ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗೆ ವರವಾದ ಇರಾನ್‌– ಸೌದಿ ವೈರತ್ವ!

Last Updated 30 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

–ರೋಯಾ ಹಕಾಕಿಯನ್‌ 

ಇರಾನ್- ಸೌದಿ ಅರೇಬಿಯಾ ನಡುವೆ ಹೆಚ್ಚುತ್ತಿರುವ ವೈರತ್ವವು ಪ್ರಾದೇಶಿಕ ಅಸ್ಥಿರತೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂಬುದು ವಿದೇಶಾಂಗ ನೀತಿ ಪರಿಣತರ ಎಣಿಕೆಯಾಗಿರಬಹುದು. ಆದರೆ ಇದೇ ಸಂದರ್ಭವು ಸ್ತ್ರೀವಾದಿಗಳು ಸಂಭ್ರಮಪಡಲು ಕಾರಣವನ್ನು ಕಲ್ಪಿಸಿದೆ. ‘ಹೆಚ್ಚು ಉದಾರವಾದಿ ಇಸ್ಲಾಮೀಯ (ಇಸ್ಲಾಮಿಕ್) ಪರ್ಯಾಯ’ ಎಂಬ ಹಿರಿಮೆಗೆ ಪಾತ್ರವಾಗಲು ಎರಡೂ ರಾಷ್ಟ್ರಗಳ ನಡುವೆ ಏರ್ಪಟ್ಟಿರುವ ಪೈಪೋಟಿಯಲ್ಲಿ ಮಹಿಳೆಯರು ಲಾಭದ ಫಲಾನುಭವಿಗಳಾಗುತ್ತಿದ್ದಾರೆ.

ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಮತ ಚಲಾವಣೆಗೆ, ಕಚೇರಿಗಳಿಗೆ ವಾಹನ ಚಲಾಯಿಸಿಕೊಂಡು ಹೋಗುವುದಕ್ಕೆ ಹಕ್ಕು ನೀಡಿದಾಗ ಇರಾನ್ ಮಹಿಳೆಯರು ಆ ಬೆಳವಣಿಗೆಗಳ ಬಗ್ಗೆ ಅಷ್ಟಾಗಿ ಗಮನ ನೀಡಿರಲಿಲ್ಲ. ಇರಾನಿನ ಮಹಿಳೆಯರು ಈ ಹಕ್ಕುಗಳನ್ನು ಯಾವತ್ತೂ ಅನುಭವಿಸಿಕೊಂಡೇ ಬಂದಿದ್ದರು. ವಾಸ್ತವದಲ್ಲಿ, ಇರಾನ್‍ನಲ್ಲಿದ್ದ ಈ ನೀತಿಗಳಿಂದಲೇ ಪ್ರೇರಿತವಾಗಿ ಸೌದಿ ಅರೇಬಿಯಾ ತಾನು ಕೂಡ ಈ ಅವಕಾಶಗಳನ್ನು ಮಹಿಳೆಯರಿಗೆ ಕಲ್ಪಿಸಿತು. ಆದರೆ, ಸೌದಿ ಅರೇಬಿಯಾ ಮುಂದುವರಿದು, ಕ್ರೀಡಾಂಗಣಗಳಿಗೆ ತೆರಳಲು ಮಹಿಳೆಯರ ಮೇಲಿದ್ದ ನಿಷೇಧವನ್ನು ತೆರವುಗೊಳಿಸುತ್ತಿದ್ದಂತೆ, ಇರಾನ್ ಸ್ತ್ರೀಯರಿಗೆ ತಮ್ಮ ಸರ್ಕಾರದ ಬಗ್ಗೆ ಆಕ್ರೋಶ ಶುರುವಾಯಿತು. ಸೌದಿಯು ಸೆಪ್ಟೆಂಬರ್ ಅಂತ್ಯದಲ್ಲಿ ತನ್ನ ಈ ನೀತಿಯನ್ನು ಘೋಷಿಸಿತು. ಒಂದೊಮ್ಮೆ ಇರಾನಿನ ನಾಗರಿಕ ಸಮಾಜದಲ್ಲಿ ಆವೇಶ ಮೂಡಿಸಬೇಕೆಂಬುದೇ ಸೌದಿಯ ಉದ್ದೇಶವಾಗಿತ್ತು ಎಂದಾದರೆ, ಅದು ತನ್ನ ಈ ನೀತಿ ಪ್ರಕಟಿಸಿದ ಸಮಯ ಕೂಡ ಅದಕ್ಕೆ ಹೇಳಿ ಮಾಡಿಸಿದಂತಿತ್ತು. ಏಕೆಂದರೆ, ಅದಕ್ಕೆ ಕೆಲವೇ ವಾರಗಳ ಮುಂಚೆ, ಇರಾನ್- ಸಿರಿಯಾ ನಡುವೆ ಟೆಹರಾನ್‍ನಲ್ಲಿ ನಡೆದ ವಿಶ್ವಕಪ್ ಅರ್ಹತಾ ಪಂದ್ಯ ವೀಕ್ಷಿಸಲು ಇರಾನ್ ಮಹಿಳೆಯರಿಗೆ ನಿಷೇಧ ವಿಧಿಸಲಾಗಿತ್ತು; ಆದರೆ ಇದೇ ಪಂದ್ಯ ವೀಕ್ಷಣೆಗೆ ಸಿರಿಯಾ ಮಹಿಳೆಯರ ಮೇಲೆ ಯಾವ ನಿಷೇಧವೂ ಇರಲಿಲ್ಲ.

‘ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಸುಧಾರಣೆಗಳನ್ನು ನೋಡಿ ನನಗೆ ದುಪ್ಪಟ್ಟು ಖುಷಿಯಾಗುತ್ತಿದೆ: ಇದರಿಂದ ಸೌದಿ ಸಮಾಜ ಮತ್ತು ವಿಶೇಷವಾಗಿ ಮಹಿಳೆಯರಿಗೆ ಸಂತಸವಾಗಲಿದೆ’ ಎನ್ನುತ್ತಾರೆ ಇರಾನ್‍ನಲ್ಲಿ ನಾಗರಿಕ ಶಿಕ್ಷಣ ಜಾಗೃತಿಯಲ್ಲಿ ತೊಡಗಿರುವ ‘ತವಾನ’ ವೆಬ್‍ಸೈಟ್‍ನ ಸಹ ಸಂಸ್ಥಾಪಕರಾದ ಮರಿಯಮ್ ಮೆಮರ್‍ಸಗೇದಿ. ‘ಇದೇ ವೇಳೆ, ಇರಾನ್ ಆಡಳಿತದ ಹುಸಿ ನೈತಿಕ ಮೇಲರಿಮೆಗೆ ಸೂಜಿ ಚುಚ್ಚಿದಂತಾಗಿರುವುದಕ್ಕೆ ಹಾಗೂ ಪ್ರಾದೇಶಿಕವಾಗಿ ಅತ್ಯಂತ ಹಿಂದುಳಿದ ರಾಷ್ಟ್ರವೊಂದು ಇರಾನ್‍ನಲ್ಲಿ ಕಾನೂನುಗಳು ಮತ್ತು ಮಹಿಳಾ ಹಕ್ಕುಗಳಿಗೆ ಸಂಬಂಧಿಸಿದಂತೆ ಆಗಿರುವ ಕಾರ್ಯಗಳ ಬಗ್ಗೆ ಹಿಂದಿರುಗಿ ನೋಡುವಂತೆ ಮಾಡಿರುವುದು ಈ ದುಪ್ಪಟ್ಟು ಖುಷಿಗೆ ಕಾರಣ’ ಎಂದೂ ಅವರು ಹೇಳುತ್ತಾರೆ.

ಇರಾನ್ ಕಾರ್ಯಕರ್ತರು ತಮ್ಮ ರಾಷ್ಟ್ರದಲ್ಲಿ ಮಾನವ ಹಕ್ಕುಗಳ ಬಗ್ಗೆ ಒತ್ತಡ ಹೇರುವ ನಿಟ್ಟಿನಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಮಾದರಿಯಾಗಿಸಿಕೊಂಡು ಬಂದಿದ್ದಾರೆ. ಆದರೆ ಇದೀಗ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರ ನೀತಿಗಳು ಸೌದಿ ಅರೇಬಿಯಾದೆಡೆಗೆ ತಿರುಗಿ ನೋಡುವಂತೆ ಮಾಡಿವೆ. ಸಲ್ಮಾನ್ ಅವರ ದೀರ್ಘಾವಧಿ ಉದ್ದೇಶಗಳು ಏನೇ ಆಗಿದ್ದರೂ ಇರಾನ್‌ ಬಲು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದನ್ನು ಹುಸಿ ಎಂದು ಮನಗಾಣಿಸುವಲ್ಲಿ ಅವರು ಸಫಲರಾಗಿದ್ದಾರೆ. ಮಹಿಳೆಯರ ಶಿಕ್ಷಣ ಮತ್ತು ಸಬಲೀಕರಣದಲ್ಲಿ ಸೌದಿಯ ಕಳಪೆ ಸಾಧನೆಯನ್ನು ಬಿಂಬಿಸುತ್ತಾ ಇರಾನ್ ರಾಷ್ಟ್ರವು ತನ್ನ ಪಾಶ್ಚಿಮಾತ್ಯ ಟೀಕಾಕಾರರ ಬಾಯಿ ಮುಚ್ಚಿಸುತ್ತಾ ಬಂದಿದೆ.

ತೈಲ ಸಂಪತ್ತು, ಸಿರಿವಂತ ಗಣ್ಯರು, ಪ್ರಬಲ ಸೇನೆ ಹೊಂದಿರುವ ಕಾರಣಕ್ಕೆ ಮಾಧ್ಯಮಗಳ ಗಮನ ಸೆಳೆಯುವಲ್ಲಿ ಇರಾನ್‌ ಯಶಸ್ವಿಯಾಗಿರಬಹುದು. ಈ ಕಾರಣಕ್ಕೆ ಅದು ಜನಸಾಮಾನ್ಯರ ಮನಸ್ಸಿಗೆ ಹತ್ತಿರವಾಗಲು ಸಾಧ್ಯವಾಗದು. ಆದರೆ, ದಿನನಿತ್ಯದ ಸಾಮಾನ್ಯ ಕೆಲಸಗಳಾದ ವಾಹನ ಚಾಲನೆ, ಉದ್ಯೋಗ, ಸಂಚಾರ ಇವುಗಳನ್ನು ಸುಗಮಗೊಳಿಸುವುದರಿಂದ ಇದು ಸಾಧ್ಯವಾಗುತ್ತದೆ. ಮಹಿಳಾ ಆಂದೋಲನಗಳು ಮತ್ತು ಚಟುವಟಿಕೆಗಳ ಮೇಲೆ ಹೇರಲಾಗಿರುವ ಮಿತಿಗಳನ್ನು ಅದೆಷ್ಟೇ ತೈಲ ಸಂಪತ್ತು ಮುಂದಿಟ್ಟುಕೊಂಡರೂ ಸಮರ್ಥಿಸಿಕೊಳ್ಳಲಾಗದು. ಆದರೆ ಪಹ್ಲವಿ ಸಾಮ್ರಾಜ್ಯದ ವೇಳೆಯೇ ಮಹಿಳಾ ನವೋದಯ ಕಂಡ ಇರಾನ್‍ಗೆ ಈಗಿನ ವಾಸ್ತವ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ.

ದೊರೆ ಮೊಹಮ್ಮದ್ ಅವರ ‘ಸೌದಿ 2030- ದೂರದೃಷ್ಟಿ’ಯನ್ನು ಹೋಲುವ ರೀತಿಯಲ್ಲೇ ಇರಾನ್ ಬಗ್ಗೆ ಕನಸು ಕಂಡಿದ್ದ ಸರ್ವಾಧಿಕಾರಿ ರೆಜಾ ಷಾ 1936ರಲ್ಲಿ ‘ಹಿಜಾಬ್’ (ಬುರ್ಖಾ) ನಿಷೇಧಿಸಿದ್ದ. ಇಸ್ಲಾಂ ಸಮಾಜದ ಮಹಿಳೆಯರು ಆಧುನಿಕತೆಗೆ ತೆರೆದುಕೊಳ್ಳುವ ದಿಸೆಯಲ್ಲಿ ಇದು ಅತ್ಯಗತ್ಯ ಎಂದು ಆತ ನಂಬಿದ್ದ. ಇರಾನ್‍ನಲ್ಲಿ 1979ರಲ್ಲಿ ಇಸ್ಲಾಂ ಕ್ರಾಂತಿಯ ಗಾಳಿ ಬೀಸುವ ಮುನ್ನ ಅಲ್ಲಿನ ಮಹಿಳೆಯರು ನಾಲ್ಕು ದಶಕಗಳ ಕಾಲ ಸಾಪೇಕ್ಷ ಸ್ವಾತಂತ್ರ್ಯ ಅನುಭವಿಸಿದ್ದರು. ಇಸ್ಲಾಂ ಕ್ರಾಂತಿಯ ನಂತರ ವಿಚ್ಛೇದನದ ಹಕ್ಕು, ಸಮಾನ ವಾರಸುದಾರಿಕೆಗೆ ಕಾನೂನು ರಕ್ಷಣೆ ಇಲ್ಲದೆ ಬದುಕುವುದು ಇರಾನ್ ಮಹಿಳೆಯರಿಗೆ ಕಷ್ಟವಾಯಿತು (ಸೌದಿ ಮಹಿಳೆಯರಿಗೆ ಈ ಹಕ್ಕುಗಳು ಯಾವತ್ತೂ ಇರಲಿಲ್ಲ).

ಆದರೆ ವಿಪರ್ಯಾಸವೆಂದರೆ, ಇರಾನ್- ಸೌದಿ ನಡುವಿನ ಈ ಮೇಲಿನ ವ್ಯತ್ಯಾಸಗಳನ್ನು ಮರೆಮಾಚುವಷ್ಟು ಅಧಿಕವಾಗಿ ಸಾಮ್ಯತೆಗಳೂ ಇವೆ. ಆರ್ಥಿಕ ಪಾಲ್ಗೊಳ್ಳುವಿಕೆ, ಆರೋಗ್ಯ, ರಾಜಕೀಯ ಸಬಲೀಕರಣ, ಶಿಕ್ಷಣ ಸವಲತ್ತುಗಳ ವಿಷಯದಲ್ಲಿ ಇರಾನ್ ಮತ್ತು ಸೌದಿ ಅರೇಬಿಯಾ ವಿಶ್ವ ಆರ್ಥಿಕ ವೇದಿಕೆ ಪಟ್ಟಿಯ ಕೆಳಗಿನ 10 ರಾಷ್ಟ್ರಗಳಲ್ಲಿ ಬರುತ್ತವೆ.

ಈಗ ಸೌದಿ ದೊರೆಯು ಆಗ ಇರಾನಿನ ರೆಜಾ ಷಾ ನಡೆದ ಹಾದಿಯಲ್ಲೇ ಮುಂದಡಿ ಇಡುತ್ತಿದ್ದಾರೆ. ಆದರೆ ಇದೀಗ ಸೌದಿಯ ಈ ನೀತಿಯ ಬಗ್ಗೆ ಅಸಹಿಷ್ಣುತೆ ವ್ಯಕ್ತಪಡಿಸುತ್ತಿರುವ ಇರಾನ್, ‘ಜನರ ಸಂಪ್ರದಾಯಗಳಿಗೆ ವಿರುದ್ಧವಾದ ಆಧುನಿಕತೆಯ ಮಹತ್ವಾಕಾಂಕ್ಷೆಯಿಂದಾಗಿ ದೊರೆ ಮೊಹಮ್ಮದ್ ಕೂಡ ಷಾ ಅವರಂತೆಯೇ ಅಧಃಪತನವಾಗಲಿದ್ದಾರೆ’ ಎಂದು ಟೀಕಿಸುತ್ತದೆ.

ಸೌದಿಯ ಈ ಸುಧಾರಣಾ ನಡೆಗಳು ಇರಾನ್‍ಗೆ ಅಪಥ್ಯದಂತೆ ಕಂಡುಬರುತ್ತಿದ್ದು, ಆ ರಾಷ್ಟ್ರದೆಡೆಗೆ ಒಂದು ಬಗೆಯ ಮತ್ಸರವೂ ವ್ಯಕ್ತವಾಗುತ್ತಿದೆ. ಮತ್ತೊಂದೆಡೆ, ಸೌದಿ ನೀತಿಯಿಂದ ಪ್ರೇರಿತರಾದ ಇರಾನಿನ ಮಹಿಳಾವಾದಿ ನಾಯಕಿ ಮಸಿಹ್ ಅಲಿನೆಜಾದ್ ಅವರು, ತಮ್ಮ ರಾಷ್ಟ್ರದಲ್ಲಿ ಕಡ್ಡಾಯಗೊಳಿಸಿರುವ ‘ಹಿಜಾಬ್’ ವಿರೋಧಿಸಿ ಪ್ರತಿಭಟನೆಗೆ ಇಳಿದಿದ್ದಾರೆ; ಟೆಹರಾನ್‍ನಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅಲ್ಲಿನ ಮಹಿಳೆಯರು ತಲೆ ಮೇಲೆ ಹೊದ್ದ ತಮ್ಮ ವಸ್ತ್ರವನ್ನು ತೆಗೆದು, ವಿಡಿಯೊ ಸಂದೇಶಗಳನ್ನು ದಾಖಲಿಸಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಈ ಆಕ್ರೋಶ ತಣಿಸುವ ಸಲುವಾಗಿ ಇರಾನ್ ಒಂದಷ್ಟು ರಾಜಿ ಮಾಡಿಕೊಳ್ಳುತ್ತಿದೆ. ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಪಾಲ್ಗೊಳ್ಳಲು ಮಹಿಳಾ ವೇಟ್‍ಲಿಫ್ಟರ್‌ಗಳಿಗೆ ಅನುಮತಿ ನೀಡುವುದಾಗಿ ಅದು ಇತ್ತೀಚೆಗೆ ಪ್ರಕಟಿಸಿದೆ. ಇರಾನ್‍ನಲ್ಲಿ ಈ ನೀತಿ ಪ್ರಕಟವಾಗುತ್ತಿರುವುದು ಇದೇ ಮೊದಲು.

ಸೌದಿ- ಇರಾನ್ ದ್ವೇಷವು ಜಗತ್ತನ್ನು ಚಿಂತೆಗೀಡು ಮಾಡಿದ್ದರೂ ಆ ರಾಷ್ಟ್ರಗಳ ಮಹಿಳೆಯರಿಗೆ ಇದರಿಂದ ಲಾಭವಾಗುತ್ತಿದೆ. ‘ಪ್ರಭುತ್ವಗಳ ನಡುವೆ ದ್ವೇಷವಿರಬಹುದು; ಆದರೆ ಸೋದರಿಯರ ಅನುಬಂಧ ಜಾಗತಿಕ’ ಎಂಬ ಲಾಗಾಯ್ತಿನ ಪಾಠ ನಿಜ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ.

(ಲೇಖಕಿ ‘ಅಸಾಸಿನ್ಸ್ ಆಫ್ ದಿ ಟರ್ಕಾಯಿಸ್ ಪ್ಯಾಲೆಸ್’ ಕೃತಿಯ ಗ್ರಂಥಕರ್ತೃ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT