ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದ್ಮಾವತ್‌’ ಬಿಡುಗಡೆ ತೊಡಕು ನಿವಾರಣೆ

ಸಿನಿಮಾ ಪ್ರದರ್ಶನಕ್ಕೆ ರಾಜ್ಯಗಳ ನಿಷೇಧ ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್‌
Last Updated 18 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ‘ಪದ್ಮಾವತ್‌’ ಚಲನಚಿತ್ರವನ್ನು ಇದೇ 25ರಂದು ದೇಶದಾದ್ಯಂತ ಬಿಡುಗಡೆ ಮಾಡಲು ಇದ್ದ ತೊಡಕನ್ನು ಸುಪ್ರೀಂ ಕೋರ್ಟ್‌ ನಿವಾರಿಸಿದೆ. ರಾಜಸ್ಥಾನ ಮತ್ತು ಗುಜರಾತ್‌ ಸರ್ಕಾರಗಳು ಸಿನಿಮಾ ಬಿಡುಗಡೆಗೆ ತಡೆ ನೀಡಿರುವ ಆದೇಶ ಮತ್ತು ಅಧಿಸೂಚನೆಗಳನ್ನು ರದ್ದು ಮಾಡಲಾಗಿದೆ.

ಅಲ್ಲದೆ, ಈ ಚಿತ್ರದ ಬಿಡುಗಡೆ ತಡೆಯುವ ಅಧಿಸೂಚನೆ ಅಥವಾ ಆದೇಶಗಳನ್ನು ಬೇರೆ ರಾಜ್ಯಗಳು ನೀಡುವಂತಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ರಾಜ್ಯಗಳ ಹೊಣೆಗಾರಿಕೆ ಎಂದೂ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಹೇಳಿದೆ.

ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ಬಿಡುಗಡೆಗೆ ಪ್ರಮಾಣಪತ್ರ ನೀಡಿದ ಸಿನಿಮಾವನ್ನು ನಿಷೇಧಿಸುವುದಕ್ಕೆ ರಾಜ್ಯಗಳಿಗೆ ಅಧಿಕಾರ ಇಲ್ಲ ಎಂದು ‘ಪದ್ಮಾವತ್‌’ ಸಿನಿಮಾ ನಿರ್ಮಿಸಿರುವ ವಯಕಾಂ18 ಸಂಸ್ಥೆಯ ಪರವಾಗಿ ವಾದಿಸಿದ ಹಿರಿಯ ವಕೀಲರಾದ ಹರೀಶ್‌ ಸಾಳ್ವೆ ಮತ್ತು ಮುಕುಲ್‌ ರೋಹಟಗಿ ಹೇಳಿದರು.

ಗುಜರಾತ್‌, ಹರಿಯಾಣ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳು ‘ಪದ್ಮಾವತ್‌’ ಸಿನಿಮಾ ಪ್ರದರ್ಶನವನ್ನು ನಿಷೇಧಿಸಿವೆ. ಅದನ್ನು ರದ್ದುಪಡಿಸಬೇಕು ಎಂದು ಸಿನಿಮಾದ ನಿರ್ಮಾಪಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ರಾಜಸ್ಥಾನ, ಗುಜರಾತ್‌ ಮತ್ತು ಹರಿಯಾಣ ಸರ್ಕಾರಗಳನ್ನು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಪ್ರತಿನಿಧಿಸಿದ್ದರು. ಶುಕ್ರವಾರ ಅಥವಾ ಇದೇ 22ರಂದು ವಿಚಾರಣೆ ನಡೆಸಬೇಕು. ರಾಜ್ಯಗಳಿಗೆ ದಾಖಲೆಗಳನ್ನು ಪರಿಶೀಲಿಸಲು ಇದರಿಂದ ಅನುಕೂಲವಾಗುತ್ತದೆ ಎಂದು ಮೆಹ್ತಾ ವಾದಿಸಿದರು. ಸಿನಿಮಾ ಬಿಡುಗಡೆಯಾದರೆ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟಾಗಬಹುದು ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ. ‘ಪದ್ಮಾವತ್‌’ಗೆ ಪ್ರಮಾಣಪತ್ರ ನೀಡುವಾಗ ಸಿಬಿಎಫ್‌ಸಿ ಈ ವಿಚಾರಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾಳ್ವೆ, ಸಿಬಿಎಫ್‌ಸಿ ಪ್ರಮಾಣಪತ್ರ ನೀಡಿದ ಬಳಿಕ ರಾಜ್ಯಗಳು ಅದರ ಪ್ರದರ್ಶನಕ್ಕೆ ಅಡ್ಡಿ ಮಾಡುವಂತಿಲ್ಲ ಎಂದರು.

ಮೇವಾಡದ ರಾಜ ಮಹಾರಾಜ ರತನ್‌ ಸಿಂಗ್‌ ಮತ್ತು ದೆಹಲಿಯ ಸುಲ್ತಾನ ಅಲ್ಲಾವುದ್ದೀನ್‌ ಖಿಲ್ಜಿಯ ನಡುವೆ 13ನೇ ಶತಮಾನದಲ್ಲಿ ನಡೆದ ಯುದ್ಧದ ಕತೆಯನ್ನು ಇರಿಸಿಕೊಂಡು ಸಿನಿಮಾ ಮಾಡಲಾಗಿದೆ. ಜೈಪುರ ಮತ್ತು ಕೊಲ್ಹಾಪುರದಲ್ಲಿ ಕಳೆದ ವರ್ಷ ಚಿತ್ರೀಕರಣ ನಡೆಯುತ್ತಿದ್ದಾಗ ಎರಡು ಬಾರಿ ದಾಂದಲೆ ನಡೆಸಲಾಗಿತ್ತು. ನಿರ್ದೇಶಕ ಸಂಜಯ ಲೀಲಾ ಬನ್ಸಾಲಿಯ ಮೇಲೆ ಕರ್ನಿ ಸೇನಾದ ಕಾರ್ಯಕರ್ತರು ಹಲ್ಲೆಯನ್ನೂ ನಡೆಸಿದ್ದರು.

ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜಕಾರಣಿಗಳು ಸಿನಿಮಾದ ವಿರುದ್ಧ ಇತ್ತೀಚೆಗೆ ಬಹಿರಂಗ ಹೇಳಿಕೆ ನೀಡಿದ್ದರು.

* ಚಲನಚಿತ್ರವೊಂದರ ಪ್ರದರ್ಶನವನ್ನು ಈ ರೀತಿ ತಡೆಯುವುದು ನನ್ನ ಸಾಂವಿಧಾನಿಕ ಸಾಕ್ಷಿಪ್ರಜ್ಞೆಯನ್ನು ಆಘಾತಗೊಳಿಸಿದೆ.

- ದೀಪಕ್‌ ಮಿಶ್ರಾ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT