ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿದ್ದರಾಮಯ್ಯ ತಾಯಿಯ ಮಾಂಸ ತಿನ್ನಲಿ’

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಲ್ಲಡ್ಕ ಪ್ರಭಾಕರ ಭಟ್ ಕಿಡಿ
Last Updated 25 ಫೆಬ್ರುವರಿ 2018, 19:53 IST
ಅಕ್ಷರ ಗಾತ್ರ

ಬೆಂಗಳೂರು: ‘ಗೋಹತ್ಯೆ ವಿಚಾರವಾಗಿ ರಾಜ್ಯದಲ್ಲಿ ಭಾರಿ ಚರ್ಚೆಯಾಗಿತ್ತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾನೂ ಗೋ ಮಾಂಸ ತಿನ್ನುತ್ತೇನೆ ಎಂದಿದ್ದರು. ಅಂಥ ಹೇಳಿಕೆ ಕೊಡುವ ಅವರು ತಮ್ಮ ತಾಯಿಯ ಮಾಂಸವನ್ನೂ ತಿನ್ನಲಿ’ ಎಂದು ರಾಷ್ಟ್ರೀಯ ಸ್ವಯಸೇವಕ ಸಂಘದ ದಕ್ಷಿಣ–ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ ಭಟ್ ಕಿಡಿಕಾರಿದರು.

ಧರ್ಮ ಸಂರಕ್ಷಣಾ ಸಮಿತಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿರಾಟ್ ಹಿಂದೂ ಜಾಗೃತಿ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸಿದ್ದೇಶ್ವರ ಸ್ವಾಮಿಯ ಅನುಯಾಯಿಯಾಗಿರುವುದರಿಂದ ತಾನೂ ಹಿಂದೂ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೌದು ಸ್ವಾಮೀ, ನೀವು ಹಿಂದೂ. ಹಿಂದೂವಾಗಿಯೇ ಇರಿ. ಅದನ್ನು ಬಿಟ್ಟು ಮೃದು ಹಿಂದುತ್ವ ಎಂದು ಏಕೆ ಹೇಳುತ್ತೀರಿ. ಅವ್ಯಾವುವೂ ಇಲ್ಲ. ಇರುವುದು ಒಂದೇ ಹಿಂದೂ’ ಎಂದು ಹೇಳಿದರು.

‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೂ ಇತ್ತೀಚೆಗೆ ತಾನೂ ಹಿಂದೂ ಎನ್ನುತ್ತಿದ್ದಾರೆ. ದೇವಸ್ಥಾನಕ್ಕೆ ಹೋಗುತ್ತಾರೆ. ಅವರ ತಾಯಿಯನ್ನು ಕೇಳಿದರೆ, ಅವರು ಯಾರು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ದೇವಸ್ಥಾನಕ್ಕೆ ಹೋಗಿ ನಾಮ ಹಾಕಿಕೊಂಡು ತಿರುಗಾಡುವ ಅವರು ದೇಶದ ಜನರಿಗೂ ನಾಮ ಹಾಕುತ್ತಾರೆ. ಈ ಬಗ್ಗೆ ನಾವು ಎಚ್ಚರ ವಹಿಸಬೇಕು’ ಎಂದು ಹೇಳಿದರು.

ಸರ್ಕಾರ ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಅದು ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ, ಒಂದು ಧರ್ಮದಲ್ಲಿ ಚರ್ಮವನ್ನೇ ತುಂಡರಿಸಲಾಗುತ್ತಿದೆ. ಆ ಬಗ್ಗೆ ಏಕೆ ಚಿಂತಿಸುತ್ತಿಲ್ಲ. ಈ ರೀತಿಯ ಧೋರಣೆ ಏಕೆ ಎಂದು ಅವರು ಪ್ರಶ್ನಿಸಿದರು.

‘ನಮ್ಮ ಸಂಪ್ರದಾಯವನ್ನು ಹಿಂದೂ ಧರ್ಮವೇ ರಕ್ಷಿಸಿದೆ. ನಮ್ಮದು ಮೂಢನಂಬಿಕೆ ಅಲ್ಲ, ಮೂಲ ನಂಬಿಕೆ. ಇಡೀ ಜಗತ್ತಿಗೆ ಸಂದೇಶ ಕೊಡುವ ಶಕ್ತಿ ಹಿಂದೂ ಧರ್ಮಕ್ಕಿದೆ’ ಎಂದು ಹೇಳಿದರು.

‘ಬುರ್ಕಾ ಹಾಕಿಕೊಳ್ಳಬೇಕಿತ್ತು’

‘ಟಿಪ್ಪು ಸುಲ್ತಾನ ಒಬ್ಬ ಕಚಡಾ. ಶಿವಾಜಿ ಹುಟ್ಟದಿದ್ದರೆ ನಾವೆಲ್ಲ ಸುನ್ನತ್ ಮಾಡಿಸಿಕೊಳ್ಳಬೇಕಿತ್ತು. ನಮ್ಮ ತಾಯಂದಿರು ಹಾಗೂ ಸೋದರಿಯರೆಲ್ಲಾ ಬುರ್ಕಾ ಹಾಕಿಕೊಳ್ಳಬೇಕಿತ್ತು’ ಎಂದು ಪ್ರಭಾಕರ ಭಟ್‌ ಹೇಳಿದರು.

ಕೊಡಗಿನಲ್ಲಿ 70 ಸಾವಿರ ಮಂದಿಯನ್ನು ಟಿಪ್ಪು ಬಲವಂತವಾಗಿ ಮತಾಂತರ ಮಾಡಿದ್ದ. ಅಂದು ಮತಾಂತರಗೊಂಡವರು ಇಂದಿಗೂ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅಂಥವನ ಹೆಸರಿನಲ್ಲಿ ಸರ್ಕಾರ ಜಯಂತಿ ಆಚರಣೆ ಮಾಡುತ್ತಿರುವುದು ದುರಂತ. ಅದರ ಬದಲಿಗೆ ಸಂತ ಶಿಶುನಾಳ ಷರೀಫರ ಜಯಂತಿ ಆಚರಿಸಲಿ ಎಂದರು.

‘ಮೂತ್ರ ಹೊರ ಬಾರದೆ ಆ ವ್ಯಕ್ತಿ ಸತ್ತ’

‘ಬುದ್ಧಿಜೀವಿ ಎಂದು ಹೇಳಿಕೊಳ್ಳುತ್ತಿದ್ದ ಒಬ್ಬ ವ್ಯಕ್ತಿ ಮೂರ್ತಿಗಳ ಮೇಲೆ ಮೂತ್ರ ವಿಸರ್ಜಿಸಿ ಎಂದು ಹೇಳಿದ್ದ. ಒಂದಲ್ಲ, ಮೂರು ನಾಲ್ಕು ಕಡೆಗಳಲ್ಲಿ ಈ ರೀತಿ ಹೇಳಿಕೆ ನೀಡಿದ್ದ. ಆ ವ್ಯಕ್ತಿ ಮೂತ್ರ ಹೊರ ಬಾರದೆ ಸತ್ತ’ ಎಂದು ಪ್ರಭಾಕರ ಭಟ್‌ ಹೇಳಿದರು.

‘ಆ ಬುದ್ಧಿಜೀವಿ ಕೊನೆಗಾಲದಲ್ಲಿ ಮಗನಿಗೆ ಪತ್ರ ಬರೆದು, ತನ್ನ ಅಂತ್ಯ ಸಂಸ್ಕಾರವನ್ನು ವೈದಿಕ ಸಂಪ್ರದಾಯದಂತೆ ಪೂರ್ಣಗೊಳಿಸುವಂತೆ ಕೇಳಿಕೊಂಡಿದ್ದ. ಸತ್ತ ಮೇಲೆ ತಾನೂ ಸ್ವರ್ಗಕ್ಕೆ ಹೋಗುವೆ ಎಂದು ಭಾವಿಸಿ ಪತ್ರ ಬರೆದಿರಬಹುದು. ಅಂಥವರು ಸ್ವರ್ಗಕ್ಕೆ ಹೋಗಲು ಸಾಧ್ಯವೇ ಇಲ್ಲ’ ಎಂದರು.

‘ಗಾಂಧಿಯನ್ನು ಗೋಡ್ಸೆ ಕೊಂದಿದ್ದು ಸರಿ’

ಮಹಾತ್ಮ ಗಾಂಧೀಜಿ ಮಹಾಭಾರತದ ಭೀಷ್ಮನಿದ್ದಂತೆ. ನಾಥೂರಾಂ ಗೋಡ್ಸೆ ಅರ್ಜುನನಾಗಿ ಗಾಂಧಿಯನ್ನು ಗುಂಡಿಕ್ಕಿ ಕೊಲೆ ಮಾಡಿದ್ದು ಸರಿ ಎಂದು ವಿಶ್ವ ಸಂತೋಷ ಭಾರತಿ (ಸಂತೋಷ ಗುರುಜಿ) ಸ್ವಾಮೀಜಿ ಅಭಿಪ್ರಾಯಪಟ್ಟರು.

‘ಗೋಡ್ಸೆ ನಿರ್ದಿಷ್ಟ ಸಂಘಟನೆಯಲ್ಲಿದ್ದವನು ಎಂದು ಹೇಳುತ್ತಾರೆ. ಮಹಾಭಾರತದಲ್ಲಿ ಭೀಷ್ಮನಿಗೆ ದೊಡ್ಡ ಸ್ಥಾನವಿದೆ. ಹಾಗೆಂದು ಪೂಜೆ ಮಾಡಿಕೊಂಡು ಕೂರುವುದು ಸರಿಯಲ್ಲ. ಅದೇ ರೀತಿ ಗಾಂಧಿಯನ್ನು ಪೂಜಿಸುವ ಅವಶ್ಯಕತೆಯೂ ಇಲ್ಲ. ಇದರ ಅರ್ಥ ಅವರು ಒಳ್ಳೆಯ ಕೆಲಸ ಮಾಡಿಲ್ಲ ಎಂದೇನೂ ಅಲ್ಲ’ ಎಂದರು.

* ಕುಟುಂಬ ಕಲ್ಯಾಣ ಯೋಜನೆ ಕೇವಲ ಹಿಂದೂಗಳಿಗೆ ಮಾತ್ರ ಸೀಮಿತವಾದಂತಿದೆ. ಹೀಗಾಗಿ, ಬೇರೆ ಧರ್ಮದವರು 10 ಮಕ್ಕಳಿಗೆ ಜನ್ಮ ನೀಡುತ್ತಿದ್ದು, ಅವರ ಸಂಖ್ಯೆ ಹೆಚ್ಚಳವಾಗುತ್ತಿದೆ.
– ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠ

ಹಿಂದೂ ಯುವಕರು ತಾಕತ್ತಿದ್ದರೆ, ಕನಿಷ್ಠ ಮೂರು ಮಕ್ಕಳನ್ನು ಹುಟ್ಟಿಸಬೇಕು. ಆ ಮೂಲಕ ಹಿಂದೂಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಬೇಕು

- ಕಲ್ಲಡ್ಕ ಪ್ರಭಾಕರ ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT