ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಂದೂರು ಸಮಸ್ಯೆಗೆ ಅಂಟುವಾಳ ಮದ್ದು!

ಕುಮಾರಸ್ವಾಮಿ ಬಜೆಟ್‌ನಲ್ಲಿ ಯೋಜನೆ
Last Updated 5 ಜುಲೈ 2018, 19:57 IST
ಅಕ್ಷರ ಗಾತ್ರ

ಬೆಂಗಳೂರು: ‘ನನಗೆ ಒಂದು ಅವಕಾಶ ನೀಡಿ. ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿ ಬೆಳ್ಳಂದೂರು ಕೆರೆ ಸಮಸ್ಯೆಯನ್ನು ‍ಪರಿಹರಿಸುತ್ತೇನೆ’ ಎಂದು ಹೇಳಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ನಲ್ಲಿ ಅದಕ್ಕಾಗಿ ಬೃಹತ್‌ ಯೋಜನೆಗಳನ್ನು ರೂಪಿಸದೆ ಮಾತು ತಪ್ಪಿದ್ದಾರೆ.

ಬೃಹದಾಕಾರವಾಗಿ ಬೆಳೆದಿರುವ ಬೆಳ್ಳಂದೂರು ಸಮಸ್ಯೆಗೆ ಕೇವಲ ಬೆರಳೆಣಿಕೆಯಷ್ಟು ಪರಿಹಾರಗಳನ್ನು ಸೂಚಿಸಿದ್ದಾರೆ.ಬೆಳ್ಳಂದೂರು ಕೆರೆಯ ಸರ್ವಾಂಗೀಣ ಪುನಶ್ಚೇತನಕ್ಕಾಗಿ ₹50 ಕೋಟಿ ಒದಗಿಸಲಾಗಿದೆ. ನೀರು ಶುದ್ಧಿಗೊಂಡ ನಂತರ ಅಂತರಗಂಗಾ ಸೂಕ್ಷ್ಮ ನೀರಾವರಿ ನಿಗಮದ ಸಹಭಾಗಿತ್ವದೊಂದಿಗೆ ಈ ಕೆರೆಯ ನೀರನ್ನು ಬೆಂಗಳೂರು ಗ್ರಾಮಾಂತರ ಪ್ರದೇಶಗಳ ಕೃಷಿ ಚಟುವಟಿಕೆಗಳ ಹನಿ ನೀರಾವರಿಗೆ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸುತ್ತಮುತ್ತಲ ಮನೆಗಳಿಂದ ಬರುವ ರಾಸಾಯನಿಕ ಯುಕ್ತ ಸೋಪು, ಡಿಟರ್ಜೆಂಟ್‌ಗಳ ನೊರೆಯು ನೇರವಾಗಿ ಕೆರೆ ಸೇರುತ್ತಿರುವುದರಿಂದಲೇ ಬೆಳ್ಳಂದೂರು, ಬೈರಮಂಗಲ, ವರ್ತೂರು ಕೆರೆಗಳಲ್ಲಿ ನೊರೆ ಹಾರಾಡುತ್ತಿದೆ.

ಹಾನಿಕಾರಕ ಡಿಟರ್ಜೆಂಟ್‌ಗಳ ಬದಲು ಪ್ರಾಕೃತಿಕವಾಗಿ ದೊರೆಯುವ ಅಂಟುವಾಳ ಕಾಯಿಯ ಸೋಪು ಬಳಕೆಗೆ ಒತ್ತು ನೀಡಲಾಗಿದೆ. ಇದನ್ನು ಬೆಳೆಯುವುದಕ್ಕಾಗಿ ₹10 ಕೋಟಿ ಅನುದಾನ ಘೋಷಿಸಲಾಗಿದೆ.

‘ಸರ್ಕಾರಕ್ಕೆ ಇಂತಹ ಪರಿಹಾರಗಳನ್ನು ಯಾರು ಸೂಚಿಸುತ್ತಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ. ಫಾಸ್ಫೇಟ್ ಆಧಾರಿತ ಸೋಪು, ಡಿಟರ್ಜೆಂಟ್‌ಗಳನ್ನು ವಿದೇಶಗಳಲ್ಲಿ ನಿಷೇಧಿಸಲಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಕೈಗಾರಿಕೆಗಳು ಹಾಗೂ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ನಿಯಮಗಳಲ್ಲಿ ಬದಲಾವಣೆಯಾದರೆ ಮಾತ್ರ ಇದು ಸಾಕಾರಗೊಳ್ಳುತ್ತದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಟಿ.ವಿ.ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

‘ಅಂಟವಾಳ ಕಾಯಿ ಅದು ಹೇಗೆ ನೊರೆಯ ಸಮಸ್ಯೆಯನ್ನು ಪರಿಹರಿಸುತ್ತದೆ ಎನ್ನುವುದೇ ಅಚ್ಚರಿಯ ಸಂಗತಿ. ಇದೆಲ್ಲವನ್ನು ಬಿಟ್ಟು, ತಜ್ಞರ ಸಮಿತಿ ನೀಡಿದ ವರದಿಯನ್ನು ಅನುಷ್ಠಾನಕ್ಕೆ ತಂದರೆ ಎಲ್ಲಾ ಸಮಸ್ಯೆಗಳು ಪರಿಹಾರಗೊಳ್ಳುತ್ತದೆ’ ಎಂದು ವಿಜ್ಞಾನಿ ಪ್ರಿಯಾಂಕಾ ಜಾಮ್ವಾಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT