಿಮರ್ಶಕರೀಗ ಆ ಬೂಟುಗಳ ಕೆಳಗಿದ್ದಾರೆ ಎಂದು ಕವನ ಕೊನೆಯಾಗುತ್ತದೆ.

ಕವಿ ತಿರುಮಲೇಶರನ್ನು ಆಕರ್ಷಿಸಿರುವುದು ಅಭಿಜಾತ ಪರಂಪರೆಗೆ ಎದುರಾಗಿ ವಾನ್‌ಗಾಫ್ ಸಾಧಿಸಿದ ಸಾಮಾನ್ಯತೆಯ ವಿಜೃಂಭಣೆ. ತಿರುಮಲೇಶರ ಒಳಮಾರ್ಗದಲ್ಲೂ ನಡೆಯುವುದು ಸಾಮಾನ್ಯತೆಯ ಆರಾಧನೆ ಹಾಗೂ ವಿಜೃಂಭಣೆ. ದೇವ ದೇವತೆಗಳ, ರಾಜ ಮಹಾರಾಜರುಗಳ ಕತೆಗಳನ್ನು ಬಿಟ್ಟು ಜನಸಾಮಾನ್ಯರ ಕಥನಕ್ಕೆ ತೊಡಗಿದ ಸಾಹಿತ್ಯದ ಸಂದರ್ಭಗಳನ್ನು ನಾವೀಗ ನೆನಪಿಸಿಕೊಳ್ಳಬೇಕು. ಆಗ ತಿರುಮಲೇಶ್ ಕವನ ಚಿತ್ರಕಲೆಯೊಂದರ ಸಂದರ್ಭದ ಮೂಲಕ ನಾಟಕೀಯವಾಗಿ ಸಾಮಾನ್ಯತೆಯನ್ನು ಎತ್ತಿಹಿಡಿದ ಕ್ರಮ ಗೋಚರಿಸುತ್ತದೆ. ಬೂಟಿನಡಿಗೆ ಬೀಳುವ ವಿಮರ್ಶಕರು ಇಲ್ಲಿ ವಿಚಾರ ಪಲ್ಲಟದ ಒಂದು ಸಾಂಕೇತಿಕ ನೆಲೆ ಮಾತ್ರ.

ಸೀರೆಯೆಂದರಹಂಕಾರ!
‘ಗಾರ್ಗಿ ಹಾಗೂ ಮೈತ್ರೇಯಿ’ ಎರಡು ನಾರೀ ಪ್ರಜ್ಞೆಗಳ ಸಂಕೇತದಂತೆ ಕನ್ನಡದಲ್ಲಿ ಹೊಸತಾದೊಂದು ರೂಪಕದ ಆಕಾರ ಪಡೆದಿದೆ. ಯಾಜ್ಞವಲ್ಕ್ಯನ ಪತ್ನಿ ಮೈತ್ರೇಯಿ ಸ್ತ್ರೀ ಸಮಾನ ಸ್ವಾತಂತ್ರ್ಯ ಚಿಂತನೆಗೂ ಸಾಕ್ಷಿ. ಯಾಜ್ಞವಲ್ಕ್ಯನೂ ಮೈತ್ರೇಯಿಯೂ ಎಂಬ ಕವನ ಜೀವದ ಮೂಲವಾದ ಕಾಮದ ಸಹಜ ಫಲವಾದ ಜೀವನಾನುಭವವನ್ನು ತುಚ್ಛೀಕರಿಸಿ ಬ್ರಹ್ಮ ವಿದ್ಯೆಗೆ ಕೈಚಾಚುವ ಬೋಳೆತನವನ್ನು ಬಯಲು ಮಾಡುತ್ತದೆ.

ಕಾತ್ಯಾಯಿನಿ ಕೇವಲ ದೇಹದ ಆಕರ್ಷಣೆ. ತಲೆ ಎಂದರೆ ನಿನ್ನದೇ ಎಂದು ಋಷಿ ಯಾಜ್ಞವಲ್ಕ್ಯ ಅವಳಿಗೆ - ಅಂದರೆ ತನ್ನ ಪತ್ನಿ ಮೈತ್ರೇಯಿಗೆ - ಆತ್ಮವಿದ್ಯೆ ಕಲಿಸಲು ಹೊರಡುತ್ತಾನೆ. ದೇಹದ ಸತ್ಯವನ್ನು ಕಡೆಗಣಿಸಿ ಆತ್ಮದ ಸಾಕ್ಷಾತ್ಕಾರ ಮಾತ್ರ ಸಾಕೆಂದು ವಿವರಿಸುತ್ತಾನೆ. ನಗಾರಿ, ಹಸಿಸೌದೆಯ ಹೊಗೆ, ತೂತಾದ ದೋಣಿ, ಅರಿಯದೆ ಕಂಠಪಾಠ ಮಾಡುವ ಅರಗಿಣಿ, ತತ್ತಿಯಿಡದ ಹೇಂಟೆಗಳ ಉದಾಹರಣೆಗಳಿಂದ ವಿವರಿಸಿ -

ಆತ್ಮಕ್ಕೆ ಬೇಕು ಪರಮಾತ್ಮ
ಇಲ್ಲದೇ -
ದಕ್ಕಲಾರದು ಬ್ರಹ್ಮಾಂಡ !

ಎಂದು ದೇಹ ಧರ್ಮವನ್ನೂ ಅದರ ಬಯಕೆಗಳನ್ನೂ ಕಡೆಗಣಿಸಿ ವಿವರಿಸುತ್ತಾನೆ. ಕಾತ್ಯಾಯಿನಿಯದು ಕೇವಲ ಮೊಲೆ, ನಿನ್ನದು ನಿಜವಾದ ತಲೆ ಎಂಬಲ್ಲಿಯೇ ಯಾಜ್ಞವಲ್ಕ್ಯನ ಅರಿವೂ ಅಖಂಡವಲ್ಲ. ಯಾಜ್ಞವಲ್ಕ್ಯ ಸೂಚಿಸುತ್ತಿರುವ ಆತ್ಮಜ್ಞಾನವೂ ದೇಹದ ಅಗತ್ಯವನ್ನು ಕಡೆಗಣಿಸಿರುವಂತಹುದು ಎಂಬುದು ಸ್ಪಷ್ಟವಾಗಿಯೇ ಸೂಚಿತವಾಗಿದೆ.

ಯಾಜ್ಞವಲ್ಕ್ಯ ಬೋಧಿಸುವ ದೇಹವನ್ನು ಕಡೆಗಣಿಸಿದ ಆತ್ಮಜ್ಞಾನದ ಪಾಠಗಳ ಕೊನೆಯಲ್ಲಿ ಮುಗಿಯಿತೇ’ ಎಂದು ಕೇಳಿದ ಮೈತ್ರೇಯಿ ಒಂದು ಮಾತ್ರ ಮರೆತಿರೆಂದು’ ಯಾಜ್ಞವಲ್ಕ್ಯನು ಆ ತನಕ ಮಾಡಿದ ಪಾಠದ ಕ್ರಮದಲ್ಲೇ ಇನ್ನೊಂದು ಉದಾಹರಣೆ ನೀಡುವುದಕ್ಕಾಗಿ:

ಸೀರೆ ರವಿಕೆ ಬಿಚ್ಚಿದಳು
ಲಂಗ ಒದ್ದು ಜಾಡಿಸಿದಳು.
ನೋಡಿದಿರಾ! ಎಂದಳು ಮೈತ್ರೇಯಿ:
ಸೀರೆಯೆಂದರಹಂಕಾರ
ರವಿಕೆ ತಪ್ಪು ಗ್ರಹಿಕೆ
ಬಾಡಿಯೆಂದರೆ ಕಿಲಾಡಿ
ಲಂಗ ಆಶಾಭಂಗ - ಇನ್ನು
ನೂರಕ್ಕೆ ನೂರು ಸಾಚಾ
ಆಗಬೇಕೆಂದರೆ ಇದೋ! ಎಂದು
ಕಿತ್ತೆಸೆದಳು ಕಾಚ.

ತೆಗೆದುಕೋ ನೀ ಕೊಟ್ಟ ಎಲ್ಲ ವಸ್ತ್ರವಿಲಾಸ’ ಎಂದು ಅತಿ ಗಂಭೀರತೆಯಲ್ಲಿ ಹೇಳುವ ಕವಿ ಅಡಿಗರ ‘ಬೆತ್ತಲಾಗದೆ ಬಯಲು ಸಿಕ್ಕದಿಲ್ಲಿ’ ಎಂಬ ತಾತ್ವಿಕತೆಯನ್ನು ತುಸು ವೈನೋದಿಕ ನಾಟಕೀಯತೆಯಲ್ಲಿ ತಿರುಮಲೇಶ್ ವಿಭಿನ್ನವಾಗಿ ಸಾದರಪಡಿಸುತ್ತಾರೆ. ಕವಿ ಅಡಿಗರ ವಿಚಾರಗಳಿಗೂ ಇಲ್ಲಿಗೂ ಹೋಲಿಕೆ ಮಾಡುವ ಅಗತ್ಯವಿಲ್ಲ. ಆದರೆ ತಿರುಮಲೇಶರಿಗೆ ಕಥನವೂ ತಾತ್ವಿಕ ನೆಲೆಯೊಂದರ ಶೋಧನಾ ಕ್ರಮ ಎಂಬುದನ್ನು ಸೂಚಿಸುವುದಕ್ಕಾಗಿ ಇದನ್ನು ಹೇಳಬೇಕಾಯಿತು. (ಮೇಲಿನ ಕವನದ ಉಲ್ಲೇಖದಲ್ಲಿ ಬಾಡಿ ಎಂದರೆ ಬ್ರಾ ಅಥವಾ ಬ್ರಾಸಿಯರ್‌್ ಎಂದು ಅರ್ಥ. ಬ್ರಾಗಳಿಗೆ ಬಾಡಿ ಎಂಬ ಪ್ರಯೋಗ ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ ಇದೆ. ಹಾಗೆಯೇ ಬಾಡಿ ಪದಕ್ಕೆ ಇಂಗ್ಲಿಷಿನ  ‘ದೇಹ’ ಎಂಬ ಅರ್ಥವ್ಯಾಪ್ತಿಯೂ ಇಲ್ಲಿ ಸಲ್ಲುತ್ತದೆ.)

-ಕೆ.ವಿ. ತಿರುಮಲೇಶ

ತಿರುಮಲೇಶರೆಂದರೆ...
ತಿರುಮಲೇಶ್ ಆಧುನಿಕ ಜ್ಞಾನೋಪಾಸಕ. ವಿಘಟನೆ ಹಾಗೂ ಛಿದ್ರತೆ ಆಧುನಿಕೋತ್ತರ ಸಮಾಜದ ಲಕ್ಷಣಗಳಲ್ಲಿ ಒಂದು. ಎಲ್ಲವೂ ಒಂದರೊಡನೊಂದು ಪ್ರಾಕೃತಿಕ ಸಾಮರಸ್ಯದಲ್ಲಿ ಸೇರುವ ಬದಲು ನಾನಾ ನೆಲೆಗಳಲ್ಲಿ ಮತ್ತು ಹಲವು ಸಲ ಭಿನ್ನವಾಗಿ ಆವಿರ್ಭವಿಸುವುದೇ ನಮ್ಮ ಸಮಾಜದ, ನಗರೀಕರಣದ ಹಾಗೂ ಜಾಗತೀಕರಣದ ಲಕ್ಷಣವಾಗಿದೆ.

ರೈತನೊಬ್ಬ ಹೊಲದಿಂದ ನೇಗಿಲು ಬಿಚ್ಚಿದ ಎತ್ತುಗಳನ್ನು ಮುಳುಗುವ ಸೂರ್ಯನ ಬೆಳಕಲ್ಲಿ ಮನೆಗೆ ಒಯ್ಯುವ ಹಾಗೂ ಅದೇ ಸಮಯಕ್ಕೆ ಹಕ್ಕಿಗಳು ತಮ್ಮ ಗೂಡು ಸೇರುವ ಸಮಯ, ಕರ್ತವ್ಯ, ಪ್ರಾಕೃತಿಕ ಚಲನೆ ಒಂದಾಗಿರುವ ಕಾಲ – ದೇಶಗಳ ಐಕ್ಯ ಇಂದಿನ ನಗರೀಕೃತ ಜೀವನ ವಿಧಾನವಲ್ಲ. ಈಗ ನಗರಗಳು ಪರಿಣಾಮ ಬೀರದ ಹಳ್ಳಿಗಳೂ ಇಲ್ಲ. ಇಂತಹ ಛಿದ್ರಗೊಂಡ ಬದುಕಿನ ಅನುಭವಗಳನ್ನು ಕೂಡಿಸಿ ಕಟ್ಟಿ ಕಾವ್ಯ, ಕಥೆ, ಕಾದಂಬರಿಗಳ ರಚನೆಯಲ್ಲಿ ತಿರುಮಲೇಶ್ ತೊಡಗುತ್ತಾರೆ.

ಹೀಗೆ ಛಿದ್ರಗೊಂಡ ಬದುಕಿನ ಸಂದರ್ಭಗಳಲ್ಲಿ ಒಡೆದದ್ದನ್ನು ಹೆಕ್ಕುವುದಕ್ಕೆ ಅವರು ನಾನಾ ಪ್ರಯೋಗ ಮಾಡಿದರು. ಸಿದ್ಧ ಮಾದರಿ ದಕ್ಕಿದಾಗಲೂ ಅವರಿಗೆ ಅದು ಅಲ್ಲ (ನೇತಿ) ಅನಿಸುತ್ತದೆ. ಆದುದರಿಂದಲೇ ತಿರುಮಲೇಶ್ ಇಂದಿಗೂ ಜೀವಂತವಾಗಿರುವ ಮಾತ್ರವಲ್ಲ ಜ್ವಲಂತವಾಗಿರುವ ಕವಿಯೂ ಆಗಿದ್ದಾರೆ.

*

(ಈ ಪುಸ್ತಕ ಜನವರಿ 1ರಿಂದ ಪುಸ್ತಕ ಮಳಿಗೆಗಳಲ್ಲಿ ಲಭ್ಯವಾಗಲಿದೆ.)

Comments
ಈ ವಿಭಾಗದಿಂದ ಇನ್ನಷ್ಟು
ಸೋಲಿಗಿಂತ ಮಾನವೀಯತೆ ಮುಖ್ಯ

ಮಕ್ಕಳ ಕತೆ
ಸೋಲಿಗಿಂತ ಮಾನವೀಯತೆ ಮುಖ್ಯ

18 Mar, 2018
ಪೃಥ್ವಿ ಪರಿಚಯದ ಕೆಲವು ಪ್ರಶ್ನೆಗಳು

ವಿಜ್ಞಾನ ವಿಶೇಷ
ಪೃಥ್ವಿ ಪರಿಚಯದ ಕೆಲವು ಪ್ರಶ್ನೆಗಳು

18 Mar, 2018
ತೆಳ್ಳಗಿನ ಬಂಗಲೆ

ಕಥೆ
ತೆಳ್ಳಗಿನ ಬಂಗಲೆ

18 Mar, 2018
ಪಾದಕ್ಕೂ ಕಣ್ಣುಂಟು

ಕಾವ್ಯ
ಪಾದಕ್ಕೂ ಕಣ್ಣುಂಟು

18 Mar, 2018
ನಗೆಯುಕ್ಕಿಸಿದ ‘ಗುಗ್ಗು’ವಿಗೆ ನೂರು...

ನೆನಪು
ನಗೆಯುಕ್ಕಿಸಿದ ‘ಗುಗ್ಗು’ವಿಗೆ ನೂರು...

18 Mar, 2018