ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅವು ಕೊಕ್ಕರೆಗಳಲ್ಲ, ಮನೆ ಮಕ್ಕಳು’

Last Updated 3 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊಕ್ಕರೆಗಳು ಮರಿ ಮಾಡುವುದು ಮತ್ತು ಕಲರವ ಕೇಳಿ ಸಂಭ್ರಮಿಸುತ್ತಿದ್ದ ನಮಗೆ ಅವುಗಳ ಸಾವು ದಿಗ್ಭ್ರಾಂತಿ ಮೂಡಿಸಿದೆ. ಅಸ್ವಸ್ಥಗೊಂಡ ಹಕ್ಕಿಗಳು ಮರಗಳ ಮೇಲಿನಿಂದ ತರಗೆಲೆಗಳಂತೆ ಬಿದ್ದು ಸಾಯುವುದನ್ನು  ನೋಡಲು ಸಾಧ್ಯವಾಗುತ್ತಿಲ್ಲ. ಮನೆ ಮಕ್ಕಳೇ ಸತ್ತಷ್ಟು ನೋವಾಗುತ್ತಿದೆ’

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರಿನ ಸುಶೀಲಾ ಅವರ ಬೇಸರದ ನುಡಿಗಳಿವು.

ಅವರ ಮನೆ ಎದುರಿನ ಮರಗಳಲ್ಲಿ ಬಣ್ಣದ ಕೊಕ್ಕರೆ (ಪೇಂಟೆಡ್‌ ಸ್ಟಾರ್ಕ್‌) ಹಾಗೂ ಹೆಜ್ಜಾರ್ಲೆಗಳು (ಪೆಲಿಕಾನ್‌) ನೂರಾರು ಸಂಖ್ಯೆಯಲ್ಲಿ ನೆಲೆಸಿದ್ದವು. ಸಂತಾನೋತ್ಪತ್ತಿ ಕಾರ್ಯದಲ್ಲಿ ತೊಡಗಿದ್ದ ಅವುಗಳ ಕಲರವ ಕಿವಿಗೆ ಇಂಪು ನೀಡುತ್ತಿತ್ತು. ಮನೆಯಂಗಳದಲ್ಲಿ ಚಿಣ್ಣರು ಆಟದಲ್ಲಿ ನಿರತರಾಗಿದ್ದರು.

‘ಈ ಮಕ್ಕಳು ಬೇರೆ ಅಲ್ಲ, ಕೊಕ್ಕರೆಗಳು ಬೇರೆಯಲ್ಲ. ನಾವು ಮಕ್ಕಳನ್ನು ಹೆತ್ತು ಹೊತ್ತು ಸಾಕುತ್ತೇವೆ. ಮಕ್ಕಳನ್ನು ಕಳೆದುಕೊಂಡರೆ ನಮ್ಮನ್ನು ಸಂತೈಸಲು ಬಂಧು–ಬಳಗದವರಿದ್ದಾರೆ. ಆ ಮೂಕಜೀವಿಗಳು ತಮ್ಮ ನೋವನ್ನು ಯಾರಿಗೆ ಹೇಳಿಕೊಳ್ಳುತ್ತವೆ’ ಎಂದರು.

ಇಲ್ಲಿನ ಅನತಿ ದೂರದಲ್ಲೇ ಪಕ್ಷಿ ಪಾಲನಾ ಕೇಂದ್ರವಿದೆ. ಹೆಜ್ಜಾರ್ಲೆ ಬಳಗದ ಅಧ್ಯಕ್ಷ ಬಿ.ಲಿಂಗೇಗೌಡ ಅವರು ಅಸ್ವಸ್ಥಗೊಂಡಿದ್ದ ಕೊಕ್ಕರೆ ಹಾಗೂ ಗೂಡಿನಿಂದ ಕೆಳಗೆ ಬಿದ್ದಿದ್ದ ಎರಡು ಮರಿಗಳ ಪಾಲನೆಯಲ್ಲಿ ತೊಡಗಿದ್ದರು. ಗ್ರಾಮದಲ್ಲಿ ಎಲ್ಲೇ ಕೊಕ್ಕರೆಗಳು ಅಸ್ವಸ್ಥಗೊಂಡರೂ ಅವುಗಳನ್ನು ಈ ಕೇಂದ್ರಕ್ಕೆ ತಂದು ಆರೈಕೆ ಮಾಡುತ್ತಾರೆ. ಅವರು ಕೊಕ್ಕರೆಗಳ ಜೀವನ ಹಾಗೂ ಸಾವಿನ ವೃತ್ತಾಂತವನ್ನು ತೆರೆದಿಟ್ಟರು.

2016-17ರಲ್ಲಿ  8 ಹೆಜ್ಜಾರ್ಲೆಗಳು ಸತ್ತಿದ್ದವು. ಆದರೆ, 2017ರ ಡಿಸೆಂಬರ್‌ನಿಂದ ಈವರೆಗೆ 40 ಕೊಕ್ಕರೆಗಳು ಸತ್ತಿವೆ. ಈಗ ಒಂದು ಕೊಕ್ಕರೆ ಅಸ್ವಸ್ಥವಾಗಿ ಬಿದ್ದಿದೆ. ಯಾವುದೇ ಕೊಕ್ಕರೆ ಅಸ್ವಸ್ಥವಾದರೆ ಮೂರು ದಿನಗಳವರೆಗೆ ಮರಗಳ ಮೇಲೆ ಇರುತ್ತದೆ. ಈ ವೇಳೆ ಆಹಾರ ಸೇವಿಸುವುದಿಲ್ಲ. ತೀವ್ರ ನಿತ್ರಾಣಗೊಂಡ ಬಳಿಕ ಕೆಳಗೆ ಬೀಳುತ್ತದೆ. ಎರಡು ದಿನಗಳವರೆಗೆ ಹಾಗೆಯೇ ಇದ್ದು ಪ್ರಾಣ ಬಿಡುತ್ತದೆ ಎಂದು ತಿಳಿಸಿದರು.

ಸತ್ತ ಕೊಕ್ಕರೆಗಳ ಪೈಕಿ ನಾಲ್ಕು ಕೊಕ್ಕರೆಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಹೆಬ್ಬಾಳದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಲಾಗಿತ್ತು. ಈ ಪೈಕಿ ಎರಡು ಕೊಕ್ಕರೆಗಳನ್ನು ಮಧ್ಯಪ್ರದೇಶದ ಭೋಪಾಲ್‌ನ ರಾಷ್ಟ್ರೀಯ ಪ್ರಾಣಿ ರೋಗಗಳ ಪತ್ತೆ ಕೇಂದ್ರದ ಪ್ರಯೋಗಾಲಯಕ್ಕೆ (ಎನ್‌ಐಎಚ್‌ಎಸ್‌ಎಡಿ) ಕಳುಹಿಸಿಕೊಟ್ಟಿದ್ದರು ಎಂದರು.

(ಕೊಕ್ಕರೆ ಬೆಳ್ಳೂರಿನಲ್ಲಿ ಬಣ್ಣದ ಕೊಕ್ಕರೆಗಳ ಹಿಂಡು –ಪ್ರಜಾವಾಣಿ ಚಿತ್ರ)

ಸಲೀಂ ಅಲಿ ಸೆಂಟರ್ ಫಾರ್ ಆರ್ನಿಥಾಲಜಿ ಆ್ಯಂಡ್ ನ್ಯಾಚುರಲ್‌ ಹಿಸ್ಟರಿ ಸಂಸ್ಥೆಯ ಇಬ್ಬರು ವಿಜ್ಞಾನಿಗಳು ಸ್ಥಳಕ್ಕೆ ಭೇಟಿ ನೀಡಿ ಕೊಕ್ಕರೆಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಅವುಗಳ ಹೊಟ್ಟೆಯಲ್ಲಿ ಜಂತು ಹುಳಗಳು ಇರುವುದಾಗಿ ಅವರು ತಿಳಿಸಿದ್ದಾರೆ. ಅವುಗಳ ಅಂಗಾಂಗಗಳನ್ನು ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.

ಅಸ್ವಸ್ಥ ಕೊಕ್ಕರೆಗಳಿಗೆ ಕೊತ್ತಿಪುರದ ಪಶು ವೈದ್ಯಾಧಿಕಾರಿ ಡಾ.ಸತೀಶ್‌ ಜೀವರಕ್ಷಕ (ಆ್ಯಂಟಿಬಯಾಟಿಕ್‌) ಔಷಧ ನೀಡುತ್ತಿದ್ದಾರೆ. ಇದಕ್ಕೂ ಅವು ಸ್ಪಂದಿಸುತ್ತಿಲ್ಲ. ಆಹಾರ ನೀಡಿದರೆ ವಾಂತಿ ಮಾಡುತ್ತವೆ. ಅಸ್ವಸ್ಥಗೊಂಡ ಹೆಜ್ಜಾರ್ಲೆ ಸಾಯುವುದಂತೂ ದಿಟ ಎಂದರು.

ಹೆಜ್ಜಾರ್ಲೆ ಹಾಗೂ ಬಣ್ಣದ ಕೊಕ್ಕರೆಗಳು ಸಂತಾನೋತ್ಪತ್ತಿಯಾಗಿ ನವೆಂಬರ್‌ನಲ್ಲಿ ಇಲ್ಲಿಗೆ ಬರುತ್ತವೆ. ಆರಂಭದಲ್ಲಿ 15–20 ಹೆಜ್ಜಾರ್ಲೆಗಳು ಬಂದು ಮರಗಳ ಮೇಲೆ ಕೂರದೆಯೇ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತವೆ. ವಾರದ ಬಳಿಕ ತಂಡೋಪತಂಡವಾಗಿ ಬರುತ್ತವೆ. ಆದರೆ, ತಕ್ಷಣ ಗೂಡು ಕಟ್ಟುವುದಿಲ್ಲ. ಕೆರೆ, ನದಿ ಪಾತ್ರ ಹಾಗೂ ಅಲ್ಲಿ ಸಿಗುವ ಆಹಾರ ಪ್ರಮಾಣವನ್ನು ನೋಡಿಕೊಂಡು ಗೂಡು ಕಟ್ಟುತ್ತವೆ ಎಂದು ವಿವರಿಸಿದರು.

1ರಿಂದ 4 ಮೊಟ್ಟೆ ಇಟ್ಟು 18ರಿಂದ 22 ದಿನಗಳವರೆಗೆ ಕಾವು ನೀಡುತ್ತವೆ. ಸುಮಾರು 25ನೇ ದಿನಕ್ಕೆ ಮರಿಗಳು ಹೊರಬರುತ್ತವೆ. ಹೆಣ್ಣು ಅಥವಾ ಗಂಡು ಕೊಕ್ಕರೆ ಪೈಕಿ ಒಂದು ಆಹಾರ ತರುತ್ತದೆ. ಒಟ್ಟು 90 ದಿನಗಳಲ್ಲಿ ಮರಿಗಳು ಹಾರಾಡುವುದನ್ನು ಕಲಿಯುತ್ತವೆ. ಬಳಿಕ, ಮೀನು ಬೇಟೆಯಾಡುವುದನ್ನು ಮರಿಗಳಿಗೆ ಹೇಳಿಕೊಡುತ್ತವೆ. ಜೂನ್‌–ಜುಲೈಗೆ ವಾಪಸ್‌ ಹೋಗುತ್ತವೆ ಎಂದರು.

ಮತ್ತೊಂದು ಹೆಜ್ಜಾರ್ಲೆ ಅಸ್ವಸ್ಥ

ಶನಿವಾರ ಮಧ್ಯಾಹ್ನ 1ರ ಸುಮಾರಿಗೆ ಲಿಂಗೇಗೌಡ ಅವರಿಗೆ ಕರೆ ಬಂತು. ಅಸ್ವಸ್ಥಗೊಂಡ ಹೆಜ್ಜಾರ್ಲೆ ಮನೆ ಮೇಲೆ ಬಿದ್ದಿದೆ ಎಂದು ಅಪ್ಪಾಜಿ ಗೌಡ ಎಂಬುವರು ವಿಷಯ ಮುಟ್ಟಿಸಿದರು. ಅಲ್ಲಿಗೆ ದೌಡಾಯಿಸಿದ ಲಿಂಗೇಗೌಡ, ಕೊಕ್ಕರೆಗೆ ನೀರುಣಿಸಿದರು. ಅದನ್ನು ಪಕ್ಷಿ ಪಾಲನಾ ಕೇಂದ್ರಕ್ಕೆ ತಂದು ಉಪಚರಿಸಿದರು.

‘ಇದು ಸಹ ಇನ್ನೆರಡು ದಿನಗಳಲ್ಲಿ ಅಸುನೀಗುತ್ತದೆ’ ಎಂದು ಬೇಸರದಿಂದ ಹೇಳಿದರು.

‘ಕೊಕ್ಕರೆಗಳ ಸಾವನ್ನು ತಡೆಗಟ್ಟಲಿ’

ಜಂತುಹುಳದಿಂದ ಕೊಕ್ಕರೆಗಳು ಸಾಯುತ್ತಿವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ರಂಗನತಿಟ್ಟು, ಬನಹಳ್ಳಿ ಸೇರಿದಂತೆ ಬೇರೆ ಕಡೆಗಳಲ್ಲಿ ಹೆಜ್ಜಾರ್ಲೆಗಳಲ್ಲಿ ಜಂತುಹುಳ ಏಕೆ ಕಂಡುಬರುತ್ತಿಲ್ಲ. ಈ ಭಾಗದ ಕೊಕ್ಕರೆಗಳು ಸಾಯಲು ಕಾರಣವೇನು ಎಂದು ಲಿಂಗೇಗೌಡ ಪ್ರಶ್ನಿಸಿದರು.

ಮದ್ದೂರು, ಶಿವಪುರದ ಕೊಳಚೆ ನೀರು, ಮಂಡ್ಯ ಹಾಗೂ ಕೆ.ಎಂ.ದೊಡ್ಡಿಯ ಸಕ್ಕರೆ ಕಾರ್ಖಾನೆಗಳಿಂದ ಬರುವ ತ್ಯಾಜ್ಯದ ನೀರು ಶಿಂಷಾ ನದಿ ಸೇರುತ್ತಿದೆ. ಇಲ್ಲಿನ ಮೀನುಗಳನ್ನು ಸೇವಿಸುವುದರಿಂದ ಕೊಕ್ಕರೆಗಳು ಸಾಯುತ್ತಿರಬಹುದು. ಇವುಗಳ ಸಾವಿಗೆ ನಿಖರ ಕಾರಣವನ್ನು ಪತ್ತೆ ಮಾಡಬೇಕು. ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಕೆರೆ ಬತ್ತಿದೆ. ಶಿಂಷಾ ನದಿಯ ನೀರನ್ನು ಇಲ್ಲಿಗೆ ಪಂಪ್‌ ಮಾಡಬೇಕು. ಕೆರೆಯಲ್ಲಿ ನಡುಗಡ್ಡೆ ನಿರ್ಮಿಸಬೇಕು. ನೀರು ಹಾಗೂ ಆಹಾರ ದೊರೆಯುವಂತೆ ಮಾಡಬೇಕು. ಗ್ರಾಮದಿಂದ 60 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಜಲಮೂಲಗಳಲ್ಲಿ ಮೀನುಗಾರಿಕೆಯನ್ನು ನಿಷೇಧಿಸಬೇಕು ಎಂದು ಸಲಹೆ ನೀಡಿದರು.

ಜಂತುಹುಳು ಭಾದೆಯಿಂದ ಕೊಕ್ಕರೆ ಸಾವು

ಹೆಜ್ಜಾರ್ಲೆಗಳ ಸರಣಿ ಸಾವಿಗೆ ಹಕ್ಕಿಜ್ವರ ಕಾರಣ ಅಲ್ಲ ಎಂದು ಎನ್‌ಐಎಚ್‌ಎಸ್‌ಎಡಿ ದೃಢಪಡಿಸಿದೆ. ಮೃತಪಟ್ಟ ಬಹುತೇಕ ಕೊಕ್ಕರೆಗಳ ದೇಹದಲ್ಲಿ ಜಂತುಹುಳು ಹೇರಳವಾಗಿ ಇರುವುದು ಪತ್ತೆಯಾಗಿದೆ. ಆದರೆ, ಹೆಜ್ಜಾರ್ಲೆ ಬಿಟ್ಟರೆ ಬೇರೆ ಪಕ್ಷಿಗಳು ಅಸ್ವಸ್ಥಗೊಂಡಿಲ್ಲ. ಹೀಗಾಗಿ, ಇದು ಹೆಜ್ಜಾರ್ಲೆ ಜಾತಿಯ ಪಕ್ಷಿಗಳಿಗೆ ಬರುವ ಸೋಂಕು ಸಾವಿಗೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಸಾವಿಗೆ ನಿಖರ ಕಾರಣ ಪತ್ತೆ ಮಾಡಲು ಅರಣ್ಯ ಇಲಾಖೆಯು 7 ತಜ್ಞರ ತಂಡವನ್ನು ರಚಿಸಿದೆ.

ವರ್ಲ್ಡ್‌ ವೈಲ್ಡ್‌ಲೈಫ್ ಫಂಡ್‌ನ ಪಕ್ಷಿ ತಜ್ಞರಾದ ಡಾ.ಸಾಕೇತ್ ಬಡೊಲ, ಡಾ.ಬ್ರಿಜ್ ಗೋಪಾಲ್, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ ಡಾ.ಅರ್ಷದ್‌ ರಹ್ಮಾನಿ, ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ, ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಏಡುಕೊಂಡಲು, ಕೊಕ್ಕರೆಬೆಳ್ಳೂರಿನ ಬಿ.ಲಿಂಗೇಗೌಡ ಹಾಗೂ ಕೊಡಗಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಡಾ.ಮುರಳೀಧರ್‌ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT