ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಾದ ಕನ್ಸರ್‌ವೆನ್ಸಿಗಳ ಉಪಯೋಗ ವಿರಳ

Last Updated 8 ಜನವರಿ 2018, 5:52 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದಲ್ಲಿರುವ ಹಲವು ಕನ್ಸರ್‌ವೆನ್ಸಿಗಳನ್ನು ಪಾಲಿಕೆ ಅಭಿವೃದ್ಧಿ ಪಡಿಸಿದ್ದರೂ ಬಹುತೇಕ ಸ್ಥಳಗಳಲ್ಲಿ ಅವುಗಳಿಂದ ಯಾವುದೇ ಉಪಯೋಗವಿಲ್ಲದಂತಾಗಿದೆ. ಚನ್ನಪ್ಪ ಲೇಔಟ್‌, ರವೀಂದ್ರ ನಗರ, ನಂಜಪ್ಪ ಆಸ್ಪತ್ರೆ ಹಿಂಭಾಗ, ಬಸವನಗುಡಿ ಹೀಗೆ ಅನೇಕ ಭಾಗಗಳಲ್ಲಿ ಕನ್ಸ್‌ರ್‌ವೆನ್ಸಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅನಕೃ ರಸ್ತೆ, ಗಾಂಧಿನಗರ, ಜಯನಗರ, ವಿದ್ಯಾನಗರ ಸೇರಿದಂತೆ ಅನೇಕ ಭಾಗಗಳಲ್ಲಿ ಕನ್ಸರ್‌ವೆನ್ಸಿಗಳು ಅಭಿವೃದ್ಧಿಯನ್ನೇ ಕಂಡಿಲ್ಲ.

ಪಾರ್ಕಿಂಗ್‌ ಸಮಸ್ಯೆ: ಸ್ಮಾರ್ಟ್‌ಸಿಟಿಗೆ ಆಯ್ಕೆಯಾಗಿರುವ ನಗರವು ಅನೇಕ ಕಡೆಗಳಲ್ಲಿ ಸ್ವಚ್ಛತೆ ಹಾಗೂ ವಾಹನ ನಿಲುಗಡೆಯ ಸಮಸ್ಯೆಗಳನ್ನು ಎದುರಿಸುತ್ತಿದೆ. ನಗರದಲ್ಲಿ ಬಹುತೇಕ ವಾಣಿಜ್ಯ ಮಳಿಗೆಗಳು, ಬಿಗ್‌ಬಜಾರ್ ಸೇರಿದಂತೆ ಅನೇಕ ಆಭರಣ ಮಳಿಗೆಗಳು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿಲ್ಲ. ಹಾಗಾಗಿ ರಸ್ತೆ ಬದಿಯಲ್ಲಿಯೇ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದಾಗಿ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆ ಉಂಟಾಗುತ್ತದೆ. ಅಭಿವೃದ್ಧಿಯಾದ ಕನ್ಸರ್‌ವೆನ್ಸಿಗಳನ್ನು ವಾಹನ ನಿಲುಗಡೆಗಾಗಿ ಬಳಸುವುದರಿಂದ ಪಾರ್ಕಿಂಗ್ ಸಮಸ್ಯೆ ಕಡಿಮೆಯಾಗುತ್ತದೆ.

ಬೀದಿಬದಿ ವ್ಯಾಪಾರಿಗಳಿಗೆ ಶಾಶ್ವತ ನೆಲೆ ಅಗತ್ಯ: ಬೀದಿಬದಿ ವ್ಯಾಪಾರಿಗಳು ಪಾದಚಾರಿ ರಸ್ತೆಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದು, ಅಂತಹ ವ್ಯಾಪಾರಿಗಳಿಗೆ ಶಾಶ್ವತ ನೆಲೆ ಕಲ್ಪಿಸಬೇಕಿದೆ. ಇದರಿಂದ ಪಾದಚಾರಿಗಳಿಗೆ ಸುಗಮವಾಗಿ ಓಡಾಡಲು ಅನುಕೂಲವಾಗುತ್ತದೆ.

ಅಭಿವೃದ್ಧಿ ಪಡಿಸಿದ ಕನ್ಸರ್‌ವೆನ್ಸಿಗಳ ಉಪಯೋಗ: ವಾಹನ ನಿಲುಗಡೆಯ ಸಮಸ್ಯೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಪರಿಹಾರವಾಗಿ ಕೆಲವು ಕಡೆಗಳಲ್ಲಿ ಕನ್ಸೆರ್‌ವೆನ್ಸಿಗಳನ್ನು ಪಾಲಿಕೆ ಅಭಿವೃದ್ಧಿ ಪಡಿಸಿದೆ. ಗೋಪಿ ವೃತ್ತದ ಬಳಿಯಿರುವ ಕನ್ಸರ್‌ವೆನ್ಸಿಯನ್ನು ಅಭಿವೃದ್ಧಿಪಡಿಸಿ, ಅಲ್ಲಿ ತಿನಿಸು ಅಂಗಡಿಗಳನ್ನು ನಿರ್ಮಿಸಿ, ಬೀದಿಬದಿ ತಿನಿಸು ವ್ಯಾಪಾರಿಗಳಿಗೆ ನೆಲೆ ಕಲ್ಪಿಸಲಾಗಿದೆ. ಮತ್ತೆ ಕೆಲವೆಡೆ ವಾಹನ ನಿಲುಗಡೆಯ ವ್ಯವಸ್ಥೆ ಕಲ್ಪಿಸಲಾಗಿದೆ.

ಪಾಲಿಕೆಯ 20ನೇ ವಾರ್ಡ್‌ನ ವ್ಯಾಪ್ತಿಯಲ್ಲಿ ಒಟ್ಟು 25 ಕನ್ಸರ್‌ವೆನ್ಸಿಗಳಿದ್ದು, ಅವುಗಳಲ್ಲಿ ಮ್ಯಾಕ್ಸ್ ಆಸ್ಪತ್ರೆ ಹಿಂಭಾಗ, ಸರ್ಜಿ ಆಸ್ಪತ್ರೆ ಹಿಂಭಾಗ, ದುರ್ಗಿಗುಡಿ ಶಾಲೆ ಹಿಂಭಾಗ, ವಾತ್ಸಲ್ಯ ಆಸ್ಪತ್ರೆ ಹಿಂಭಾಗ, ಜೆ.ಪಿ.ಎನ್.ರಸ್ತೆ, ಎಲ್.ಎಲ್.ಆರ್.ರಸ್ತೆ ಬಳಿ ಕನ್ಸರ್‌ವೆನ್ಸಿಗಳು ಅಭಿವೃದ್ಧಿಯಾಗುತ್ತಿವೆ. ಈ ಕನ್ಸರ್‌ವೆನ್ಸಿಗಳನ್ನು ವೈಜ್ಞಾನಿಕ ರೀತಿಯಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ.

ಈ ಕನ್ಸರ್‌ವೆನ್ಸಿಗಳು ಪ್ರಮುಖ ಬಡಾವಣೆಗಳಲ್ಲಿರುವುದರಿಂದ ಜನದಟ್ಟಣೆ ಇರುತ್ತದೆ. ಹಾಗಾಗಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲು ಉಪಯೋಗಿಸಲಾಗುತ್ತದೆ. ಇದರಿಂದ ವರ್ಷಕ್ಕೆ ಪಾಲಿಕೆಗೆ ₹ 25 ಲಕ್ಷ ಆದಾಯ ಬರುತ್ತದೆ. ಹೀಗೆಯೇ ಎಲ್ಲಾ ವಾರ್ಡ್‌ಗಳ ಸದಸ್ಯರು ತಮ್ಮ ವ್ಯಾಪ್ತಿಯ ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿ ಪಡಿಸಬೇಕು ಎನ್ನುತ್ತಾರೆ ಪಾಲಿಕೆ ಸದಸ್ಯ ಐಡಿಯಲ್ ಗೋಪಿ.

ಬೀದಿಬದಿ ವ್ಯಾಪಾರಿಗಳಿಗೆ ಅಭಿವೃದ್ಧಿ ಮಾಡಿ ಹಾಗೆಯೇ ಬಿಡಲಾದ ಕನ್ಸರ್‌ವೆನ್ಸಿಗಳನ್ನು ನೀಡಿದರೆ, ಅವರಿಗೂ ಶಾಶ್ವತ ನೆಲೆ ಕಲ್ಪಿಸಿದಂತಾಗುತ್ತದೆ. ಜತೆಗೆ ಪಾಲಿಕೆಗೂ ಆದಾಯ ಬರುತ್ತದೆ ಎನ್ನುವುದು ಹಿರಿಯ ನಾಗರಿಕರ ಅಭಿಪ್ರಾಯ.

ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ನಗರದ ಎಲ್ಲಾ ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿ ಪಡಿಸಲು ಪಾಲಿಕೆ ಯೋಜನೆ ರೂಪಿಸಿದೆ. ಬಹುತೇಕ ಕನ್ಸರ್‌ವೆನ್ಸಿಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ. ಹಾಗೆಯೇ ಉಳಿದ ಕನ್ಸರ್‌ವೆನ್ಸಿಗಳನ್ನು ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಪಾರ್ಕಿಂಗ್‌ ವ್ಯವಸ್ಥೆಗಾಗಿ ಬಳಸಿಕೊಳ್ಳಲಾಗುವುದು. ಜಯನಗರದಲ್ಲಿ 5 ಕನ್ಸರ್‌ವೆನ್ಸಿಗಳನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ತೆಗೆದುಕೊಳ್ಳಲಾಗಿದ್ದು, ಅಲ್ಲಿ ಬ್ಯಾಡ್ಮಿಂಟನ್ ಕೋರ್ಟ್‌ ರೂಪಿಸಲಾಗುವುದು ಹಾಗೂ ಸಾರ್ವಜನಿಕರ ಉಪಯೋಗಕ್ಕಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪಾಲಿಕೆ ಆಯುಕ್ತ ಮುಲೈಮುಹಿಲನ್ ಮಾಹಿತಿ ನೀಡಿದರು.

ಪಾಲಿಕೆಯು ಕನ್ಸರ್‌ವೆನ್ಸಿಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಉತ್ತಮ ಕಾರ್ಯ. ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಇವುಗಳ ಸದ್ವಿನಿಯೋಗ ಆಗಬೇಕು ಎನ್ನುತ್ತಾರೆ ವ್ಯಾಪಾರಿ ಗುರುಪೂಜಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT