ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾಕ್ಷಿ’ಯ ನೆನಪು

Last Updated 21 ಜನವರಿ 2018, 6:24 IST
ಅಕ್ಷರ ಗಾತ್ರ

ಧಾರವಾಡ: ’ಮನುಷ್ಯನ ಅಂತರಂಗದ ವಿಕಾಸಕ್ಕೆ ಸಾಹಿತ್ಯ ಒಂದೇ ಸಾಕಾಗುವುದಿಲ್ಲ. ಅದಕ್ಕೆ ಬದುಕನ್ನು ಅರಿಯುವ ಎಲ್ಲ ಜ್ಞಾನಶಾಖೆಗಳೂ ಬೇಕು ಎಂದು ಗೋಪಾಲಕೃಷ್ಣ ಅಡಿಗರು ನಂಬಿಕೊಂಡಿದ್ದರು. ಈ ನಂಬಿಕೆಗೆ ಅನುಗುಣವಾಗಿಯೇ ತಮ್ಮ ‘ಸಾಕ್ಷಿ’ ಪತ್ರಿಕೆಯನ್ನು ರೂಪಿಸಿದ್ದರು. ನಾನಾ ಭಾವಕ್ಷೇತ್ರಗಳಿಂದ, ನಾನಾ ರೀತಿಯ ದಾರಿಗಳಿಂದ ಮನುಷ್ಯನ ಪಾಡನ್ನು ಹಾಗೂ ಬದುಕನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಸಾಕ್ಷಿಯಲ್ಲಿ ನಡೆಯಿತು’’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು.

ಸಾಹಿತ್ಯ ಸಂಭ್ರಮದ ಎರಡನೇ ದಿನದ ಮೊದಲ ಗೋಷ್ಠಿಯಲ್ಲಿ ಅವರು ಅಡಿಗರ ಸಂಪಾದನೆಯ ‘ಸಾಕ್ಷಿ’ ಪತ್ರಿಕೆಯ ಜೊತೆಗಿನ ತಮ್ಮ ಒಡನಾಟದ ನೆನಪುಗಳು ಸೇರಿದಂತೆ ಹಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡರು.

‘ಸಾಕ್ಷಿ ಪತ್ರಿಕೆಯ 44 ಸಂಚಿಕೆಗಳು ಕನ್ನಡದಲ್ಲಿ ಎಬ್ಬಿಸಿದ ಅಲೆಗಳು, ತೆರೆದ ಕಿಟಕಿಗಳು ತುಂಬ ಮುಖ್ಯವಾದವು. ಹೊಸಗನ್ನಡದ ಬಾಗಿಲನ್ನು ಬೇರೆ ಬೇರೆ ವಿಚಾರಧಾರೆಗಳಿಗೆ ತೆರೆಯುವ ಕೆಲಸವನ್ನು ಈ ಪತ್ರಿಕೆ ಯಶಸ್ವಿಯಾಗಿ ಮಾಡಿತು. ಕನ್ನಡದ ಹಲವು ಬಹುಮುಖ್ಯ ಲೇಖಕರು, ಚಿಂತಕರು ಈ ಪತ್ರಿಕೆಯಲ್ಲಿ ಬಹಳ ಗಂಭೀರವಾದ ಚರ್ಚೆಗಳನ್ನು ನಡೆಸಿದ್ದಾರೆ’ ಎಂದು ಅವರು ಹೇಳಿದರು.

‘ಹಲವಾರು ವಿಮರ್ಶಕರು, ಕಥೆಗಾರರ ಕಾವ್ಯಗಳನ್ನು ಸಾಕ್ಷಿಯಲ್ಲಿ ಮಾತ್ರ ನೀವು ನೋಡಲು ಸಾಧ್ಯ. ಹಲವು ಕವಿಗಳು ಸಾಕ್ಷಿಗಾಗಿಯೇ ಕಥೆಗಳನ್ನು ಬರದಿದ್ದಾರೆ. ಅವರು ಮತ್ತೆಲ್ಲೂ ಕಥೆಗಳನ್ನು ಬರೆದಿಲ್ಲ. ಈ ಪತ್ರಿಕೆಯಲ್ಲಿ ಅತ್ಯುತ್ತಮ ಕಥೆಗಳನ್ನು ಬರೆದು ನಂತರ ಬರವಣಿಗೆಯನ್ನು ನಿಲ್ಲಿಸಿದವರೂ ಸಾಕಷ್ಟಿದ್ದಾರೆ. ಎಲ್ಲರೂ ಒಟ್ಟಿಗೇ ಬೆಳೆಯುತ್ತಾ ಹೋಗುವಂಥ ವಾತಾವರಣವನ್ನು ಅದು ಸೃಷ್ಟಿಸಿತ್ತು’ ಎಂದು ನೆನಪಿಸಿಕೊಂಡರು.

‘‘ಹೊಕ್ಕುಳಲ್ಲಿ ಹೂವಿಲ್ಲ’ ಎಂಬ ಎ.ಕೆ. ರಾಮಾನುಜನ್ ಅವರ ಕವನ ಸಂಕಲನ ಮನೋಹರ ಗ್ರಂಥಮಾಲಾ ಪ್ರಕಟಿಸಿತ್ತು. ಆಗ ಕೀರ್ತಿನಾಥ ಕುರ್ತಕೋಟಿ ಅವರು ಆ ಕಾವ್ಯಕ್ಕೊಂದು ಪ್ರವೇಶಿಕೆ ಬರೆದಿದ್ದರು. ಅದರಲ್ಲಿ ಅವರು ರಾಮಾನುಜನ್ ಪದ್ಯಗಳನ್ನು ಅಡಿಗರ ಕಾವ್ಯಕ್ಕೆ ಹೋಲಿಸಿ ಅವರಿಗಿಂತ ಈ ಪದ್ಯಗಳು ಹೇಗೆ ಭಿನ್ನ ಎಂದು ಬರೆದಿದ್ದರು. ಇದು ಅಡಿಗರ ಶಿಷ್ಯಂದಿರಿಗೆ ಸಿಟ್ಟು ತರಿಸಿತು. ಅವರಲ್ಲಿ ಕೆಲವರು ರಾಮಾನುಜನ್ ಪದ್ಯಗಳು ಕಾವ್ಯವೇ ಅಲ್ಲ ಎಂದು ಬರೆದರು. ಅದಕ್ಕೆ ವಿರುದ್ಧವಾಗಿ ಬಿ.ಟಿ. ದೇಸಾಯಿ ಮತ್ತೊಂದು ಲೇಖನ ಬರೆದು ಅಡಿಗರು ಬುದ್ಧ, ಗಾಂಧಿ ಮತ್ತು ರಾಮಕೃಷ್ಣರ ಜೊತೆ ಒದರಾಡುವ ಕವಿ ಎಂದು ಟೀಕಿಸಿದರು. ಹೀಗೆ ತಮ್ಮ ಕಾವ್ಯವನ್ನೇ ಟೀಕಿಸುವ ಬರಹಗಳನ್ನೂ ಪ್ರಕಟಿಸಿದರು’ ಎಂದು ಉದಾರಣೆಯ ಸಮೇತ ವಿವರಿಸಿದರು.

ಧಾರವಾಡದ ಗಂಡೂ ಮೈಸೂರಿನ ಹೆಣ್ಣೂ...:

‘‘ಎಂ.ಎಂ. ಕಲಬುರ್ಗಿ ಅವರ ‘ನಾನು ಧಾರವಾಡದ ಗಂಡೂ ಹೌದು/ ಮೈಸೂರಿನ ಹೆಣ್ಣೂ ಹೌದು’ ಎಂಬ ಪದ್ಯ ಸಾಕ್ಷಿಯಲ್ಲಿ ಪ್ರಕಟವಾಗಿತ್ತು. ನಮಗೆಲ್ಲ ಅದು ರೋಮಾಂಚನ ಹುಟ್ಟಿಸಿದ ಪದ್ಯವಾಗಿತ್ತು. ಅದರ ಹಿನ್ನಲೆ ಗೊತ್ತಿರಲಿಲ್ಲ. ನಾವೆಲ್ಲ ಅವರ ಬಳಿ ಹೋಗಿ ‘ಸರ್‌, ಭಾಳ ಚಲೋ ಅದ ಪದ್ಯ’ ಎಂದು ಪ್ರಶಂಸಿಸಿದೆವು. ಆಗ ಅವರು ನಮ್ಮನ್ನು ಕರೆದು ‘ಅದು ಪರಿಷತ್ತಿನ ಮೇಲೆ ಬರೆದಿದ್ದು’ ಎಂದು ಹೇಳಿದ್ದರು’’ ಎಂದು ಜಯಂತ್‌ ನೆನಪಿಸಿಕೊಂಡರು.

‘ಹೂರಣದ ವಿಷಯವಷ್ಟೇ ಅಲ್ಲ, ವಿನ್ಯಾಸದಲ್ಲಿಯೂ ಸಾಕ್ಷಿ ಹಲವು ಪ್ರಯೋಗಗಳನ್ನು ಮಾಡಿದೆ’ ಎಂದ ಅವರು ‘ಸಾಕ್ಷಿ ಪತ್ರಿಕೆ ತುಂಬ ಸರಳವಾಗಿತ್ತು. ಇಂದಿನ ಹಲವು ಕವನ ಸಂಕಲನಗಳಲ್ಲಿ ಖಾಲಿ ಜಾಗ ಇರುವಲ್ಲೆಲ್ಲ ಚಿತ್ರಗಳನ್ನು ತುಂಬಿ ಮಕ್ಕಳ ಪುಸ್ತಕದ ಹಾಗೆ ಮಾಡಿರುತ್ತಾರೆ. ಆದರೆ ಸಾಕ್ಷಿ ಪತ್ರಿಕೆಯ ವಿನ್ಯಾಸ ಅಚ್ಚುಕಟ್ಟಾಗಿತ್ತು’ ಎಂದು ಹೇಳಿದರು.

'ಮಾತಾಡ್ಲಿಕ್ಕೆ ಅವಕಾಶ ಕೊಡ್ರೀ...'

ತಮ್ಮ ಮಾತಿನ ಆರಂಭದಲ್ಲಿ ಜಯಂತ್, ’ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳನ್ನು ಪರಿಚಯಿಸುವ ಸಲುವಾಗಿ ಮೊದಲ ಸಂಚಿಕೆಯ ಪರಿವಿಡಿಯನ್ನು ಓದುತ್ತಿದ್ದರು. ವೇದಿಕೆಯ ಮುಂಭಾಗದಲ್ಲಿ ಕೂತಿದ್ದ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ’ಸಾಕ್ಷಿ’ಯ ಮೊದಲ ಸಂಚಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ಜಯಂತರು ಉದಾಹರಿಸುತ್ತಿದ್ದ ಲೇಖಕರ ಹೆಸರು ಪತ್ರಿಕೆಯಲ್ಲಿ ಯಾವ ರೀತಿ ಪ್ರಕಟಗೊಂಡಿದೆ ಎನ್ನುವುದನ್ನು ಪದೇ ಪದೇ ಹೇಳುತ್ತಿದ್ದರು. ಇದನ್ನು ನೋಡಿ ಜಯಂತರೇ ಆಯೋಜಕರತ್ತ ತಿರುಗಿ ‘ಕೊನೆಯಲ್ಲಿ ಅವರಿಗೂ ಐದು ನಿಮಿಷ ಮಾತನಾಡಲಿಕ್ಕೆ ಅವಕಾಶ ಕೊಟ್ಟುಬಿಡಿ...’ ಎಂದು ಛೇಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT